Kaatera 25 Days: ಉರಿವವರು ಉರಿಯಲಿ, ಕುದಿವವರು ಕುದಿಯಲಿ, ತಾಳ್ಮೆಯಿಂದ ಇದ್ದೇನೆ, ಹಾಗೇ ಇರ್ತಿನಿ; ದರ್ಶನ್
Jan 27, 2024 02:04 PM IST
Kaatera 25 Days: ಉರಿವವರು ಉರಿಯಲಿ, ಕುದಿವವರು ಕುದಿಯಲಿ, ತಾಳ್ಮೆಯಿಂದ ಇದ್ದೇನೆ, ಹಾಗೇ ಇರ್ತಿನಿ; ದರ್ಶನ್
- ಕಾಟೇರ ಸಿನಿಮಾ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿ, 50ನೇ ದಿನದತ್ತ ಸಾಗುತ್ತಿದೆ. ಈ ನಡುವೆ ಮಂಡ್ಯದ ಪಾಂಡವಪುರದಲ್ಲಿ ಇದೇ ಖುಷಿಯ ನೆಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ದರ್ಶನ್‌ಗೆ ಭೂಮಿ ಪುತ್ರ ಎಂಬ ಬಿರುದು ನೀಡಲಾಯ್ತು. ಬಳಿಕ ಮಾತನಾಡಿದ ದರ್ಶನ್ ತಮ್ಮಲ್ಲಿನ ತಾಳ್ಮೆಯ ಬಗ್ಗೆ ಎಲ್ಲರ ಮುಂದೆ ಹೀಗೆ ಹೇಳಿಕೊಂಡಿದ್ದಾರೆ.
Kaatera 25 Days: ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಕನ್ನಡದ ಸಿನಿಮಾ ಕಾಟೇರ. ಕಳೆದ ವರ್ಷದ ಡಿ. 29ರಂದು ಬರೀ ಕರ್ನಾಟಕದಲ್ಲಷ್ಟೇ ಬಿಡುಗಡೆಯಾಗಿ, ಅಲ್ಲಿಂದ ಯಶಸ್ಸಿನ ಅಲೆಯಲ್ಲಿ ವಿದೇಶಕ್ಕೂ ತೆರಳಿತ್ತು ಕಾಟೇರ ಸಿನಿಮಾ. ಗಳಿಕೆಯಲ್ಲಿ 200 ಪ್ಲಸ್ ಕೋಟಿ ಬಾಚಿಕೊಂಡ ಈ ಚಿತ್ರವನ್ನು ಕನ್ನಡಿಗರು ಬಹುಪರಾಕ್ ಹೇಳಿ ಮೆರೆಸಿದರು. ಇದೀಗ ಇದೇ ಸಿನಿಮಾ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿ 50ನೇ ದಿನದತ್ತ ಕಾಲಿರಿಸಿದೆ. ಈ ಸಕ್ಸಸ್ ಯಾತ್ರೆಯನ್ನು ರೈತರ ಸಮ್ಮುಖದಲ್ಲಿಯೇ ಆಚರಿಸಿಕೊಂಡಿದೆ ಕಾಟೇರ ಬಳಗ.
ಜ. 26ರಂದು ಮಂಡ್ಯ ಜಿಲ್ಲೆ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಕಾಟೇರ ತಂಡಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು. ಇದೇ ವೇಳೆ ನಟ ದರ್ಶನ್‌ಗೆ ಭೂಮಿ ಪುತ್ರ ಎಂಬ ಬಿರುದನ್ನೂ ನೀಡಿ ಗೌರವಿಸಲಾಯ್ತು. ಅದ್ಧೂರಿ ವೇದಿಕೆ ಮೇಲೆ ಕಾಟೇರ ಸಿನಿಮಾದ ಹಾಡುಗಳಿಗೆ ಸಿನಿಮಾ ಕಲಾವಿದರಷ್ಟೇ ಅಲ್ಲದೆ, ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಸಹ ಹೆಜ್ಜೆ ಹಾಕಿದರು. ಬಳಿಕ ಸಿನಿಮಾ ಬಗ್ಗೆ ಮತ್ತು ಅದರಲ್ಲಿ ಹೇಳಿದ ರೈತಪರ ಕಾಳಜಿ ಬಗ್ಗೆಯೂ ಎಲ್ಲರೂ ಮಾತನಾಡಿದರು.
ದರ್ಶನ್ ಮೈಕ್ ಹಿಡಿದು ವೇದಿಕೆಗೆ ಬರುವುದಕ್ಕೂ ಮುನ್ನ, ಉರಿವವರು ಉರಿಯಲಿ ಬಿಡು.. ಕುದಿವವರು ಕುದಿಯಲಿ ಬಿಡು.. ಮೆರೆವವರು ಮೆರೆಯಲಿ ಬಿಡು.. ಉರಿವವರು ಬೂದಿಯಾಗಿ ಹೋಗುತ್ತಾರೆ.. ಕುದಿವವರು ಹಾವಿಯಾಗಿ ಹೋಗುತ್ತಾರೆ.. ಮೆರೆವವರು ಬೇಗ ಮರೆಯಾಗಿ ಹೋಗುತ್ತಾರೆ. ನಿಶ್ಕಲ್ಮಷವಾದ ಕಾಯಕವಷ್ಟೇ ನಿಮ್ಮನ್ನು ಕಾಯುವುದು" ಎಂದು ಕಲಾತಂಡದವರು ವೇದಿಕೆ ಮೇಲೆ ಹೇಳಿದರು. ಈ ಮಾತನ್ನೇ ದರ್ಶನ್ ಪುನರ್ ಉಚ್ಛರಿಸಿದ್ದಾರೆ.
ದರ್ಶನ್ ಮಾತನಾಡಿದ್ದೇನು?
"ತುಂಬ ಒಳ್ಳೆಯ ಪದ ಹೇಳಿದ್ರಿ.. ಉರಿವವರು ಉರಿಯಲಿ, ಬೈಯುವವರು ಬೈಯಲಿ.. ದರ್ಶನ್ ನೀನು ಹೀಗೆ ಇರು. ಖಂಡಿತ ಸರ್. ಇವತ್ತು ತುಂಬ ತಾಳ್ಮೆಯಿಂದ ಇದ್ದೇನೆ. ತಾಳ್ಮೆ ತುಂಬ ಕಲಿಸ್ತಿದೆ. ಯಾರು ಏನೇ ಅಂದುಕೊಂಡರೂ, ಏನೇ ಮಾಡಿಕೊಂಡರೂ, ಎದೆಯಲ್ಲಿರೋ ಸೆಲೆಬ್ರಿಟಿಗಳು ಸಾಕು ನಂಗೆ, ಬೇರೆ ಯಾರೂ ಬೇಡ ನಂಗೆ.. ಹರಸಿ ಬೆಳೆಸಿ, ದರ್ಶನ್‌ರನ್ನು ಇನ್ನಷ್ಟು ಎತ್ತರಕ್ಕೆ ಎತ್ತುಕೊಂಡು ಹೋಗ್ರಿ. ಅವರು ಹೇಳಲ್ಲ ಮಾಡಿತೋರಿಸ್ತಾರೆ. ದಯವಿಟ್ಟು ರೈತರ ಸಂಘಕ್ಕೆ ಯಾರೂ ಕೈ ಕೊಡಬೇಡಿ. ರೈತರ ಸಂಘ ಹಿಡಿದುಕೊಳ್ಳಿ. ಸುಮ್ಮನೆ ನಾವು ಡೈಲಾಗ್ ಬರಿಯಲ್ಲ ಸ್ವಾಮಿ. ಅನ್ನನಾ ದ್ಯಾವ್ರೂ ಅಂತೀವಿ, ಆ ದ್ಯಾವ್ರನ್ನ ಸೃಷ್ಟಿ ಮಾಡೋ ಅಧಿಕಾರ ಇರೋದು ಅವನೊಬ್ಬನಿಗೆ. ಅವನು ನೇಗಿಲು ಹಿಡಿಯಲ್ಲ, ಎತ್ತು ಕಟ್ಟಲ್ಲ ಅಂದ್ರೆ ನಾವು ಮಣ್ಣು ತಿನ್ನಬೇಕಾಗುತ್ತೇ ಅಷ್ಟೇ" ಎಂದಿದ್ದಾರೆ ದರ್ಶನ್.
ರೈತ ಸಂಘದಿಂದ ಭೂಮಿ ಪುತ್ರ ಬಿರುದು
ಇನ್ನು ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಟ ದರ್ಶನ್ ಅವರಿಗೆ ವಿಶೇಷ ಸನ್ಮಾನ ಮಾಡಲಾಯ್ತು. ಇದೇ ವೇಳೆ ನಟ ದರ್ಶನ್‌ಗೆ ಭೂಮಿ ಪುತ್ರ ಬಿರುದನ್ನೂ ನೀಡಿ ಗೌರವಿಸಲಾಯ್ತು.