ಅಪ್ಪನಿಗೆ ಇಷ್ಟದ ಕೇಕ್ ಅರ್ಪಿಸಿ, ಪೂಜೆ ಸಲ್ಲಿಸಿದ ಪುತ್ರಿ ವಂದಿತಾ; ಅಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘಣ್ಣ ಸೇರಿ ಹಲವರು ಭಾಗಿ
Puneeth Rajkumar: ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಇಲ್ಲವಾಗಿ ಇಂದಿಗೆ ಮೂರು ವರ್ಷಗಳು ಗತಿಸಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ಅಪ್ಪು ಸಮಾಧಿಗೆ ಇಡೀ ಕುಟುಂಬ ವಿಶೇಷ ಪೂಜೆ ಸಲ್ಲಿಸಿದೆ.
Puneeth Rajkumar Death Anniversary: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಲ್ಲವಾಗಿ ಇಂದಿಗೆ (ಅಕ್ಟೋಬರ್ 29) ಮೂರು ವರ್ಷಗಳಾದವು. ಆ ನೋವಿನಲ್ಲಿಯೇ ಇಡೀ ಕುಟುಂಬ ಪುನೀತ್ ಅವರ ಮೂರನೇ ಪುಣ್ಯ ಸ್ಮರಣೆ ಪ್ರಯುಕ್ತ ಕಂಠೀರವ ಸ್ಟುಡಿಯೇದಲ್ಲಿನ ಸಮಾಧಿ ಬಳಿ ಬಂದು ವಿಶೇಷ ಪೂಜೆ ಸಲ್ಲಿಸಿದೆ. ಅಣ್ಣ ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಗಳು ವಂದಿತಾ ಸೇರಿ ಕುಟುಂಬದ ಇನ್ನೂ ಹಲವರು ಅಪ್ಪು ಸಮಾಧಿಗೆ ಪೂಜೆ ಮಾಡಿದರು.
ಪುಣ್ಯತಿಥಿ ಪ್ರಯುಕ್ತ ಕಂಠೀರವ ಸ್ಟುಡಿಯೋದಲ್ಲಿನ ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಪುನೀತ್ ಪುಣ್ಯ ಸ್ಮರಣೆ ನಿಮಿತ್ತ ಸಮಾಧಿ ಸ್ಥಳಕ್ಕೆ ಅದಾಗಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳ ಆಗಮನವಾಗಿತ್ತು. ಅಭಿಮಾನಿಗಳ ಸಮ್ಮುಖದಲ್ಲಿಯೇ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಬಳಿ ಬಂದ ರಾಜ್ ಕುಟುಂಬ ಕೆಲ ಹೊತ್ತು ಸಮಾಧಿಗೆ ಪೂಜೆ ಮಾಡಿ, ಕುಟುಂಬದವರೆಲ್ಲ ಮನೆಯಿಂದ ಮಾಡಿಕೊಂಡು ಬಂದ ಬಗೆ ಬಗೆ ಖಾದ್ಯಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಯ್ತು.
ಅಪ್ಪನಿಗಾಗಿ ವಿಶೇಷ ಕೇಕ್ ಮಾಡಿ ತಂದ ವಂದನಾ..
ಪುನೀತ್ ರಾಜ್‌ಕುಮಾರ್ ಫಿಟ್‌ನೆಸ್‌ಗೆ ಎಷ್ಟೊಂದು ಪ್ರಾಮುಖ್ಯತೆ ಕೊಡುತ್ತಿದ್ದರೋ, ಊಟದ ವಿಚಾರದಲ್ಲಿಯೂ ಅಷ್ಟೇ ಮುಂದು. ಬಾಯಿ ರುಚಿಗೆ ಅವರದ್ದು ಮೊದಲ ಪ್ರಾಶಸ್ತ್ಯ. ಅದರಲ್ಲೂ ಮಾಸಾಂಹಾರದ ಊಟ ಇದ್ದರೆ ಎರಡು ಹೊಟ್ಟೆ. ಈಗ ಪುಣ್ಯ ತಿಥಿಯ ನಿಮಿತ್ತ ಸಿಹಿ ತಿನಿಸಿನ ಜತೆಗೆ, ಮಾಸಾಂಹಾರದ ಖಾದ್ಯಗಳನ್ನೂ ತರಲಾಗಿತ್ತು. ಪುತ್ರಿ ವಂದಿತಾ ಅಪ್ಪನಿಗೆ ಇಷ್ಟವಾದ ಬ್ಲಾಕ್ ಕೇಕ್ ಮಾಡಿ ತಂದಿದ್ದರು.
ಪುನೀತ್ ರಾಜ್‌ಕುಮಾರ್ ಕಿರಿ ಮಗಳು ವಂದಿತಾ ಕೈಯಿಂದಲೇ ಅಪ್ಪನಿಗೆ ಇದೇ ವೇಳೆ ಪೂಜೆ ಮಾಡಿಸಲಾಯಿತು. ಬಳಿಕ ಅಣ್ಣಾವ್ರು ಸಮಾಧಿಗೂ ಪೂಜೆ ಸಲ್ಲಿಸಲಾಯ್ತು. ಈ ವೇಳೆ ಡಾ. ರಾಜ್ ಕುಟುಂಬದ ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳಾ, ಪುತ್ರರಾದ ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಸೇರಿ ನಿರ್ಮಾಪಕ ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ನಿರ್ದೇಶಕ ರೋಹಿತ್ ಪದಕಿ ಇನ್ನೂ ಹಲವರು ಪೂಜೆ ಸಮಯದಲ್ಲಿದ್ದರು. ಇನ್ನು ಇದೇ ವೇಳೆ ಪುನೀತ್ ಸ್ಮರಣೆ ನಿಮಿತ್ತ ಸಮಾಧಿ ಬಳಿ ಬಂದ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಿಸಲಾಗಿದೆ.