Vinod Raj: ಈಗ ನೆಮ್ಮದಿಯಾಗಿದಿವಿ ಬಿಡ್ರಪ್ಪ, ಫ್ಯಾಮಿಲಿ ರಿವೀಲ್ ಮಾಡಿ ಪಬ್ಲಿಸಿಟಿ ಪಡೆಯೋದು ಬೇಕಿಲ್ಲ; ವಿನೋದ್ ರಾಜ್ ಮತ್ತೆ ಗರಂ
Apr 21, 2023 04:23 PM IST
ಈಗ ನೆಮ್ಮದಿಯಾಗಿದಿವಿ ಬಿಡ್ರಪ್ಪ, ಫ್ಯಾಮಿಲಿ ರಿವೀಲ್ ಮಾಡಿ ಪಬ್ಲಿಸಿಟಿ ಪಡೆಯೋದು ಬೇಕಿಲ್ಲ; ವಿನೋದ್ ರಾಜ್ ಮತ್ತೆ ಗರಂ
- ನಮ್ಮ ಪಾಡಿಗೆ ನಮ್ಮನ್ನು ಬಿಡ್ರಪ್ಪ, ಫ್ಯಾಮಿಲಿ ರಿವೀಲ್ ಮಾಡಿ ನಾನೇನು ಪಬ್ಲಿಸಿಟಿ ತೆಗೋಬೇಕಾ? ಮತ್ತೆ ನೋವನ್ನು ಹೊರಗೆಡವಿದ ಹಿರಿಯ ನಟಿ ಲೀಲಾವತಿ (Leelavathi) ಪುತ್ರ ವಿನೋದ್ ರಾಜ್.
Vinod Raj: ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಚಂದನವನದ ಹಿರಿಯ ನಟಿ ಲೀಲಾವತಿ (Leelavathi) ಮತ್ತವರ ಮಗ ವಿನೋದ್ ರಾಜ್ (Vinod Raj) ಕುಟುಂಬದ ಕುರಿತು ಹಲವು ವಿಚಾರಗಳು ಸದ್ದು ಮಾಡುತ್ತಿವೆ. ಡಾ. ರಾಜ್ ಕುಮಾರ್ ಕುಟುಂಬದ ಆಪ್ತ ಎನಿಸಿಕೊಂಡ ಪ್ರಕಾಶ್ ರಾಜ್ ಮೇಹು, ವಿನೋದ್ ರಾಜ್‌ಗೆ ಮದುವೆಯಾಗಿದೆ, ಮಡದಿ ಮಕ್ಕಳೂ ಇದ್ದಾರೆ ಎಂಬುದನ್ನು ಫೋಟೋ ಸಮೇತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಅಲ್ಲಿಂದ ಶುರುವಾಗಿದ್ದ ಈ ವಿವಾದಕ್ಕೆ ವಿನೋದ್ ರಾಜ್ ಸಹ ಪ್ರತಿಕ್ರಿಯೆ ನೀಡಿದ್ದರು. ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಸಿನಿವುಡ್ (Cinewood) ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿನೋದ್ ರಾಜ್ ಕೊಂಚ ಗರಂ ಆಗಿಯೇ ಮಾತನಾಡಿದ್ದಾರೆ. ಅಮ್ಮನಿಗೆ ಹುಷಾರು ತಪ್ಪಿದಾಗ, ನಾನು ಹುಟ್ಟಿದಾಗ, ಹಾರ್ಟ್ ಅಟ್ಯಾಕ್ ಆದಾಗ ಇಂಡಸ್ಟ್ರಿಯಿಂದ ಯಾರು ಬಂದರು ಎಂಬ ವಿಚಾರವನೆಲ್ಲ ಮತ್ತೆ ನೆನಪು ಮಾಡಿಕೊಂಡಿದ್ದಾರೆ. ಪ್ರಕಾಶ್ ರಾಜ್ ಮೇಹು ವಿರುದ್ಧವೂ ವಾಗ್ದಾಳಿ ಮುಂದುವರಿಸಿದ್ದಾರೆ.
ತಾಯಿ ಮಾತನ್ನು ಮೀರದವನು ನಾನು..
"ನನ್ನ ತಾಯಿಗೆ ನಾನಂದ್ರ ಇಷ್ಟ. ಆಕೆಯ ಎಲ್ಲ ಕಷ್ಟಗಳನ್ನು, ನೋವನ್ನು ನನ್ನನ್ನು ನೋಡಿ ಮರೆತಿದ್ದಾರೆ. ನೂರು ಜನ ಮಕ್ಕಳು ಸೇರಿ ಒಬ್ಬ ತಾಯಿಯನ್ನು ಸಾಕಲ್ಲ ಅಂತಾರೆ. ಈ ಒಬ್ಬ ಮಗ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡಿದ್ದಾನೆ. ಅದು ಹೇಗೇ ಯಾರಿಗೋ ಮೋಸ ಮಾಡದೆ, ದ್ರೋಹ ಬಗೆಯದೆ. ಆಕೆಯ ಮಾತನ್ನೂ ನಾನು ಇಂದಿಗೂ ಮೀರಿಲ್ಲ"ಎಂದಿದ್ದಾರೆ.
ನಾನೇಕೆ ನನ್ನ ಕುಟುಂಬ ರಿವೀಲ್ ಮಾಡಬೇಕು?
ಅಲ್ಲ, ನಾನೇಕೆ ನನ್ನ ಕುಟುಂಬವನ್ನು ರಿವೀಲ್ ಮಾಡಬೇಕು? ಹಾಗೆ ಮಾಡಬೇಕು ಎಂದು ನಮಗೆ ಅನಿಸಿಲ್ಲ. ಮದುವೆಯಾಗಿದೆ ಎಂದು ನಾನೂ ಒಪ್ಪಿಕೊಂಡಿದ್ದೇನೆ. ಅವರೂ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಏಕೆ ರಿವೀಲ್ ಮಾಡಬೇಕು. ನೆಮ್ಮದಿಯಾಗಿದ್ದೀವಿ ಅಷ್ಟೇ ಸಾಕು. ಹಾಗೆ ರಿವೀಲ್ ಮಾಡಿ ಅದರ ಜಾಹೀರಾತು ನನಗೆ ಬೇಡ. ಈ ವಿಚಾರ ನನ್ನ ಆತ್ಮೀಯರಿಗೆಲ್ಲ ಗೊತ್ತಿದೆ ಅಷ್ಟೇ ಸಾಕು"
ನಾನು ಹುಟ್ಟಿದಾಗ ಯಾವನೂ ಬಂದಿಲ್ಲ..
"ನನ್ನ ತಾಯಿ ನನ್ನನ್ನು ಹೆತ್ತಾಗ ಯಾರೂ ಬಂದು ತಿರಿಗಿಯೂ ನೋಡಿಲ್ಲ ರೀ. ಆಸ್ಪತ್ರೆಗೆ ಅಡ್ಮಿಟ್ ಆದಾಗ ಯಾರೂ ಮೂಸ್ ಕೂಡ ನೋಡಿಲ್ಲ. ನನಗೆ ಹಾರ್ಟ್ ಅಟ್ಯಾಕ್ ಆದಾಗ, ಶ್ರೀನಿವಾಸ್ ಮೂರ್ತಿ ಮತ್ತೆ ನಿರ್ದೇಶಕ ಎಸ್ ನಾರಾಯಣ್ ಮಾತನಾಡಿದ್ದು ಬಿಟ್ಟರೆ, ಬೇರೆ ಯಾರ ಸುದ್ದಿಯೂ ಇಲ್ಲ. ಇಬ್ಬರೇ ನಮ್ಮ ಜತೆ ಮಾತನಾಡಿದ್ದು. ಹಾಗಂತ ನಮ್ಮನ್ನು ಯಾರೂ ಕೇಳಿಯೇ ಇಲ್ಲವಲ್ಲ ಅಂತ ನಮಗೆ ಬೇರೆಯವರ ಮೇಲೆ ಕೋಪವೂ ಇಲ್ಲ. ಹೀಗಿರುವಾಗ ನಮ್ಮ ಫ್ಯಾಮಿಲಿಯನ್ನು ರಿವೀಲ್ ಮಾಡಿ ನಾವೇನು ಪಬ್ಲಿಸಿಟಿ ತಗೋಬೇಕಾ? ಅದು ನಮ್ಮಿಷ್ಟ. ಇದೊಳ್ಳೆ ಚೆನ್ನಾಗಾಯ್ತು. ನಮಗೆ ಇರುವ ಆಸೆಗಳೇ ಬೇರೆ. ಬಡ ಜನರಿಗಾಗಿ ಮಾಡುವ ಸೇವೆಯಲ್ಲಿ, ಬಾಯಿ ಇರದ ಜೀವಗಳನ್ನು ಕಟ್ಟಿ ಕಾಯಬೇಕು ಎಂಬುದು, ಒಂದು ಇರುವೆಗೂ ಕೂಡ ಹಿಂಸೆ ಪಡಬಾರದು ಅಷ್ಟೇ" ಎಂದಿದ್ದಾರೆ.
ಸಿನಿಮಾ ವಿಚಾರದಲ್ಲಿ ಆವತ್ತಿನ ಪರಿಸ್ಥಿತಿ ಸರಿಯಿರಲಿಲ್ಲ. ಸಿನಿಮಾಗಳಿದ್ದರೂ, ಅವುಗಳಲ್ಲಿ ತುಂಬ ಚಿಕ್ಕ ಚಿಕ್ಕ ಪಾತ್ರ. ಶ್ರೀ ಮಂಜುನಾಥ್ ಸಿನಿಮಾ ಮಾಡಿದೆ, ವಂದೇ ಮಾತರಂ ಚಿತ್ರದಲ್ಲಿಯೂ ಚಿಕ್ಕ ಪಾತ್ರ ಸಿಕ್ಕಿತು. ಅದಾದ ಸ್ನೇಹ ಲೋಕ ಸಿನಿಮಾದಲ್ಲಿ ಡಾನ್ಸ್ ಮಾಡಿದೆ. ಆ ಡಾನ್ಸ್ ಮಾಡಿದ್ದಕ್ಕೆ ನನಗೆ ಎಷ್ಟು ಸಂಭಾವನೆ ಕೊಟ್ಟಿರಬಹುದು? ಹೀಗೆ ಸಾಕಷ್ಟು ಕಷ್ಟದಲ್ಲಿಯೇ ಜೀವನ ದೂಡಿದ್ದೇವೆ. ಯಾರಿಗಾದರೂ ತೊಂದರೆ ಕೊಟ್ಟ ಉದಾಹರಣೆ ಇದೆಯೇ? ತಾಯಿ 600 ಸಿನಿಮಾ ಮಾಡಿದ್ದಾರೆ. ಅವರಿಗೆ ಸಿಗಬೇಕಾದ ಗೌರವ ಸಿಕ್ಕಿದೆಯಾ? ಬೇರೆ ಏನೆನೋ ಮಾತನಾಡಿದ್ರು ಇದನ್ನೂ ಮಾತನಾಡಬೇಕಿತ್ತು" ಎಂದಿದ್ದಾರೆ ವಿನೋದ್.