logo
ಕನ್ನಡ ಸುದ್ದಿ  /  ಮನರಂಜನೆ  /  Prakash Belawadi On Pathaan: ನಾನು 'ಪಠಾಣ್‌' ಸಿನಿಮಾ ನೋಡೇ ನೋಡುತ್ತೇನೆ ಎಂದ ಹಿರಿಯ ನಟ ಪ್ರಕಾಶ್‌ ಬೆಳವಾಡಿ

Prakash Belawadi on Pathaan: ನಾನು 'ಪಠಾಣ್‌' ಸಿನಿಮಾ ನೋಡೇ ನೋಡುತ್ತೇನೆ ಎಂದ ಹಿರಿಯ ನಟ ಪ್ರಕಾಶ್‌ ಬೆಳವಾಡಿ

HT Kannada Desk HT Kannada

Dec 18, 2022 11:36 AM IST

google News

'ಪಠಾಣ್‌' ಸಿನಿಮಾ ನೋಡುತ್ತೇನೆ ಎಂದ ಪ್ರಕಾಶ್‌ ಬೆಳವಾಡಿ

    • ಈ ರೀತಿ ವಿವಾದ ಮಾಡುವುದನ್ನು ನಿಲ್ಲಿಸಬೇಕು. ಜನರು ಈ ಸಿನಿಮಾವನ್ನು ಬಹಿಷ್ಕರಿಸುವಂತೆ ಅಭಿಯಾನ ಆರಂಭಿಸಿದ್ದಾರೆ. ಆ ಕಾರಣಕ್ಕಾದರೂ ನಾನು ಈ ಚಿತ್ರವನ್ನು ನೋಡೇ ನೋಡುತ್ತೇನೆ'' ಎಂದು ಪ್ರಕಾಶ್‌ ಬೆಳವಾಡಿ ಹೇಳಿದ್ದಾರೆ.
'ಪಠಾಣ್‌' ಸಿನಿಮಾ ನೋಡುತ್ತೇನೆ ಎಂದ ಪ್ರಕಾಶ್‌ ಬೆಳವಾಡಿ
'ಪಠಾಣ್‌' ಸಿನಿಮಾ ನೋಡುತ್ತೇನೆ ಎಂದ ಪ್ರಕಾಶ್‌ ಬೆಳವಾಡಿ

ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್‌' ಸಿನಿಮಾ ಜನವರಿ 25 ರಂದು ತೆರೆ ಕಾಣುತ್ತಿದೆ. ಚಿತ್ರತಂಡ ಈಗಾಗಲೇ ದೊಡ್ಡ ಮಟ್ಟದ ಪ್ರಚಾರದಲ್ಲಿ ತೊಡಗಿದೆ. ಈ ನಡುವೆ ಸಿನಿಮಾದ ಹಾಡಿಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾ, ಮಾಧ್ಯಮಗಳಲ್ಲಿ ಭಾರೀ ಚರ್ಚೆ, ವಾದ-ವಿವಾದ ನಡೆಯುತ್ತಿದೆ. ಚಿತ್ರಕ್ಕೆ ಬಾಯ್‌ಕಾಟ್‌ ಬಿಸಿ ಕೂಡಾ ತಗುಲಿದೆ.

'ಪಠಾಣ್‌' ಚಿತ್ರದ ಭೇಷರಮ್ ರಂಗ್‌..ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ್ದಾರೆ. ಹಾಗೇ ಹಾಡಿನ ಸಾಲಿನಲ್ಲಿ ಕೇಸರಿ ಬಣ್ಣವನ್ನು ಭೇಷರಮ್‌ ಎಂದು ಉಚ್ಛರಿಸಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂಬುದು ವಿವಾದಕ್ಕೆ ಕಾರಣವಾಗಿದೆ. ಕೆಲವರು ಚಿತ್ರದ ಪರ ಮಾತನಾಡಿದರೆ ಕೆಲವರು ಸಿನಿಮಾವನ್ನು ವಿರೋಧಿಸುತ್ತಿದ್ದಾರೆ. ಈ ರೀತಿ ಬಿಕಿನಿ, ಡ್ಯಾನ್ಸ್‌ಗಳು ಕೇವಲ ಪ್ರಚಾರಕ್ಕಾಗಿ ಮಾತ್ರ. ಸಿನಿಮಾಗೆ ಇಂತಹ ದೃಶ್ಯಗಳು ಅವಶ್ಯಕತೆಯೇ ಇರಲಿಲ್ಲ ಎಂದು ಇನ್ನೂ ಕೆಲವರು ವಾದ ಮಾಡುತ್ತಿದ್ದಾರೆ. ಈ ನಡುವೆ ಖ್ಯಾತ ನಟ, ಪ್ರಕಾಶ್‌ ಬೆಳವಾಡಿ ಯಾರು ಏನೇ ಬಾಯ್ಕಾಟ್‌ ಮಾಡಿದರೂ ನಾನು ಈ ಸಿನಿಮಾವನ್ನು ನೋಡೇ ತೀರುತ್ತೇನೆ ಎಂದಿದ್ದಾರೆ.

ಪ್ರಕಾಶ್‌ ಬೆಳವಾಡಿ ಕೂಡಾ ಈ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಕಾಶ್‌ ಬೆಳವಾಡಿ 'ಪಠಾಣ್‌' ಸಿನಿಮಾ ಹಾಡಿನ ವಿವಾದದ ಬಗ್ಗೆ ಮಾತನಾಡಿದ್ದಾರೆ. ''ದೇಶದಲ್ಲಿ ಈಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆಗ್ಗಾಗ್ಗೆ ಇಂತಹ ವಿವಾದಗಳು ನಡೆಯುತ್ತಲೇ ಇರುತ್ತದೆ. ಈಗ ನಡೆಯುತ್ತಿರುವ ಚರ್ಚೆಯೇ ಅಸಭ್ಯವಾಗಿದೆ. ದೀಪಿಕಾ ಒಳ್ಳೆ ನಟಿ. ಸಿನಿಮಾದಲ್ಲಿ ನಾಯಕಿಯನ್ನು ಚೆನ್ನಾಗಿ ತೋರಿಸಬೇಕೆಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ರೀತಿ ವಿವಾದ ಮಾಡುವುದನ್ನು ನಿಲ್ಲಿಸಬೇಕು. ಜನರು ಈ ಸಿನಿಮಾವನ್ನು ಬಹಿಷ್ಕರಿಸುವಂತೆ ಅಭಿಯಾನ ಆರಂಭಿಸಿದ್ದಾರೆ. ಆ ಕಾರಣಕ್ಕಾದರೂ ನಾನು ಈ ಚಿತ್ರವನ್ನು ನೋಡೇ ನೋಡುತ್ತೇನೆ'' ಎಂದು ಪ್ರಕಾಶ್‌ ಬೆಳವಾಡಿ ಹೇಳಿದ್ದಾರೆ.

ಬೇಷರಮ್‌ ರಂಗ್‌ ವಿವಾದಕ್ಕೆ ಕಂಗನಾ ಎಳೆ ತಂದ ನೆಟಿಜನ್ಸ್‌

ಚಿತ್ರದ ಹಾಡು ವೈರಲ್‌ ಆಗುತ್ತಿದ್ದಂತೆ ಕೆಲವರು ಚಿತ್ರದಲ್ಲಿ ದೀಪಿಕಾ ಬಿಕಿನಿ ಹಾಗೂ ಡ್ಯಾನ್ಸ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ದೀಪಿಕಾ ಕೇಸರಿ ಬಟ್ಟೆ ಧರಿಸಿ ಈ ರೀತಿ ಡ್ಯಾನ್ಸ್‌ ಮಾಡಬಾರದಿತ್ತು ಎನ್ನುತ್ತಿದ್ದಾರೆ. ಕೆಲವರು ಈ ರೀತಿ ವಾದ ಮಾಡಿದರೆ, ಇನ್ನೂ ಕೆಲವರು, ಜನರಿಗೆ ಈಗ ಬಿಡುಗಡೆ ಆಗುವ ಎಲ್ಲಾ ಸಿನಿಮಾಗಳಲ್ಲೂ ತಪ್ಪು ಹುಡುಕುವ ಅಭ್ಯಾಸ ಶುರುವಾಗಿದೆ. ಸಿನಿಮಾವನ್ನು ಸಿನಿಮಾವನ್ನಾಗಿ ನೋಡಿ, ಒಂದು ಸಿನಿಮಾದಲ್ಲಿ ನಾಯಕ, ನಾಯಕಿ ಎಲ್ಲಾ ರೀತಿಯ, ಎಲ್ಲಾ ಬಣ್ಣದ ಬಟ್ಟೆ ಧರಿಸುತ್ತಾರೆ. ಅಂತದ್ದರಲ್ಲಿ ಈ ಕೇಸರಿ ವಿವಾದ ಏಕೆ ಎನ್ನುತ್ತಿದ್ದಾರೆ. ಈ ನಡುವೆ ದೀಪಿಕಾ ಅಭಿಮಾನಿಗಳು ಸೇರಿದಂತೆ ಕೆಲವರು ನೆಟಿಜನ್ಸ್‌, ಬೇಷರಮ್‌ ರಂಗ್‌ ಹಾಡಿನ ವಿವಾದಕ್ಕೆ ಕಂಗನಾ ರಣಾವತ್‌ ಅವರನ್ನು ಎಳೆ ತಂದಿದ್ದಾರೆ.

ಕಂಗನಾ ರಣಾವತ್‌, ಇದೇ ವರ್ಷ 'ಲಾಕ್‌ ಅಪ್‌' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಾಹಿನಿಯು ಈ ಶೋ ಪೋಸ್ಟರ್‌ ಕೂಡಾ ರಿಲೀಸ್‌ ಮಾಡಿತ್ತು. ಈ ಪೋಸ್ಟರ್‌ನಲ್ಲಿ ಕಂಗನಾ ರಣಾವತ್‌, ಗೋಲ್ಡ್‌ ಔಟ್‌ಫಿಟ್‌ ಧರಿಸಿ ಒಂದು ಕೈಯಲ್ಲಿ ಕಪ್ಸ್‌ ಹಿಡಿದು ಕೇಸರಿ ಬಟ್ಟೆ ಧರಿಸಿರುವ ವ್ಯಕ್ತಿಯ ಬೆನ್ನ ಮೇಲೆ ಬೂಟ ಧರಿಸಿರುವ ಕಾಲು ಹಾಕಿ ನಿಂತಿದ್ದಾರೆ. ಬಹಳ ದಿನಗಳ ಬಳಿಕ ಈ ಫೋಟೋ ವೈರಲ್‌ ಆಗುತ್ತಿದೆ. ದೀಪಿಕಾ ಅವರನ್ನು ಟ್ರೋಲ್‌ ಮಾಡುತ್ತಿರುವವರಿಗೆ ಅವರ ಅಭಿಮಾನಿಗಳು ಕಂಗನಾ ಚಿತ್ರದ ಪೋಸ್ಟರ್‌ ಟ್ಯಾಗ್‌ ಮಾಡುತ್ತಿದ್ದಾರೆ. ಕೇಸರಿ ಬಿಕಿನಿ ಧರಿಸಿ ದೀಪಿಕಾ ಡ್ಯಾನ್ಸ್‌ ಮಾಡಿದ್ದು ತಪ್ಪು ಎಂದಾದಲ್ಲಿ, ಕಂಗನಾ ಹೀಗೆ ಕೇಸರಿ ಬಟ್ಟೆ ಧರಿಸಿರುವ ವ್ಯಕ್ತಿಯ ಮೇಲೆ ಕಾಲಿಟ್ಟಿರುವುದು ಕೂಡಾ ತಪ್ಪು, ಕಂಗನಾ ವಿರುದ್ಧ ಯಾವಾಗ ದೂರು ಕೊಡಲಿದ್ದೀರಿ? ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ವಿವಾದ ಯಾವ ಮಟ್ಟಕ್ಕೆ ಬಂದು ತಲುಪಲಿದೆಯೋ ಕಾದು ನೋಡಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ