ಒಟಿಟಿಯಲ್ಲಿ ದಾಖಲೆ ಬರೆದ ರಕ್ಷಿತ್ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ; ಅದ್ಬುತ ದೃಶ್ಯ ಕಾವ್ಯಕ್ಕೆ ಮನಸೋತ ಪರಭಾಷಿಕರು
ನವೆಂಬರ್ 1ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಇದುವರೆಗೂ 2 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ಕಂಡಿದೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಿರ್ಮಿಸಿದ್ದು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಹಾನ್, ಅಂಕಿತಾ ಅಮರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಃ ಸ್ಟುಡಿಯೋಸ್ ಬ್ಯಾನರ್ ಅಡಿ ನಿರ್ಮಾಣದ ರೊಮ್ಯಾಂಟಿಕ್ ಸಿನಿಮಾ ಇಬ್ಬನಿ ತಬ್ಬಿದ ಇಳೆಯಲಿ ಸೆಪ್ಟೆಂಬರ್ 6 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದ ಸಿನಿಮಾ ಈಗ ಒಟಿಟಿಯಲ್ಲಿ ದಾಖಲೆ ಬರೆದಿದೆ.
2 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ಪಡೆದ ಸಿನಿಮಾ
ಚಿತ್ರಮಂದಿರಗಳಲ್ಲಿ ಕೂಡಾ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ದಾಖಲೆ ಬರೆದಿದೆ. ಪರಭಾಷಿಕರೂ ಕೂಡಾ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಸುಂದರ ಪ್ರೇಮ ಕಾವ್ಯವನ್ನು ನೋಡುವಂತೆ ತಮ್ಮ ಅತ್ಮೀಯರಿಗೂ ಹೇಳುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ವಿಶೇಷವಾಗಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ 9 ದಿನಗಳಲ್ಲಿ 2 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ದಾಖಲು ಮಾಡಿದೆ.
ಈ ವಿಚಾರವನ್ನು ಪರಮ್ವಃ ಸ್ಟುಡಿಯೋಸ್ ಅಧಿಕೃತ ಸೋಷಿಯಲ್ ಮೀಡಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದಿಷ್ಟೇ ಅಲ್ಲದೆ ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 9.3 ಹಾಗೂ ಐಎಂಬಿಡಿಯಲ್ಲಿ 9.9 ರೇಟಿಂಗ್ ಕೂಡಾ ನೀಡಲಾಗಿದೆ. ಕನ್ನಡ ಸಿನಿಮಾವೊಂದು ಒಟಿಟಿಯಲ್ಲಿ ಇಷ್ಟು ಒಳ್ಳೆ ಹೆಸರು ಮಾಡಿರುವುದಕ್ಕೆ ಕನ್ನಡ ಸಿನಿಪ್ರಿಯರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇದೇ ರೀತಿ ಇನ್ನೂ ಹೆಚ್ಚಿನ ಸಿನಿಮಾಗಳು ನಿಮ್ಮ ಬ್ಯಾನರ್‌ನಿಂದ ಬರಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ದಳಪತಿ ವಿಜಯ್ ಗೋಟ್ ಸಿನಿಮಾ ಜೊತೆ ಸ್ಪರ್ಧಿಸಿದ್ದ ಇಬ್ಬನಿ ತಬ್ಬಿದ ಇಳೆಯಲಿ
ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಬಿಡುಗಡೆ ಆದ ದಿನವೇ, ದಳಪತಿ ವಿಜಯ್ ಅಭಿನಯದ ಗೋಟ್ ಸಿನಿಮಾ ಕೂಡಾ ರಿಲೀಸ್ ಆಗಿತ್ತು. ತಮಿಳು ಸಿನಿಮಾ ಮುಂದೆ ಕನ್ನಡದ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾಗೆ 40 ಸ್ಕ್ರೀನ್‌ಗಳು ಮಾತ್ರ. ಇದೇ ಕಾರಣಕ್ಕೆ ಸಿನಿಮಾ ಹೆಚ್ಚು ಜನಕ್ಕೆ ರೀಚ್ ಆಗಲು ಸಾಧ್ಯವಾಗಲಿಲ್ಲ. ಇಷ್ಟು ದೊಡ್ಡ ಸ್ಪರ್ಧೆ ನಡುವೆಯೂ ಕನ್ನಡ ಸಿನಿಮಾ, ಪರಭಾಷೆ ಸಿನಿಮಾಗಳನ್ನು ಹಿಂದಿಕ್ಕಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಎಲ್ಲರಿಗೂ ಖುಷಿ ನೀಡಿದೆ.
ಚಿತ್ರದ ನಾಯಕ ಅಶೋಕ್ ಕಾಲೇಜಿನಲ್ಲಿ ಓದುವಾಗ ಮತ್ತೊಂದು ಕಾಲೇಜಿನ ಅನಾಹಿತ ಎಂಬ ಯುವತಿಯನ್ನು ಪ್ರೀತಿಸುತ್ತಾನೆ. ಆದರೆ ಆ ಸಮಯದಲ್ಲಿ ತನ್ನ ಪ್ರೀತಿ ಪಡೆಯುವಲ್ಲಿ ಸೋಲುತ್ತಾನೆ. ಅಲ್ಲಿಂದ ಕೆಲವು ವರ್ಷಗಳವರೆಗೆ ಆತನಿಗೆ ಅನಾಹಿತಳ ಸಂಪರ್ಕ ಇರುವುದಿಲ್ಲ. ಮುಂದೆ ಅಶೋಕ್ ಮನೆಯವರು ರಾಧಾ ಎಂಬ ಹುಡುಗಿ ಜೊತೆ ಅವನ ಮದುವೆ ಫಿಕ್ಸ್ ಮಾಡುತ್ತಾರೆ. ಆದರೆ ಅಶೋಕ್‌ಗೆ ಅನಾಹಿತಳನ್ನು ಮರೆಯಲು ಆಗದೆ, ಅವಳನ್ನು ಹುಡುಕಿ ಹೊರಡುತ್ತಾನೆ. ಅವಳನ್ನು ಹುಡುಕುವಲ್ಲಿ ಯಶಸ್ವಿ ಕೂಡಾ ಆಗುತ್ತಾನೆ. ಅದರೆ ಆಕೆಗೆ ಗಂಭೀರ ಆರೋಗ್ಯ ಸಮಸ್ಯೆ ಇರುವ ವಿಚಾರ ಅವನಿಗೆ ಗೊತ್ತಾಗುತ್ತದೆ. ಅನಾಹಿತ ಬಳಿ ಅಶೋಕ್ ತನ್ನ ಪ್ರೀತಿಯನ್ನು ಮತ್ತೆ ವ್ಯಕ್ತಪಡಿಸುತ್ತಾನಾ? ಅವಳ ಪ್ರೀತಿಯನ್ನು ಪಡೆಯುತ್ತಾನಾ? ಇಬ್ಬರೂ ಮದುವೆ ಆಗುತ್ತಾರಾ? ಅನಾಹಿತ ಆರೋಗ್ಯ ಸಮಸ್ಯೆ ಪರಿಹಾರವಾಗುವುದಾ? ಅನ್ನೋದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು.
ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ರೊಮ್ಯಾಂಟಿಕ್ ಡ್ರಾಮಾ
ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾವನ್ನು ಪರಮ್ವಃ ಸ್ಟುಡಿಯೋಸ್ ಬ್ಯಾನರ್ ಅಡಿ ರಕ್ಷಿತ್ ಶೆಟ್ಟಿ ಹಾಗೂ ಜಿಎಸ್ ಗುಪ್ತಾ ನಿರ್ಮಿಸಿದ್ದು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ. ಪಂಚತಂತ್ರ ಖ್ಯಾತಿಯ ವಿಹಾನ್ ಗೌಡ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ಅಂಕಿತಾ ಅಮರ್ ಜೊತೆಯಾಗಿದ್ದಾರೆ. ಉಳಿದಂತೆ ಮಯೂರಿ ನಟರಾಜ್, ಗಿರಿಜಾ ಶೆಟ್ಟರ್, ಕಿರಣ್ ರಾಜ್, ಚಂದ್ರಜಿತ್ ಬೆಳ್ಳಿಯಪ್ಪ, ವಿಕಿಪಿಡಿಯಾ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.