ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ದೂರು ದಾಖಲು
Oct 29, 2024 08:45 AM IST
ಮಲಯಾಳಂ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
ಲೈಂಗಿಕ ದೌರ್ಜನ್ಯ ಆರೋಪದಡಿ ಮಲಯಾಳಂ ಸಿನಿಮಾ ನಿರ್ಮಾಪಕ, ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಕೇಸ್ ದಾಖಲಾಗಿದೆ. ರಂಜಿತ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕೋಯಿಕ್ಕೋಡ್ ಮೂಲದ ಕಲಾವಿದರೊಬ್ಬರಿಂದ ದೂರು ದಾಖಲಿಸಿದ್ದಾರೆ.
ಬೆಂಗಳೂರು: ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 31 ವರ್ಷದ ನಟರೊಬ್ಬರು ದೂರು ದಾಖಲಿಸಿದ್ದಾರೆ. ಬೆಂಗಳೂರು ಈಶಾನ್ಯ ವಿಭಾಗದ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇರಳ ಪೊಲೀಸರು ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾಯಿಸಿದ ನಂತರ ರಂಜಿತ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೋಯಿಕ್ಕೋಡ್ ಮೂಲದ ಕಲಾವಿದರೊಬ್ಬರಿಂದ ದೂರು ದಾಖಲು
2012ರಲ್ಲಿ ಬಾವುಟ್ಟಿಯುಡೆ ನಾಮತ್ತಿಲ್ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ಕೇರಳದ ಈಸ್ಟ್ ಹಿಲ್‌ಗೆ ಹೋಗಿದ್ದೆ. ಆ ಸಂದರ್ಭದಲ್ಲಿ ರಂಜಿತ್ ನನ್ನನ್ನು ಭೇಟಿಯಾಗಿದ್ದರು. ನಂತರ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಸಮೀಪ ಇರುವ ಐಷಾರಾಮಿ ಹೋಟೆಲ್‌ಗೆ ರಂಜಿತ್ ನನ್ನನ್ನು ಕರೆಸಿಕೊಂಡಿದ್ದರು. ಅಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ನಟಿಯೊಬ್ಬರೊಂದಿಗೆ ಮಾತನಾಡುತ್ತಲೇ ನಗ್ನವಾಗುವಂತೆ ಬಲವಂತ ಮಾಡಿದ್ದರು. ನಾನು ಅವರು ಹೇಳಿದಂತೆ ಕೇಳಿದ್ದೆ, ಆಗ ನನ್ನ ಫೋಟೋಗಳನ್ನು ಕ್ಲಿಕ್ ಮಾಡಿ ಆ ನಟಿಗೆ ಕಳಿಸಿದ್ದರು. ನನ್ನ ಫೋಟೋ ಆ ನಟಿಗೆ ಇಷ್ಟವಾಗಿದೆ ಎಂದೂ ಹೇಳಿದ್ದರು ಎಂದು ಕೋಯಿಕ್ಕೋಡ್ ಮೂಲದ ಕಲಾವಿದರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಆಧಾರದ ಮೇಲೆ ರಂಜಿತ್ ವಿರುದ್ಧ ಐಟಿ ಕಾಯ್ದೆಯ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು), ಮತ್ತು 66 ಇ (ಗೌಪ್ಯತೆಯ ಉಲ್ಲಂಘನೆಗಾಗಿ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಅವರೂ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ರಂಜಿತ್ ಬಾಲಕೃಷ್ಣನ್ ರಾಷ್ಟ್ರಪ್ರಶಸ್ತಿ ವಿಜೇತರಾಗಿದ್ದು ಅವರ ಮೇಲೆ ಈ ಆರೋಪ ಕೇಳಿ ಬಂದಿರುವುದು ಮಾಲಿವುಡ್ ಚಿತ್ರರಂಗಕ್ಕೆ ಶಾಕ್ ನೀಡಿದೆ.
ವೈದ್ಯಕೀಯ ಸೀಟು ಕೊಡಿಸುವ ಆಮಿಷ; ರೂ 6.38 ಕೋಟಿ ರೂ. ವಂಚನೆ
ಮತ್ತೊಂದು ಪ್ರಕರಣದಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ಆಮಿಷ ಒಡ್ಡಿ ಸುಮಾರು 8 ವಿದ್ಯಾರ್ಥಿಗಳ ಪೋಷಕರಿಂದ 6.38 ಕೋಟಿ ರೂ. ಪಡೆದು ವಂಚಿಸಿರುವ ಆರೋಪದ ಮೇಲೆ ಚೆನ್ನೈ ನಿವಾಸಿ ಮಹಿಳೆ ಅನ್ನಾ ಜಾಕಬ್ ವಿರುದ್ಧ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ವಿಬ್ ಗಯಾರ್ ಶಾಲೆಯ ಶಿಕ್ಷಕಿ ದೀಪ್ತಿ ಕೆ ಸಿಂಹ ಎಂಬುವವರು ಮಹಿಳೆಯ ವಿರುದ್ಧ ದೂರು ನೀಡಿದ್ದರು.
ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ದೀಪ್ತಿ, ಕೆಲಸದ ಜತೆಗೆ ಮನೆ ಪಾಠ ಮಾಡುತ್ತಿದ್ದರು. ವಸುಂಧರಾ ಎಂಬುವರ ಮೂಲಕ ಅನ್ನಾ ಜಾಕಬ್ ಅವರ ಪರಿಚಯವಾಗಿತ್ತು. ಆಕೆ ಬೆಂಗಳೂರಿನ ಸೆಂಟ್ ಜಾನ್ ಮೆಡಿಕಲ್ ಕಾಲೇಜು ಮತ್ತು ವೆಲ್ಲೂರಿನ ಸಿಎಂಸಿ ಮೆಡಿಕಲ್ ಕಾಲೇಜಿನ ಟ್ರಸ್ಟಿ ಎಂದು ಹೇಳಿಕೋಡಿದ್ದರು. ಈ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಎಂಡಿ ಸೀಟುಗಳನ್ನು ಕೊಡಿಸುವುದಾಗಿ ಹೇಳಿಕೊಂಡಿದ್ದರು. ದೀಪ್ತಿ ಅವರು ತಾವು ಮನೆ ಪಾಠ ಮಾಡುತ್ತಿದ್ದ ವಿದ್ಯಾರ್ಥಿಗಳ ಪೋಷಕರಿಗೆ ಈ ವಿಷಯ ತಿಳಿಸಿದ್ದರು. ಇವರ ಮಾತು ನಂಬಿ 8 ವಿದ್ಯಾರ್ಥಿಗಳ ಪೋಷಕರು ಅನ್ನಾ ಅವರನ್ನು ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಭೇಟಿ ಮಾಡಿದ್ದರು. ಹಣ ಕೊಟ್ಟರೆ ಸೀಟು ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಐವರು ವಿದ್ಯಾರ್ಥಿಗಳ ಪೋಷಕರು ದೀಪ್ತಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ದೀಪ್ತಿ, ಈ ಹಣವನ್ನು ಚೆನ್ನೈನ ಅನ್ನಾ ಜಾಕಬ್ ಅವರ ಖಾತೆಗೆ ವರ್ಗಾಯಿಸಿದ್ದರು. ಆದರೆ ಆರೋಪಿ ಮೆಡಿಕಲ್ ಸೀಟು ಕೊಡಿಸಿರಲಿಲ್ಲ. ಆಕೆ ಯಾವುದೇ ಕಾಲೇಜಿನ ಟ್ರಸ್ಟಿ ಅಲ್ಲ ಎಂಬ ಸತ್ಯ ಕೂಡಾ ಗೊತ್ತಾಗಿದೆ.
ಬಳಿಕ ಅನ್ನಾ ವಿರುದ್ಧ ದೂರು ದೂರು ನೀಡಲಾಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ಹೈದರಾಬಾದ್‌ನಲ್ಲಿ ಕೂಡಾ ಅನ್ನಾ, ಮೆಡಿಕಲ್ ಕಾಲೇಜು ಸೀಟು ಕೊಡಿಸುವುದಾಗಿ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.