logo
ಕನ್ನಡ ಸುದ್ದಿ  /  ಮನರಂಜನೆ  /  ಡಾ. ರಾಜ್‌ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ; ಮಿಂಚುಹುಳು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪೃಥ್ವಿರಾಜ್‌

ಡಾ. ರಾಜ್‌ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ; ಮಿಂಚುಹುಳು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪೃಥ್ವಿರಾಜ್‌

Sep 30, 2024 11:37 AM IST

google News

ಡಾ. ರಾಜ್‌ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಮಿಂಚುಹುಳು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಪೃಥ್ವಿರಾಜ್‌

    • ಡಾ. ರಾಜ್ ಕುಟುಂಬದ ಮೂರನೇ ಕುಡಿ, ಅಣ್ಣಾವ್ರ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಇದೀಗ ಮಿಂಚುಹುಳು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ಇನ್ನೇನು ಇದೇ ಅಕ್ಟೋಬರ್‌ ಮೊದಲ ವಾರದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. 
ಡಾ. ರಾಜ್‌ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಮಿಂಚುಹುಳು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಪೃಥ್ವಿರಾಜ್‌
ಡಾ. ರಾಜ್‌ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಮಿಂಚುಹುಳು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಪೃಥ್ವಿರಾಜ್‌

ಡಾ. ರಾಜ್‌ಕುಮಾರ್‌ ಕುಟುಂಬದ ಮೂರನೇ ತಲೆಮಾರಿನ ಮೊಮ್ಮಕ್ಕಳು ಈಗಾಗಲೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಶಿವರಾಜ್‌ಕುಮಾರ್‌ ಕಿರಿಯ ಮಗಳು ನಿವೇದಿತಾ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ ಪುತ್ರರಾದ ವಿನಯ್‌ ರಾಜ್‌ಕುಮಾರ್‌ ಮತ್ತು ಯುವ ರಾಜ್‌ಕುಮಾರ್‌ ನಾಯಕ ನಟರಾಗಿ ಗುರುತಿಸಿಕೊಂಡಿದ್ದಾರೆ. ಇತ್ತ ರಾಜ್‌ ಪುತ್ರಿ ಪೂರ್ಣಿಮಾ ಅವರ ಮಕ್ಕಳಾದ ಧೀರೇನ್‌ ರಾಮ್‌ಕುಮಾರ್‌ ಮತ್ತು ಧನ್ಯಾ ರಾಮ್‌ಕುಮಾರ್‌ ಸಹ ಚಿತ್ರರಂಗದಲ್ಲಿದ್ದಾರೆ. ಈಗ ಅಣ್ಣಾವ್ರ ಸಹೋದರ ವರದಪ್ಪ ಅವರ ಮೊಮ್ಮಗನ ಎಂಟ್ರಿಯಾಗಿದೆ.

ಡಾ. ರಾಜ್ ಕುಟುಂಬದ ಮೂರನೇ ಕುಡಿ, ಅಣ್ಣಾವ್ರ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಅಭಿನಯದ ಚೊಚ್ಚಲ‌ ಚಿತ್ರ ಮಿಂಚುಹುಳು ಅಕ್ಟೊಬರ್ 4 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಮಹೇಶ್ ಕುಮಾರ್ ಅವರ ಕಥೆ, ಚಿತ್ರಕಥೆ, ನಿರ್ದೇಶನವಿರುವ ಈ ಚಿತ್ರಕ್ಕೆ ಭೂನಿ ಪಿಕ್ಚರ್ಸ್ ಅಡಿ ರಾಜಗೋಪಾಲ್ ದೊಡ್ಡಹುಲ್ಲೂರು ಅವರು ಬಂಡವಾಳ ಹಾಕಿದ್ದು, ವಿಜಯ್ ಕುಮಾರ್ ಮತ್ತು ಅಬ್ದುಲ್ ರಫೀಕ್ ಉಲ್ಲಾ ಸಾಥ್ ನೀಡಿದ್ದಾರೆ.

ಇತ್ತೀಚೆಗೆ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ನಾದಬ್ರಹ್ಮ ಹಂಸಲೇಖ, ಹಿರಿಯನಟಿ ಜಯಮಾಲಾ, ನಿರ್ದೇಶಕ ಪಿ. ಶೇಷಾದ್ರಿ, ಲಹರಿ ವೇಲು, ಶಾಸಕ ಶರತ್ ಬಚ್ಚೇಗೌಡ, ಚಿಂತಕ ಪ್ರೊ. ರಾಜಪ್ಪ ದಳವಾಯಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ್ರು, ದೊಡ್ಡಹುಲ್ಲೂರು ರುಕ್ಕೋಜಿರಾವ್,‌ ರಾಜ್ ಪುತ್ರಿಯರಾದ ಲಕ್ಷ್ಮಿ, ಪೂರ್ಣಿಮಾ ರಾಮ್ ಕುಮಾರ್ ಸೇರಿದಂತೆ ಅವರ ಕುಟುಂಬದ ಬಹುತೇಕ ಸದಸ್ಯರು ಚಿತ್ರವನ್ನು ವೀಕ್ಷಿಸಿದರು.

ಏನಿದು ಮಿಂಚುಹುಳು ಕಥೆ?

ನಗರ ಪ್ರದೇಶದಲ್ಲಿ ನಡೆಯುವ ಕಥೆ ಇದಾಗಿದ್ದು, ಬೇಜವಾಬ್ದಾರಿ ತಂದೆ ಹಾಗೂ ಮಗನ ನಡುವಿನ ಕಥೆ ಇದಾಗಿದ್ದು, ಆ ತಂದೆಯ ಬದುಕಿನ ವೈರುದ್ಯ, ಅಪ್ಪ- ಮಕ್ಕಳು ಬಾಡಿಗೆ ಕಟ್ಟಲಾಗದೆ ಪಾಳು ಮನೆ ಸೇರಿದಾಗ, ಆ ಮನೆಯಲ್ಲಿ ವಿದ್ಯುತ್ ಇರುವುದಿಲ್ಲ. ಏನಾದರೂ ಮಾಡಿ ವಿದ್ಯುತ್ ಹಾಕಿಸಬೇಕೆಂದು, ಪೇಪರ್ ಏಜೆಂಟ್ ಸಹಾಯದಿಂದ ಕರೆಂಟ್ ಹಾಕಿಸಲು ಮುಂದಾಗುತ್ತಾನೆ. ಆದರೆ ಒಮ್ಮೆ ಆತ ಕೂಡಿಟ್ಟ ಹಣವನ್ನು ಇಲಿಯೊಂದು ಕಚ್ಚಿ ಹಾಕುತ್ತದೆ. ಮಿಂಚು ಹುಳುವೊಂದನ್ನು ನೋಡಿದ ಆ ಹುಡುಗನಿಗೆ ಹೊಸ ಆಲೋಚನೆ ಬಂದು, ವಿದ್ಯಾರ್ಥಿಯ ಬದುಕಿನಲ್ಲಿ ಹೊಸದಾರಿಗೆ ಅವಕಾಶ ಮಾಡಿಕೊಡುತ್ತದೆ, ಅದು ಏನು ಎಂಬುದೇ ಮಿಂಚುಹುಳು ಚಿತ್ರದ ಕಥಾಹಂದರ.

ಅಕ್ಟೋಬರ್‌ 4ರಂದು ಸಿನಿಮಾ ಬಿಡುಗಡೆ

ಪ್ರದರ್ಶನದ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ, ಅಕ್ಟೋಬರ್ 4 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಮುಖ್ಯವಾಗಿ ಈ ಚಿತ್ರ ಆಗಲು ಪುನೀತ್ ರಾಜ್ ಕುಮಾರ್ ಅವರೇ ಕಾರಣ. ಕನ್ನಡಕ್ಕೆ ಕಂಟೆಂಟ್ ಓರಿಯೆಂಟ್ ಚಿತ್ರಗಳ ಅಗತ್ಯತೆ ತುಂಬಾ ಇದೆ. ಅಂಥಾ ಮತ್ತೊಂದು ಚಿತ್ರವಿದು‌. ಒಳ್ಳೇ ಸಿನಿಮಾನ ಬೆಂಬಲಿಸಿ ಎಂದರು. ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಮಾತನಾಡಿ, ಚಿತ್ರದಲ್ಲಿ ನನ್ನದು ಮುಖ್ಯ ಪಾತ್ರಕ್ಕೆ ಪೂರಕವಾಗಿ‌ ನಿಲ್ಲುವ ಪಾತ್ರ. ನಮ್ಮ ಚಿತ್ರಕ್ಕೆ ಎಲ್ಲರ ಸಹಕಾರ, ಬೆಂಬಲ ಬೇಕು ಎಂದು ಕೇಳಿಕೊಂಡರು.

ಹಂಸಲೇಖ ಮಾತನಾಡಿ, ಈ ಸಿನಿಮಾ ನೋಡುವಾಗ ನನಗೆ ಪಂತುಲು ನೆನಪಾದರು. ಆ ಮಗು ಸಮಸ್ಯೆಗಳ ನಡುವೆ ಬೆಳೆಯಲು ಹೊರಟಿದ್ದು ಖುಷಿಯಾಯ್ತು. ಮಕ್ಕಳ‌ ಮುಂದೆ ಸವಾಲುಗಳನ್ನು ಇಡಿ. ಅವರಿಗೆ ಕುತೂಹಲ ಬೆಳೆಸಿ. ಅವರು ಕೇಳದೆ ಏನನ್ನೂ ಕೊಡಬೇಡಿ, ವರದಪ್ಪ ಅವರು ಒಂದು ಭಾಷಣ ಮಾಡಿದ್ದು ನಾನು ಎಂದೂ ನೋಡಿಲ್ಲ. ಹಿಂದೆನಿಂತು ನೋಡಿಕೊಳ್ತಿದ್ದರು. ರಾಜಣ್ಣ ಅವರನ್ನು ಭೂಮಿತೂಕದ ವ್ಯಕ್ತಿ ಅಂತಿದ್ದರು. ಈಗ ಅವರ ಮೊಮ್ಮಗ ಬೇರಿನೆಡೆಗೆ ಹೊರಟಿದ್ದಾನೆ ಎಂದು ಹೇಳಿದರು.

ನಿರ್ದೇಶಕ ಪಿ.ಶೇಷಾದ್ರಿ ಮಾತನಾಡುತ್ತ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಿನಿಮಾ ತೋರಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಸರ್ಕಾರ ಅನುಮತಿ ಕೊಡಬೇಕು. ನೂರು ಮಕ್ಕಳು ಈ ಸಿನಿಮಾ ನೋಡಿದರೆ ಅದರಲ್ಲಿ ಹತ್ತು ಮಕ್ಕಳ‌ ಮನೋಭಾವ ಬದಲಾಗುತ್ತೆ. ಮುಖ್ಯವಾಗಿ ದೊಡ್ಡವರು ಈ ಸಿನಿಮಾ ನೋಡಬೇಕು ಎಂದು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ