UI Movie Box Office Prediction: ಉಪೇಂದ್ರ ಅವರ ಯುಐ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 15 ಕೋಟಿ ಕಲೆಕ್ಷನ್ ಮಾಡುತ್ತಾ
Dec 20, 2024 11:50 AM IST
ಯುಐ ಸಿನಿಮಾದಲ್ಲಿ ನಟ ಉಪೇಂದ್ರ ಅವರ ಪಾತ್ರ
ಚಂದನವನದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ಯುಐ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಭಾರತದಲ್ಲಿ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ, ಇತರೆ ರಾಜ್ಯಗಳಲ್ಲೂ ಯುಐ ಅಬ್ಬರಿಸುವ ನಿರೀಕ್ಷೆ ಇದೆ.
ಯುಐ ಬಾಕ್ಸ್ ಆಫೀಸ್ ಪ್ರಿಡಿಕ್ಷನ್: ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ಯುಐ ಸಿನಿಮಾ ಇಂದು (ಡಿಸೆಂಬರ್ 20, ಶುಕ್ರವಾರ) ಎಲ್ಲೆಡೆ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲರಿಗಿಂತ ವಿಭಿನ್ನವಾಗಿ ಯೋಚಿಸುವ ಉಪೇಂದ್ರ ಅವರು ತಾವೇ ನಟಿಸಿ, ನಿರ್ದೇಶಿಸಿರುವ ಯುಐ ಸಿನಿಮಾದಲ್ಲಿ ಕಟ್ಟುಕಥೆಗಳನ್ನು ಬದಿಗಿಟ್ಟು ನೈಜ ಜೀವನದ ಸಮಸ್ಯೆಗಳನ್ನೇ ಕಥೆಯನ್ನಾಗಿ ಮಾಡಿಕೊಂಡಿದ್ದಾರೆ. ಸದ್ಯ ಯುಐ ಬಿಡುಗಡೆಯಾಗಿರುವುದರಿಂದ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಾಯಕನನ್ನು ಹೊಸ ಅವತಾರಗಳಲ್ಲಿ ಕಣ್ತುಂಬಿಕೊಳ್ಳಲು ಥಿಯೇಟರ್ ಗಳಲ್ಲಿ ಜಮಾಯಿಸುತ್ತಿದ್ದಾರೆ. ಯುಐ ಸೂಪರ್ ಎಂದು ತಮ್ಮ ಹೀರೋಗೆ ಬಹುಪರಾಕ್ ಹೇಳುತ್ತಿದ್ದಾರೆ.
ಉಪೇಂದ್ರ ಅವರ ಅಭಿನಯದ ಯುಐ ಡಿಸೆಂಬರ್ 20ರ ಶುಕ್ರವಾರ ರಿಲೀಸ್ ಆಗಿರೋದೆನೋ ಸರಿ. ಆದರೆ ಈ ಸಿನಿಮಾ ಬಗ್ಗೆ ಹಲವರಲ್ಲಿ ಸಾಕಷ್ಟು ಕುತೂಹಲಗಳಿವೆ. ರಿಲೀಸ್ ಆದ ಮೊದಲ ದಿನವೇ ಯುಐ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಕೆಲವರು ಯುಐ ಭಾರತದಲ್ಲಿ ಬಿಡಗಡೆಯಾದ ಮೊದಲ ದಿನವೇ ಸುಮಾರು 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಿದ್ದಾರೆ.
ಸಿನಿಮಾ ಮಾರುಕಟ್ಟೆ ವಿಶ್ಲೇಷಕರಾದ ರಮೇಶ್ ಬಾಲ ಅವರು ಹೇಳುವ ಪ್ರಕಾರ, ಭಾರತದಲ್ಲಿ ಯುಐ ಬಿಡುಗಡೆಯಾದ ಮೊದಲ ದಿನ 10 ರಿಂದ 15 ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆ ಕಂಡಿದೆ. ಆದರೆ ತಮಿಳು ಮತ್ತು ತೆಲುಗಿನಲ್ಲಿ ಸಿನಿಮಾದ ಗುಣಮಟ್ಟದ ಮೇಲೆ ಬಾಕ್ಸ್ ಆಫೀಸ್ ನಿರ್ಧಾರವಾಗುತ್ತದೆ. ಹೀಗಾಗಿ ಈ ಬಗ್ಗೆ ಕಾದು ನೋಡಬೇಕು ಎಂದು ರಮೇಶ್ ಬಾಲ ವಿವರಿಸಿದ್ದಾರೆ.
2023 ರಲ್ಲಿತೆರೆಕಂಡ ಕಬ್ಜ ಬಳಿಕ ಉಪೇಂದ್ರ ಅವರ ಮೊದಲ ಹಾಗೂ 2024ರ ಕೊನೆಯ ಚಿತ್ರ ಯುಐ. ಇದು ಸಿನಿಮಾ ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಒಬ್ಬ ರಾಜ ಮತ್ತು ಅಸಾಧಾರಣ ವ್ಯಕ್ತಿಯ ನಡುವಿನ ಘರ್ಷಣೆಯನ್ನು ಕೇಂದ್ರೀಕರಿಸಿದೆ. ರಾಜ ಸರ್ವಾಧಿಕಾರಿಯಾಗಲು ಜನರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅಸಮಾನತೆ, ಜಾತಿ, ಧರ್ಮ, ದೇವರು, ಭ್ರಷ್ಟಾಚಾರ, ಬುದ್ಧ, ಬಸವ, ಚುನಾವಣೆ, ಪ್ರಜಾಪ್ರಭುತ್ವ, ಜ್ಯೋತಿಷ್ಯ, ಹೆಣ್ಣು ಹೀಗೆ ಹಲವಾರು ವಿಚಾರಗಳೊಂದಿಗೆ ಸಿನಿಮಾ ಸಾಗುತ್ತದೆ. ಈ ಚಿತ್ರವನ್ನು ಉಪೇಂದ್ರ ಅವರ ನಿರ್ದೇಶಿಸಿದ್ದಾರೆ. ತಾರಾಗಣದಲ್ಲಿ ಮುರಳಿ ಶರ್ಮಾ, ರೇಷ್ಮಾ ನಾಣಯ್ಯ, ಜಿಸ್ಶು ಹಾಗೂ ಸಾಧು ಕೋಕಿಲಾ ಇದ್ದಾರೆ. ಚಿತ್ರವನ್ನು 100 ಕೋಟಿ ರೂಪಾಯಿಗಳ ಬಜೆಟ್ ನಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.