Udho Udho Renuka Yellamma: ಸವದತ್ತಿಯಲ್ಲಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿ ವಾಹನಕ್ಕೆ ಚಾಲನೆ..
Jan 21, 2023 05:07 PM IST
ಸವದತ್ತಿಯಲ್ಲಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿ ವಾಹನಕ್ಕೆ ಚಾಲನೆ..
- 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯ ಟೆಂಪಲ್ ಆನ್ ವೀಲ್ಸ್ ಕಾರ್ಯಕ್ರಮಕ್ಕೆ ಸವದತ್ತಿಯ ರೇಣುಕೆಯ ಸನ್ನಿಧಾನದಲ್ಲಿ ದೇವಿ ದರ್ಶನದ ವಾಹನಕ್ಕೆ ಚಾಲನೆ ನೀಡಲಾಯಿತು.
Udho Udho Renuka Yallama: ಕನ್ನಡ ಕಿರುತೆರೆಗೆ ಹಲವಾರು ಮಹತ್ವದ ಪೌರಾಣಿಕ ಧಾರಾವಾಹಿಗಳನ್ನು ನೀಡಿ ವೀಕ್ಷಕರ ಮನಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ ಮತ್ತೊಂದು ಭಕ್ತಿಪ್ರಧಾನ ಧಾರಾವಾಹಿಯನ್ನು ಕಿರುತೆರೆಗೆ ತರುತ್ತಿದೆ. ಉತ್ತರ ಕರ್ನಾಟಕ ಸೇರಿ ರಾಜ್ಯ, ರಾಷ್ಟ್ರದ ಹಲವಾರು ಭಾಗಗಳಲ್ಲಿ ಭಕ್ತರನ್ನು ಹೊಂದಿರುವ ಶ್ರೀರೇಣುಕಾ ಯಲ್ಲಮ್ಮ ಮಹ್ಮಾತೆಯ ಕುರಿತಾದ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯನ್ನು ಇದೇ ಜನವರಿ 23 ರಿಂದ ಪ್ರಸಾರ ಮಾಡಲಿದೆ.
ಈ ಧಾರಾವಾಹಿಯ ಪ್ರಸಾರಕ್ಕೂ ಮುನ್ನ ಈ ದೇವಿಯ ದರ್ಶನವನ್ನು ರಾಜ್ಯಾದ್ಯಂತ ಭಕ್ತರಿಗೆ ಮಾಡಿಸುವ ಉದ್ದೇಶದಿಂದ ವಾಹಿನಿ ಹಮ್ಮಿಕೊಂಡಿದ್ದ ಟೆಂಪಲ್ ಆನ್ ವೀಲ್ಸ್ ಎಂಬ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆಯ ಸವದತ್ತಿಯ ರೇಣುಕೆಯ ಸನ್ನಿಧಾನದಲ್ಲಿ ದೇವಿ ದರ್ಶನದ ವಾಹನಕ್ಕೆ ಚಾಲನೆ ನೀಡಲಾಯಿತು.
ಸುವರ್ಣ ಸಂಕಲ್ಪ ಖ್ಯಾತಿಯ ಡಾ. ಗೋಪಾಲ ಶರ್ಮಾ ಗುರೂಜಿ ಈ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಯಲ್ಲಮ್ಮ ದೇವಾಲಯದ ಹಿರಿಯ ಸ್ವಾಮೀಜಿಗಳಾದ ಯಡಿಯೂರಯ್ಯ ಮತ್ತಿತರರು ಹಾಜರಿದ್ದು ಈ ಮಹತ್ವದ ಕಾರ್ಯಕ್ರಮಕ್ಕೆ ಶುಭಕೋರಿದರು.
ಮನೆಯಲ್ಲೇ ದೇವಿ ದರ್ಶನ
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಗೋಪಾಲಶರ್ಮಾ ಗುರೂಜಿ, ಸ್ಟಾರ್ ಸುವರ್ಣ ವಾಹಿನಿಯವರು ಉತ್ತರ ಕರ್ನಾಟಕದ ಶಕ್ತಿದೇವತೆಯಾದ ಯಲ್ಲಮ್ಮದೇವಿಯ ಕತೆಯನ್ನು ಎಲ್ಲ ಭಕ್ತರ ಮನೆಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಲೋಕ ಕಲ್ಯಾಣದ ಈ ಕಾರ್ಯಕ್ಕೆ ಎಲ್ಲರೂ ಸಹಕರಿಸುವಂತಾಗಲಿ. ಈ ಧಾರಾವಾಹಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಧಾರಾವಾಹಿಯ ವಿಶೇಷತೆ...
ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯು ಜನವರಿ 23ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30 ಕ್ಕೆ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ಅತ್ಯಾಧುನಿಕ ಗ್ರಾಫಿಕ್ಸ್ ಬಳಸಿಕೊಳ್ಳಲಾಗಿದೆ. ವೀಕ್ಷಕರು ಇದೇ ಮೊದಲ ಬಾರಿಗೆ ಹಲವಾರು ಹೊಸ ತಂತ್ರಜ್ಞಾನದ ಅನುಭವ ಕಾಣಲಿದ್ದರೆ ಎಂಬುದು ವಾಹಿನಿಯ ಭರವಸೆಯ ಮಾತು. ನಂದಿ ಪ್ರೋಡಕ್ಷನ್ ಈ ಧಾರಾವಾಹಿ ನಿರ್ಮಾಣ ಮಾಡಿದೆ. ಇದಕ್ಕಾಗಿ ಬೆಂಗಳೂರು ಹೊರ ವಲಯದಲ್ಲಿ ಭಾರಿ ಸೆಟ್‌ಗಳನ್ನು ಹಾಕಲಾಗಿದ್ದು ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೂ ಇದೆ.
ಏನಿದು ಕಥೆ?
ಶತಮಾನಗಳ ಹಿಂದೆ ಒಮ್ಮೆ ಸುದರ್ಶನ ಚಕ್ರವು ಅಹಂಕಾರದಿಂದ ಮೆರೆದಾಗ, ಭೂಲೋಕದಲ್ಲಿ ಮಾನವನ ರೂಪದಲ್ಲಿ ಜನ್ಮ ತಾಳುವಂತೆ ಭಗವಂತ ಶ್ರೀ ವಿಷ್ಣುವು ಶಾಪ ನೀಡಿ, ನನ್ನಿಂದಾನೆ ನಿನ್ನ ಅಂತ್ಯವಾಗುವುದು ಎಂದು ಹೇಳುತ್ತಾನೆ. ಅಲ್ಲಿಂದ ಈ ಕಥೆ ಪ್ರಾರಂಭವಾಗುತ್ತದೆ. ಹೀಗೆ ಭೂಲೋಕದಲ್ಲಿ ಕಾರ್ತವೀರ್ಯಾರ್ಜುನನ ರೂಪದಲ್ಲಿ ಸುದರ್ಶನ ಚಕ್ರವು ಜನ್ಮ ತಾಳುತ್ತದೆ. ಹಾಗೂ ಶ್ರೀ ವಿಷ್ಣುವು ಮಾನವ ರೂಪದಲ್ಲಿ ಜನ್ಮತಾಳಲು ಆತನ ತಾಯಿಯಾಗಿ ಪಾರ್ವತಿಯು ರೇಣು ಮಹಾರಾಜನ ಮಗಳಾಗಿ ಜನ್ಮತಾಳುತ್ತಾಳೆ.
ರೇಣುಕಾ ಕ್ಷತ್ರಿಯ ಗುಣಗಳನ್ನು ಕಲಿಯುತ್ತ ಬೆಳೆದರೆ, ಯಲ್ಲಮ್ಮನಿಗೆ ಅದು ರಕ್ತಗತವಾಗಿ ಬಂದಿರುತ್ತದೆ. ರೇಣುಕಾ ಅರಮನೆಯ ಗೋಡೆಗಳ ಮಧ್ಯೆ ಬೆಳೆದರೆ, ಯಲ್ಲಮ್ಮ ಪ್ರಕೃತಿಯ ಮಡಿಲಲ್ಲಿ ಬೆಳೆದಿರುತ್ತಾಳೆ. ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ಒಂದೇ ಆತ್ಮದ ಎರಡು ಶಕ್ತಿಗಳು ಒಂದಾಗಿ ಬಂದು ಮುಂಬರುವ ಕಷ್ಟ ಕೋಟಲೆಗಳನ್ನು ನಿವಾರಿಸುವುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
ವಿಭಾಗ