ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ದರ್ಶನ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಬಿಡುಗಡೆ, ಡಿಬಾಸ್ ಅಭಿಮಾನಿಗಳಿಗೆ ಹಬ್ಬ
Nov 18, 2024 01:17 PM IST
ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ದರ್ಶನ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಬಿಡುಗಡೆ
- ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಿಂದ ಜಾಮೀನು ಮೇಲೆ ಹೊರಬಂದು ಬೆನ್ನು ನೋವಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ಅಭಿಮಾನಗಳಿಗೆ ಖುಷಿಯಾಗುವಂತೆ ಚಿತ್ರಮಂದಿರಗಳಲ್ಲಿ ನವೆಂಬರ್ 22ರಂದು ದರ್ಶನ್ ಅಭಿನಯದ ಚಿತ್ರವೊಂದು ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿದೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ನಟ ದರ್ಶನ್ ಈಗ ಜಾಮೀನು ಮೂಲಕ ಹೊರಗೆ ಬಂದಿದ್ದಾರೆ. ಬೆನ್ನುನೋವಿನ ಚಿಕಿತ್ಸೆಗಾಗಿ ದರ್ಶನ್ ಆಸ್ಪತ್ರಯಲ್ಲಿರುವಾಗಲೇ ಡಿಬಾಸ್ ಅಭಿಮಾನಿಗಳಿಗೆ ಖುಷಿಯ ಸುದ್ದಿಯೊಂದು ಬಂದಿದೆ. ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ ಸಿನಿಮಾವು ಆಧುನಿಕ ತಂತ್ರಜ್ಞಾನಗಳೊಂದಿಗೆ ಹೊಳಪು ಪಡೆದುಕೊಂಡು ಈ ವಾರ ಅಂದರೆ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಯಾವಾಗ ಬಿಡುಗಡೆಯಾಗಿತ್ತು?
2012ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.
ಎಷ್ಟು ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು?
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ಅಂದಾಜು 30 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ 22 ದಿನಗಳ ಪ್ರದರ್ಶನದಲ್ಲಿ ಅಂದಾಜು 30 ಕೋಟಿ ರೂಪಾಯಿ ಮತ್ತು ಚಿತ್ರಮಂದಿರಗಳಲ್ಲಿ 75 ದಿನಗಳಲ್ಲಿ 40 ಕೋಟಿ ರೂಪಾಯಿ ಸಂಗ್ರಹಿಸಿದೆ.
ಯಾರು ಯಾವ ಪಾತ್ರದಲ್ಲಿ ನಟಿಸಿದ್ದರು?
ಸಂಗೊಳ್ಳಿ ರಾಯಣ್ಣನಾಗಿ ನಟ ದರ್ಶನ್, ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ಜಯಪ್ರದ, ಮಲ್ಲವ್ವ ಪಾತ್ರದಲ್ಲಿ ನಿಕಿತಾ ತುಕ್ರಾಲ್, ದಿವ್ಯಾ ಪರಮೇಶ್ವರನ್, ಚನ್ನಬಸವನಾಗಿ ಶಶಿಕುಮಾರ್ ನಟಿಸಿದ್ದಾರೆ. ವೀರಪ್ಪ ಸರ್ದಾರ್ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ, ವೆಂಕನಗೌಡನಾಗಿ ಜೈ ಜಗದೀಶ್, ಬಾಳಪ್ಪ ಕುಲಕರ್ಣಿ ಪಾತ್ರದಲ್ಲಿ ಅವಿನಾಶ್ ನಟಿಸಿದ್ದಾರೆ. ಕೆಂಚಮ್ಮನಾಗಿ ಉಮಾಶ್ರೀ, ಪಕೀರನಾಗಿ ಕರಿಬಸವಯ್ಯ, ವೆಂಕಟರಾವ್ ಪಾತ್ರದಲ್ಲಿ ದೊಡ್ಡಣ್ಣ, ಮಲ್ಲಪ್ಪ ಶೆಟ್ಟಿಯಾಗಿ ಸತ್ಯಜಿತ್, ಬಂಡಾರಿ ಬಾಬೂ ಆಗಿ ಶೋಭರಾಜ್ ನಟಿಸಿದ್ದಾರೆ. ಇದೇ ರೀತಿ, ಬ್ಯಾಂಕ್ ಜನಾರ್ದನ್ ಲಿಂಗನಗೌಡನಾಗಿ ನಟಿಸಿದ್ದರು, ಸೌರವ್,
ಸದಾಶಿವ ಬ್ರಹ್ಮಾವರ, ಶಿವಗಟ್ಟಿ ರಾಜನಾಗಿ ಆನಂದ ಅಪ್ಪುಗೋಳ್, ಸದಾಶಿವ ವಿನಯಸಾರಥಿ, ಕೃಷ್ಣಾರೂ ಆಗಿ ರಾಜೇಶ್ ನಟರಂಗ, ಧರ್ಮ, ರವಿಚೇತನ್, ಮೂಗು ಸುರೇಶ್ ನಟಿಸಿದ್ದಾರೆ.
ಹದಿನೆಂಟನೇ ಶತಮಾನದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಬಲಗೈ ಭಂಟನಾಗಿದ್ದ ವೀರಸೇನಾನಿ ಸಂಗೊಳ್ಳಿ ರಾಯಣ್ಣನ ಸಾಹಸ ಗಾಥೆಯನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸಲಾದ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' 2012ರಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಚಿತ್ರದಲ್ಲಿ ದರ್ಶನ್ ತನ್ನ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ರು.
ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ನಿರೂಪಣೆ ಇತ್ತು. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ರಿಟೀಷರ ವಿರುದ್ದ ತೊಡೆತಟ್ಟಿ ನಿಂತ ಕೆಚ್ಚೆದೆಯ ವೀರ ಯೋಧ ಸಂಗೊಳ್ಳಿ ರಾಯಣ್ಣನಾಗಿ ಅಬ್ಬರಿಸಿದ್ದರು. ಹಿರಿಯನಟಿ ಜಯಪ್ರದ ಅವರು ಕಿತ್ತೂರು ರಾಣಿ ಚನ್ನಮ್ಮನ ಪಾತ್ರದಲ್ಲಿ ನಟಿಸಿದ್ದರು.
ಉತ್ತರ ಕರ್ನಾಟಕದ ಆನಂದ್ ಬಿ.ಅಪ್ಪುಗೋಳ್ ಅವರು ಈ ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ಅದ್ದೂರಿಯಾಗಿ ನಿರ್ಮಿಸಿದ್ದ ಈ ಚಿತ್ರಕ್ಕೆ ನಿರ್ದೇಶಕ ನಾಗಣ್ಣ ಅವರು ಆಕ್ಷನ್ ಕಟ್ ಹೇಳಿದ್ದರು. ಫಿಲಂ ಫೇರ್ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಸಹ ಈ ಚಿತ್ರ ತನ್ನದಾಗಿಸಿಕೊಂಡಿತ್ತು. ಈ ಚಿತ್ರ ಈಗ ಆಧುನಿಕ ತಂತ್ರಜ್ಞಾನಗಳೊಂದಿಗೆ ಹೊಸತನದಿಂದ ಮರುಬಿಡುಗಡೆಯಾಗುತ್ತಿದೆ.
ಇದೀಗ ಅದೇ ಚಿತ್ರ ಆಧುನಿಕ ತಂತ್ರಜ್ಞಾನ ಸ್ಪರ್ಶದೊಂದಿಗೆ ನವೆಂಬರ್ 22 ರಂದು ಮರುಬಿಡುಗಡೆ ಮಾಡಲಾಗುತ್ತಿದೆ. ಇತಿಹಾಸ ನಿರ್ಮಿಸಿದ ಇಂಥ ಎಪಿಕ್ ಸ್ಟೋರಿಯನ್ನು ಎಸ್.ಜಿ.ಕೆ. ಫಿಲಂಸ್ ಮೂಲಕ ಕೆ.ಬಸವರಾಜ್ ಅವರು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಸ್ವಾಭಿಮಾನದ ಕಿಚ್ಚು ಹೆಚ್ಚಿಸುವ ಈ ವೀರಸೇನಾನಿಯ ಕಥೆಯನ್ನು ಮಾಡ್ರನ್ ಟೆಕ್ನಾಲಜಿಯ ಸ್ಪರ್ಶದೊಂದಿಗೆ ದರ್ಶನ್ ಅಭಿಮಾನಿಗಳು ಕಣ್ತುಂಬಿಕೊಳ್ಳುವ ಅವಕಾಶ ಮತ್ತೊಮ್ಮೆ ಲಭಿಸಿದೆ. ವಿಶೇಷವಾಗಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಮಂದಿರದ ಪ್ರವೇಶ ದರದಲ್ಲಿ ಶೇಕಡ 50 ಡಿಸ್ಕಂಟ್ ದೊರಕಲಿದೆ.
ಈ ಚಿತ್ರದಲ್ಲಿ ನಿಖಿತಾ ತುಕ್ರಾಲ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಶಶಿಕುಮಾರ್, ಮಾಳವಿಕ ಅವಿನಾಶ್, ರಮೇಶ್ ಭಟ್, ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೇಶವಾದಿತ್ಯ ಅವರ ಚಿತ್ರಕಥೆ ಹಾಗೂ ಸಂಭಾಷಣೆ, ರಮೇಶ್ ಬಾಬು ಅವರ ಛಾಯಾಗ್ರಹಣ, ಯಶೋವರ್ಧನ್, ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ದೀಪು ಅವರ ಸಂಕಲನ, ರವಿವರ್ಮ, ಪಳನಿರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.