ಫ್ರೆಂಡ್‌ಶಿಪ್ ಡೇಯಂದು ನಿಮ್ಮ ಫ್ರೆಂಡ್‌ಗೆ ಸ್ಪೆಷಲ್ ಗಿಫ್ಟ್ ನೀಡುವ ಮೂಲಕ ಸರ್ಪ್ರೈಸ್ ಕೊಡಬೇಕಾ? ನಿಮಗಾಗಿ ಈ 5 ಐಡಿಯಾಗಳು
Friendship Day DIY Gift Ideas: ಸ್ನೇಹಿತರ ದಿನ ಹತ್ತಿರದಲ್ಲೇ ಇದೆ. ಈ ವರ್ಷದ ಫ್ರೆಂಡ್‌ಶಿಪ್ ಡೇಯಂದು ನಿಮ್ಮ ಫ್ರೆಂಡ್‌ಗೆ ಸ್ಪೆಷಲ್ ಗಿಫ್ಟ್ ನೀಡುವ ಮೂಲಕ ಅವರ ಮುಖದಲ್ಲಿ ನಗು ಅರಳುವಂತೆ ಮಾಡಬೇಕಾ? ಹಾಗಾದ್ರೆ ನೀವೇ ನಿಮ್ಮ ಕೈಯಾರ ವಿಶೇಷ ಗಿಫ್ಟ್ ತಯಾರಿಸಿ, ಅವರಿಗೆ ಸರ್ಪ್ರೈಸ್ ನೀಡಿ. ನಿಮಗಾಗಿ ಇಲ್ಲಿದೆ ಕೆಲವು ಐಡಿಯಾಗಳು.
ಸ್ನೇಹಿತರು ಇಲ್ಲ ಅಂದ್ರೆ ಜೀವನ ಎಲೆಗಳಿಲ್ಲದ ಮರದಂತೆ, ಮೋಡ ಕವಿದ ಆಕಾಶದಂತೆ. ಸ್ನೇಹಿತರೆಂಬ ಬಂಧುಗಳು ನಮ್ಮ ಬದುಕೆಂಬ ಪುಟಕ್ಕೆ ವರ್ಣರಂಜಿತ ಬಣ್ಣ ತುಂಬುತ್ತಾರೆ. ನಮ್ಮೆಲ್ಲಾ ಹುಚ್ಚುತನಕ್ಕೆ ಜೊತೆಯಾಗುವ ಜೀವಗಳೆಂದರೆ ಎಂದರೆ ಅದು ಸ್ನೇಹಿತರು ಮಾತ್ರ. 2024ರ ಸ್ನೇಹಿತರ ದಿನ ಹತ್ತಿರದಲ್ಲೇ ಇದೆ. ಈ ವರ್ಷದ ಸ್ನೇಹಿತರ ದಿನವನ್ನು ವಿಶೇಷವಾಗಿ ಆಚರಿಸಬೇಕು ಎಂದು ನೀವು ಬಯಸುತ್ತಿದ್ದರೆ ನಿಮ್ಮ ಸ್ನೇಹಿತರಿಗಾಗಿ ನೀವು ನಿಮ್ಮ ಕೈಯಾರೆ ವಿಶೇಷ ಉಡುಗೊರೆಗಳನ್ನು ತಯಾರಿಸಿ. ಈ ಅಪರೂಪದ ದಿನವನ್ನು ಅವಿಸ್ಮರಣೀಯವನ್ನಾಗಿಸಿ.
ಈ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರ ಆಗಸ್ಟ್ 4ರಂದು ಬಂದಿದೆ. ಈ ದಿನ ಭಾರತದಲ್ಲಿ ಫ್ರೆಂಡ್‌ಶಿಪ್ ಡೇ ಆಚರಿಸಲಾಗುತ್ತದೆ. ಈ ದಿನದಂದು ನಿಮ್ಮ ಸ್ನೇಹಿತರಿಗೆ ವಿಶೇಷ ಉಡುಗೊರೆ ನೀಡಲು ಈ ಐಡಿಯಾಗಳನ್ನು ಪರಿಗಣಿಸಿ.
ಮನಮೋಹಕ ಪಿಕ್ಚರ್ ಕೊಲಾಜ್
ತಮ್ಮ ಬದುಕಿನ ಅದ್ಭುತ ಕ್ಷಣಗಳನ್ನು ಕಣ್ಮುಂದೆ ತೆರೆದಿಟ್ಟರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ನೀವು ನಿಮ್ಮ ಆತ್ಮೀಯ ಸ್ನೇಹಿತರ ಬದುಕಿನ ಅದ್ಭುತ ಕ್ಷಣಗಳ ಚಿತ್ರವನ್ನು ಸಂಗ್ರಹಿಸಿ. ಇದರಿಂದ ಪಿಕ್ಚರ್ ಕೊಲಾಜ್ ಮಾಡಿ. ಮರದ ಹಲಗೆಗಳಿಂದ ಒಂದು ಸುಂದರ ಫ್ರೇಮ್ ಮಾಡಿ. ಅದಕ್ಕೆ ಥಾರ್ಮಾ ಕೂಲ್ ಅಂಟಿಸಿ. ಇದರ ಮೇಲೆ ಫೋಟೊಗಳನ್ನು ಕೊಲಾಜ್ ರೂಪದಲ್ಲಿ ಜೋಡಿಸಿ. ಕೊನೆಯಲ್ಲಿ ಸಂದೇಶ ಬರೆದು ಅಂಟಿಸಿ. ಈ ಗಿಫ್ಟ್ ನಿಮ್ಮ ಸ್ನೇಹಿತರಿಗೆ ವಿಶೇಷ ಅನ್ನಿಸದಿದ್ದರೆ ಕೇಳಿ.
ಚಾಕೊಲೇಟ್ ಬಾಕ್ಸ್
ಬಹುತೇಕರು ಚಾಕೊಲೇಟ್ ಇಷ್ಟಪಡುತ್ತಾರೆ. ನಿಮ್ಮ ಫ್ರೆಂಡ್ ಕೂಡ ಚಾಕೊಲೇಟ್ ಪ್ರೇಮಿಯಾಗಿದ್ದರೆ ವಿವಿಧ ಬಗೆಯ ಚಾಕೊಲೇಟ್ ಇರುವ ಬಾಕ್ಸ್ ಅನ್ನು ಗಿಫ್ಟ್ ಆಗಿ ನೀಡಬಹುದು. ಇದನ್ನು ಮಾರುಕಟ್ಟೆಯಿಂದ ತರುವ ಬದಲು ಮನೆಯಲ್ಲೇ ಕಸ್ಟಮೈಸ್ಡ್ ಮಾಡಿ ಸ್ಪೆಷಲ್ ಗ್ರೀಟಿಂಗ್ಸ್‌ಗಳನ್ನು ಬರೆದು ನೀಡಬಹುದು. ನೀವು ಸ್ನೇಹಿತ ಅಥವಾ ಸ್ನೇಹಿತೆಗಾಗಿ ಬರೆಯುವ ಸಂದೇಶಗಳು ಚಾಕೊಲೇಟ್‌ಗಿಂತ ಸ್ವೀಟ್ ಆಗಿರಬೇಕು ನೆನಪಿರಲಿ.
ವಾಲ್ ಆರ್ಟ್
ವಾಲ್ ಆರ್ಟ್‌ಗಳು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಕುಂಚಗಳು ಹಾಗೂ ಬಣ್ಣಗಳ ಮೂಲಕ ನಿಮ್ಮ ಸ್ನೇಹಿತ/ ಸ್ನೇಹಿತೆಯನ್ನು ಸೆಳೆಯುವ ಪ್ರಯತ್ನ ಮಾಡಿ. ಅವರಿಗೆ ನೀವೇ ನಿಮಗೆ ತಿಳಿದಂತೆ ಚೆಂದದ ಸ್ಕೆಚ್ ಮಾಡಿ ಗಿಫ್ಟ್ ನೀಡಿ. ನಿಮ್ಮ ಸ್ನೇಹವನ್ನು ಪ್ರತಿನಿಧಿಸುವ ಅಂಶವನ್ನು ಕುಂಚಗಳಿಂದ ಜೀವ ತುಂಬಿ. ಇದು ಕೂಡ ಖಂಡಿತ ನಿಮ್ಮ ಸ್ನೇಹಿತರಿಗೆ ಸ್ಪೆಷಲ್ ಗಿಫ್ಟ್ ಎನ್ನಿಸುತ್ತದೆ.
ಮನೆಯಲ್ಲಿ ತಯಾರಿಸಿ ಸ್ಪೆಷಲ್ ತಿನಿಸು
ಕೇಕ್, ಕುಕ್ಕೀಸ್, ಪಾಸ್ತಾ, ಬಿರಿಯಾನಿ ಈ ತಿಂಡಿಗಳು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಇದು ಇಷ್ಟವಾಗಿಲ್ಲ ಅಂದ್ರೆ ಪರ್ವಾಗಿಲ್ಲ. ನಿಮ್ಮ ಸ್ನೇಹಿತರಿಗೆ ಯಾವ ತಿಂಡಿ ಇಷ್ಟ ಆಗುತ್ತೆ ಅಂತ ತಿಳಿದು ಅದನ್ನ ನಿಮ್ಮ ಕೈಯಾರೆ ಮಾಡಿಕೊಂಡು ಹೋಗಿ ನೀಡಿ. ಅವರಿಷ್ಟದ ತಿಂಡಿಯನ್ನು ನಿಮ್ಮ ಕೈಯಾರೆ ನೀವು ಮಾಡಿರುವುದು ನೋಡಿ ಅವರು ಫಿದಾ ಆಗೋದು ಪಕ್ಕಾ.
ಸ್ಕ್ರ್ಯಾಪ್‌ಬುಕ್
ನಿಮ್ಮದು ದೀರ್ಘಕಾಲದ ಫ್ರೆಂಡ್‌ಶಿಪ್ ಆಗಿದ್ದರೆ ನೀವು ನಿಮ್ಮ ಸ್ನೇಹಿತ ಬಹುಕ್ಷಣಗಳ ನೆನಪಿಸುವ ಪದಗಳನ್ನು ಸ್ಕ್ರ್ಯಾಪ್‌ಬುಕ್‌ನಲ್ಲಿ ಬರೆದು ಸ್ನೇಹಿತ/ಸ್ನೇಹಿತೆಗೆ ನೀಡಬಹುದು. ನಿಮ್ಮಬ್ಬರಿಗೂ ಇಷ್ಟವಾಗುವ ಫೋಟೊಗಳನ್ನು ಕೂಡ ಅಲ್ಲಲ್ಲಿ ಅಂಟಿಸಿ. ನಿಮ್ಮ ಅದ್ಭುತ ಸ್ನೇಹದ ಬಗ್ಗೆ ಮನದ ಭಾವನೆಗಳನ್ನು ಅದರಲ್ಲಿ ಬರೆಯಿರಿ.
ಈ ಐಡಿಯಾಗಳು ನಿಮಗೆ ಸಿಲ್ಲಿ ಅನ್ನಿಸಬಹುದು. ಆದರೆ ಇದನ್ನು ಈ ಸಲ ಟ್ರೈ ಮಾಡಿ ನೋಡಿ. ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆಗೆ ಇದು ಇಷ್ಟ ಆಗಿಲ್ಲ ಅಂದ್ರೆ ಮತ್ತೆ ಕೇಳಿ. ಈ ವಿಶೇಷ ಉಡುಗೊರೆಗಳ ಮೂಲಕ ನೀವು ನಿಮ್ಮ ಸ್ನೇಹಿತರಿಗೆ ಈ ವರ್ಷದ ಫ್ರೆಂಡ್‌ಶಿಪ್ ಡೇ ವಿಶೇಷ ಎನ್ನಿಸುವಂತೆ ಮಾಡಬಹುದು.