logo
ಕನ್ನಡ ಸುದ್ದಿ  /  ಮನರಂಜನೆ  /  Ananth Kumar Biopic: ತೆರೆಮೇಲೆ ಬರಲಿದೆ ಮಾಜಿ ಕೇಂದ್ರ ಸಚಿವ, ದಿವಂಗತ ಅನಂತ್‍ ಕುಮಾರ್ ಜೀವನ ಚರಿತ್ರೆ; ಪಾತ್ರಧಾರಿ ಯಾರು?

Ananth Kumar Biopic: ತೆರೆಮೇಲೆ ಬರಲಿದೆ ಮಾಜಿ ಕೇಂದ್ರ ಸಚಿವ, ದಿವಂಗತ ಅನಂತ್‍ ಕುಮಾರ್ ಜೀವನ ಚರಿತ್ರೆ; ಪಾತ್ರಧಾರಿ ಯಾರು?

Nov 15, 2024 08:11 PM IST

google News

ದಿವಂಗತ ಅನಂತ್‍ ಕುಮಾರ್ ಜೀವನ ಚರಿತ್ರೆ

    • Ananth Kumar Biopic: ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಅನಂತ್ ಕುಮಾರ್ ಕುರಿತು ಒಂದು ಚಿತ್ರ ಮಾಡುವ ಚರ್ಚೆ ಶುರುವಾಗಿದೆ. ಆದಷ್ಟು ಬೇಗ ಅನಂತ್‍ ಕುಮಾರ್ ಅವರ ಜೀವನವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಅನಂತ್‌ ಕುಮಾರ್‌ ಅವರ ಮಾಧ್ಯಮ ಕಾರ್ಯದರ್ಶಿ ಆಗಿದ್ದ ತ್ರಿವಿಕ್ರಮ ಜೋಷಿ ತಿಳಿಸಿದ್ದಾರೆ. 
 ದಿವಂಗತ ಅನಂತ್‍ ಕುಮಾರ್ ಜೀವನ ಚರಿತ್ರೆ
ದಿವಂಗತ ಅನಂತ್‍ ಕುಮಾರ್ ಜೀವನ ಚರಿತ್ರೆ

Late Minister Ananth Kumar Biopic: ಕರ್ನಾಟಕದ ಜನಪ್ರಿಯ ರಾಜಕಾರಣಿಗಳ ಕುರಿತು ಚಿತ್ರ ಮಾಡುವ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ. ಕೆಲವು ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್‍.ಡಿ. ಕುಮಾರಸ್ವಾಮಿ ಅವರ ಕುರಿತು ಎಸ್‍. ನಾರಾಯಣ್‍, ‘ಭೂಮಿಪುತ್ರ’ ಎಂಬ ಬಯೋಪಿಕ್‍ ನಿರ್ದೇಶಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ‘ಲೀಡರ್ ರಾಮಯ್ಯ’ ಎಂಬ ಚಿತ್ರ ನಿರ್ಮಾಣವಾಗುತ್ತಿರುವ ಮತ್ತು ಅದರಲ್ಲಿ ತಮಿಳಿನ ಖ್ಯಾತ ನಟ ವಿಜಯ್‍ ಸೇತುಪತಿ, ಸಿದ್ದರಾಮಯ್ಯನವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುದ್ದಿ ಬಂದಿತ್ತು.

ಆದರೆ, ಆ ಎರಡೂ ಚಿತ್ರಗಳು ಕಾರಣಾಂತರಗಳಿಂದ ಇದುವರೆಗೂ ಸೆಟ್ಟೇರಿಲ್ಲ. ಹೀಗಿರುವಾಗಲೇ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಅನಂತ್ ಕುಮಾರ್ ಕುರಿತು ಒಂದು ಚಿತ್ರ ಮಾಡುವ ಚರ್ಚೆ ಶುರುವಾಗಿದೆ.

ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಾತು

ಇತ್ತೀಚೆಗೆ ‘ದಾಸವರೇಣ್ಯ ಶ್ರೀ ವಿಜಯದಾಸರು ಭಾಗ 2’ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಈ ಮುಹೂರ್ತಕ್ಕೆ ವಿದ್ವಾನ್ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರೆ, ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು.‌ ಈ ಸಂದರ್ಭದಲ್ಲಿ ಅನಂತ್‍ ಕುಮಾರ್ ಕುರಿತು ಚಿತ್ರ ಮಾಡುವ ಪ್ರಸ್ಥಾವನೆ ಕೇಳಿ ಬಂತು. ಅದಕ್ಕೆ ಕಾರಣವೂ ಇದೆ. ನಿರ್ಮಾಪಕ ಮತ್ತು ವಿಜಯದಾಸರ ಪಾತ್ರವನ್ನು ನಿರ್ವಹಿಸುತ್ತಿರುವ ತ್ರಿವಿಕ್ರಮ ಜೋಷಿ, ಅನಂತ್‍ ಕುಮಾರ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡುವುದರ ಜೊತೆಗೆ, ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವವರು. ಈಗ ಅವರು ನಿರ್ಮಾಪಕರಾಗಿ ಒಂದಿಷ್ಟು ಚಿತ್ರಗಳನ್ನು ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ, ಅನಂತ್ ಕುಮಾರ್ ಕುರಿತು ಚಿತ್ರ ಮಾಡಬೇಕೆಂದು ಸತ್ಯಧ್ಯಾನಾಚಾರ್ಯ ಕಟ್ಟಿ ಸಲಹೆ ನೀಡಿದರು.

ಈ ಕುರಿತು ಮಾತನಾಡಿದ ಸತ್ಯಧ್ಯಾನಾಚಾರ್ಯ ಕಟ್ಟಿ, ‘ಇಂದು ಅನಂತ್ ಕುಮಾರ್ ನಿಧನರಾದ ದಿನ. ಅವರ ಕುರಿತು ತ್ರಿವಿಕ್ರಮ ಜೋಷಿ ಒಂದು ಚಿತ್ರ ಮಾಡಬೇಕು. ನಾನು ಅನಂತ್ ಕುಮಾರ್ ಜೊತೆಗೆ ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅವರ ಉಪನ್ಯಾಸ ಕೇಳುವುದೇ ಒಂದು ಆನಂದ. ಅವರ ವ್ಯಕ್ತಿತ್ವ ಮತ್ತು ಆದರ್ಶ ಮುಂದಿನ ತಲೆಮಾರಿನವರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಅವರ ಕುರಿತು ಚಿತ್ರ ಮಾಡುವ ಸಂಕಲ್ಪ ಆಗಬೇಕು. ಈ ಚಿತ್ರವನ್ನು ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನವಾಗಬೇಕು’ ಎಂದರು.

ತ್ರಿವಿಕ್ರಮ ಜೋಷಿ ಅವರಿಂದ ಪ್ಲಾನ್

ನಂತರ ಮಾತನಾಡಿದ ನಟ- ನಿರ್ಮಾಪಕ ತ್ರಿವಿಕ್ರಮ ಜೋಷಿ, ‘ನಾನು 10ನೇ ಕ್ಲಾಸು ಓದುವಾಗಿನಿಂದಲೂ ಅನಂತ್ ಕುಮಾರ್ ಅವರ ಪರಿಚಯ. ನನ್ನನ್ನು ಅವರ ಶಿಷ್ಯನನ್ನಾಗಿಯೇ ಹಲವರು ಗುರುತಿಸುತ್ತಾರೆ. ನನ್ನ ಏಳಿಗೆಯಲ್ಲಿ ಅವರ ಮಹತ್ವದ ಪಾತ್ರವಿದೆ. ಅವರ ರಾಜಕೀಯ ಕಾರ್ಯದರ್ಶಿಯಾಗಿಯೂ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಕಳೆದ ಒಂದು ವರ್ಷದಿಂದ ಅವರ ಕುರಿತು ಚಿತ್ರ ಮಾಡುವ ಚರ್ಚೆ ನಡೆಯುತ್ತಲೇ ಇದೆ. ಇವತ್ತು ಈ ವಿಷಯವನ್ನು ಘೋಷಿಸುತ್ತಿದ್ದೇನೆ. ಆದಷ್ಟು ಬೇಗ ಅನಂತ್‍ ಕುಮಾರ್ ಅವರ ಜೀವನವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತೇನೆ’ ಎಂದರು.

ಅನಂತ್‍ ಕುಮಾರ್ ಕುರಿತು ಬಯೋಪಿಕ್‍ ನಿರ್ಮಾಣ ಮಾಡುವ ಘೋಷಣೆಯಂತೂ ಆಗಿದೆ. ಅದು ಯಾವಾಗ ಕಾರ್ಯರೂಪಕ್ಕೆ ಬರುತ್ತದೋ ನೋಡಬೇಕು. ಅನಂತ್‌ ಕುಮಾರ್ ಪಾತ್ರದಲ್ಲಿ‌ ಕಾಣಿಸಿಕೊಳ್ಳುವ ಕಲಾವಿದ ಯಾರು ಎಂಬ ಬಗ್ಗೆಯೂ ಹುಡುಕಾಟ ನಡೆಯುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ