ತಮಿಳಲ್ಲಿ ಭಾಷಣ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಲೂಸ್ ಮಾದ ಯೋಗಿ; ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು VIDEO
Nov 17, 2023 04:49 PM IST
ತಮಿಳು ಭಾಷಣ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಲೂಸ್ ಮಾದ ಯೋಗಿ; ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು
- ಸ್ಯಾಂಡಲ್‌ವುಡ್ ನಟ ಲೂಸ್ ಮಾದ ಯೋಗಿ, ಬೆಂಗಳೂರಿನ ವಿವೇಕ ನಗರದಲ್ಲಿ ತಮಿಳು ಮಾತನಾಡಿ, ಟ್ರೋಲ್‌ಗೆ ಆಹಾರವಾಗಿದ್ದಾರೆ. ತಮಿಳಿನಲ್ಲಿ ಭಾಷಣ ಮಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Loose Maada Yogi: ಸ್ಯಾಂಡಲ್‌ವುಡ್ ನಟ ಲೂಸ್ ಮಾದ ಯೋಗಿ ಸದ್ಯ ಕಾಂಟ್ರವರ್ಸಿಯೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಆಡಾಡ್ತಾ ಬೇಡದ ವಿವಾದದ ಸುಳಿಗೆ ಸಿಲುಕಿದ್ದಾರೆ. ಅಂದರೆ, ವೇದಿಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಯೋಗಿ, ಕನ್ನಡ ಬದಿಗಿಟ್ಟು ನಿರ್ಗಗಳವಾಗಿ ತಮಿಳು ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟ ಯೋಗಿ ಹೀಗೆ ತಮಿಳು ಮಾತನಾಡಿದ್ದು, ತಮಿಳು ಭಾಷಿಕ ನಾಡಿನಲ್ಲಲ್ಲ. ಬದಲಿಗೆ ಬೆಂಗಳೂರಿನಲ್ಲಿ!
ರೋಜಿ (Rosy) ಹೆಸರಿನ ಸಿನಿಮಾದಲ್ಲಿ ನಟ ಯೋಗಿ ನಟಿಸಿದ್ದಾರೆ. ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಸಹ ಮುಗಿಸಿಕೊಂಡಿದೆ ಈ ಸಿನಿಮಾ. ಈ ಹಿಂದಿನ ಡಾಲಿ ಧನಂಜಯ್ ನಟನೆಯ ಹೆಡ್‌ಬುಷ್ ಸಿನಿಮಾ ನಿರ್ದೇಶನ ಮಾಡಿದ್ದ ಶೂನ್ಯ ರೋಜಿ ಸಿನಿಮಾಕ್ಕೂ ನಿರ್ದೇಶನ ಮಾಡಿದ್ದಾರೆ. ವಿಶೇಷ ಏನೆಂದರೆ ಲೂಸ್ ಮಾದ ಯೋಗಿ ಅವರ 50ನೇ ಸಿನಿಮಾ ಎಂಬ ವಿಶೇಷಣವೂ ಈ ಚಿತ್ರಕ್ಕಿದೆ. ಅದೇ ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ ಯೋಗಿ.
ಅಷ್ಟಕ್ಕೂ ಆಗಿದ್ದೇನು?
ಬೆಂಗಳೂರಿನ ವಿವೇಕನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಟ ಯೋಗಿ ಭಾಗವಹಿಸಿದ್ದರು. ವೇದಿಕೆ ಮೇಲೆ ಏರಿ ಮೈಕ್ ತೆಗೆದುಕೊಂಡು, ಕನ್ನಡ ಮಾತನಾಡುವ ಬದಲು, ತಮಿಳಿನಲ್ಲಿಯೇ ಮಾತು ಆರಂಭಿಸಿದ್ದಾರೆ. ನಟನ ಈ ಭಾಷಣದ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಯೋಗಿಯನ್ನು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ಕರ್ನಾಟಕದಲ್ಲಿದ್ದುಕೊಂಡು ಕನ್ನಡ ಮಾತನಾಡಯ್ಯ ಎಂದು ಕಾಮೆಂಟ್ ಪಾಸ್ ಮಾಡುತ್ತಿದ್ದಾರೆ.
ಯೋಗಿ ಮಾತನಾಡಿದ್ದೇನು?
"ರೋಜಿ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗುತ್ತದೆ. ಎಂಜಾಯ್ ಮಾಡಿ. ಸಿನಿಮಾ ಸಖತ್ ಆಗಿರಲಿದೆ. ಎಲ್ಲರಿಗೂ ಇದೊಂದು ರೀತಿಯ ಟ್ರೀಟ್. ವಿಶ್ಯುವಲ್ ಟ್ರೀಟ್, ಸ್ಯಾಂಡಿ ಮಾಸ್ಟರ್ ಅವರ ಡಾನ್ಸ್ ಟ್ರೀಟ್. ನಾನು ಅವರ ಬಿಗ್ ಫ್ಯಾನ್" ಎಂದು ಬೆಂಗಳೂರಿನ ವಿವೇಕನಗರದಲ್ಲಿನ ಕಾರ್ಯಕ್ರಮದಲ್ಲಿ ತಮಿಳಿನಲ್ಲಿಯೇ ಭಾಷಣ ಮಾಡಿದ್ದಾರೆ ಯೋಗಿ. ಈ ವಿಡಿಯೋ ನೋಡಿದ ಕನ್ನಡಿಗರು, ನಟನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮನ ಬಂದಂತೆ ಕಾಮೆಂಟ್ ಹಾಕುತ್ತ, ಟೀಕೆ ಮಾಡುತ್ತಿದ್ದಾರೆ.
ನೆಟ್ಟಿಗರು ಏನಂದ್ರು?
- ಈ ನಟ ಬೆಳೆಯಲು ಕನ್ನಡ ಸಿನಿಮಾ ಬೇಕು. ಬೆಂಗಳೂರಿನ ವಿವೇಕನಗರದಲ್ಲಿ ಈ ನಟ ತಮಿಳಿನಲ್ಲಿ ಮಾತಾಡಿದ್ದಾರೆ. ಸ್ಥಳೀಯ ಕನ್ನಡಿಗರು ಕನ್ನಡ ಮಾತಾಡಿ ಎಂದರು ಇಲ್ಲಿ ತಮಿಳರು ಜಾಸ್ತಿ ಇದ್ದಾರೆ ಎಂದು ತಮಿಳು ಮಾತಾಡಿದ್ದಾರಂತೆ. ಈ ಮೂಲಕ ಇಲ್ಲಿನ ತಮಿಳರಿಗೆ ನೀವು ಕನ್ನಡ ಕಲಿಬೇಡಿ ನಾವೇ ತಮಿಳು ಕಲಿತಿವಿ ಅನ್ನೋ ಸಂದೇಶ ನೀಡಲು ಹೊರಟ್ರಾ ನೀವು.?
- ಸದ್ಯದ ಚಂದನವನದ ಕರುಣಾಜನಕ ಸ್ಥಿತಿ. ಕಾಸು ಕೊಟ್ಟು ಚಿತ್ರ ನೋಡುವ ಕನ್ನಡಿಗರಿಗೆ ಗುನ್ನ .
- ಬೇರೆ ಭಾಷೆ ನಟರು ಕನ್ನಡ ಗೊತ್ತಿದರೂ ಮಾತಾಡಲ್ಲ. ಇವರಿಗೆ ಏನು ಹೇಳಬೇಕು ಗೊತ್ತಿಲ್ಲ!!!
- ನಾಚಿಕೆಯಿಲ್ಲದ ಕನ್ನಡ ನಟ ನಟಿಯರು.
- ಹೆಸರಿಗೆ ಮಾತ್ರ ಕನ್ನಡ ನಟರು