Explainer: 4 ತಿಂಗಳಲ್ಲಿ ಮಲಯಾಳಂ ಚಿತ್ರರಂಗ ಗಳಿಸಿದ್ದು 1000 ಕೋಟಿ, ಕನ್ನಡ ಚಿತ್ರರಂಗ 100 ಕೋಟಿನೂ ದಾಟಿಲ್ವಲ್ಲ ಗುರೂ! ಹಿಂಗಾದ್ರೆ ಹೆಂಗೇ?
May 15, 2024 05:12 PM IST
Explainer: 4 ತಿಂಗಳಲ್ಲಿ ಮಲಯಾಳಂ ಚಿತ್ರರಂಗ ಗಳಿಸಿದ್ದು 1000 ಕೋಟಿ, ಕನ್ನಡ ಚಿತ್ರರಂಗ 100 ಕೋಟಿನೂ ದಾಟಿಲ್ವಲ್ಲ ಗುರೂ! ಹಿಂಗಾದ್ರೆ ಹೆಂಗೇ?
- ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮಾಲಿವುಡ್ ಸಿನಿಮಾಗಳು ಕೇವಲ ಮಲಯಾಳಿ ಭಾಷಿಕರು ಮಾತ್ರವಲ್ಲ ಎಲ್ಲರ ಬಾಯಲ್ಲಿ ನಲಿದಿದ್ದೇ ಹೆಚ್ಚು. ಗಳಿಕೆ ವಿಚಾರದಲ್ಲಿ ಸಾರ್ವಕಾಲಿಕ ಕಲೆಕ್ಷನ್ ಸಹ ಈ ವರ್ಷದಲ್ಲಿ ದಕ್ಕಿವೆ. ಆದರೆ, ಕನ್ನಡದಲ್ಲಿ ಮಾತ್ರ ಆ ಅವಧಿಯಲ್ಲಿಯೇ 80 ಸಿನಿಮಾಗಳು ಬಿಡುಗಡೆಯಾದರೂ, ಒಟ್ಟಾರೆ ನೂರು ಕೋಟಿಯನ್ನೂ ದಾಟದೇ ಇರುವುದು ವಿಪರ್ಯಾಸ!
Mollywood vs sandalwood: ಕೇವಲ ಒಬ್ಬಿಬ್ಬರನ್ನು ನಂಬಿ ಕೂತರೇ ಏನೂ ಆಗದು. ಅದಕ್ಕೆ ವೈಯಕ್ತಿಕ ಸಾಧನೆ ಎನ್ನುತ್ತಾರೆಯೇ ಹೊರತೂ ಮತ್ತೇನಲ್ಲ. ಅದರಿಂದ ಇಂಡಸ್ಟ್ರಿಗೆ ಹೆಸರು ಬರಬಹುದೇ ಹೊರತು, ಇಂಡಸ್ಟ್ರಿ ಬೆಳೆಯಿತು ಎಂದು ಹೇಳುವುದಕ್ಕಾಗದು. ಇದು ಕನ್ನಡ ಚಿತ್ರೋದ್ಯಮದ ಇಂದಿನ ವಾಸ್ತವ ಸ್ಥಿತಿ! ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರೋದ್ಯಮ ಬೆಳೆದಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಪರಭಾಷಿಕರೂ ಕನ್ನಡದ ಸಿನಿಮಾಗಳನ್ನು ಎತ್ತಿ ಮೆರೆಸುತ್ತಿದ್ದಾರೆ. ಅಷ್ಟಕ್ಕೂ ಕನ್ನಡದ ಎಷ್ಟು ಸಿನಿಮಾಗಳಿಗೆ ಆ ಸೌಭಾಗ್ಯ ಸಿಕ್ಕಿದೆ? ಈ ನಾಲ್ಕೇ ತಿಂಗಳ ಅವಧಿಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ 80ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾಗಿವೆಯಾದರೂ, ಗೆದ್ದಿದ್ದು ಮಾತ್ರ ಬೆರಳೆಣಿಕೆ ಚಿತ್ರಗಳು ಮಾತ್ರ!
ನಮ್ಮ ಪಕ್ಕದಲ್ಲಿಯೇ ಮಾಲಿವುಡ್ ಚಿತ್ರರಂಗವಿದೆ. ಮಲಯಾಳಂ ಸಿನಿಮಾಕ್ಷೇತ್ರದ ವ್ಯಾಪ್ತಿ ಕಡಿಮೆಯಾದರೂ, ಇತ್ತೀಚಿನ ಒಂದಷ್ಟು ಬದಲಾವಣೆಗಳು ದೊಡ್ಡ ಮುನ್ಸೂಚನೆಯನ್ನೇ ನೀಡಿವೆ. ನಮ್ಮಲ್ಲೂ ನೂರು ಕೋಟಿ, ಇನ್ನೂರು ಕೋಟಿ ಕಲೆಕ್ಷನ್ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿವೆ ಅಲ್ಲಿನ ಸಿನಿಮಾಗಳು. ಅದರಂತೆ, ಈ ವರ್ಷದ ಜನರಿಯಿಂದ ಇಲ್ಲಿಯವರೆಗೂ ಅಂದರೆ ಕೇವಲ 4 ತಿಂಗಳ ಅವಧಿಯಲ್ಲಿ ಮಲಯಾಳಂ ಸಿನಿಮಾಗಳು ಬರೋಬ್ಬರಿ 1000 ಕೋಟಿ ಕಲೆಕ್ಷನ್ ಗಡಿ ತಲುಪಿವೆ. ಮುಂದಿನ ದಿನ ಅದು ಮತ್ತಷ್ಟು ಹಿರಿದಾಗುವ ಸೂಚನೆಯೂ ಸಿಕ್ಕಿದೆ. ಏಕೆಂದರೆ, ಅಲ್ಲಿನ ಸ್ಟಾರ್‌ಗಳು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡ್ತಾರೆ.
ಮಾಲಿವುಡ್‌ನಲ್ಲಿ ಬಂಗಾರದ ಬೆಳೆ
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮಾಲಿವುಡ್ ಸಿನಿಮಾಗಳು ಕೇವಲ ಮಲಯಾಳಿ ಭಾಷಿಕರು ಮಾತ್ರವಲ್ಲ ಎಲ್ಲರ ಬಾಯಲ್ಲಿ ನಲಿದಿದ್ದೇ ಹೆಚ್ಚು. ಮಂಜುಮ್ಮೆಲ್ ಬಾಯ್ಸ್, ಪ್ರೇಮಲು, ಬ್ರಹಯುಗಂ, ಆವೇಶಂ, ಆಡುಜೀವಿತಂ, ಹೀಗೆ ಇನ್ನೂ ಹಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಪಾರಮ್ಯ ಮೆರೆದಿವೆ. ನೂರಾರು ಕೋಟಿ ಗಳಿಕೆ ಮಾಡಿ, ನಮ್ಮಲ್ಲೂ ಆ ತಾಕತ್ತಿದೆ ಎಂಬುದನ್ನು ಸಾಬೀತುಪಡಿಸಲು ಹೊರಟಿವೆ. ಆ ನಿಟ್ಟಿನಲ್ಲಿ, ಮಲಯಾಳಿ ಪೈಪ್‌ಲೈನ್‌ನಲ್ಲಿ ಇನ್ನೂ ಹಲವು ಸಿನಿಮಾಗಳ ಭಂಡಾರವೇ ಇದೆ. ಕನ್ನಡ ಚಿತ್ರೋದ್ಯಮಕ್ಕಿಂತ ಸಣ್ಣ ಉದ್ಯಮ ಎನಿಸಿಕೊಂಡರೂ, ಮಲಯಾಳಂ ಸಿನಿಮೋದ್ಯಮ ಮಾತ್ರ ಬೇರೆ ಲೆವೆಲ್‌ನಲ್ಲಿಯೇ ಸಾಗುತ್ತಿದೆ.
ಕನ್ನಡ ಸಿನಿಮಾಗಳ ಸ್ಥಿತಿ ಅಧೋಗತಿ!
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 80ಕ್ಕೂ ಅಧಿಕ ಕನ್ನಡ ಸಿನಿಮಾಗಳು ರಿಲೀಸ್ ಆಗಿವೆ. ಆ ಸಿನಿಮಾಗಳಲ್ಲಿ ಗೆದ್ದ ಚಿತ್ರಗಳೆಷ್ಟು? ಇದನ್ನು ಹೇಳುವುದೇ ಕಷ್ಟ. ಇಲ್ಲಿ ಗೆಲುವಿನ ಪ್ರಮಾಣವೇ ಕುಸಿದಿದೆ. ಮಲಯಾಳಂ ಸಿನಿಮಾಗಳು ಕಳೆದ ನಾಲ್ಕು ತಿಂಗಳಲ್ಲಿ ಸಾವಿರ ಕೋಟಿ ಗಳಿಕೆ ಕಂಡರೆ, ಕನ್ನಡ ಚಿತ್ರೋದ್ಯಮ 100 ಕೋಟಿಯನ್ನೂ ಗಳಿಕೆ ಮಾಡದಿರುವುದು ವಿಪರ್ಯಾಸ! ಇದಕ್ಕೆ ಕಾರಣ ಹುಡುಕಹೊರಟೆರೆ, ಅಲ್ಲಿ ಕಾಣಿಸುವುದು ಸ್ಟಾರ್ ನಟರ ಸಿನಿಮಾಗಳ ಕೊರತೆ. ಸದ್ಯದ ಮಟ್ಟಿಗೆ ಕನ್ನಡ ಚಿತ್ರೋದ್ಯಮದ ಸ್ಥಿತಿಯೇ ಅತಂತ್ರವಿದೆ. ಇಣುಕಿ ನೋಡಿದರೂ ಬಹುನಿರೀಕ್ಷಿತ ಎನಿಸುವ ಸಿನಿಮಾಗಳ ಸಂಖ್ಯೆ ತೀರಾ ಕಡಿಮೆ.
ವರ್ಷಗಳೇ ಉರುಳಿದವು ಸ್ಟಾರ್ ಸಿನಿಮಾಗಳೇ ಇಲ್ಲ
ಶಿವರಾಜ್‌ಕುಮಾರ್, ದರ್ಶನ್, ಸುದೀಪ್, ಯಶ್, ಧ್ರುವ ಸರ್ಜಾ, ಶ್ರೀಮುರಳಿ, ಹೀಗೆ ಇನ್ನೂ ಹಲವು ನಟರು ಸಿನಿಮಾಗಳನ್ನು ಮಾಡುತ್ತಿದ್ದಾರಾದರೂ, ಮೂರು ವರ್ಷಕ್ಕೊಂದು, ಎರಡು ವರ್ಷಕ್ಕೊಂದು ಅವರ ಬತ್ತಳಿಕೆಯಿಂದ ಹೊರಬರುತ್ತಿವೆ. ಅಷ್ಟು ಬಂದರೆ ಮನೆ ನಡೆಯುತ್ತಾ? ಚಾನ್ಸೇ ಇಲ್ಲ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಆಗಿಯೇ ಎರಡು ವರ್ಷದ ಮೇಲಾಯ್ತು. ಅವರ ಟಾಕ್ಸಿಕ್ ಸಿನಿಮಾ 2025ರಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಸುದೀಪ್ ಅವರ ವಿಕ್ರಾಂತ್ ರೋಣ ಬಳಿಕ ಮ್ಯಾಕ್ಸ್ ಚಿತ್ರ ಕೊನೇ ಹಂತದ ಶೂಟಿಂಗ್‌ನಲ್ಲಿದೆ.
ಸೆಕೆಂಡ್ ಲೇಯರ್ ಹೀರೋಗಳಿಗೆ ಗೆಲುವೇ ಮರೀಚಿಕೆ
ಶ್ರೀಮುರಳಿಯ ಬಘೀರ ಚಿತ್ರ, ಧ್ರುವ ಸರ್ಜಾ ನಟನೆಯ ಎರಡು ಸಿನಿಮಾಗಳು ಅದ್ಯಾವಾಗ ಶೂಟಿಂಗ್ ಮುಗಿಸಿ ಚಿತ್ರಮಂದಿರಕ್ಕೆ ಬರ್ತಾರೋ ಗೊತ್ತಿಲ್ಲ. ಸೆಕೆಂಡ್ ಲೇಯರ್‌ನ ಹೀರೋಗಳಿಗೆ ಗೆಲುವೇ ದಕ್ಕಿಲ್ಲ. ಈ ನಡುವೆ ನಟ ದರ್ಶನ್ ವರ್ಷಕ್ಕೊಂದರಂತೆ ಸಿನಿಮಾ ನೀಡುವ ಕಾಯಕ ಮುಂದುವರಿಸಿದ್ದಾರೆ. ಶಿವಣ್ಣ ವರ್ಷಕ್ಕೆ ಎರಡು ಸಿನಿಮಾ ನೀಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ, ಸಿನಿಮಾಗಳ ಜತೆಗೆ ಕರ್ನಾಟಕದಲ್ಲಿನ ಚಿತ್ರಮಂದಿರಗಳೂ ಕಣ್ಮರೆ ಆಗುವ ಕಾಲ ದೂರವೇನಿಲ್ಲ.