ದುಡ್ಡಿಗಾಗಿ ಮಾಡಿಲ್ಲ, ಇಂಡಸ್ಟ್ರಿಯ ಸೇವೆಗಾಗಿ ‘ಜಗ್ಗೇಶ್ ಸ್ಟುಡಿಯೋ’ ತೆರೆದಿದ್ದೇನೆ; ನನಸಾಯ್ತು 4 ದಶಕದ ನವರಸನಾಯಕನ ಕನಸು
Oct 24, 2024 07:19 PM IST
ಹೊಸ ಉದ್ಯಮ ಆರಂಭಿಸಿದ ನವರಸನಾಯಕ ಜಗ್ಗೇಶ್
- Actor Jaggesh New Venture: ಸ್ಯಾಂಡಲ್‌ವುಡ್ ನಟ, ನವರಸ ನಾಯಕ ಜಗ್ಗೇಶ್ ಹೊಸ ಉದ್ಯಮಕ್ಕೆ ಕಾಲಿರಿಸಿದ್ದಾರೆ. ಈ ಮೂಲಕ ಸುದೀರ್ಘ 40 ವರ್ಷದ ಹಿಂದಿನ ಕನಸೊಂದನ್ನು ಇದೀಗ ನನಸು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆ ಉದ್ಯಮ ಯಾವುದು? ಇಲ್ಲಿದೆ ಮಾಹಿತಿ.
Jaggesh Studio: ಸ್ಯಾಂಡಲ್‌ವುಡ್ ಕಲಾವಿದರು, ತಂತ್ರಜ್ಞರು ತಮ್ಮ ವೃತ್ತಿ ಜತೆಗೆ ಹಲವು ಉದ್ಯಮಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕೆಲವರು ಸಿನಿಮಾ ನಿರ್ಮಾಣ ಮಾಡುತ್ತಿದ್ದರೆ, ಇನ್ನು ಕೆಲವರು ಬಟ್ಟೆ ಉದ್ಯಮ, ಕ್ಯಾರವಾನ್ ಸೇವೆ, ಜ್ಯುವೆಲ್ಲರಿ ಮಳಿಗೆ ಹಾಕಿ ನಟನೆಯ ಜತೆಗೆ ಒಂದಿಲ್ಲೊಂದು ಕೆಲಸದಲ್ಲಿ ಬಿಜಿಯಾಗಿದ್ದಾರೆ. ಅದೇ ರೀತಿ ಇದೀಗ ನಟ ಜಗ್ಗೇಶ್ ಸಹ ಹೊಸ ಉದ್ಯಮಕ್ಕೆ ಕಾಲಿರಿಸಿದ್ದಾರೆ. ಈ ಮೂಲಕ ಸುದೀರ್ಘ 40 ವರ್ಷದ ಹಿಂದಿನ ಕನಸೊಂದನ್ನು ಇದೀಗ ನನಸು ಮಾಡಿಕೊಂಡಿದ್ದಾರೆ. ಹಾಗಾದರೆ, ಯಾವುದಾ ಉದ್ಯಮ? ಇಲ್ಲಿದೆ ಮಾಹಿತಿ.
1980 ರಲ್ಲಿ ಇಂಡಸ್ಟ್ರೀಗೆ ಕಾಲಿಟ್ಟು, ನಟನಾಗಿ, ನಿರ್ದೇಕನಾಗಿ, ಪ್ರೊಡ್ಯೂಸರ್ ಆಗಿ ಸತತ 40 ಕ್ಕೂ ಹೆಚ್ಚು ವರ್ಷಗಳ ಕಾಲ ಇಂಡಸ್ಟ್ರೀಯಲ್ಲಿ ಸೇವೆ ಸಲ್ಲಿಸಿದ ಜಗ್ಗೇಶ್, ಇಂಡಸ್ಟ್ರೀಗಾಗಿ ಏನಾದ್ರೂ ಮಾಡ್ಬೇಕು ಅನ್ನೋ ಹಂಬಲದಿಂದ ಜಗ್ಗೇಶ್ ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ. ಈ ಮೂಲಕ 40 ವರ್ಷದ ಹಿಂದಿನ ಕನಸನ್ನ ನನಸ್ಸಾಗಿಸಿದ್ದಾರೆ. ವಿಶೇಷ ಅಂತಂದ್ರೆ ಈ ಸ್ಟುಡಿಯೋ ತಮ್ಮ ಮಗ ಯತಿರಾಜ್ ಅವರ ಕನಸು ಕೂಡ ಆಗಿದ್ದು, ಯತಿರಾಜ್ ನಟಿಸಿರುವ ಯಲಾಕುನ್ನಿ ಸಿನಿಮಾದ ಅಷ್ಟು ಕೆಲಸಗಳು ಇದೇ ಸ್ಟುಡಿಯೋದಲ್ಲಿ ಅಚ್ಚುಕ್ಕಟಾಗಿ ಆಗಿದೆ. ಅದಲ್ಲದೇ ಒಂದು ಹಿಂದಿ ಸಿನಿಮಾ ಹಾಗೂ ಮಲಯಾಳಂ ಸಿನಿಮಾದ ಕೆಲಸವೂ ಆಗಿದೆ. ದುಡ್ಡಿಗಾಗಿ ಈ ಸ್ಟುಡಿಯೋ ನಿರ್ಮಾಣ ಮಾಡಲಿಲ್ಲ, ಇಂಡಸ್ಟ್ರೀಗೆ, ಎಲ್ಲಾ ಸಿನಿಮಾಗಳಿಗೂ ಕೈಗೆಟುಕುವ ದರದಲ್ಲಿ ಈ ಮೂಲಕ ಸೇವೆಯಾಗಲಿ ಅನ್ನೋದು ಜಗ್ಗೇಶ್ ಅವರ ಅಭಿಪ್ರಾಯ.
ಹೊಸ ಸ್ಟುಡಿಯೋಸ್ ಬಗ್ಗೆ ಜಗ್ಗೇಶ್ ಮಾತು
1980ರಲ್ಲಿ ಇಂಡಸ್ಟ್ರೀಗೆ ಬಂದೆ. ಸ್ಟುಡಿಯೋ ಕಟ್ಟೋ ಕನಸು ಇಂದು ನಿನ್ನೆಯದಲ್ಲ. ಸುಮಾರು ನಲವತ್ತು ವರ್ಷದ ಹಿಂದಿನ ಕನಸು. ತಮ್ಮ ಕೋಮಲ್ ನಿರ್ಮಾಣದ ಯಲಾಕುನ್ನಿ ಕಂಪ್ಲೀಟ್ ಕೆಲ್ಸ ಎಲ್ಲವೂ ಜಗ್ಗೇಶ್ ಸ್ಟುಡಿಯೋನಲ್ಲೇ ಆಗಿದ್ದು ವಿಶೇಷ. ನನ್ನ ಧರ್ಮಪತ್ನಿ ಕೊಟ್ಟ ಸಲಹೆಯಂತೆ ಜಗ್ಗೇಶ್ ಸ್ಟುಡಿಯೊಸ್ ಅಂತಾ ಹೆಸರಿಟ್ಟಿದ್ದೇವೆ. ಚಿಕ್ಕ ಮಗ ಯತಿರಾಜನ ಕನಸಿನ ಪ್ರಾಜೆಕ್ಟ್ ಈ ಸ್ಟುಡಿಯೋ.
“ಗಾಂಧಿನಗರದಲ್ಲಿ ಒಂದು ಸ್ಟುಡಿಯೋದಲ್ಲಿ ಎನ್ ಎಸ್ ರಾವ್ ಅವ್ರು ಡಬ್ಬಿಂಗ್ ಮಾಡ್ತಾ ಇದ್ದದ್ದು ನೋಡಿ ಇಂಪ್ರೆಸ್ ಆಗಿದ್ದೆ. ಆ ಸ್ಟುಡಿಯೋಗೆ ಆ ಸಮಯದಲ್ಲಿ 8.9 ಲಕ್ಷ ಖರ್ಚು ಆಗಿತ್ತು ಅನ್ನೋದೇ ಗ್ರೇಟ್. ಚಾಮುಂಡೇಶ್ವರಿ ಸ್ಟುಡಿಯೋ ನೆನಪಿಗೆ ಜಾರಿದ ಜಗ್ಗೇಶ್, ನನ್ನ ಸಿನಿ ಬದುಕಿನ ವರ್ಣ ರಂಜಿತ ಜರ್ನಿಗೆ ಚಾಮುಂಡೇಶ್ವರಿ ಸ್ಟುಡಿಯೋ ದೊಡ್ಡ ಪಾತ್ರ ವಹಿಸುತ್ತದೆ. ಬಂಡ ನನ್ನ ಗಂಡ ಮೂಲಕ ಹೀರೋ ಆದೆ. ಆ ಸಮಯ ಶಂಕರನಾಗ್ ಅವ್ರ ಸಂಕೇತ್ ಸ್ಟುಡಿಯೋಗೆ ಹೋದಾಗ ಆಗ್ತಾ ಇದ್ದ ಫೀಲ್ ಸಖತ್. ಶಂಕರನಾಗ್ ಹಾಗೆ ಇದ್ದದ್ದು, ಅವರೊಬ್ಬ ವಿಜನರಿ ಮ್ಯಾನ್. ಸ್ಕ್ರೀನ್ ಮೇಲೆ ನಮ್ಮ ಪಾತ್ರ ನೋಡಿ ಡಬ್ ಮಾಡ್ತಾ ಇದ್ದ ದಿನಗಳು, ನಿಧಾನವಾಗಿ ಕಮ್ಮಿ ಆಗ್ತಾ ಆಗ್ತಾ ಚಿಕ್ಕ ಚಿಕ್ಕ ಸ್ಕ್ರೀನ್ ನೋಡಿ ಡಬ್ ಮಾಡೋ ಕಾಲ ಬಂತು. ಇದರಿಂದ ನನಗೆ ಬೇಜಾರ್ ಆಗ್ತಾ ಬಂತು” ಎಂದಿದ್ದಾರೆ.
ಎರಡು ಸಿನಿಮಾ ಕೆಲಸಗಳು ಮುಗಿದಿವೆ..
"ಬಹುತೇಕ ಸಂಗೀತ ನಿರ್ದೇಶಕರು ತಮ್ಮ ತಮ್ಮ ಮನೆಗಳಲ್ಲಿ ಸ್ಟುಡಿಯೋ ಮಾಡ್ಕೊಂಡು ಕೆಲಸಗಳನ್ನ ಮಾಡ್ತಾ ಇರ್ತಾರೆ. ವಿಶಾಲವಾದ ಜಾಗ ಇರೋದು ಕಮ್ಮಿ. ನನ್ನ ಡ್ರೀಮ್ ಬೇರೆ ಇತ್ತು, ಸ್ಟುಡಿಯೋ ವಿಶಾಲವಾಗಿ ಇರ್ಬೇಕು ಅನ್ನೋದು ನನ್ನ ಆಸೆಯಾಗಿತ್ತು. ಕಲಾವಿದರಿಗೆ ಸ್ವಲ್ಪ ಫೀಲ್ ಗುಡ್ ಅನುಭವ ಇದ್ರೆ ಒಳ್ಳೆದು ಅನ್ಸತ್ತೆ. ಚಿತ್ರೀಕರಣ ಮುಗಿದ ನಂತರ ಫೂಟೇಜ್ ತಂದು ಇಲ್ಲಿ ಕೊಟ್ಟರೆ CG ಒಂದು ಬಿಟ್ಟು ಮಿಕ್ಕ ಎಲ್ಲ ಕೆಲಸಗಳು ಆಗುತ್ತೆ. ಈಗಾಗಲೇ ಒಂದು ಮಲಯಾಳಂ - ಒಂದು ಹಿಂದಿ ಚಿತ್ರದ ಕೆಲಸ ಇಲ್ಲಿ ಆಗಿದೆ. ಅವರೆಲ್ಲ ಫುಲ್ ಹ್ಯಾಪಿ. ಚಿಕ್ಕ ಬಜೆಟ್ - ದೊಡ್ಡ ಬಜೆಟ್ ಸಿನ್ಮಾ ಅಂತಾ ಡಿವೈಡ್ ಮಾಡ್ದೆ ಎಲ್ಲವೂ ಒಂದೇ ಅಂತಾ ಫೀಲ್ ಮಾಡ್ಬೇಕು" ಎಂಬುದು ಜಗ್ಗೇಶ್ ಮಾತು.
ಉದ್ಯಮಕ್ಕೆ ನನ್ನ ಸೇವೆ ತಲುಪಬೇಕು
"ನನ್ನ ಸ್ಟುಡಿಯೋದಲ್ಲಿ ಇರುವ ಎಲ್ಲ ಇಕ್ವಿಪ್ ಮೆಂಟ್ಸ್ ಲೇಟೆಸ್ಟ್. ಹಾಗೆ ಅಮೆರಿಕಾದಿಂದ ತರಿಸಿದ್ದು. ಬೇರೆ ಸ್ಟುಡಿಯೋದವರು ಕೊಡೋ ಕ್ವಾಲಿಟಿಗಿಂತ ಒಳ್ಳೆ ಔಟ್ ಪುಟ್ ಕೊಟ್ಟು, ಬೆಲೆ ಕೂಡಾ ಸ್ವಲ್ಪ ಕಮ್ಮಿ ಇರತ್ತೆ. ಈಗಾಗಲೇ ನಮ್ಮಲ್ಲಿ ನಾಲ್ಕೈದು ಫಿಲ್ಮ್ಸ್ ಇವೆ, ಕೆಲ್ಸ ನಡೀತಾ ಇದೆ. ನನ್ನ ಉದ್ಯಮದ ಜನಕ್ಕೆ ನನ್ನ ಸೇವೆ ತಲುಪಬೇಕು. ನನಗೆ ಹಾಡು ಹೇಳೋ ಆಸಕ್ತಿ. ರಾಘವೇಂದ್ರ ಸ್ವಾಮಿಗಳ ಹಾಡುಗಳನ್ನು ಲಾವಣಿ ಶೈಲಿಯ, ಆಡು ಭಾಷೆಯ ಹಾಡುಗಳ ಬಗ್ಗೆ ಆಸಕ್ತಿ ಇದೆ. ರಾಯರು ನನ್ನಿಂದ ಶುರು ಮಾಡಿಸ್ತಾರೆ. ಅಣ್ಣಾವ್ರ ಬಾನಿಗೊಂದು ಎಲ್ಲೆ ಎಲ್ಲಿದೆ, ವೇದಾಂತಿ ಹೇಳಿದನು, ಎಂದೆಂದೂ ನಿನ್ನನು ಮರೆತು, ಹಾಡುಗಳನ್ನು ನಾನೇ ಹಾಡಿ ಸಂಭ್ರಮ ಪಟ್ಟಿದ್ದೇನೆ" ಎಂದಿದ್ದಾರೆ.