ರಾಯರ ಆರಾಧನೆಗೆ ದಿನಗಣನೆ; ಮಂತ್ರಾಲಯಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಸ್ಯಾಂಡಲ್‌ವುಡ್ ನಿರ್ದೇಶಕ
Aug 22, 2023 11:49 AM IST
ಮಂತ್ರಾಲಯಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಸ್ಯಾಂಡಲ್‌ವುಡ್ ನಿರ್ದೇಶಕ ರತ್ನತೀರ್ಥ
ಆಗಸ್ಟ್ 18ರಿಂದ ಬೆಂಗಳೂರಿನ ಇಟ್ಟಮಡುವಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂಜೆ ಸಲ್ಲಿಸಿ ಕಾಲ್ನಡಿಗೆ ಆರಂಭಿಸಿದ ರತ್ನತೀರ್ಥ ಈಗಾಗಲೇ ಮುಕ್ಕಾಲು ದಾರಿ ಕ್ರಮಿಸಿದ್ದಾರೆ. ಸದ್ಯಕ್ಕೆ ಅವರು ಅನಂತಪುರಂನಲ್ಲಿದ್ದಾರೆ. ಬಿಸಿಲು, ಮಳೆ, ಚಳಿ ಎನ್ನದೆ ಕಾಲ್ನಡಿಗೆಯಲ್ಲಿ ರಾಯರ ಧ್ಯಾನ ಮಾಡುತ್ತಾ ಮಂತ್ರಾಲಯದ ದಾರಿ ಹಿಡಿದಿದ್ದಾರೆ.
ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಇನ್ನೊಂದು ವಾರವಷ್ಟೇ ಬಾಕಿ ಇದೆ. ಪ್ರತಿ ವರ್ಷದಂತೆ ಈ ಬಾರಿ ಕೂಡಾ ಮಂತ್ರಾಲಯದಲ್ಲಿ ರಾಯರ ಆರಾಧನೆಗೆ ಸಿದ್ಧತೆ ನಡೆಯುತ್ತಿದೆ. ಮಂತ್ರಾಲಯದಲ್ಲಿ ಮಾತ್ರವಲ್ಲದೆ, ದಕ್ಷಿಣ ಭಾರತದ ಎಲ್ಲಾ ರಾಯರ ಮಠದಲ್ಲಿ ಆರಾಧನೆ ವಿಶೇಷ ಪೂಜೆ ಮಾಡಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 1ರಿಂದ ಆರಾಧನೆ ಆರಂಭವಾಗುತ್ತದೆ. ಒಂದು ವಾರದ ಕಾಲ ಗುರು ರಾಯರ ಆರಾಧೆನಾ ಮಹೋತ್ಸವ ನಡೆಯುತ್ತಿದೆ.
ಪ್ರತಿ ವರ್ಷವೂ ಮಂತ್ರಾಲಯ ಭೇಟಿ
ಹಾಗೇ ಪ್ರತಿ ವರ್ಷವೂ ರಾಯರ ಆರಾಧನೆಯನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಕಡೆಗಳಿಂದ ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡುತ್ತಾರೆ. ಜನಜಂಗುಳಿ ನಡುವೆ ರಾಯರ ದರ್ಶನ ಮಾಡಿ ಪ್ರಸಾದ ಸೇವಿಸಿ ಪುನೀತರಾಗುತ್ತಾರೆ. ಸ್ಯಾಂಡಲ್‌ವುಡ್ ನಿರ್ದೇಶಕ ರತ್ನತೀರ್ಥ ಅರ್ಜುನ್, ಮಂತ್ರಾಲಯಕ್ಕೆ ಕಾಲ್ಕಡಿಗೆಯಲ್ಲೇ ಹೊರಟಿದ್ದಾರೆ. ರಾಯರ ಪರಮಭಕ್ತರಾಗಿರುವ ರತ್ನತೀರ್ಥ, ಪ್ರತಿ ಬಾರಿ ಆರಾಧನೆ ಸಮಯದಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡುತ್ತಾರೆ. ಆರಾಧನೆಗೂ ಒಂದು ವಾರ ಮುನ್ನವೇ ರಾಯರ ಸನ್ನಿಧಿಗೆ ಭೇಟಿ ನೀಡಿ ಅಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಾರೆ. ಆದರೆ ಈ ಬಾರಿ ಅವರು ಕಾಲ್ನಡಿಗೆಯಲ್ಲಿ ಮಂತ್ರಾಲಯಕ್ಕೆ ಹೊರಟಿದ್ದಾರೆ.
ಆಗಸ್ಟ್ 18 ರಿಂದ ಪ್ರಯಾಣ ಆರಂಭ
ಆಗಸ್ಟ್ 18ರಿಂದ ಬೆಂಗಳೂರಿನ ಇಟ್ಟಮಡುವಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂಜೆ ಸಲ್ಲಿಸಿ ಕಾಲ್ನಡಿಗೆ ಆರಂಭಿಸಿದ ರತ್ನತೀರ್ಥ ಈಗಾಗಲೇ ಮುಕ್ಕಾಲು ದಾರಿ ಕ್ರಮಿಸಿದ್ದಾರೆ. ಸದ್ಯಕ್ಕೆ ಅವರು ಅನಂತಪುರಂನಲ್ಲಿದ್ದಾರೆ. ಬಿಸಿಲು, ಮಳೆ, ಚಳಿ ಎನ್ನದೆ ಕಾಲ್ನಡಿಗೆಯಲ್ಲಿ ರಾಯರ ಧ್ಯಾನ ಮಾಡುತ್ತಾ ಮಂತ್ರಾಲಯದ ದಾರಿ ಹಿಡಿದಿದ್ದಾರೆ. ಇನ್ನು 2 ದಿನಗಳಲ್ಲಿ ಮಂತ್ರಾಲಯ ತಲುಪಲಿದ್ದಾರೆ. ರತ್ನತೀರ್ಥ ಕಾಲ್ನಡಿಗೆಯಲ್ಲಿ ಹೊರಟರೆ ಅವರ ಇಬ್ಬರ ಸ್ನೇಹಿತರು ಬೈಕಿನಲ್ಲಿ ಪ್ರಯಾಣಿಸಿ ನೀರು, ಆಹಾರ ಇನ್ನಿತರ ಅವಶ್ಯಕತೆಗಳನ್ನು ಒದಗಿಸುತ್ತಿದ್ದಾರೆ.
ನೆಟಿಜನ್‌ಗಳ ಶುಭ ಹಾರೈಕೆ
ಬೆಳಗ್ಗೆ 4ರಿಂದ ಪ್ರಯಾಣ ಆರಂಭವಾದರೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಅರ್ಧ ಗಂಟೆ ಸಮಯ ಮೀಸಲಿಡುತ್ತಾರೆ. ನಂತರ ಸ್ವಲ್ಪವೂ ವಿಶ್ರಾಂತಿ ಮಾಡದೆ ಪ್ರಯಾಣ ಮುಂದುವರೆಸುತ್ತಾರೆ. ರಾತ್ರಿ 8 ಗಂಟೆಗೆ ತಾವು ಇರುವ ಸ್ಥಳದಲ್ಲಿ ಯಾವುದಾದರೂ ದೇವಸ್ಥಾನ ಸಿಕ್ಕರೆ ರಾತ್ರಿ ಅಲ್ಲೇ ಮಲಗಿ ಮತ್ತೆ ಮರುದಿನ ಜರ್ನಿ ಆರಂಭಿಸುತ್ತಾರೆ. ತಮ್ಮ ಮಂತ್ರಾಲಯ ಜರ್ನಿಯ ಫೋಟೋ, ವಿಡಿಯೋಗಳನ್ನು ರತ್ನತೀರ್ಥ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆರೋಗ್ಯದ ಕಡೆ ಗಮನ ಹರಿಸಿ, ರಾಯರು ನಿಮ್ಮ ಆಸೆ ಈಡೇರಿಸಲಿ ಎಂದೆಲ್ಲಾ ಜನರು ಕಾಮೆಂಟ್ ಮಾಡುವ ಮೂಲಕ ರತ್ನತೀರ್ಥ ಅವರಿಗೆ ಶುಭ ಹಾರೈಸುತ್ತಿದ್ದಾರೆ.
'ಅಲ್ಲೇ ಡ್ರಾ ಅಲ್ಲೇ ಬಹುಮಾನ' ಸಿನಿಮಾ ನಿರ್ದೇಶಕ
ರತ್ನತೀರ್ಥ ಅರ್ಜುನ್ 'ಅಲ್ಲೇ ಡ್ರಾ ಅಲ್ಲೇ ಬಹುಮಾನ' ಚಿತ್ರದ ನಿರ್ದೇಶಕ. ಇದಕ್ಕೂ ಮುನ್ನ ಅವರು ಅನೇಕ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಸಿನಿಮಾದಲ್ಲಿ ತ್ರಿವೇಣಿ ಹಾಗೂ ಶೌರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಬಿಜೆ ಪ್ರಶಾಂತ್ ನಿರ್ಮಿಸಿದ್ದಾರೆ. ವಿಜಯರಾಜ್ ಸಂಗೀತ ನಿರ್ದೇಶನವಿರುವ ಚಿತ್ರದ ಹಾಡುಗಳಿಗೆ ಪುನೀತ್ ರಾಜ್‌ಕುಮಾರ್,ಉಪೇಂದ್ರ ಕೂಡಾ ದನಿಯಾಗಿದ್ದಾರೆ. ಸದ್ಯಕ್ಕೆ ಸಿನಿಮಾ ಪ್ರಮೋಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಸಿನಿಮಾ ರಿಲೀಸ್ ಆಗಲಿದೆ.
ರತ್ನತೀರ್ಥ ಅವರಿಗೆ ಗುರುರಾಯರು ಆಶೀರ್ವದಿಸಲಿ, ಅವರ ಎಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸೋಣ.