logo
ಕನ್ನಡ ಸುದ್ದಿ  /  ಮನರಂಜನೆ  /  Friendship Day: ಕುಚಿಕು ಕುಚಿಕು ಕುಚಿಕು ಓ ಗೆಳೆಯಾ ಜೀವದ್ಗೆಳೆಯಾ, ನಿಂದು ತಾಯಿ ಪ್ರೀತಿ ಕಣೋ; ಫ್ರೆಂಡ್‌ಶಿಪ್‌ ಡೇಗೆ ಇದೇ ಸ್ನೇಹಗೀತೆ

Friendship day: ಕುಚಿಕು ಕುಚಿಕು ಕುಚಿಕು ಓ ಗೆಳೆಯಾ ಜೀವದ್ಗೆಳೆಯಾ, ನಿಂದು ತಾಯಿ ಪ್ರೀತಿ ಕಣೋ; ಫ್ರೆಂಡ್‌ಶಿಪ್‌ ಡೇಗೆ ಇದೇ ಸ್ನೇಹಗೀತೆ

Praveen Chandra B HT Kannada

Aug 04, 2024 09:52 PM IST

google News

Friendship day: ಕುಚಿಕು ಕುಚಿಕು ಕುಚಿಕು ಓ ಗೆಳೆಯಾ ಜೀವದ್ಗೆಳೆಯಾ, ನಿಂದು ತಾಯಿ ಪ್ರೀತಿ ಕಣೋ

    • August 4 friendship day: ಈ ಭಾನುವಾರ ಅಂತಾರಾಷ್ಟ್ರೀಯ ಸ್ನೇಹಿತರ ದಿನ. ಕರ್ನಾಟಕಕ್ಕೆ ನಾಡಗೀತೆ ಇರುವಂತೆ, ಭಾರತಕ್ಕೆ ರಾಷ್ಟ್ರೀಯ ಗೀತೆ ಇರುವಂತೆ ಸ್ನೇಹಿತಸ್ನೇಹಿತೆಯರಿಗೆ ಚಂದದ ಸ್ನೇಹಗೀತೆ ಯಾವುದು? ದಿಗ್ಗಜರು ಸಿನಿಮಾದ "ಕುಚಿಕು ಕುಚಿಕು ಕುಚಿಕು, ಓ ಗೆಳೆಯಾ ಜೀವದ್ಗೆಳೆಯಾ" ಹಾಡನ್ನು ಅತ್ಯುತ್ತಮ ಸ್ನೇಹಗೀತೆ ಎನ್ನಬಹುದೇ?
Friendship day: ಕುಚಿಕು ಕುಚಿಕು ಕುಚಿಕು ಓ ಗೆಳೆಯಾ ಜೀವದ್ಗೆಳೆಯಾ, ನಿಂದು ತಾಯಿ ಪ್ರೀತಿ ಕಣೋ
Friendship day: ಕುಚಿಕು ಕುಚಿಕು ಕುಚಿಕು ಓ ಗೆಳೆಯಾ ಜೀವದ್ಗೆಳೆಯಾ, ನಿಂದು ತಾಯಿ ಪ್ರೀತಿ ಕಣೋ

ಸ್ನೇಹಿತರ ದಿನ ಎಂದರೆ ಕೈಗೆ ಫ್ರೆಂಡ್‌ಶಿಪ್‌ ಬ್ಯಾಂಡ್‌ ಕಟ್ಟೋ ಸಂಭ್ರಮ. ಇನ್ನು ಕೆಲವರಿಗೆ ಬಾರೋ ಎಣ್ಣೆ ಕುಡಿಯೋಣ ಅನ್ನೋ ಸಲಿಗೆ. ಇನ್ನು ಕೆಲವರಿಗೆ ಮಚ್ಚಾ ಒಂದು ಐನೂರು ರೂಪಾಯಿ ಇದ್ರೆ ಕೊಡು ಎಂದು ಕಾಡುವ ಗೆಳೆಯರ ಕಾಟ. ಆಗಸ್ಟ್‌ ಮೊದಲ ಭಾನುವಾರ ಫ್ರೆಂಡ್‌ಶಿಪ್‌ ದಿನಕ್ಕೆ ಕನ್ನಡ ಸಿನಿಮಾ ಪ್ರೇಮಿಗಳು ಯಾವ ಕನ್ನಡ ಹಾಡನ್ನು ನೆನಪಿಸಿಕೊಳ್ಳಬಹುದು. ಕರ್ನಾಟಕಕ್ಕೆ ನಾಡಗೀತೆ ಇರುವಂತೆ, ಭಾರತಕ್ಕೆ ರಾಷ್ಟ್ರೀಯ ಗೀತೆ ಇರುವಂತೆ ಸ್ನೇಹಕ್ಕೂ ಒಂದು ಸ್ನೇಹಗೀತೆ ಬೇಡವೇ? ನನ್ನ ಪ್ರಕಾರ ದಿಗ್ಗಜರು ಸಿನಿಮಾದ ಕುಚಿಕು ಕುಚಿಕು ಹಾಡು ಕನ್ನಡದ ಅದ್ಭುತ ಸ್ನೇಹಗೀತೆ. ಇದನ್ನು ವಿರೋಧಿಸುವವರಿಗೆ ಕೊನೆಯಲ್ಲೊಂದು ಓಪನ್‌ ಚಾಲೆಂಜ್‌ ಇದೆ!

ಓ ಗೆಳೆಯಾ ಜೀವದ್ಗೆಳೆಯಾ ನಿಂಗೆ ಶಾನೆ ಕ್ವಾಪ ಕಣೋ

ದಿಗ್ಗಜರು ಸಿನಿಮಾದ ವಿಷ್ಣುವರ್ಧನ್‌ ಮತ್ತು ಅಂಬರೀಶ್‌ ಕುಚುಕು ಗೆಳೆಯರಾಗಿ ಹೆಜ್ಜೆ ಹಾಕಿದ ಈ ಹಾಡು ಮರೆಯಲುಂಟೆ. ಕರ್ನಾಟಕದ ಬಹುತೇಕ ಸ್ನೇಹಿತರು ಇದೇ ರೀತಿ ಇರ್ತಾರೆ ಅನ್ನೋ ರೀತಿಯ ಹಾಡನ್ನು ಹಂಸಲೇಖ ಬರೆದಿದ್ದಾರೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಲ್ಲಿ ಈ ಹಾಡು ಅದ್ಭುತ ಸ್ಣೇಹ ಗೀತೆಯಾಗಿದೆ. ಈ ಹಾಡನ್ನು ಸ್ನೇಹಗೀತೆ ಎಂದರೆ ಗೆಳೆಯರಿಗೆ ಇಷ್ಟವಾಗಬಹುದು. ಆದರೆ, ಗೆಳತಿಯರು "ನಮಗೆ ಈ ಹಾಡಿನಲ್ಲಿರುವ ಕೆಲವು ಸಾಲುಗಳು ಇಷ್ಟವಾಗದು. ಅವೇನಿದ್ರೂ ಗಂಡು ಹುಡುಗರಿಗೆ ಹೊಂದುತ್ತದೆ" ಅನ್ನಬಹುದು. ಈ ಫ್ರೆಂಡ್‌ಶಿಪ್‌ ಡೇಗೆ ಇದನ್ನೇ ಯೂಟ್ಯೂಬ್‌ ಅಥವಾ ಆನ್‌ಲೈನ್‌ ಮ್ಯೂಸಿಕ್‌ ಅಂಗಡಿಗಳಲ್ಲಿ ನಾನಂತೂ ಕೇಳ್ತಿನಿ.

ಓ ಗೆಳೆಯಾ ಜೀವದ್ಗೆಳೆಯಾ ನಿಂಗೆ ಶಾನೆ ಕ್ವಾಪ ಕಣೋ
ಕ್ವಾಪಕು ಒಂದು ಕೈ ಪ್ರೀತಿ ಜಾಸ್ತಿ ಕಣೋ
ಕುಚಿಕು ಕುಚಿಕು ಕುಚಿಕು ಓ ಕುಚಿಕು ಕುಚಿಕು ಕುಚಿಕು
ನೀನು ಚಡ್ಡಿ ದೋಸ್ತಿ ಕಣೋ ಕುಚಿಕು ಜೀವ ಕಿನ್ನ ಜಾಸ್ತಿ ಕಣೋ ಕುಚಿಕು
ಓ ಗೆಳೆಯಾ ಜೀವದ್ಗೆಳೆಯಾ ನಿಂಗೆ ಶಾನೆ ಕ್ವಾಪ ಕಣೋ
ಕ್ವಾಪಕು ಒಂದು ಕೈ ಪ್ರೀತಿ ಜಾಸ್ತಿ ಕಣೋ..…
ಒಯ್ಯ್ ಕುಚಿಕು ಕುಚಿಕು ಕುಚಿಕು ನಾನು ಚಡ್ಡಿ ದೋಸ್ತಿ ಕಣೋ ಕುಚುಕು
ದೋಸ್ತಿ ಮ್ಯಾಲೆ ಕ್ವಾಪ ಬ್ಯಾಡ ಕುಚಿಕು ಓ ಗೆಳೆಯಾ ಜೀವದ್ಗೆಳೆಯಾ
ನಿಂದು ತಾಯಿ ಪ್ರೀತಿ ಕಣೋ ಪ್ರೀತಿಗೂ ಒಂದು ಕೈ ದೋಸ್ತಿ ಜಾಸ್ತಿ ಕಣೋ

ಯಬ್ಬಾ, ಕೋಪಗೊಂಡ ಸ್ನೇಹಿತನ ಇಷ್ಟೊಂದು ರಮಿಸಿ ಸರಿ ಮಾಡುವ ಸೀನ್‌ ಈಗಿನ ಕಾಲದಲ್ಲಿ ಇರೋದು ಡೌಟ್‌. ವಾಟ್ಸಪ್‌ನಲ್ಲಿ ಒಂದಿಷ್ಟು ಮೆಸೆಜ್‌ ಮಾಡಿ ಸಾರಿ ಕಣೋ ಅಂದ್ರೆ ರಾಜಿಯಾಗಿ ಬಿಡಬಹುದು ಅಲ್ವೇ. ಆದ್ರೂ, ಇಂತಹ ಚಡ್ಡಿದೋಸ್ತಿ ಗೆಳೆಯರು ಪ್ರತಿಯೊಬ್ಬರಿಗೂ ಇದ್ದೇ ಇರ್ತಾರೆ ಅನ್ನೋದು ಸುಳ್ಳಲ್ಲ.

ನೆನಪೈತ ನಿಂಗೆ ಮರಕೋತಿ ಆಟ ಮರೆತೋಯ್ತ ನಿಂಗೆ ಬೆಳದಿಂಗಳೂಟ
ನೆನಸ್ಕೊಂಡ್ರೆ ಈಗ್ಲೂ ಬಾಯ್ತುಂಬ ಜೊಲ್ಲು ಕುಚಿಕು ಕುಚಿಕು ಕುಚಿಕು ಆ ಕಾಲ ಬರ್ತೈತ ಕುಚಿಕು...

ಇಂತಹ ನೆನಪು ಈಗಿನ ಕಾಲದ ಕೆಲವು ಮಕ್ಕಳಿಗೆ ಇರುವುದು ಡೌಟ್‌. ಆದ್ರೆ, ನಮ್ಮಂತಹ 1985-90 ಮಾಡೆಲ್‌ಗಳಿಗೆ ಇಂತಹ ಎಲ್ಲಾ ಅನುಭವಗಳು ಇದ್ವು. ಮರಕೋತಿ ಆಟ ಆಡೋದೇನು, ಮರದಿಂದ ಬಿದ್ದು ಕೈಕಾಲು ಮರಿದುಕೊಳ್ಳೋದೆನೋ. ಆದ್ರೆ ಬೆಳದಿಂಗಳ ಊಟ ಈಗಲೂ ಎಲ್ಲರಿಗೂ ಅನುಭವ ಇರುತ್ತದೆ. ಕೆಲವು ಹೋಟೆಲ್‌ಗಳಲ್ಲಿ ಟೇರಸ್‌ ಮೇಲೆ ಟೇಬಲ್‌ ಹಾಕಿ "ಇದೇ ನಿಮಗೆ ಬೆಳದಿಂಗಳೂಟ" ಎಂದು ಹೇಳಿ ಭರ್ಜರಿ ಬಿಲ್‌ ಕೈಗಿಡ್ತಾರೆ.

ಈಜು ಬರ್ದೇ ಹಾರಿ ಬಾವಿಗೆ ಬಿದ್ದೆ ನೀರ್ ಕುಡ್ದು ಹೆಂಗೋ ಮ್ಯಾಲಕ್ಕೆ ಎದ್ದೆ
ನೆನಸ್ಕೊಂಡ್ರೆ ಈಗ್ಲೂ ಎದೆ ತುಂಬ ದಿಗ್ಲು ಕುಚಿಕು ಕುಚಿಕು ಕುಚಿಕು ಬರವೈತ ಇದಕೆ ಕುಚಿಕು

ಫ್ರೆಂಡ್ಸ್‌ ಜತೆ ಈಜುವ ಮಜ ಈಗಲೂ ಎಲ್ಲರಿಗೂ ಇರುತ್ತದೆ. ಈಜು ಬರೋದಿಲ್ಲ ಅಂದ್ರೂ ನೀರಿಗೆ ತಳ್ಳೋರು, ಬಳಿಕ ನೀರಿಂದ ಮೇಲೆ ಎತ್ತುವವರೂ ಗೆಳೆಯರೇ. "ಒಮ್ಮೆ ಈಜು ಎಂಬ ವಿದ್ಯೆ ಕಲಿತರೆ ಜೀವನಪೂರ್ತಿ ಯಾವ ನೀರಿಗೆ ಬಿದ್ದರೂ ತೇಲಬಹುದು" ಅಂತ ಮೊನ್ನೆ ರೆಸಾರ್ಟ್‌ ನೀರಲ್ಲಿ ಪಲ್ಟಿ ಹೊಡೆಯುತ್ತ ಗೆಳೆಯ ಮಂಜ ಹೇಳಿದ್ದು ಇನ್ನೂ ನೆನಪಿದೆ.

ಅಮ್ಮನೇ ಇಲ್ಲದಾ ಕೊರಗನೇ ಮರೆಸಿದೆ ತುತ್ತಿಡೋ ಕೈಯಾದೆ
ನೀ ಹೆತ್ತ ತಾಯಿಗೂ. ಮಿಗಿಲಾದೆ
ಕಣ್ಣಿನಾ ರೆಪ್ಪೆಯಾ ಸೋಲಿಸೋ ಹಾಗೆಯೇ ನನ್ನ ನೀ ಕಾಯುವೆ
ನನ್ನ ಸೇವೆಲೇ ನೀ ಸವೆಯುವೆ
ಕುಚಿಕು ಕುಚಿಕು ಕುಚಿಕು ನೀನು ಚಡ್ಡಿ ದೋಸ್ತಿ ಕಣೋ ಕುಚಿಕು,
ಜೀವ ಕಿನ್ನ ಜಾಸ್ತಿ ಕಣೋ ಕುಚಿಕು

ನಿಂಗಾಗಿ ಕವಡೆ ಕೊಂಡಿದ್ದು ಕಾಣೆ ಕಣ್ತುಂಬ ನಿದ್ದೆ ಮಾಡಿದ್ದು ಕಾಣೆ
ನಂಗಾಗಿ ಎಲ್ಲ ನಿಂಗೇನೂ ಇಲ್ಲ ಯಾರೋ ಯಾರೋ ನೀನು
ಯಾವ ಜನ್ಮದ ಮಗನೋ ನೀನು
ನಿನ್ನ ಕಣ್ಣ ಮುಂದೆ ನಾನು ಜಲ್ದಿ ಸತ್ತು ಮುಂದೆ ನಿನ್ನ
ಜೀತ ದಾಳಾಗಿ ಹುಟ್ಟಿ ಹೊತ್ತು ತಿರುಗುತೀನಿ
ಋಣ ಮುಟಿಸುತೀನಿ ಗೆಳೆಯ ಕುಚಿಕು ಗೆಳೆಯ
ಆಗ ನೀನು ಒಡೆಯ ನಾನು ಗೆಳೆಯ


ನೆರಳಿಡೋ ಮರವಿದೂ ಮುಳ್ಳಿನಾ ಜನ್ಮವ ಬೇಡಲೇ ...
ಬಾರ್ದಯ್ಯ ಮರ ಮರವನೆ ಮರಿ ಬಾರ್ದಯ್ಯ
ಒಬ್ಬನೇ ಪುಣ್ಯವ ಒಯ್ದರೇ ಹೆಂಗಯ್ಯ ನಾನುವೇ ಮನ್ಸನು
ಒಸಿ ನಂಗೂನೂ ಕುಸಿ ಉಳ್ಸಯ್ಯ
ಕುಚಿಕು ಕುಚಿಕು ಕುಚಿಕು ಕುಚಿಕು ಕುಚಿಕು ಕುಚಿಕು
ನಾನು ಚಡ್ಡಿ ದೋಸ್ತಿ ಕಣೋ ಕುಚಿಕು ದೋಸ್ತಿ ಮ್ಯಾಲೆ ಕ್ವಾಪ ಬೇಡ ಕುಚಿಕು
ಓ ಗೆಳೆಯಾ ಜೀವದ್ಗೆಳೆಯಾ ನಿಂದು ತಾಯಿ ಪ್ರೀತಿ ಕಣೋ
ಪ್ರೀತಿಗೂ ಒಂದು ಕೈ ದೋಸ್ತಿ ಜಾಸ್ತಿ ಕಣೋ

ಏನಂತೀರಾ? ಈ ಹಾಡನ್ನು ಸ್ನೇಹಗೀತೆ ಎಂದು ಒಪ್ತಿರಾ? ಅಥವಾ ಇದಕ್ಕಿಂತಲೂ ಚಂದದ ಸ್ನೇಹಗೀತೆ ಬಗ್ಗೆ ನಮಗೊಂದು ಲೇಖನ ಬರೆದು ಕಳಿಸ್ತೀರಾ? ಸ್ನೇಹಿತರ ದಿನಕ್ಕೆ ಯಾವುದೇ ಬಗೆಯ ನಿಮ್ಮ ಚಂದದ ಬರಹಗಳನ್ನು ht.kannada@htdigital.in‌ ಇಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ