Rishab Shetty: ವಿದೇಶಗಳಲ್ಲಿ ಸರಣಿ ಪ್ರಶಸ್ತಿ ಪಡೆದ ಕೊಪ್ಪಳದ ಶಿವಮ್ಮನನ್ನು ತೆರೆಗೆ ಕರೆತರುವ ಸುಳಿವು ಕೊಟ್ಟ ರಿಷಬ್ ಶೆಟ್ಟಿ
Jul 14, 2023 10:12 AM IST
ಶಿವಮ್ಮನನ್ನು ತೆರೆಗೆ ಕರೆತರುವ ಸುಳಿವು ಕೊಟ್ಟ ರಿಷಬ್ ಶೆಟ್ಟಿ; ವಿದೇಶಗಳಲ್ಲಿ ಸರಣಿ ಪ್ರಶಸ್ತಿ ಪಡೆದ ಚಿತ್ರ ಶೀಘ್ರದಲ್ಲಿ ಚಿತ್ರಮಂದಿರಕ್ಕೆ
- ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಶಿವಮ್ಮ ಸಿನಿಮಾ ಈಗಾಗಲೇ ವಿದೇಶಗಳಲ್ಲಿ ಸರಣಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದೀಗ ಚಿತ್ರಮಂದಿರಕ್ಕೆ ಕರೆತರಲು ಚಿತ್ರತಂಡ ಪ್ಲಾನ್ ಮಾಡಿದೆ. ಇನ್ನೇನು ಶೀಘ್ರದಲ್ಲಿ ತೆರೆಗೆ ತರುವ ಯೋಜನೆ ಚಿತ್ರತಂಡದ್ದು.
Rishab Shetty: ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ರಿಷಬ್ ಶೆಟ್ಟಿ ಶಿವಮ್ಮ ಸಿನಿಮಾ ಮೂಲಕ ವರ್ಡ್ ಟೂರ್ ಮಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ವಿದೇಶದ ಹತ್ತು ಹಲವು ಸಿನಿಮೋತ್ಸವಗಳಿಗೆ ತೆರಳಿರುವ ಶಿವಮ್ಮ ಸಿನಿಮಾ, ಹೋದಲ್ಲೆಲ್ಲ ಒಂದಿಲ್ಲೊಂದು ಪ್ರಶಸ್ತಿಯನ್ನು ಪಡೆದುಕೊಂಡು ಮರಳುತ್ತಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ, ಅಲ್ಲಿನ ಜ್ಯೂರಿಗಳಿಂದ ಮೆಚ್ಚುಗೆ ಗಳಿಸಿ ಇನ್ನೇನು ಚಿತ್ರಮಂದಿರಕ್ಕೂ ಬರುವ ಸೂಚನೆ ನೀಡಿದೆ.
ಈಗಾಗಲೇ ದೊಡ್ಡ ಬಜೆಟ್‌ನ ಚಿತ್ರಗಳ ಅಬ್ಬರದ ನಡುವೆ ಕನ್ನಡದ ಕೆಲವು ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಂಚರಿಸಿ ಅಲ್ಲಿನ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ. ಆ ಪೈಕಿ ರಿಷಬ್ ಶೆಟ್ಟಿ ತಮ್ಮ ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿರುವ ಶಿವಮ್ಮ ಚಿತ್ರ ಸಹ ಪ್ರಪಂಚಾದ್ಯಂತ ಸಾಕಷ್ಟು ಪ್ರಶಸ್ತಿ, ಪ್ರಶಂಸೆಯನ್ನು ಪಡೆದುಕೊಂಡಿದೆ. ಈಗಲೂ ತನ್ನ ವರ್ಲ್ಡ್ ಟೂರಿನ ಮ್ಯಾರಥಾನ್‌ಅನ್ನು ಮುಂದುವರಿಸಿದೆ.
ಜೈ ಶಂಕರ್ ಆರ್ಯರ್, ನಿರ್ದೇಶನದ ಚೊಚ್ಚಲ ಚಿತ್ರ ಶಿವಮ್ಮ ಈಗಾಗಲೇ ಸಿನಿಮೋತ್ಸಗಳಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಿಂದ ಶುರುವಾದ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದೆ. ವಿದೇಶಿಗರ ಪ್ರೀತಿಗೂ ಪಾತ್ರವಾದ ರಿಷಬ್ ಶೆಟ್ಟಿ ಫಿಲ್ಮ್ಸ್ ಸಂಸ್ಥೆಯ 'ಶಿವಮ್ಮ' ಚಿತ್ರ ತನ್ನ ಗೆಲುವಿನ ಪ್ರಯಾಣವನ್ನು ಮುಂದುವರಿಸಿದೆ.
ಶೀಘ್ರದಲ್ಲಿ ತೆರೆಗೆ
ಅಂದಹಾಗೆ, ಸರ್ಕಾರಿ ಶಾಲೆಯೊಂದರಲ್ಲಿ ಅಡುಗೆ ಕೆಲಸ ಮಾಡುವ 46 ವರ್ಷದ ಶಿವಮ್ಮ ಎನ್ನುವ ಮಹಿಳೆ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಪಾರ್ಶ್ವವಾಯು ಪೀಡಿತ ಪತಿಯ ಆರೈಕೆ ಮಾಡುತ್ತಲೇ ಮಕ್ಕಳ ಭವಿಷ್ಯಕ್ಕಾಗಿ ನಡೆಸುವ ಹೋರಾಟದ ಕಥೆಯೇ ಶಿವಮ್ಮ ಸಿನಿಮಾ. ಇದೀಗ ಇದೇ ಚಿತ್ರವನ್ನು ನಾಡಿನ ಮಂದಿಗೆ ತೋರಿಸುವ ನಿರ್ಧಾರಕ್ಕೆ ಬಂದಂತಿದೆ ಚಿತ್ರತಂಡ. ಅದರಂತೆ, ಶೀಘ್ರದಲ್ಲಿ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ. ಇನ್ನೇನು ಶೀಘ್ರದಲ್ಲಿಯೇ ಬಿಡುಗಡೆ ದಿನಾಂಕ ಹೊರಬೀಳುವ ಸಾಧ್ಯತೆ ಇದೆ.
ಶಿವಮ್ಮ ಸಿನಿಮಾ ಪಡೆದ ಪ್ರಶಸ್ತಿಗಳ ಪಟ್ಟಿ
- ನ್ಯೂ ಕರೆಂಟ್ಸ್ ಪುರಸ್ಕಾರ, ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022
- ಯಂಗ್ ಜೂರಿ ಪುರಸ್ಕಾರ, ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್, ನಾಂಟೆಸ್ 2022
- ಅತ್ಯುತ್ತಮ ನಿರ್ದೇಶಕ, ಫಾಜರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
- ಗ್ರಾಂಡ್ ಪ್ರಿಕ್ಸ್ ಅಟ್ ಜೆರ್ಕೋಲೊ
- ಹೈನಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಚೀನಾ
- ಬ್ಲಾಕ್ ಮೂವಿ , ಸ್ವಿಟ್ಜರ್ಲ್ಯಾಂಡ್
- ಫಜರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ , ಇರಾನ್
- ಗೋಥೆಂಬರ್ಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಪೀಡನ್
- ಫಿಲ್ಮ್ ಫೆಸ್ಟ್ ಮುಂಚಿಯನ್, ಮ್ಯುನಿಚ್
- ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ , ರಷ್ಯಾ
- ಇಮೆಜಿನ್ ಇಂಡಿಯಾ, ಸ್ಪೇನ್
- ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ, ಕೆನಡ
- ಇಂಡಿಯನ್ ಫಿಲ್ಮ್ ಫೆಸ್ಟಿವಲ್, ಮೆಲ್ಬೋರ್ನ್
- ಅಂಡ್ರಿ ತರ್ಕೊವ್ಸ್ಕಿ ಅಂತಾರಾಷ್ಟ್ರೀಯ ಚಿತ್ರೋತ್ಸವ , ರಷ್ಯಾ.