logo
ಕನ್ನಡ ಸುದ್ದಿ  /  ಮನರಂಜನೆ  /  Meiyazhagan: ಕನ್ನಡಿಗರ ಮನಸ್ಸಿಗೆ ಲಗ್ಗೆಯಿಟ್ಟ ‘ಮೇಯಳಗನ್’; ಫೇಸ್‌ಬುಕ್‌ನಲ್ಲೀಗ ಸೆಳೆದ ಭಾವುಕ ಸೆಳೆತದ ಚರ್ಚೆ

Meiyazhagan: ಕನ್ನಡಿಗರ ಮನಸ್ಸಿಗೆ ಲಗ್ಗೆಯಿಟ್ಟ ‘ಮೇಯಳಗನ್’; ಫೇಸ್‌ಬುಕ್‌ನಲ್ಲೀಗ ಸೆಳೆದ ಭಾವುಕ ಸೆಳೆತದ ಚರ್ಚೆ

Oct 28, 2024 04:50 PM IST

google News

ಕನ್ನಡಿಗರ ಮನಸ್ಸಿಗೆ ಲಗ್ಗೆಯಿಟ್ಟ ಮೇಯಳಗನ್

    • Meiyazhagan Movie: ಮೇಯಳಗನ್ ಸಿನಿಮಾ ಕನ್ನಡಿಗರ ಮನಸೂರೆಗೊಂಡಿದೆ. ಕಾರ್ತಿ, ಅರವಿಂದ್‌ ಸ್ವಾಮಿ ಅಭಿನಯದಲ್ಲಿ ಮೈದುಂಬಿಕೊಂಡಿರುವ ಭಾವಲೋಕ ಆಸ್ವಾದಿಸಿರುವ ಕನ್ನಡಿಗರು ಫೇಸ್‌ಬುಕ್‌ನಲ್ಲಿ ಮನದುಂಬಿ ಬರೆದಿದ್ದಾರೆ. ಅಂಥ ಕೆಲ ಪೋಸ್ಟ್‌ಗಳ ಸಂಗ್ರಹ ಇಲ್ಲಿದೆ.
ಕನ್ನಡಿಗರ ಮನಸ್ಸಿಗೆ ಲಗ್ಗೆಯಿಟ್ಟ ಮೇಯಳಗನ್
ಕನ್ನಡಿಗರ ಮನಸ್ಸಿಗೆ ಲಗ್ಗೆಯಿಟ್ಟ ಮೇಯಳಗನ್

Meiyazhagan Movie: ನೆಟ್‌ಫ್ಲಿಕ್ಸ್‌ ಒಟಿಟಿ ವೇದಿಕೆಗೆ ಬಂದಿರುವ ತಮಿಳಿನ ಮೇಯಳಗನ್ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಹಲವರು ತಮ್ಮ ಬಾಲ್ಯ ನೆನಪಾಯಿತು ಎಂದು ನೆನಪುಗಳನ್ನು ಮೊಗೆಯುತ್ತಿದ್ದಾರೆ. ಸಿ.ಪ್ರೇಮ್‌ಕುಮಾರ್ ನಿರ್ದೇಶಕನ ಫಸ್ಟ್‌ ಕ್ಲಾಸ್ ಎಂದಿರುವ ಹಲವರು, ಛಾಯಾಗ್ರಹಣವೂ ಸೂಪರ್ ಎಂದಿದ್ದಾರೆ. ಹಾಗೆಂದು ಈ ಚಿತ್ರವೂ ಟೀಕೆಗಳಿಂದ ಹೊರತಾಗಿಲ್ಲ. ಇದು ವಾಸ್ತವಕ್ಕೆ ದೂರವಾದ ರೊಮಾಂಟಿಕ್ ಚಿತ್ರ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಮೇಯಳಗನ್ ಸಿನಿಮಾ ಕುರಿತು ಚಿತ್ರರಸಿಕರು ಹಂಚಿಕೊಂಡಿರುವ ಕೆಲ ಪೋಸ್ಟ್‌ಗಳೂ ಇಲ್ಲಿವೆ. ನೀವೂ ಸಿನಿಮಾ ನೋಡಿದ್ದರೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

ಎಲ್ಲ ಪಾತ್ರಗಳೂ ನಮ್ಮ ಕುಟುಂಬದೊಳಗೂ ಕಾಣಗೊಡಗುತ್ತವೆ: ಶೋಭಾ ಮಳವಳ್ಳಿ

ಸಿನಿಮಾ ನೋಡುವ‌ ಪ್ರತಿಯೊಬ್ಬರು, ತಮ್ಮ ಕರುಳ ಸಂಬಂಧ ನೆನದು ಕಣ್ಣೀರಾಗುವಂಥ ಗಟ್ಟಿ ಕಥೆ. ಹೊಡಿಬಡಿ ಇಲ್ಲದ, ಗಿರಿ ಗಿರಿ ಸುತ್ತುವ ‌ಹಾಡುಗಳಿಲ್ಲದ, ತಣ್ಣನೆಯ ‌ನದಿಯಂತೆ ಹರಿಯುವ‌‌ ಕಥೆ,‌ ನಮ್ಮನ್ನೂ ನಮ್ಮ ಹಳ್ಳಿಯ ನೆನಪು‌ ಒತ್ತರಿಸಿಬರುವಂತೆ‌ ಮಾಡುತ್ತದೆ. ತಂಜಾವೂರಿನ ಹಳ್ಳಿಯನ್ನು ಕಣ್ಣಿಗೆ ಹಬ್ಬವಾಗಿಸುವಂತೆ‌ ಚಿತ್ರೀಕರಿಸಿ, ಗ್ರಾಫಿಕ್ಸ್ ‌ಮರೆಸಿದ್ದಾರೆ. ಸೈಕಲ್ ಕಲಿತ ದಿನಗಳು, ಮಕ್ಕಳ ಆಟ, ಪಾಠ, ಡ್ಯಾಮ್, ಊರಿನ ದೇವಸ್ಥಾನ, ಹಳ್ಳಿ ಮನೆ, ತಂಗಿಯ‌ ಅಕ್ಕರೆ, ಚಿಕ್ಕಪ್ಪನ ವಾತ್ಸಲ್ಯ, ಅತ್ತೆ ಮಾವನ ಕಾಳಜಿ..ಒಂದೊಂದು ಪಾತ್ರವೂ ನಮ್ಮದೇ ಕುಟುಂಬದೊಳಗೂ ಕಾಣತೊಡಗುತ್ತದೆ.

ಹೀಗೆ ನಿಸ್ವಾರ್ಥವಾಗಿ ಪ್ರೀತಿಸೋ ಮನುಷ್ಯರು ಈಗ್ಲೂ ಅಂತ ಅನ್ನಿಸಿಬಿಡುತ್ತೆ: ಸುರಭಿ ರೇಣುಕಾಂಬಿಕೆ

ಒಂದು ರಾತ್ರಿ..., ತಾನೇ ಬಿಟ್ಟು ಬಂದ ಊರಿನಲ್ಲಿ, ನೆನಪಲ್ಲಿ ಉಳಿಯದ ಒಂದು ಕ್ಯಾರೆಕ್ಟರ್‌ (ಕಾರ್ತಿ) ಜೊತೆ ಇನ್ನೊಂದು ಕ್ಯಾರೆಕ್ಟರ್‌ ( ಅರವಿಂದ ಸ್ವಾಮಿ) ಕಳೆಯೋ ಸಮಯದಲ್ಲಿ ರೀಕಾಲ್‌ ಮಾಡುವ ಬಾಲ್ಯದ ನೆನಪುಗಳು, ಈ ಸಿನಿಮಾನ ಇಂಚಿಂಚಾಗಿ ನಮ್ಮನ್ನ ಆಳಕ್ಕೆ ಕರೆದುಕೊಂಡು ಹೋಗುತ್ತೆ. ಕಾರ್ತಿ ಯಾರಂತ, ಅರವಿಂದ ಸ್ವಾಮಿಗೆ ಮರೆತೇ ಹೋಗಿರುತ್ತೆ. ಆದ್ರೆ ಕಾರ್ತಿ, ತನ್ನ ಬಾಲ್ಯದ ಒಂದೊಂದು ಘಟನೆಯನ್ನ, ಪ್ರತೀ ಕ್ಷಣ ಬದುಕ್ತಿರ್ತನೆ. ಆತನ ಹೆಸರು ಮರೆತು ಹೋದ ಕಾರಣಕ್ಕೆ, ಅರವಿಂದ ಸ್ವಾಮಿ ಮನಸ್ಸಿನಲ್ಲಿ ಆಗುವ ಸಂಕಟ, ತಳಮಳ, ಮಾತಿನಲ್ಲಿ ಕಟ್ಟುಕೊಡಲು ಸಾಧ್ಯವೇ ಇಲ್ಲ. ಕಾರ್ತಿಯ ಅಪಾರ ಪ್ರೀತಿ, ಉಪಚಾರ, ಆತನ ವ್ಯಕ್ತಿತ್ವ, ಲಿಟ್ರಲಿ ಸುಧಾರಿಸಿಕೊಳ್ಳಲಾಗದಷ್ಟು ಅನುಭೂತಿಯನ್ನ ಪಡೆಯುವ ಅರವಿಂದ್‌ ಸ್ವಾಮಿ, ಆತನ ಹೆಸರು ತನಗೆ ಗೊತ್ತಿಲ್ಲ ಅನ್ನೋದನ್ನ, ಕಾರ್ತಿಯ ಮುಂದೆ ಹೇಳಲಾಗದೇ, ಇನ್ನೂ ಕತ್ತಲಿರುವಾಗಲೇ, ಹೇಳದೇ ಕೇಳದೇ, ಆತನ ಮನೆಯಿಂದ ವಾಪಸ್‌ ಹೊರಟು ಬಿಡ್ತನೆ...ಈ ಗಳಿಗೆಲಿ, ಅರವಿಂದ ಸ್ವಾಮಿ, ತನ್ನ ಹುಟ್ಟೂರನ್ನ ಬಿಟ್ಟು, ಬಸ್ಟಾಂಡಿಗೆ ಹೋಗೋ, ಒಂದು ಸೀನ್ ಸಾಕು ನಮ್ಗಳನ್ನ ನಾವು ಆತ್ಮಾವಲೋಕನ ಮಾಡಿಕೊಳ್ಳೋದಕ್ಕೆ.

ಕಾರ್ತಿಯಂತಹ ಸೂಫಿಯ selfless love ನೋಡಿದವ್ರಿಗೆ, ಹೀಗೆ ನಿಸ್ವಾರ್ಥವಾಗಿ ಪ್ರೀತಿಸೋ ಮನುಷ್ಯರು ಈಗ್ಲೂ ಇರ್ತರ ಈ ಭೂಮಿ ಮೇಲೆ ? ಅಂತ ಅನ್ನಿಸಿಬಿಡುತ್ತೆ. ಯೆಸ್‌ ಇರ್ತರೆ..., ಅವ್ರನ್ನ ಗುರುತಿಸೋ ಎಫರ್ಟ್‌ ನಾವು ಹಾಕ್ಬೇಕು. ಆ ಪ್ರಾಸೆಸ್‌ನಲ್ಲಿ ನಮಗೆ ನಾವು ಸಿಕ್ತೀವಿ ಅನ್ನೋದೇ ಈ ಸಿನಿಮಾದ ತಿರುಳು.

ಮೇಯಳಗನ್ ಎಂಬ ಹೀಲರ್

"ಮೇಯಳಗನ್" ಚಿತ್ರವೊಂದು ಸುದೀರ್ಘ ಮಾತುಕತೆಯಷ್ಟೇ. ಆದರೆ ಆ ಮಾತುಕತೆಗಳು ನಮ್ಮ ನಿಮ್ಮ ಮನದಾಳದ ಮಾತುಕತೆಗಳೇ ಆಗಿಬಿಡುತ್ತವೆ. ನಾನೇ ಚಿತ್ರದ ಆತನ್, ಈಗಲೇ ಊರಿಗೆ ತೆರಳಿ ಮೇಯಳಗನ್ ಅನ್ನು ಹುಡುಕಬೇಕಷ್ಟೇ ಎನ್ನುವಷ್ಟು ನಿಮ್ಮ ಪರಕಾಯಪ್ರವೇಶವಾಗಿಬಿಡುತ್ತದೆ. ನನ್ನೊಳಗೆ ಒಂದು ಪಯಣ ಶುರುವಾಗಿಬಿಡುತ್ತದ್ದೆ.

ಬಿಯರ್ ಕುಡಿದು ಮೇಲೆ ಇಬ್ಬರ ನಡುವೆ ನಡೆಯುವ ಸಂವಾದ ಬಹುಶಃ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ಶ್ರೇಷ್ಠ ದೃಶ್ಯಗಳಲ್ಲಿ ಒಂದು ಎಂಬುದು ನನ್ನ ಅನಿಸಿಕೆ, ಉದಾರವಾಗಿ ನೀಡುವ ಒಂದು ಸಿಂಪಲ್ acts of goodness ವ್ಯಕ್ತಿ ಜೀವನದಲ್ಲಿ ಏನೆಲ್ಲಾ ಸಂಚಲನ ತರಬಹುದು, acts of goodness and giving ಒಬ್ಬ ಸಾಮಾನ್ಯ ಬಾಲಕನನ್ನ ನಿಷ್ಕಲ್ಮಶ ಮನಸ್ಸಿನ ಪ್ರವಾದಿಯನ್ನಾಗಿ ಹೇಗೆ ರೂಪಿಸಬಹುದು ... ಉಫ್ ಹೇಳುತ್ತಾ ಹೋದರೆ ಏನೆಲ್ಲಾ ಬರೆಯಬಹುದು... ಯಾವುದೇ ಟಾಕ್ಸಿಕ್ ದೃಶ್ಯಗಳಿಲ್ಲದೆ, ಹೊಡೆದಾಟ, ಬಡಿದಾಟಗಳಿಲ್ಲದೆ, ಎರಡೂವರೆ ಗಂಟೆಗಳ ಕಾಲ ನಿರಂತರ ಸಂವಾದದ ಮೂಲಕ, ಮನಸೆಳೆಯುವ ದೃಶ್ಯಕಾವ್ಯವನ್ನು ಉಣಬಡಿಸುತ್ತಾ, ಒಳ್ಳೆಯತನಕ್ಕೆ ಮಿತಿಯಿಲ್ಲ, ಕ್ಷಮೆ ಸುಲಭ, we can heal through conversations ಎಂದು ಸಾರುವ ಮೇಯಳಗನ್ ನೋಡುತ್ತಾ ನಾನು ಕೂಡ ಹೀಲ್ ಆದೆ ಅನಿಸಿತು...

ನಿಮ್ಮ ಬೇಳೆ ಬೇಯಿಸಿಕೊಳ್ಳಲು ನೆಗೆಟಿವ್ ಬರಿತಾ ಟೈಮ್ ವೇಸ್ಟ್ ಮಾಡ್ಕೋಬೇಡಿ

ಕೆಲವೊಂದು ಸಿನಿಮಾಗಳು ತಾವು ಪ್ರೇಕ್ಷಕನೊಂದಿಗೆ ಸಂವಾದ ನಡೆಸೋದಕ್ಕೆ ಏಕಾಗ್ರತೆ ಮತ್ತು ಒಬ್ಬರೇ ನೋಡೋದನ್ನ ಬಯಸ್ತವೆ. ಅಂತ ಪಟ್ಟಿಯಲ್ಲಿ ಮೇಯಳಗನ್ ಸಿನಿಮಾ ಕೂಡ ಸೇರಿಕೊಳ್ಳುತ್ತೆ. ಸಿನಿಮಾ ಶುರುವಾದಾಗಿಂದ ಮುಖದ ಮೇಲೊಂದು ಕಿರುನಗೆ ಹೇಗಿತ್ತೋ ಹಾಗೇನೇ ಕಣ್ಣಂಚು ಕೂಡ ತುಂಬಿಕೊಂಡೆ ಇತ್ತು. ಅಷ್ಟು ಈ ಸಿನಿಮಾ ಹಲವು ಕಡೆ ನಮ್ಮನ್ನ ಮಗುವಂತೆ ನಗಿಸುತ್ತಾ ಮತ್ತು ಕೆಲವು ಕಡೆ ಮಕ್ಕಳಂತೆಯೇ ಕಣ್ಣೀರಾಕಿಸುತ್ತದೆ.

ಮೊನ್ನೆ OTT ಗೆ ಸಿನಿಮಾ ಬಂದಾಗಿನಿಂದ ಈ ಚಿತ್ರದ ಬಗೆಗೆಜನರ ಅಭಿಪ್ರಾಯ ಹೇಗಿರುತ್ತೆ ತಿಳ್ಕೊಳನ ಅಂತ FB ಫೀಡ್ ಚೆಕ್ ಮಾಡ್ತಿದ್ದೆ. ಹೆಚ್ಚುಕಮ್ಮಿ ಎಲ್ಲರೂ ಸಿನಿಮಾವನ್ನ ಮೆಚ್ಚಿ, ಹೊಗಳಿ, ಕೊಂಡಾಡ್ತಿದರೆ. ಒಂದ್ ಸಿನಿಮಾ ಈ ರೀತಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರಿಗೆ ಒಪ್ಪಿಗೆಯಾಗುವುದನ್ನ ನೋಡುವುದೇ ಒಂದು ಖುಷಿ. ಇನ್ನೂ ಕೆಲವು ಕಡೆ ಸಿನಿಮಾ ಬಗ್ಗೆ ನೆಗೆಟಿವ್ ಮಾತುಗಳನ್ನ ಬರೆದಿರೋದು ನೋಡಿದೆ. ತಪ್ಪಿಲ್ಲ, ಒಂದು ಸಿನಿಮಾ ಎಲ್ಲಾ ರೀತಿಯಲ್ಲಿಯೂ ಎಲ್ಲರಿಗೂ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ಎಲ್ಲಾ ಸಿನಿಮಾಗಳಿಗೂ ಮುಖ್ಯವೇ. ಆದರೆ ಈ ಸಿನಿಮಾದ ಬಗ್ಗೆ ನೆಗೆಟಿವ್ ಬರೆದಿರುವವರು ನೀಡಿರುವ ಕಾರಣ ನಿಜಕ್ಕೂ ನನಗೆ ಶಾಕ್ ನೀಡೋದ್ರು ಜೊತೆಗೆ ನಗುನು ಬರ್ಸಿದ್ವು.

ಒಂದು ಸಿನಿಮಾ ತಾನು ಬರುವಾಗ ಯಾವ ತರದ ಸಿನಿಮಾ ಎಂದು ತನ್ನನ್ನು ತಾನು ತನ್ನ ಟ್ರೈಲರ್ ಮತ್ತು ಹಾಡುಗಳ ಮೂಲಕ ಕ್ಯಾಟರ್ ಮಾಡಿಕೊಳ್ಳುತ್ತದೆ. ಈ ಸಿನಿಮಾ ಕೂಡ ಹಾಗೆಯೇ ಒಂದೆರಡು ಜೀವಗಳ ನಡುವಿನ ಬಾಂಧವ್ಯದ ಕುರಿತಾದ ಸಿನಿಮಾ ಎಂಬುದನ್ನ ಗಟ್ಟಿಯಾಗಿ ತಿಳಿಸಿತ್ತು. ಆದರೆ ಈ ಸಿನಿಮಾದ ಬಗ್ಗೆ ನೆಗೆಟಿವ್ ಬರೆದಿರುವ ಕೆಲ ಸೋ ಕಾಲ್ಡ್ ಬುದ್ಧಿಜೀವಿಗಳು ಇದರೊಳಗೆ ತಮಗೆ ಒಪ್ಪಿತವಾಗುವ ರಾಜಕೀಯ ಅಜೆಂಡಾಗಳು ಇಲ್ಲವೆಂದು ಇದನ್ನು ಟೀಕಿಸುತ್ತಿರುವುದು ನಿಜಕ್ಕೂ ನಗು ತರಿಸಿತು.

ಈ ತರದವರಿಗೆ ನನ್ನ ಮನವಿ ಏನೆಂದರೆ ಒಂದು ಸಿನಿಮಾಗೆ ಹೋಗುವ ಮುನ್ನ ಅದರ ಟ್ರೈಲರನ್ನೋ, ಹಾಡುಗಳನ್ನೋ ನೋಡಿ, ಕೇಳಿ. ಅದು ನಿಮಗೆ ಕ್ಲಿಯರ್ರಾಗಿ ತಾನು ಯಾವುದರ ಬಗೆಗಿನ ಸಿನಿಮಾ ಎಂಬುದನ್ನ ತಲುಪಿಸುತ್ತವೆ. ಅದು ನಿಮಗೆ ಒಪ್ಪಿಗೆಯಾಗದಿದ್ದಲ್ಲಿ ದಯವಿಟ್ಟು ನೋಡಬೇಡಿ. ನೋಡಿ ಬಂದು ನಿಮ್ಮ ಬೇಳೆ ಬೇಯಿಸಿಕೊಳ್ಳಲು ಅದರ ಬಗ್ಗೆ ನೆಗೆಟಿವ್ ಬರಿತಾ ಟೈಮ್ ವೇಸ್ಟ್ ಮಾಡ್ಕೋಬೇಡಿ. ಎಲ್ಲಾ ತರದ ಕಥೆಗಳೂ, ಎಲ್ಲಾ ತರದ ಜನರಿಂದ ಸಿನಿಮಾ ಆಗಿ ಜನರ ಬಳಿ ಬರಬೇಕು. ನಿಮಗೆ ಒಪ್ಪಿಗೆಯಾಗಿ ಸಿದ್ಧಾಂತ ಪ್ರೇರಿತ ಸಿನಿಮಾಗಳಷ್ಟೇ ಸಿನಿಮಾ ಅನ್ನೋದನ್ನ ಮೊದಲು ತಲೆಯಿಂದ ತೆಗೆಯಿರಿ.

ಒಂದು ಸಾಧಾರಣ ಚಿತ್ರ

ಒಂದು ಸಾಧಾರಣ ಪರಭಾಷಾ ಚಿತ್ರವನ್ನ ಅಸಾಧಾರಣ ಅಂತ ಬಿಂಬಿಸೋದು ಮತ್ತು ಅದನ್ನ ಇಲ್ಲಿನ ತಂತ್ರಜ್ಞರಿಗೆ , ನಿರ್ದೇಶಕ , ಕಥೆಗಾರರಿಗೆ ಹೋಲಿಸಿ ಹೀಯಾಳಿಸೋದು ಕನ್ನಡಿಗರಿಗೆ ಮಾತ್ರ ಒಲಿದ ಕಲೆ

ವೆಜ್ಜು ತಿನ್ನುವ ಮೇಲ್ಜಾತಿಗಳ ಹರಟೆಯ ಕಟ್ಟೆ ಪುರಾಣ

ಬರೀ ವೆಜ್ಜು ತಿನ್ನುವ ಮೇಲ್ಜಾತಿಗಳ ಹರಟೆಯ ಕಟ್ಟೆ ಪುರಾಣದ ಮೇಯಳಗನ್ ನೋಡಿದೆ. 80s, 90s Kidsಗೆ ಮಾತ್ರ ಇವೆಲ್ಲಾ ಗೊತ್ತು ಅನ್ನೋ ರೀಲ್ಸ್‌ಗಳು ಫೇಸ್‌ಬುಕ್ಕಿನಲ್ಲಿ ದಂಡಿಯಾಗಿ ಸಿಗುತ್ತವೆ. ಆ ಥರದ್ದೇ ಒಂದು ಲೆಂತಿ ರೀಲ್ ಈ ಸಿನಿಮಾ. ಮೇಕಿಂಗ್, ನಟನೆ, ಸ್ಕ್ರಿಪ್ಟ್ ಎಲ್ಲಾ ಚೆನ್ನಾಗಿದೆ. ಆದರೆ ಅದು ವಾಸ್ತವಕ್ಕೆ ಕನೆಕ್ಟ್ ಆಗುವುದಿಲ್ಲ. ಒಂದು ರೀತಿಯ ಫ್ಯಾಂಟಸಿ ಕತೆಯಂತೆ ಸಾಗುತ್ತದೆ. ಉಳ್ಳವರ ಸಣ್ಣಪುಟ್ಟ ನಿಟ್ಟುಸಿರುಗಳನ್ನೇ ಮಹಾ ತ್ಯಾಗವೆಂದು ಬಗೆದು ತೋರಿಸಲಾಗಿದೆ.

ದೊಡ್ಡಮನೆಯನ್ನು ಬಿಟ್ಟು ಹೋಗುವ ಹುಡುಗನಿಗಾಗುವ ಸಂಕಟ, ಅದೇ ಊರಿನ ಕೇರಿಯ ಜೋಪಡಿಯಲ್ಲೋ, ಗುಡಿಸಿಲಿನಲ್ಲೋ ಬದುಕುವ ಹುಡುಗನ ಸಂಕಟಕ್ಕಿಂತಲೂ ಮೇಲು ಎಂಬಂತೆ ತೋರಿಸಲಾಗುತ್ತಿದೆ. ಪಾ ರಂಜಿತ್, ಮಾರಿ ಸೆಲ್ವರಾಜ್, ವೆಟ್ರಿಮಾರನ್, ರಾಮ್ ಮುಂತಾದವರು ಸತ್ಯ ಹೇಳುವ ಪ್ರಯತ್ನಗಳ ಕತ್ತು ಹಿಸುಕುವ ಕುತಂತ್ರದಂತೆ ಇಬ್ಬರು ಸುಖ ಜೀವಿಗಳ ಒಣ ತಲ್ಲಣಗಳನ್ನು ರಮ್ಯವಾಗಿ ಸೆರೆಹಿಡಿದು ಪ್ರೇಕ್ಷಕರನ್ನು ಯಾಮಾರಿಸಲಾಗಿದೆ.

ಕರವಸ್ತ್ರ ಇರಿಸಿಕೊಳ್ಳದೇ ಸಿನಿಮಾ ನೋಡಲು ಕೂರಬೇಡಿ

ನಮ್ಮ ಮನೆಯಲ್ಲಿ ಸಿನೆಮಾಗಳನ್ನು ನೋಡಿ ಕಣ್ಣನ್ನು ಒದ್ದೆ ಮಾಡಿಕೊಳ್ಳುವದು ಏನಿದ್ದರೂ ಹೆಂಡತಿಯ ಕೆಲಸ. ಕೆಲವೊಮ್ಮೆ ಚಿತ್ರಗಳನ್ನು ನೋಡುತ್ತಾ ಬಿಕ್ಕಳಿಸಿ ಅಳುತ್ತಿರುತ್ತಾಳೆ. ಆದರೆ ನಾನಿಂದು 'ಮೆಯ್ಅಳಗನ್'(Meiyazhagan) ಎನ್ನುವ ಅದ್ಭುತ ಚಿತ್ರಕಾವ್ಯ ನೋಡಿ ಅದೆಷ್ಟು ಬಾರಿ ಕಣ್ಣುಗಳನ್ನು ಒರೆಸಿಕೊಂಡೆನೋ ಗೊತ್ತಿಲ್ಲ. ಅರವಿಂದ್‌ ಸ್ವಾಮಿ ಹಾಗೂ ಕಾರ್ತಿ ನಟನೆಯ ಸಿನೆಮಾ ಆರಂಭವಾದ ಕೆಲವೇ ನಿಮಿಷಗಳಿಂದ ಕ್ಲೈಮಾಕ್ಸ್‌ವರೆಗೂ ಭಾವನೆಗಳ ಉತ್ಸವವೇ ನಡೆಯುತ್ತದೆ. ನಾನು ಇತ್ತೀಚೆಗೆ ನೋಡಿದ ಅತ್ಯದ್ಭುತ ಸಿನೆಮಾ, ಪ್ರತಿ ಕ್ಷಣವೂ ಕಾಡುವ ಸಿನೆಮಾ. ಒಂದು ಸರಳ ಕಥೆಯ ಸಾಗರದಲ್ಲಿ ಭಾವನೆಗಳು ಅಲೆಗಳಂತೆ ಅಪ್ಪಳಿಸುತ್ತಲೇ ಇರುತ್ತವೆ. ಅರವಿಂದ್‌ ಸ್ವಾಮಿಯ ತಂಗಿಯ ಮದುವೆ, ಕಾರ್ತಿಯ ಹೆಸರಿಗಾಗಿ ಹುಡುಕುವ ಭಾವೋಗ್ವೇದ, ಉಪಕಾರವನ್ನು ದೇವರಂತೆ ಸ್ಮರಿಸುವ ಕಾರ್ತಿ, ಜಂಜಾಟ-ಗೊಂದಲಗಳ ನಡುವೆ ತನ್ನನ್ನೇ ತಾನು ಮರೆತಿದ್ದ ಅರವಿಂದ್‌ ಹಾಗೂ ಸಿನೆಮಾದಲ್ಲಿನ ಪ್ರತಿ ಪಾತ್ರ ಕೂಡ ನಿಮ್ಮನ್ನು ಕಾಡುತ್ತದೆ, ಕಾಡುತ್ತಲೇ ಇರುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿರುವ ʼಮೆಯ್ಅಳಗನ್' ಸಿನೆಮಾವನ್ನು ತಪ್ಪದೇ ನೋಡಿ. ವೀಕ್ಷಿಸಿದ ಬಳಿಕ ಇಷ್ಟವಾದರೆ ಒಂದು ಲೈಕ್‌ ಕೊಡಿ.

ವಿಶೇಷ ಸೂಚನೆ: ಪಕ್ಕಕ್ಕೊಂದು ಕರವಸ್ತ್ರವನ್ನು ಇರಿಸಿಕೊಳ್ಳದೇ ಸಿನೆಮಾ ನೋಡಲು ಕೂರಬೇಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ