ಎಲ್ಲೆಲ್ಲೂ ಅಬ್ಬರಿಸುತ್ತಿರುವ ಅಮರನ್; ಶಿವಕಾರ್ತಿಕೇಯನ್ ಸಾಯಿಪಲ್ಲವಿ ಸಿನಿಮಾಗೆ ಪ್ರೇಕ್ಷಕರ ಜೈಕಾರ
Nov 12, 2024 02:44 PM IST
ಎಲ್ಲೆಲ್ಲೂ ಅಬ್ಬರಿಸುತ್ತಿರುವ ಅಮರನ್; ಶಿವಕಾರ್ತಿಕೇಯನ್ ಸಾಯಿಪಲ್ಲವಿ ಸಿನಿಮಾಗೆ ಜೈಕಾರ
Amaran Movie: ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಅಮರನ್ ಸಿನಿಮಾಗೆ ಎಲ್ಲೆಲ್ಲೂ ಜೈಕಾರ ಹಾಕಲಾಗುತ್ತಿದೆ. ಸಿನಿಮಾ 2024 ರಲ್ಲಿ ತಮಿಳು ಭಾಷೆಯ ಬ್ಲಾಕ್ ಬಸ್ಟರ್ ಸಿನಿಮಾ ಅಗಿದೆ. ಶಿವಕಾರ್ತಿಕೇಯನ್, ಸಾಯಿ ಪಲ್ಲವಿಗೆ ಸಿನಿಮಾ ಒಂದೊಳ್ಳೆ ಬ್ರೇಕ್ ನೀಡಿದೆ.
Amaran Movie: ಶಿವ ಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ನಟನೆಯ ಅಮರನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ ಗಳಿಕೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಹುತಾತ್ಮರಾದ ಭಾರತೀಯ ಸೇನಾ ಅಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಸ್ಪೂರ್ತಿದಾಯಕ ಕಥೆ ಹೇಳುವ ಬಹುನಿರೀಕ್ಷಿತ ಬಯೋಪಿಕ್ ಅಮನರ್ ಸಿನಿಮಾ 2024ರ ತಮಿಳು ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ.
ಕಮಲ್ ಹಾಸನ್ ನಿರ್ಮಾಣದ ಸಿನಿಮಾ
ಅಕ್ಟೋಬರ್ 31ರಂದು ತೆರೆಕಂಡ ಅಮರನ್ ಸಿನಿಮಾ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ ನಟ ಕಮಲ್ ಹಾಸನ್ ಅವರ ರಾಜಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದಲ್ಲಿ ಶಿವಕಾರ್ತಿಕೇಯನ್ ಮೇಜರ್ ಮುಕುಂದ್ ವರದರಾಜನ್ ಪಾತ್ರದಲ್ಲಿ ನಟಿಸಿದ್ದರೆ ಸಾಯಿ ಪಲ್ಲವಿ ಅವರ ಪತ್ನಿ ಇಂದೂ ರೆಬೆಕಾ ವರ್ಗಿಸ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಅಮರನ್, ಭಯೋತ್ಪಾದಕ ದಾಳಿಯಲ್ಲಿ ವೀರ ಮರಣವನ್ನು ಅಪ್ಪಿದ ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನವನ್ನು ಆಧರಿಸಿದೆ. ರಾಜ್‌ಕುಮಾರ್ ನಿರ್ದೇಶನದ ಸಿನಿಮಾ ದೀಪಾವಳಿ ಹಬ್ಬದ ದಿನದಂದು ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಯಶಸ್ಸು ಕಂಡಿರುವುದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.
200 ಕೋಟಿ ರೂ ಕಲೆಕ್ಷನ್
ಸಿನಿಮಾ ಎಲ್ಲರಿಗೂ ಎಷ್ಟು ಮೆಚ್ಚುಗೆ ಆಗಿದೆ ಎಂದರೆ, ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನೋಡಿ ಚಿತ್ರತಂಡವನ್ನು ಕರೆಸಿ ಅಭಿನಂದನೆ ಸಲ್ಲಿಸಿದ್ದರು. ಸಿನಿಮಾ ಇದುವರೆಗೂ 200 ಕೋಟಿ ರೂ ಕಲೆಕ್ಷನ್ ಮಾಡಿದೆ. ಸಿನಿಮಾ ಕಥೆ ಜೊತೆಗೆ ನೋಡುಗರು ಹಾಡುಗಳು, ಹಿನ್ನೆಲೆ ಸಂಗೀತ ಎರಡೂ ಅದ್ಭುತ ಎಂದಿದ್ದಾರೆ. ಈ ಖುಷಿಯಲ್ಲಿ ಅಮರನ್ ನಾಯಕ ಶಿವ ಕಾರ್ತಿಕೇಯನ್, ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಕುಮಾರ್‌ಗೆ ಇತ್ತೀಚೆಗೆ 3 ಲಕ್ಷ ರೂ ಬೆಲೆಯ ಹ್ಯೂಯರ್ ಮೆನ್ಸ್ ಫಾರ್ಮುಲಾ-1 ಬ್ರ್ಯಾಂಡ್ ಸ್ಟೇನ್‌ಲೆಸ್ ಸ್ಟೀಲ್ ಸ್ಟೈಲಿಶ್ ವಾಚನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ ವಿಚಾರವನ್ನು ಜಿವಿ ಪ್ರಕಾಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದರು.
ನೆಟ್‌ಫ್ಲಿಕ್ಸ್ ಅಮರನ್ ಸ್ಟ್ರೀಮಿಂಗ್ ಯಾವಾಗ?
ನವೆಂಬರ್ ಅಂತ್ಯದಲ್ಲಿ ಅಮರನ್ ಚಿತ್ರ ಒಟಿಟಿಗೆ ಬರಲಿದೆ ಎನ್ನಲಾಗುತ್ತಿದೆ. ನೆಟ್‌ಫ್ಲಿಕ್ಸ್, ಈ ಚಿತ್ರದ ಒಟಿಟಿ ಹಕ್ಕುಗಳನ್ನು ಭಾರಿ ಬೆಲೆಗೆ ಖರೀದಿಸಿದ್ದು ಸಿನಿಪ್ರಿಯರು ಕೂಡಾ ಒಟಿಟಿಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಆದರೆ ಇನ್ನೂ ಕೆಲವು ದಿನಗಳ ಕಾಲ ಅಮರನ್ ಸಿನಿಮಾ ಚಿತ್ರಮಂದಿರದಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಬಹುಶ: ಡಿಸೆಂಬರ್ ವೇಳೆಗೆ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಬಹುದು.