logo
ಕನ್ನಡ ಸುದ್ದಿ  /  ಮನರಂಜನೆ  /  ಭೈರತಿ ರಣಗಲ್‌ಗೂ ಜನುಮದ ಜೋಡಿ‌ ಚಿತ್ರಕ್ಕೂ ಇದೆ ಇಂಥದ್ದೊಂದು ನಂಟು! ಅಚ್ಚರಿ ವಿಚಾರ ರಿವೀಲ್‌ ಮಾಡಿದ ಶಿವರಾಜ್‌ಕುಮಾರ್‌

ಭೈರತಿ ರಣಗಲ್‌ಗೂ ಜನುಮದ ಜೋಡಿ‌ ಚಿತ್ರಕ್ಕೂ ಇದೆ ಇಂಥದ್ದೊಂದು ನಂಟು! ಅಚ್ಚರಿ ವಿಚಾರ ರಿವೀಲ್‌ ಮಾಡಿದ ಶಿವರಾಜ್‌ಕುಮಾರ್‌

Nov 11, 2024 03:25 PM IST

google News

ಭೈರತಿ ರಣಗಲ್‌ ಸಿನಿಮಾ ಬಗ್ಗೆ ಅಚ್ಚರಿಯ ವಿಚಾರ ತಿಳಿಸಿದ ಶಿವಣ್ಣ

    • Bhairathi Ranagal movie: ಶಿವರಾಜ್‌ಕುಮಾರ್‌ ನಾಯಕನಾಗಿ ನಟಿಸಿದ ಭೈರತಿ ರಣಗಲ್‌ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಈ ನಡುವೆ ಇದೇ ಚಿತ್ರದ ಬಿಡುಗಡೆ ಪೂರ್ವ ಇವೆಂಟ್‌ ಆಯೋಜಿಸಲಾಗಿತ್ತು. ಈ ವೇಳೆ ರಣಗಲ್‌ ಸಿನಿಮಾಕ್ಕೂ ಜನುಮದ ಜೋಡಿ ಸಿನಿಮಾಕ್ಕಿರುವ ನಂಟಿನ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. 
ಭೈರತಿ ರಣಗಲ್‌ ಸಿನಿಮಾ ಬಗ್ಗೆ ಅಚ್ಚರಿಯ ವಿಚಾರ ತಿಳಿಸಿದ ಶಿವಣ್ಣ
ಭೈರತಿ ರಣಗಲ್‌ ಸಿನಿಮಾ ಬಗ್ಗೆ ಅಚ್ಚರಿಯ ವಿಚಾರ ತಿಳಿಸಿದ ಶಿವಣ್ಣ

Bhairathi Ranagal: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಭೈರತಿ ರಣಗಲ್‌ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಕನ್ನಡ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಗಳಲ್ಲೂ ಸಿನಿಮಾ ಡಬ್‌ ಆಗಿ ತೆರೆಕಾಣಲಿದೆ. ಇನ್ನೇನು ಬಿಡುಗಡೆಗೆ ಮೂರು ದಿನ ಇದೆ ಎನ್ನುತ್ತಿದ್ದಂತೆ, ಅದ್ದೂರಿಯಾಗಿಯೇ ಪ್ರಿ ರಿಲೀಸ್‌ ಕಾರ್ಯಕ್ರಮ ಮಾಡಿಕೊಂಡಿದೆ ಭೈರತಿ ರಣಗಲ್‌ ಸಿನಿಮಾ. ಸ್ಯಾಂಡಲ್‌ವುಡ್‌ನ ಸ್ಟಾರ್‌ ಕಲಾವಿದರು, ಚಿತ್ರೋದ್ಯಮದ ಆಪ್ತರು ಈ ಇವೆಂಟ್‌ನ ಭಾಗವಾಗಿ, ಶಿವಣ್ಣನ ಸಿನಿಮಾಕ್ಕೆ ಆಲ್‌ ದಿ ಬೆಸ್ಟ್‌ ಹೇಳಿದರು.

ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ‘ಭೈರತಿ ರಣಗಲ್’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಹೊಸಕೆರೆಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ಬಹು ನಿರೀಕ್ಷಿತ ಈ ಚಿತ್ರ ನವೆಂಬರ್ 15ರಂದು ಬಿಡುಗಡೆಯಾಗುತ್ತಿದೆ. 1996ರಲ್ಲಿ ಶಿವಣ್ಣ ಅಭಿನಯದ ಸೂಪರ್ ಹಿಟ್ ಚಿತ್ರ "ಜನುಮದ ಜೋಡಿ" ಕೂಡ ನವೆಂಬರ್ 15 ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತು. ಈಗ "ಭೈರತಿ ರಣಗಲ್" ಚಿತ್ರ ಕೂಡ ಅದೇ ದಿನ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.

ಶಿವಣ್ಣ ಹೇಳಿದ್ದೇನು?

ಮಫ್ತಿ ಚಿತ್ರದ ಭೈರತಿ ರಣಗಲ್ ಪಾತ್ರವನ್ನು ತಾವು ಮೆಚ್ಚಿಕೊಂಡು ಯಶಸ್ವಿ ಮಾಡಿದ್ದೀರಿ ಎಂದು ಮಾತನಾಡಿದ ನಾಯಕ ಶಿವರಾಜಕುಮಾರ್, ಮಫ್ತಿ ಚಿತ್ರದ ಪ್ರಿಕ್ವೇಲ್ ಈ ಭೈರತಿ ರಣಗಲ್. ನಿರ್ದೇಶಕ ನರ್ತನ್ ತುಂಬಾ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಅಷ್ಟೇ ಚೆನ್ನಾಗಿ ನಿರ್ದೇಶನವನ್ನು ಮಾಡಿದ್ದಾರೆ. ಭೈರತಿ ರಣಗಲ್ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗುತ್ತಾನೆ. ನಮ್ಮ ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ ಎರಡನೇ ಚಿತ್ರವಿದು. ಅನುಭವಿ ತಂತ್ರಜ್ಞರ ಹಾಗೂ ಕಲಾವಿದರ ಸಮಾಗಮದಲ್ಲಿ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂಬುದು ಶಿವಣ್ಣನ ಮಾತು.

ಜನುಮದ ಜೋಡಿಗೂ ರಣಗಲ್‌ಗೂ ಇರುವ ನಂಟೇನು?

ಮುಂದುವರಿದು ಮಾತನಾಡುವ ಅವರು, "ನವೆಂಬರ್ 15ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಇಪ್ಪತ್ತೆಂಟು ವರ್ಷಗಳ ಹಿಂದೆ ನವೆಂಬರ್ 15ರಂದೇ ನನ್ನ ಜನುಮದ ಜೋಡಿ ಚಿತ್ರ ನರ್ತಕಿ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಅದರ ನಿರ್ದೇಶಕರು ನಾಗಾಭರಣ. ಈ ಚಿತ್ರ ಕೂಡ ನವೆಂಬರ್ 15ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗುತ್ತಿದೆ. ಇದರ ನಿರ್ದೇಶಕರು ನರ್ತನ್. ಎರಡು ಚಿತ್ರಗಳಲ್ಲೂ ನ ನ ಇದೆ. ಇದು ಕಾಕತಾಳೀಯ. ಆ ಚಿತ್ರದ ನಿರ್ಮಾಪಕರು ನನ್ನ ಅಮ್ಮ. ಈ ಚಿತ್ರದ ನಿರ್ಮಾಪಕರು ನನ್ನ ಹೆಂಡತಿ" ಎಂದರು.

ನಿರ್ದೇಶಕ ನರ್ತನ್ ಹಾಗೂ ನಿರ್ಮಾಪಕಿ ಗೀತಾ ಶಿವರಾಜಕುಮಾರ್ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದರು. ನಾಯಕಿ ರುಕ್ಮಿಣಿ ವಸಂತ್, ನಟಿ ಛಾಯಾಸಿಂಗ್, ಚಿತ್ರದಲ್ಲಿ ಅಭಿನಯಿಸಿರುವ ಅವಿನಾಶ್, ಬಾಬು ಹಿರಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ಮುಂತಾದ ಕಲಾವಿದರು, ಸಂಗೀತ ನಿರ್ದೇಶಕ ರವಿ ಬಸ್ರೂರ್, ಛಾಯಾಗ್ರಾಹಕ ನವೀನ್ ಕುಮಾರ್ ಸೇರಿದಂತೆ ಮುಂತಾದ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು.

ಸ್ಯಾಂಡಲ್‌ವುಡ್‌ ಆಪ್ತರು ಭಾಗಿ

ಡಾಲಿ ಧನಂಜಯ, ನೀನಾಸಂ ಸತೀಶ್, ವಿಜಯ ರಾಘವೇಂದ್ರ, ಸುಧಾರಾಣಿ, ಶೃತಿ, ರಕ್ಷಿತಾ ಪ್ರೇಮ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಮಾಜಿ‌ ಅಧ್ಯಕ್ಷ ಸಾ ರಾ ಗೋವಿಂದು, ನಿರ್ಮಾಪಕರಾದ ಸೂರಪ್ಪ ಬಾಬು, ಕೆ.ಪಿ.ಶ್ರೀಕಾಂತ್, ನಿರ್ದೇಶಕರಾದ ಬಹದ್ದೂರ್ ಚೇತನ್, ಪವನ್ ಒಡೆಯರ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವಾರು ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ, ತಮ್ಮ ಪ್ರೀತಿ ತುಂಬಿದ ಮಾತುಗಳಿಂದ ಭೈರತಿ ರಣಗಲ್ ಗೆ ಶುಭ ಕೋರಿದರು. ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಮಾತನಾಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ