25 ವರ್ಷದ ಹಿಂದಿನ ಚಿತ್ರವಾದರೂ ತಗ್ಗದ ‘ಉಪೇಂದ್ರ’ ಖದರ್; ಥಿಯೇಟರ್‌ನಲ್ಲಿ ಫ್ಯಾನ್ಸ್ ಜತೆ ಚಿತ್ರ ವೀಕ್ಷಿಸಿ ಉಪ್ಪಿ ಭಾವುಕ
Sep 20, 2024 09:24 AM IST
ಮರು ಬಿಡುಗಡೆಯಾದ ಉಪೇಂದ್ರ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ ಭಾವುಕರಾದ ಉಪ್ಪಿ.
- 1999ರಲ್ಲಿ ತೆರೆಗೆ ಬಂದಿದ್ದ ‘ಉಪೇಂದ್ರ’ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಿದ್ದಾರೆ ಚಿತ್ರದ ನಿರ್ಮಾಪಕರು. ಅಭಿಮಾನಿಗಳು ಈ ಕಲ್ಟ್ ಕ್ಲಾಸಿಕ್ ಚಿತ್ರವನ್ನು ಮತ್ತೆ ಚಿತ್ರಮಂದಿರದಲ್ಲಿ ನೋಡಿ ಪುಳಕಿತರಾಗಿದ್ದಾರೆ. ಫ್ಯಾನ್ಸ್ ಜತೆ ಕೂತು ಸಿನಿಮಾ ವೀಕ್ಷಿಸಿ ಭಾವುಕರಾಗಿದ್ದಾರೆ.
ಹಳೇ ಸಿನಿಮಾಗಳ ಮರು ಬಿಡುಗಡೆ ಟ್ರೆಂಡ್ ಇದೀಗ ಕನ್ನಡದಲ್ಲೂ ಹೆಚ್ಚಾಗುತ್ತಿದೆ. ಆಗೊಬ್ಬರು ಈಗೊಬ್ಬರು ಸ್ಟಾರ್ ಹೀರೋಗಳ ಹಳೇ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಿ ಮತ್ತೆ ಮೋಡಿ ಮಾಡುತ್ತಿವೆ. ಮೇ ತಿಂಗಳಲ್ಲಿ ಪುನೀತ್ ರಾಜ್‌ಕುಮಾರ್ ಅವ್ರ ಅಂಜನಿಪುತ್ರ, ಪವರ್ ಸಿನಿಮಾಗಳು ತೆರೆಕಂಡಿದ್ದವು. ಅದೇ ಸಮಯದಲ್ಲಿ ಉಪೇಂದ್ರ ಅವರ A ಸಿನಿಮಾ ಸಹ ತೆರೆಗೆ ಬಂದಿತ್ತು. ಇದೀಗ ನಾಲ್ಕು ತಿಂಗಳ ಬಳಿಕ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ ಉಪೇಂದ್ರ ಸಿನಿಮಾ ಮರು ಬಿಡುಗಡೆ ಆಗಿದೆ. ಮೊದಲ ಶೋವನ್ನು ಅಭಿಮಾನಿಗಳ ಜತೆ ಕೂತು ವೀಕ್ಷಿಸಿದ್ದಾರೆ ಉಪೇಂದ್ರ.
ಉಪೇಂದ್ರ ಸದ್ಯ UI ಸಿನಿಮಾದ ಗ್ರಾಫಿಕ್ಸ್ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಬರ್ತ್‌ಡೇ ದಿನ ಮೇಕಿಂಗ್ ವಿಡಿಯೋದ ಝಲಕ್ ಹೊರಬಿಟ್ಟಿದ್ದ ಅವರು, ಬಿಡುಗಡೆ ದಿನಾಂಕವನ್ನು ಪ್ರಕಟಿಸಿರಲಿಲ್ಲ. ಇನ್ನೇನು ಶೀಘ್ರದಲ್ಲಿ ಘೋಷಣೆ ಮಾಡಲಿದ್ದೇವೆ ಎಂದಿದ್ದರು. ಈ ಕಾರಣಕ್ಕೂ ಅವರ ಅಭಿಮಾನಿ ವಲಯ ಕೊಂಚ ಬೇಸರದಲ್ಲಿತ್ತು. ಈ ನಡುವೆಯೇ 1999ರಲ್ಲಿ ತೆರೆಗೆ ಬಂದಿದ್ದ ‘ಉಪೇಂದ್ರ’ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಿದ್ದಾರೆ ಚಿತ್ರದ ನಿರ್ಮಾಪಕರು. ಅಭಿಮಾನಿಗಳು ಈ ಕಲ್ಟ್ ಕ್ಲಾಸಿಕ್ ಚಿತ್ರವನ್ನು ಮತ್ತೆ ಚಿತ್ರಮಂದಿರದಲ್ಲಿ ನೋಡಿ ಪುಳಕಿತರಾಗಿದ್ದಾರೆ.
25 ವರ್ಷದ ಸಂಭ್ರಮದಲ್ಲಿ ಉಪೇಂದ್ರ
‘ಉಪೇಂದ್ರ’ ಸಿನಿಮಾಕ್ಕೀಗ 25 ವರ್ಷದ ಸಂಭ್ರಮ. ಆ ಸಂಭ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ‘ಉಪೇಂದ್ರ’ ಸಿನಿಮಾ ಮರು ಬಿಡುಗಡೆ ಆಗಿದೆ. ವಿಶೇಷ ಏನೆಂದರೆ, ಬೆಳಗಿನ 6 ಗಂಟೆಯ ಪ್ರದರ್ಶನಕ್ಕೆ ಕಿಕ್ಕಿರಿದು ಅಭಿಮಾನಿಗಳು ಸೇರಿದ್ದಾರೆ. ಉಪೇಂದ್ರ ಅವರ ಇಂಟ್ರಡಕ್ಷನ್ ಸೀನ್‌ಗೆ ಚಿತ್ರಮಂದಿರದಲ್ಲಿ ಫ್ಯಾನ್ಸ್ ಸೆಲೆಬ್ರೇಷನ್ ಕ್ರೇಜಿಯಾಗಿತ್ತು. ಶಿಳ್ಳೆ ಚಪ್ಪಾಳೆ ಹೊಡೆದು, ಉಪೇಂದ್ರ ಅವರ ಡೈಲಾಗ್‌ಗಳನ್ನ ಕೇಳಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳು ಈ ಸೆಲೆಬ್ರೇಷನ್ ನೋಡಿ ಅಲ್ಲೇ ಕೂತಿದ್ದ ಉಪೇಂದ್ರ ಸಹ ಕೆಲ ಕಾಲ ಮೂಕವಿಸ್ಮಿತರಾಗಿದ್ದರು.
ಆ ಕಾಲದಲ್ಲಿ 10 ಕೋಟಿ ಕಲೆಕ್ಷನ್
ಉಪೇಂದ್ರ ಜತೆಗೆ ಪ್ರೇಮಾ, ದಾಮಿನಿ ಜತೆಗೆ ಬಾಲಿವುಡ್ ನಟಿ ರವೀನಾ ಟಂಡನ್ ಮುಖ್ಯಭೂಮಿಕೆಯಲ್ಲಿದ್ದ ‘ಉಪೇಂದ್ರ’ ಸಿನಿಮಾ, ಆ ಕಾಲದಲ್ಲಿಯೇ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿತ್ತು. ಶಿಲ್ಪಾ ಶ್ರೀನಿವಾಸ್ ನಿರ್ಮಾಣ ಮಾಡಿದ್ದ ಈ ಸಿನಿಮಾ ಆಗಿನ ಕಾಲದಲ್ಲಿಯೇ 10 ಕೋಟಿ ಕಲೆಕ್ಷನ್ ಮಾಡಿತ್ತು. ಚಿತ್ರಮಂದಿರಗಳಲ್ಲಿ 200 ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ಈ ಸಿನಿಮಾ ತೆರೆಕಂಡು ಶತದಿನೋತ್ಸವ ಆಚರಿಸಿತ್ತು. ಎವಿ ಕೃಷ್ಣ ಕುಮಾರ್ ಈ ಸಿನಿಮಾದ ಛಾಯಾಗ್ರಾಹಕರು, ಸಂಗೀತದ ಹೊಣೆ ಗುರುಕಿರಣ್ ಅವರದ್ದು. ಟಿ ಶಶಿಕುಮಾರ್ ಅವರ ಸಂಕಲನ ಚಿತ್ರಕ್ಕಿದೆ.
ಅಕ್ಟೋಬರ್‌ನಲ್ಲಿ ಯುಐ ಸಿನಿಮಾ ರಿಲೀಸ್
ಸಿನಿಪ್ರಿಯರು ಬಹಳ ದಿನಗಳಿಂದ ಯುಐ ಸಿನಿಮಾ ಅಪ್‌ಡೇಟ್ ಬಗ್ಗೆ ಕಾಯುತ್ತಿದ್ದರು. ಅದ್ಧೂರಿಯಾಗಿ ಮುಹೂರ್ತ ಅಚರಿಸಿಕೊಂಡಿದ್ದು ಬಿಟ್ಟರೆ ಮಧ್ಯದಲ್ಲಿ ಟೀಸರ್ ರಿಲೀಸ್ ಮಾಡಲಾಗಿತ್ತು. ಅದನ್ನು ಹೊರತುಪಡಿಸಿ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ ಉಪ್ಪಿ ಬರ್ತ್‌ಡೇ ಪ್ರಯುಕ್ತ ಯುಐ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರನ್ನು ಉಪೇಂದ್ರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಇದೇ ಅಕ್ಟೋಬರ್‌ನಲ್ಲಿ ತೆರೆ ಕಾಣಲಿದೆ. ಚಿತ್ರತಂಡ ದಿನಾಂಕ ಅನೌನ್ಸ್ ಮಾಡದಿದ್ದರೂ ಬಹುಶ; ವಿಜಯದಶಮಿ ದಿನ ಅಂದರೆ ಅಕ್ಟೋಬರ್ 12 ರಂದು ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.