logo
ಕನ್ನಡ ಸುದ್ದಿ  /  ಮನರಂಜನೆ  /  ಮೊಮ್ಮಗ ಏಕಾಗ್ರಹ ರೋಹನ್‌ ಮೂರ್ತಿಗೆ ಷೇರು ಉಡುಗೊರೆ ನೀಡಿದ ಇನ್ಫೋಸಿಸ್ ನಾರಾಯಣಮೂರ್ತಿ; ಅಸಹ್ಯಕರ ಅಂದದ್ಯಾಕೆ ಚೇತನ್‌ ಅಹಿಂಸಾ

ಮೊಮ್ಮಗ ಏಕಾಗ್ರಹ ರೋಹನ್‌ ಮೂರ್ತಿಗೆ ಷೇರು ಉಡುಗೊರೆ ನೀಡಿದ ಇನ್ಫೋಸಿಸ್ ನಾರಾಯಣಮೂರ್ತಿ; ಅಸಹ್ಯಕರ ಅಂದದ್ಯಾಕೆ ಚೇತನ್‌ ಅಹಿಂಸಾ

Praveen Chandra B HT Kannada

Mar 18, 2024 04:28 PM IST

google News

ಇನ್ಫೋಸಿಸ್‌ ನಾರಾಯಣ ಮೂರ್ತಿ (ಸಂಗ್ರಹ ಚಿತ್ರ, ಪಿಟಿಐ, ಶೈಲೆಂದ್ರ ಭೋಜಕ್‌)

    • ಇನ್ಫೋಸಿಸ್‌ ಸ್ಥಾಪಕ ಎನ್‌ಆರ್‌ ನಾರಾಯಣ ಮೂರ್ತಿ ಅವರು 4 ತಿಂಗಳು ವಯಸ್ಸಿನ ಮೊಮ್ಮಗ ಏಕಾಗ್ರಹ ರೋಹನ್‌ ಮೂರ್ತಿಗೆ 240 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಕನ್ನಡ ನಟ ಚೇತನ್‌ ಅಹಿಂಸಾ ಟೀಕಿಸಿದ್ದಾರೆ. ಪೀಳಿಗೆಯ ಸಂಪತ್ತಿನ ವರ್ಗಾವಣೆಯನ್ನು ತಡೆಯುವ ಬೃಹತ್ ಪಿತ್ರಾರ್ಜಿತ ತೆರಿಗೆಯನ್ನು ಸರಕಾರ ಆರಂಭಿಸಬೇಕು ಎಂದಿದ್ದಾರೆ.
ಇನ್ಫೋಸಿಸ್‌ ನಾರಾಯಣ ಮೂರ್ತಿ (ಸಂಗ್ರಹ ಚಿತ್ರ, ಪಿಟಿಐ, ಶೈಲೆಂದ್ರ ಭೋಜಕ್‌)
ಇನ್ಫೋಸಿಸ್‌ ನಾರಾಯಣ ಮೂರ್ತಿ (ಸಂಗ್ರಹ ಚಿತ್ರ, ಪಿಟಿಐ, ಶೈಲೆಂದ್ರ ಭೋಜಕ್‌) (PTI)

ಇನ್ಫೋಸಿಸ್‌ ಸ್ಥಾಪಕ ಎನ್‌ಆರ್‌ ನಾರಾಯಣ ಮೂರ್ತಿ ಅವರು ನಾಲ್ಕು ತಿಂಗಳು ಪ್ರಾಯದ ಮೊಮ್ಮಗ ಏಕಾಗ್ರಹ ರೋಹನ್‌ ಮೂರ್ತಿಗೆ 240 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಏಕಾಗ್ರಹ ರೋಹನ್‌ ಮೂರ್ತಿ ಭಾರತದ ಅತ್ಯಂತ ಕಿರಿಯ ಕೋಟ್ಯಧಿಪತಿ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಈ ಕುರಿತು ಇದೀಗ ಕನ್ನಡ ನಟ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದು "ಇದು ಅಸಹ್ಯಕರ" ಎಂದಿದ್ದಾರೆ.

ಚೇತನ್‌ ಅಹಿಂಸಾ ಅಭಿಪ್ರಾಯವೇನು?

"4 ತಿಂಗಳ ಮೊಮ್ಮಗನಿಗೆ 240 ಕೋಟಿ ರೂಪಾಯಿ ಮೌಲ್ಯದ ಷೇರು ಉಡುಗೊರೆ ನೀಡಿದ್ದಾರೆ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ. 120 ದಿನಗಳ ವಯಸ್ಸಿನಲ್ಲಿ, ಆ ಮಗು ಜಗತ್ತಿನ 99.9999% ಗಿಂತ ಶ್ರೀಮಂತವಾಗಿದೆ -- ಅಸಹ್ಯಕರ. ಭಾರತದಲ್ಲಿ ಯಾವುದೇ ಪಿತ್ರಾರ್ಜಿತ ತೆರಿಗೆ ಇಲ್ಲ -- ಇದು ಕೂಡ ಅಸಹ್ಯಕರ. ಇಂತಹ ಅಸಭ್ಯ ಪೀಳಿಗೆಯ ಸಂಪತ್ತಿನ ವರ್ಗಾವಣೆಯನ್ನು ತಡೆಯುವ ಬೃಹತ್ ಪಿತ್ರಾರ್ಜಿತ ತೆರಿಗೆಯನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಬೇಕು" ಎಂದು ಚೇತನ್‌ ಅಹಿಂಸಾ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಶತಕೋಟ್ಯಧಿಪತಿಯಾದ ಏಕಾಗ್ರಹ ರೋಹನ್‌ ಮೂರ್ತಿ

ತನ್ನ ಮೊಮ್ಮಗ ಏಕಾಗ್ರಹ ರೋಹನ್‌ ಮೂರ್ತಿಗೆ ನಾರಾಯಣ ಮೂರ್ತಿ ಅವರು 240 ಕೋಟಿ ರೂಪಾಯಿ ಮೌಲ್ಯದ ಷೇರನ್ನು ಉಡುಗೊರೆ ನೀಡಿದ್ದಾರೆ. ಅಂದರೆ, ರೋಹನ್‌ ಮೂರ್ತಿಯ ಮಗು ಭಾರತದ ಎರಡನೇ ಬೃಹತ್‌ ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿಯಲ್ಲಿ 15,00,000 ಷೇರುಗಳು ಅಥವಾ ಶೇಕಡ 0.04 ಷೇರುಗಳನ್ನು ತನ್ನದಾಗಿಸಿಕೊಂಡಿದೆ.

ಈ ಷೇರು ಉಡುಗೊರೆ ಬಳಿಕ ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿಯವರ ಷೇರಿನ ಪ್ರಮಾಣವು ಶೇಕಡ 0.40ರಿಂದ 0.36ಕ್ಕೆ ಇಳಿಕೆ ಕಂಡಿದೆ. ಈ ಷೇರು ವಹಿವಾಟನ್ನು "ಆಫ್‌ ಮಾರ್ಕೆಟ್‌" ವಿಭಾಗದಲ್ಲಿ ಮಾಡಲಾಗಿದೆ. ಕಳೆದ ನವೆಂಬರ್‌ ತಿಂಗಳಿನಲ್ಲಿ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿಯವರು ಅಜ್ಜ ಅಜ್ಜಿಯಾಗಿದ್ದರು. ಅಂದರೆ, ಅವರ ಪುತ್ರ ಸೊಸೆ ಅಪರ್ಣಾ ಕೃಷ್ಣನ್‌ ಗಂಡುಮಗುವಿಗೆ ಜನ್ಮ ನೀಡಿದ್ದರು. ಅಕ್ಷಯ್‌ ಮೂರ್ತಿಗೆ ಇಬ್ಬರು ಮಕ್ಕಳು ಜನಿಸಿದಾಗಲೇ ಇವರು ಅಜ್ಜ ಅಜ್ಜಿ ಆಗಿದ್ದರು. 1981ರಲ್ಲಿ ಇನ್ಫೊಸಿಸ್‌ ಕಂಪನಿಯು 250 ಡಾಲರ್‌ ಹೂಡಿಕೆಯೊಂದಿಗೆ ಆರಂಭವಾಗಿತ್ತು.

ಏಕಾಗ್ರಹ ಹೆಸರಿನ ಅರ್ಥ

ರೋಹನ್‌ ಮೂರ್ತಿಯ ಮಗುವಿಗೆ ಏಕಾಗ್ರಹ ಎಂದು ಹೆಸರಿಡಲಾಗಿದೆ. ಏಕಾಗ್ರಹ ಹೆಸರಿನ ಅರ್ಥ "ಅಚಲವಾದ ಗಮನ ಮತ್ತು ನಿರ್ಣಯ" ಎಂದಾಗಿದೆ. ಮಹಾಭಾರತದ ಅರ್ಜುನನ ಏಕಾಗ್ರಹದಿಂದ ಸ್ಪೂರ್ತಿ ಪಡೆದು ಈ ಹೆಸರನ್ನು ಮಗುವಿಗೆ ಇಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಇಂಗ್ಲೆಂಡ್‌ ಪ್ರಧಾನಿ ರಿಶಿ ಸುನಕ್‌ ಮತ್ತು ನಾರಾಯಣ ಮೂರ್ತಿ ಮಗಳು ಅಕ್ಷತಾ ಮೂರ್ತಿಯ ಮಕ್ಕಳ ಹೆಸರು ಕೃಷ್ಣ ಸುನಕ್‌ ಮತ್ತು ಅನೋಷ್ಕಾ ಸುನಕ್‌. ಕಳೆದ ವರ್ಷ ರೋಹನ್‌ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್‌ ಗಂಡು ಮಗುವನ್ನು ಸ್ವಾಗತಿಸಿದ್ದರು. ರೋಹನ್‌ ಮೂರ್ತಿ ಸೊರೊಕೊ ಎಂಬ ಅಮೆರಿಕ ಮೂಲದ ಸಾಫ್ಟ್‌ವೇರ್‌ ಅಭಿವೃದ್ಧಿ ಕಂಪನಿಯ ಸ್ಥಾಪಕ. ಅಪರ್ಣಾ ಕೃಷ್ಣನ್‌ ಅವರು ಭಾರತದ ನೌಕಾಪಡೆಯ ಅಧಿಕಾರಿ ಕಮಾಂಡರ್‌ ಕೆಆರ್‌ ಕೃಷ್ಣನ್‌ ಮತ್ತು ಮಾಜಿ ಎಸ್‌ಬಿಐ ಬ್ಯಾಂಕ್‌ ಉದ್ಯೋಗಿ ಸಾವಿತ್ರಿ ಕೃಷ್ಣನ್‌ ಅವರ ಮಗಳು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ