Adipurush: ಕನ್ನಡದ ಕುರುಕ್ಷೇತ್ರ ಚಿತ್ರವನ್ನು ಬಾಹುಬಲಿಗೆ ಹೋಲಿಸಿದ್ದ ಪ್ರಭಾಸ್ ಅಭಿಮಾನಿಗಳು; ಕರ್ಮ ರಿಟರ್ನ್ಸ್ ಎಂದ ದರ್ಶನ್ ಫ್ಯಾನ್ಸ್
Jun 21, 2023 07:37 AM IST
ಕುರುಕ್ಷೇತ್ರ ಚಿತ್ರವನ್ನು ಬಾಹುಬಲಿಗೆ ಹೋಲಿಸಿದ್ದ ಪ್ರಭಾಸ್ ಅಭಿಮಾನಿಗಳು
- ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾ 2019ರಲ್ಲಿ ತೆರೆ ಕಂಡಿತ್ತು. ಈ ಚಿತ್ರವನ್ನು ತೆಲುಗು, ಬಾಲಿವುಡ್ ಜನರು ಬಾಹುಬಲಿಗೆ ಹೋಲಿಸಿದ್ದರು. 'ಬಾಹುಬಲಿ' ಚಿತ್ರದ ಮುಂದೆ ಕುರುಕ್ಷೇತ್ರ ಏನೂ ಇಲ್ಲವೆಂಬಂತೆ ಅಣಕಿಸಿದ್ದರು.
ಓಂ ರಾವುತ್ ನಿರ್ದೇಶನದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ನಟಿಸಿರುವ 'ಆದಿಪುರುಷ್' ಸಿನಿಮಾ ಬಿಡುಗಡೆ ಆಗಿ 5 ದಿನಗಳು ಕಳೆದಿವೆ. ಸಿನಿಮಾ ಇದುವರೆಗೂ ವಿಶ್ವಾದ್ಯಂತ 360 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ ಮಾಡಿದೆ. 600 ಕೋಟಿ ರೂಪಾಯಿ ಬಜೆಟ್ ಖರ್ಚು ಮಾಡಿ ತಯಾರಾಗಿರುವ ಸಿನಿಮಾಗೆ ಪಾಸಿಟಿವ್‌ಗಿಂತ ನೆಗೆಟಿವ್ ಪ್ರತಿಕ್ರಿಯೆಗಳೇ ಹೆಚ್ಚಾಗಿದೆ.
ಮೂಲಗಳ ಪ್ರಕಾರ ಕೆಲವೆಡೆ ಜನರು ಬುಕ್ ಮಾಡಿರುವ ಟಿಕೆಟ್‌ಗಳನ್ನು ಕೂಡಾ ಕ್ಯಾನ್ಸಲ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದ್ಯಂತ ಚಿತ್ರದಲ್ಲಿ ಪಾತ್ರಧಾರಿಗಳನ್ನು ತೋರಿಸಿರುವ ರೀತಿಗೆ ಟೀಕೆಗಳು ವ್ಯಕ್ತವಾಗುತ್ತಲೇ ಇದೆ. ಈ ಕಾರಣದಿಂದ ಜನರು ಸಿನಿಮಾ ನೋಡಲು ಆಸಕ್ತಿ ತೋರುತ್ತಿಲ್ಲ. ಕೆಲವೊಂದು ಹಿಂದೂ ಸಂಘಟನೆಗಳು ಸಿನಿಮಾವನ್ನು ಬ್ಯಾನ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿವೆ. ಈ ನಡುವೆ, ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಟಾಲಿವುಡ್ ಮಂದಿಗೆ ಕರ್ಮ ರಿಟರ್ನ್ಸ್ ಎಂದು ಟಕ್ಕರ್ ಕೊಡುತ್ತಿದ್ದಾರೆ.
ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾ 2019ರಲ್ಲಿ ತೆರೆ ಕಂಡಿತ್ತು. ಈ ಚಿತ್ರವನ್ನು ತೆಲುಗು, ಬಾಲಿವುಡ್ ಜನರು ಬಾಹುಬಲಿಗೆ ಹೋಲಿಸಿದ್ದರು. 'ಬಾಹುಬಲಿ' ಚಿತ್ರದ ಮುಂದೆ ಕುರುಕ್ಷೇತ್ರ ಏನೂ ಇಲ್ಲವೆಂಬಂತೆ ಅಣಕಿಸಿದ್ದರು. ಆದರೆ ಈಗ ಅದೇ ತೆಲುಗು ನಟ, ಹಿಂದಿ ನಿರ್ದೇಶಕನ 'ಆದಿಪುರುಷ್' ಸಿನಿಮಾಗೆ ಇಂಥ ಪರಿಸ್ಥಿತಿ ಬಂದಿದೆ. ಇದನ್ನೇ ಅಲ್ಲವೇ ಕರ್ಮ ರಿಟರ್ನ್ಸ್ ಅನ್ನೋದು ಎಂದು ದರ್ಶನ್ ಅಭಿಮಾನಿಗಳು ತಕ್ಕ ಉತ್ತರ ಕೊಟ್ಟಿದ್ದಾರೆ. ಆದಿಪುರುಷ್ ಚಿತ್ರಕ್ಕಿಂತ ನಮ್ಮ ಕುರುಕ್ಷೇತ್ರ ಸಿನಿಮಾ ನೂರು ಪಾಲು ಉತ್ತಮವಾಗಿದೆ ಎನ್ನುತ್ತಿದ್ದಾರೆ.
ಸಿನಿಮಾ ಬ್ಯಾನ್ ಮಾಡುವಂತೆ ಮನವಿ ಮಾಡಿದ AICWA
'ಆದಿಪುರುಷ್' ಚಿತ್ರವನ್ನು ಬ್ಯಾನ್ ಮಾಡುವಂತೆ ಆಲ್ ಇಂಡಿಯಾ ಸಿನಿ ವರ್ಕರ್ ಅಸೋಸಿಯೇಷನ್ ಒತ್ತಾಯಿಸಿದೆ. ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದೆ. ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾದ ಪಾತ್ರಗಳು, ಡೈಲಾಗ್‌ಗಳು ಶ್ರೀರಾಮ, ಹನುಮಂತ, ಸೀತಾಮಾತೆ ಸೇರಿದಂತೆ ರಾಮಯಣದ ಪಾತ್ರಧಾರಿಗಳ ಇಮೇಜ್ ಹಾಳು ಮಾಡುತ್ತಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಬಂದಿದೆ. ಈ ಸಿನಿಮಾ ನೋಡಿದರೆ ಯಾವುದೋ ವಿಡಿಯೋ ಗೇಮ್ ನೋಡಿದಂತೆ ಆಗುತ್ತಿದೆ. ಪ್ರಭಾಸ್‌ನಂತಹ ಜವಾಬ್ದಾರಿಯುತ ಸ್ಟಾರ್ ನಟ ಈ ಸಿನಿಮಾದ ಭಾಗವಾಗಿರುವುದಕ್ಕೆ ನಮಗೆ ಬೇಸರವಾಗುತ್ತಿದೆ. ಈ ಸಿನಿಮಾ ಪ್ರದರ್ಶನಕ್ಕೆ ಅರ್ಹವಲ್ಲ, ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.
ಆದಿಪುರುಷ್ ಚೆನ್ನಾಗಿಲ್ಲ ಎಂದ ಯುವಕನಿಗೆ ಥಳಿಸಿದ್ದ ಪ್ರಭಾಸ್ ಫ್ಯಾನ್ಸ್
ಸಿನಿಮಾ ರಿಲೀಸ್ ಆದ ದಿನ, ಹೈದರಾಬಾದ್ ಪ್ರಸಾದ್ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಿ ಬಂದವರನ್ನು ಮಾಧ್ಯಮದವರು ಮಾತನಾಡಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ಹೇಳಿದ್ದಾರೆ. ಕೆಲವರು ಸಿನಿಮಾ ಸೂಪರ್ ಎಂದರೆ ಕೆಲವರು ಆವರೇಜ್ ಎಂದು ಉತ್ತರಿಸಿದ್ದಾರೆ. ಆದರೆ ಯುವಕನೊಬ್ಬ ಸಿನಿಮಾ ಡಬ್ಬಾ ಎಂದಿದ್ದಾನೆ. ''ಚಿತ್ರದಲ್ಲಿ ಪ್ರಭಾಸ್ ತೋರಿಸಿರುವ ರೀತಿ ಚೆನ್ನಾಗಿಲ್ಲ. ಆಚಾರ್ಯ ಚಿತ್ರದಲ್ಲಿ ಚಿರಂಜೀವಿಯನ್ನು ಎಷ್ಟು ಕೆಟ್ಟದಾಗಿ ತೋರಿಸಿದ್ರೋ ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್‌ನನ್ನು ಅದೇ ರೀತಿ ತೋರಿಸಿದ್ದಾರೆ. ಕೆಲವೊಂದು ದೃಶ್ಯಗಳನ್ನು ಬಿಟ್ಟರೆ ಚಿತ್ರದಲ್ಲಿ ಏನೂ ಇಲ್ಲ'' ಎಂದು ತನಗೆ ಅನ್ನಿಸಿದ್ದನ್ನು ಹೇಳಿದ್ದರು. ಇದು ಪ್ರಭಾಸ್ ಅಭಿಮಾನಿಗಳನ್ನು ಕೆರಳಿಸಿತ್ತು. ಯುವಕ ಚಿತ್ರದ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿದ್ದಂತೆ ಮಾಧ್ಯಮಗಳ ಮುಂದೆಯೇ ಆತನನ್ನು ಥಳಿಸಿದ್ದರು.