‘ನೀನಿಲ್ಲದ ಮೇಲೆ ನಿನ್ನಂತೆ ಯಾರನ್ನೂ ಕಂಡಿಲ್ಲ’; ಪುನೀತ್ ರಾಜ್‌ಕುಮಾರ್ ನೆನೆದು ನಟ ಜಗ್ಗೇಶ್ ಭಾವುಕ, ಆಂಕರ್ ಅನುಶ್ರೀಯಿಂದ ಕರಾಳ ದಿನ
Oct 29, 2024 01:13 PM IST
ಪುನೀತ್ ರಾಜ್‌ಕುಮಾರ್ ನೆನೆದು ನಟ ಜಗ್ಗೇಶ್ ಭಾವುಕ, ಆಂಕರ್ ಅನುಶ್ರೀಯಿಂದ ಕರಾಳ ದಿನ
- Puneeth Rajkumar: ಇಂದು ಪುನೀತ್ ರಾಜ್‌ಕುಮಾರ್ ಅವರ ಮೂರನೇ ಪುಣ್ಯ ಸ್ಮರಣೆ. ಇದೇ ನಟನನ್ನು ಮತ್ತೆ ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಜತೆ ಕಳೆದ ನೆನಪು, ಅವರ ನಡೆ ನುಡಿ, ಅವರ ಸರಳತೆ ಬಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ನಟ ಜಗ್ಗೇಶ್, ಅಪ್ಪುವಿನ ಮಗುವಿನ ಗುಣವನ್ನು ತಮ್ಮದೇ ಶೈಲಿಯಲ್ಲಿ ನೆನಪಿಸಿಕೊಂಡಿದ್ದಾರೆ.
Puneeth Rajkumar Death Anniversary: ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಶಾರೀರಿಕವಾಗಿ ನಮ್ಮ ನಡುವೆ ಇಲ್ಲವಾಗಿ ಇಂದಿಗೆ (ಅಕ್ಟೋಬರ್ 29) ಮೂರು ವರ್ಷಗಳಾದವು. ಆದರೆ, ಅವರು ಕರುನಾಡಿನಲ್ಲಿ ಬಿಟ್ಟು ಹೋದ ನೆನಪುಗಳಿಗೆ ಮಾತ್ರ ಸಾವಿಲ್ಲ. ಅವು ಯಾವತ್ತಿದ್ದರೂ ಜೀವಂತ! ಪುನೀತ್ ಅವರ ಸಿನಿಮಾಗಳು, ಹಾಡುಗಳು, ಡೈಲಾಗ್‌ಗಳು ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ. ಅವರ ಸಿನಿಮಾ ಡೈಲಾಗ್‌ಗಳು ವೈರಲ್ ಆಗುತ್ತಿರುತ್ತವೆ.
ಹೀಗಿರುವಾಗ, ಇಂದು ಅವರ ಮೂರನೇ ಪುಣ್ಯ ಸ್ಮರಣೆ ನಿಮಿತ್ತ, ಇದೇ ನಟನನ್ನು ಮತ್ತೆ ಎಲ್ಲರೂ ನೆನಪಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರೊಂದಿಗೆ ಕಳೆದ ನೆನಪುಗಳನ್ನು, ಅವರ ನಡೆ ನುಡಿಯನ್ನು, ಅವರ ಸರಳರತೆಯನ್ನು ಮಗದೊಮ್ಮೆ ಹೇಳಿಕೊಂಡಿದ್ದಾರೆ. ನವರಸ ನಾಯಕ ಜಗ್ಗೇಶ್, ಅಪ್ಪುವಿನ ಮಗುವಿನ ಗುಣವನ್ನು ತಮ್ಮದೇ ಶೈಲಿಯಲ್ಲಿ ನೆನಪಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡ ಅವರು, ನೀನಿಲ್ಲದ ಮೇಲೆ ನಿನ್ನಂತೆ ಯಾರನ್ನೂ ಕಂಡಿಲ್ಲ ಎಂದಿದ್ದಾರೆ.
ಜಗ್ಗೇಶ್ ಹೇಳಿದ್ದೇನು?
ಮಗುವಾಗಿದ್ದಾಗ ಅಪ್ಪನ ಮಡಿಲಲ್ಲಿ ಕಂಡಿದ್ದೆ..
ಅಪ್ಪನ ಭುಜದವರೆಗೆ ಬೆಳೆದಾಗ ಅಪ್ಪನ ಪಕ್ಕದಲ್ಲಿ ಕಂಡಿದ್ದೆ..
ಮದುವೆಯಾದಾಗ ಮಡದಿಯ ಪಕ್ಕದಲ್ಲಿ ಕಂಡಿದ್ದೆ..
ನಟನಾಗಿ ಬೆಳದಾಗ ಅಭಿಮಾನಿಗಳ ಹೃದಯದಲ್ಲಿ ಕಂಡಿದ್ದೆ..
ಗೆಳೆಯನಾದಾಗ ನಿನ್ನ ನಗುವನ್ನು ಕಂಡಿದ್ದೆ..
ಮರೆಯಾದ ಮೇಲೆ ನಿನ್ನಂತೆ ಯಾರನ್ನು ಕಂಡಿಲ್ಲಾ..
ಆಂಕರ್ ಅನುಶ್ರೀ ಭಾವುಕ
ಇನ್ನು ನಟಿ, ನಿರೂಪಕಿ ಆಂಕರ್ ಅನುಶ್ರೀ ಪುನೀತ್ ರಾಜ್‌ಕುಮಾರ್ ಮೇಲೆ ಜೀವವನ್ನೇ ಇರಿಸಿದ್ದರು. ಅವರ ಮೇಲೆ ಅಷ್ಟೊಂದು ಅಭಿಮಾನ. ಇದೀಗ ಅಪ್ಪು ಇಲ್ಲದ ಮೂರು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸೋಷಿಯಲ್ ಮೀಡಿಯಾದ ಫ್ರೋಫೈಲ್ ಫೋಟೋವನ್ನು ತೆಗೆದು, ಬ್ಲ್ಯಾಕ್ ಬಣ್ಣದ ಡಿಪಿ ಹಾಕಿದ್ದಾರೆ. ಈ ಮೂಲಕ ಕರಾಳ ದಿನ ಎಂಬಂತೆ ಆಚರಿಸುತ್ತಿದ್ದಾರೆ.
ನಿಮ್ಮ ಕಂಗಳ ಬಿಸಿಯ ಹನಿಗಳು
ನೂರು ಬಾರಿ ಕೂಗಿದೆ..
ನಿಮ್ಮ ನಗುವ ಮೊಗವ ನೋಡಲು
ಕೋಟಿ ಕಂಗಳು ಕಾಯುತ್ತಿದೆ!!
Miss you sir
ನೀವಿಲ್ಲದೆ ಅಭಿಮಾನ ಇಲ್ಲ
ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ
ನೀವಿಲ್ಲದ ಬದುಕಿಗೆ ಕಳೆ ಇಲ್ಲ.. ಎಂದು ಅನುಶ್ರೀ ಪೋಸ್ಟ್ ಮಾಡಿದ್ದಾರೆ..
ಚೇತನ್ ಅಹಿಂಸಾ ಪೋಸ್ಟ್
"ಅಪ್ಪು ಸರ್ ವರ್ಷಗಳಲ್ಲಿ ಹೇಗೆ ವಿಕಸನಗೊಂಡರು ಎಂಬುದನ್ನು ನಾನು ಗೌರವಿಸುತ್ತೇನೆ. ಅವರು ನಿಧನರಾಗುವ 2 ವರ್ಷಗಳ ಮೊದಲು, ಅವರು 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ಆಯೋಜಿಸುವವರೆಗೂ ಶಿಕ್ಷಣದ ಮೌಲ್ಯವನ್ನು ಹೇಗೆ ಅರ್ಥಮಾಡಿಕೊಳ್ಳಲಿಲ್ಲ ಎಂದು ಅವರು ನನಗೆ ಹೇಳಿದರು. ಅದರ ನಂತರ, ಅವರು ಸರ್ಕಾರಿ ಕೌಶಲ್ಯ ತರಬೇತಿ ಮತ್ತು ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದೇ ರೀತಿ, ನಾವೆಲ್ಲರೂ ವಿಕಸನಗೊಳ್ಳಬೇಕು" ಎಂದು ಚೇತನ್ ಅಹಿಂಸಾ ಪೋಸ್ಟ್ ಮಾಡಿದ್ದಾರೆ.
ಪತಿ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್
"3ನೇ ವರ್ಷದ ಸವಿನೆನಪು.. ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮತ್ತು ಕಾರ್ಯಗಳಲ್ಲಿ, ನಮ್ಮ ಜೀವನದ ಪ್ರತಿ ನಿತ್ಯ, ಮತ್ತು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಇರುವ ವಿಶೇಷ ಚೇತನ" ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್.