Prakash Raj on Sudeep: ನಿಮ್ಮ ಮಾಮನೋ, ಅತ್ತೆಯೋ ಪ್ರಜೆಗಳ 30% ಕೊಳ್ಳೆ ಹೊಡೆಯೋಕೆ ಬಿಡಬೇಡಿ.. ಪ್ರಕಾಶ್ ರಾಜ್ ಟ್ವೀಟ್
Apr 07, 2023 10:13 AM IST
ಸುದೀಪ್‌ಗೆ ಪ್ರಕಾಶ್ ರಾಜ್ ಟಾಂಗ್
- ನೋಡ್ರಪ್ಪ ನಿಮ್ಮ ಮಾಮನೋ, ನಿಮ್ಮ ಅತ್ತೆಯೋ ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ, ನೀವು ದುಡಿದಿದ್ರಲ್ಲಿ 10%..20% ಇಲ್ಲ 30 % ಕೊಡಿ, ಅದು ನಿಮ್ಮಿಷ್ಟ, ಆದರೆ ಪ್ರಜೆಗಳ 30% ಕೊಳ್ಳೆ ಹೊಡೆಯೊಕೆ ಬಿಡಬೇಡಿ ಅಷ್ಟೇ'' ಎಂದು ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಚಟುವಟಿಕೆಗಳು ಗರಿಗೆದರಿವೆ. ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಸ್ಟಾರ್ ನಟರನ್ನು ತನ್ನತ್ತ ಸೆಳೆಯುವ ಕಸರತ್ತು ಮಾಡುತ್ತಿವೆ. ಈ ನಡುವೆ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಬೊಮ್ಮಾಯಿ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಸುದೀಪ್ ಬಿಜೆಪಿ ಸೇರಲಿದ್ದಾರೆ, ಈ ಬಾರಿ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದಿಲ್ಲ, ಬದಲಿಗೆ ಮುಂದಿನ ಚುನಾವಣೆಯಲ್ಲಿ ತಮ್ಮ ಆಪ್ತ, ನಿರ್ಮಾಪಕ ಜಾಕ್ ಮಂಜು ಅವರಿಗೆ ಟಿಕೆಟ್ ಕೊಡಲು ಮನವಿ ಮಾಡಿರುವುದಾಗಿ ಸುದ್ದಿ ಕೇಳಿ ಬಂದಿತ್ತು. ಆದರೆ 2 ದಿನಗಳ ಹಿಂದೆ ಸಿಎಂ ಬೊಮ್ಮಾಯಿ ಜೊತೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಸುದೀಪ್ ನಾನು ಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ, ನನ್ನಗೆ ಕೆಲವೊಂದು ನಿಲುವುಗಳಿವೆ. ಈ ಚುನಾವಣೆಯಲ್ಲಿ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತಿದ್ದೇನೆ, ಹಾಗೇ ನಾನು ಯಾರಿಗೂ ಟಿಕೆಟ್ ಕೇಳಿಲ್ಲ ಎಂದು ಹೇಳಿದ್ದರು. ಸುದೀಪ್ ರಾಜಕೀಯ ಪಕ್ಷವೊಂದರ ಪರ ಪ್ರಚಾರಕ್ಕೆ ಮುಂದಾಗಿರುವುದು ಕೆಲವರಿಗೆ ಬೇಸರವಾಗಿತ್ತು. ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡಾ ಸುದೀಪ್ ವಿರುದ್ಧ ಬೇಸರ ಹೊರ ಹಾಕಿದ್ದರು.
ಬೊಮ್ಮಾಯಿ ಅವರ ಪರ ನಿಲ್ಲುವುದಾಗಿ ಸುದೀಪ್ ಅನೌನ್ಸ್ ಮಾಡಿದ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಸರಣಿ ಟ್ವೀಟ್ ಮಾಡಿ ಸುದೀಪ್ ಅವರನ್ನು ಟೀಕಿಸಿದ್ದರು. ''ಸುದೀಪ್, ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲಾ ವರ್ಗದ ಪ್ರೀತಿಯಿಂದ ಬೆಳೆದ ನೀವು ,ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ, ಇನ್ನು ಮುಂದೆ ನಿಮ್ಮನ್ನೂ, ನಿಮ್ಮ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ'' ಎಂದಿದ್ದರು.
ಇದೀಗ ಅವರು ಮಾಡಿರುವ ಮತ್ತೊಂದು ಟ್ವೀಟ್ ವೈರಲ್ ಆಗುತ್ತಿದೆ. ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮಾಮ ಎಂದು ಕರೆಯುವುದನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ''ನೋಡ್ರಪ್ಪ ನಿಮ್ಮ ಮಾಮನೋ, ನಿಮ್ಮ ಅತ್ತೆಯೋ ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ, ನೀವು ದುಡಿದಿದ್ರಲ್ಲಿ 10%..20% ಇಲ್ಲ 30 % ಕೊಡಿ, ಅದು ನಿಮ್ಮಿಷ್ಟ, ಆದರೆ ಪ್ರಜೆಗಳ 30% ಕೊಳ್ಳೆ ಹೊಡೆಯೊಕೆ ಬಿಡಬೇಡಿ ಅಷ್ಟೇ'' ಎಂದು ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ. ಜೊತೆಗೆ ಸತೀಶ್ ಆಚಾರ್ಯ ಎನ್ನುವವರು ಬರೆದ ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡು, ''ನೀವು ಈಗ ಹೊರಲೇಬೇಕಾದ ಬೇರೆ ಬಣ್ಣದ ಲೊಕದ ಭಾರ'' ಎಂದು ಪ್ರಕಾಶ್ ರಾಜ್ ಸುದೀಪ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
ಸುದೀಪ್‌ಗೆ ಬೆದರಿಕೆ ಪತ್ರ
ಸುದೀಪ್ ರಾಜಕೀಯ ಸೇರುತ್ತಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಅವರ ಮನೆಗೆ ಎರಡು ಬೆದರಿಕೆ ಪತ್ರಗಳು ಬಂದಿದ್ದವು. ಈ ಪತ್ರದಲ್ಲಿ ಸುದೀಪ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಅಲ್ಲದೆ, ಖಾಸಗಿ ವಿಡಿಯೋಗಳನ್ನು ರಿಲೀಸ್ ಮಾಡುವುದಾಗಿ ಬೆದರಿಸಲಾಗಿತ್ತು. ಇದಕ್ಕೂ ಮುನ್ನ ಮಾರ್ಚ್‌ನಲ್ಲಿ ಸುದೀಪ್‌ಗೆ ಮೊದಲ ಪತ್ರ ಬಂದಿದ್ದು ಸುದೀಪ್ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಇದೀಗ ಮತ್ತೆ ಪತ್ರ ಬಂದಾಗ ಕಿಚ್ಚ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಬಿ ಪೊಲೀಸರು ಪತ್ರ ಬರೆದ ವ್ಯಕ್ತಿಗಳ ಹುಡುಕಾಟದಲ್ಲಿದ್ದಾರೆ.