ಬರೀ ರೋಪ್ ವೇ ಮಾತ್ರವಲ್ಲ ಈ ಕನಸನ್ನೂ ಶಂಕರ್‌ನಾಗ್ ಆವತ್ತೇ ಕಂಡಿದ್ದರು, ಆದರೆ.. ; ಹಳೇ ಮಾತುಕತೆ ನೆನೆದ ರವಿಚಂದ್ರನ್
Sep 03, 2023 12:27 PM IST
ಬರೀ ರೋಪ್ ವೇ ಮಾತ್ರವಲ್ಲ ಈ ಕನಸನ್ನೂ ಶಂಕರ್‌ನಾಗ್ ಆವತ್ತೇ ಕಂಡಿದ್ದರು, ಆದರೆ..; ಹಳೆಯದನ್ನು ನೆನೆದ ರವಿಚಂದ್ರನ್
- ಕ್ರೇಜಿಸ್ಟಾರ್ ರವಿಚಂದ್ರನ್ ಶಂಕರ್‌ನಾಗ್ ಬಗ್ಗೆ ಮಾತನಾಡಿದ್ದಾರೆ. ಟೈಮ್‌ಗೆ ಶಂಕರ್ ಎಷ್ಟು ಮಹತ್ವ ಕೊಡುತ್ತಿದ್ದರು, ನಂದಿ ಹಿಲ್ಸ್‌ಗೆ ರೋಪ್ ವೇ ಹೊರತುಪಡಿಸಿ ಬೇರೆ ಬೇರೆ ಕನಸುಗಳನ್ನೂ ಶಂಕರ್‌ನಾಗ್ ಆವತ್ತೇ ಕಂಡಿದ್ದರು. ಇಂದಿಗೆ ನಮ್ಮೊಂದಿಗೆ ಅವರಿದ್ದಿದ್ದರೆ, ಬೆಂಗಳೂರು ಬೇರೆಯದ್ದೇ ಆಗಿರುತ್ತಿತ್ತು ಎಂದು ನೆನಪು ಮಾಡಿಕೊಂಡಿದ್ದಾರೆ.
Shankar Nag: ಸ್ಯಾಂಡಲ್‌ವುಡ್ ನಟ ಶಂಕರ್‌ನಾಗ್ ಇಲ್ಲವಾಗಿ ಮೂರು ದಶಕಗಳೇ ಕಳೆದಿರಬಹುದು. ಆದರೆ, ಇಂದಿಗೂ ಅವರ ಕೆಲಸ ಮಾತನಾಡುತ್ತಿದೆ. ಸಿನಿಮಾ ಮೇಲಿನ ಅವರ ವ್ಯಾಮೋಹ ಇಂದಿಗೂ ಅವರ ಅಪಾರ ಅಭಿಮಾನಿಗಳಿಗೆ ಸ್ಫೂರ್ತಿ. ಅವರನ್ನೇ ನೋಡಿಕೊಂಡು ಬೆಳೆದ ಎಷ್ಟೋ ಮಂದಿ ಇಂದು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರ ಆಪ್ತರು ಅವರ ಕನಸುಗಳನ್ನು ಆಗಾಗ ನೆನಪಿನ ರೂಪದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಶಂಕರ್‌ನಾಗ್ ಬಗ್ಗೆ ಮಾತನಾಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಪ್ರಸಾರವಾದ ಭರ್ಜರಿ ಬ್ಯಾಚುಲರ್ ಶೋದಲ್ಲಿ ಗಿಲ್ಲಿ ನಟ, ಶಂಕರ್‌ನಾಗ್ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿದರು. ಬಗೆ ಬಗೆ ಮಿಮಿಕ್ರಿಯನ್ನೂ ಮಾಡಿದರು. ಅದನ್ನು ನೋಡಿದ ರವಿಚಂದ್ರನ್, ಶಂಕರ್‌ನಾಗ್ ಮತ್ತು ಅವರ ಲೈಫ್‌ಸ್ಟೈಲ್ ಹೇಗಿತ್ತು ಎಂಬುದನ್ನು ಮೆಲುಕು ಹಾಕಿದ್ದಾರೆ. ಇಂದು ನಮ್ಮ ನಡುವೆ ಅವರು ಇದ್ದಿದ್ದರೆ, ಬೆಂಗಳೂರಿನ ಚಿತ್ರಣವೇ ಬೇರೆಯಾಗುತ್ತಿತ್ತು ಎಂದಿದ್ದಾರೆ. ಇಲ್ಲಿದೆ ನೋಡಿ ರವಿಚಂದ್ರನ್ ಆಡಿದ ಪೂರ್ತಿ ಮಾತು.
ಟೈಮ್ ಅಂದ್ರೆ ಶಂಕರ್‌ನಾಗ್..
"ತುಂಬ ಒಳ್ಳೆಯವರನ್ನು ದೇವರು ಬೇಗ ಕರೆಸಿಕೊಂಡು ಬಿಡ್ತಾನೆ ಅನ್ನೋದಕ್ಕೆ ಶಂಕರ್‌ನಾಗ್ ಸಾಕ್ಷಿ. ನಾನು ಶಂಕರ್‌ನಾಗ್ ಬಗ್ಗೆ ಮಾತನಾಡಲೇಬೇಕು. ಶಂಕರ್‌ನಾಗ್ ಅಂದ್ರೆ ನಾನು ಟೈಮ್ ಎಂದು ಹೇಳುತ್ತಿದ್ದೆ. ಅವರೇನು ಒಂದಷ್ಟು ವರ್ಷ ಬದುಕಿದ್ದರೋ, ಅದರ ಡಬಲ್ ಆಯಸ್ಸು ಅವರು ಬದುಕಿದ್ದರು. ಅವರು ಯಾವತ್ತೂ ಬೇಕಾಬಿಟ್ಟಿ ಮಾತು, ಬೇಡದಿರೋ ಮಾತು ಆಡುತ್ತಲೇ ಇರಲಿಲ್ಲ. ಬೇಡದವರ ಜತೆ ಕೂತು ಮಾತನಾಡುವುದನ್ನು ಮಾಡುತ್ತಲೇ ಇರಲಿಲ್ಲ. ಇನ್ನೊಬ್ಬರ ಬಗ್ಗೆಯೂ ಅವರು ಯಾವತ್ತು ಮಾತನಾಡಿದ್ದನ್ನು ನಾನು ನೋಡಿಲ್ಲ"
ನನ್ನ ನಿರ್ದೇಶನದ ಸಿನಿಮಾದಲ್ಲಿ ಅವರು ನಟಿಸಿದ್ದರು
“ಶೂಟಿಂಗ್‌ನಲ್ಲಿ ಅರ್ಧಗಂಟೆ ಗ್ಯಾಪ್ ಇಂದೆ ಎಂದಾದರೆ, ನಿರ್ದೇಶಕರ ಬಳಿ ಕೇಳೋರು, ಇಲ್ಲ ಎಂದಾದರೆ, ಗಾಡಿ ತೆಗೊಂಡು ಹೋಗಿ ತಮ್ಮ ಕೆಲಸ ಮುಗಿಸಿಕೊಂಡು, ಮತ್ತೆ ಸರಿಯಾದ ಸಮಯಕ್ಕೆ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದರು. ಅವರ ಜತೆ ನಾನೂ ನಟಿಸಿದ್ದೇನೆ. ಅದು ನನ್ನ ಅದೃಷ್ಟ. ನನ್ನ ನಿರ್ದೇಶನದಲ್ಲಿ ಅವರು ನಟಿಸಿದ್ದರು. ಸುಂದರ ಲೋಕ ಅಂತ ಒಂದು ಸಿನಿಮಾ ಮಾಡಿದ್ದೆ. ಅದು ಬರಲಿಲ್ಲ. ಎಲ್ಲೇ ಸಿಕ್ಕರೂ ನನ್ನನ್ನು ತುಂಬ ಚೆನ್ನಾಗಿ ಮಾತನಾಡಿಸೋರು. ನಾನಂದ್ರೆ ತುಂಬ ಇಷ್ಟ ಅವರಿಗೆ”
ಕೆಲಸದ ವಿಚಾರದಲ್ಲಿ ತುಂಬ ಸ್ಟ್ರಿಕ್ಟ್..
“ಯುದ್ಧಕಾಂಡ ಸಿನಿಮಾಕ್ಕೆ ಕೆ.ವಿ ರಾಜು ಅವರನ್ನು ಹಾಕಿಕೊಂಡು ಸಿನಿಮಾ ಮಾಡು ಎಂದು ಆವತ್ತು ಶಂಕರ್‌ನಾಗ್ ನನಗೆ ಸಲಹೆ ನೀಡಿದ್ದರು. ಅವರ ಮಾತಿನಂತೆ ಕೆ.ವಿ ರಾಜು ಯುದ್ಧಕಾಂಡ ನಿರ್ದೇಶನ ಮಾಡಿದ್ದರು. ಸಿನಿಮಾ ಸೂಪರ್ ಹಿಟ್ ಆಯ್ತು. ಅವರನ್ನು ಅರ್ಥ ಮಾಡಿಕೊಳ್ಳಬೇಕು ಅದು ಹೇಗೆಂದರೆ, ಶನಿವಾರ ಸಂಜೆ ಆರುಗಂಟೆಗೆ ಅವರ ಮೈಂಡ್ ಸ್ವಿಚ್ ಆಫ್ ಆಗಿರುತ್ತಿತ್ತು. ಅವತ್ತಿನಿಂದ ಭಾನುವಾರ ಇಡೀ ದಿನ ರಜೆ ಮಾಡೋರು. ಸೋಮವಾರ ಕೆಲಸ ಶುರು ಮಾಡಿದ್ರೆ, ಮತ್ತೆ ಶನಿವಾರದ ವರೆಗೂ ಮುಂದುವರಿಯುತ್ತಿತ್ತು”
30 ಸಾವಿರಕ್ಕೆ ಮನೆ ನಿರ್ಮಾಣದ ಕನಸು ಕಂಡಿದ್ರು..
“ಅವರೇನಾದ್ರೂ ನಮ್ಮ ನಡುವೆ ಇಂದು ಇದ್ದಿದ್ದರೆ, ಬೆಂಗಳೂರನ್ನು ಹಬ್ಬ ಹಬ್ಬ ಮಾಡಿರೋರು. ಆವತ್ತೇ ನಂದಿ ಹಿಲ್ಸ್‌ನಲ್ಲಿ ಕೇಬಲ್ ಕಾರ್ ಹಾಕಬೇಕು ಅನ್ನೋ ಕನಸು ಕಂಡಿದ್ದರು. ಆ ಬಗ್ಗೆ ನನ್ನ ಜತೆಗೆ ಚರ್ಚೆ ಮಾಡಿದ್ದರು. ಆಗಿನ ಕಾಲದಲ್ಲಿ 30 ಸಾವಿರದಲ್ಲಿ ಚಿಕ್ಕ ಚಿಕ್ಕ ಮನೆ ಮಾಡುವ ಅಮೆರಿಕಾದ ಪ್ಲಾನ್ ಬಗ್ಗೆಯೂ ಚಿಂತಿಸಿದ್ದರು. ಸ್ವತಃ ನನ್ನನ್ನೇ ಕರೆದೊಯ್ದು ಥರ್ಮಾಕೋಲ್‌ನ ಮನೆ ತೋರಿಸಿದ್ದರು. ಎರಡೇ ದಿನದಲ್ಲಿ ಮನೆ ಕಟ್ಟಿಸಬಹುದಿತ್ತು. ಬಡವರಿಗೆ ಇಂಥ ಮನೆ ಕಟ್ಟಿಸಬೇಕು ಎಂದು ಆವತ್ತೇ ನಿರ್ಧರಿಸಿದ್ದರು. ಅವರಿಂದ ಕಲಿಯಬೇಕಾಗಿದ್ದು ಬಹಳ ಇತ್ತು. ಗಡಿಯಾರ ಅಂದ್ರೆ ಶಂಕರ್‌ನಾಗ್” ಎಂದು ರವಿಚಂದ್ರನ್ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಮನರಂಜನೆ ಕುರಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ