Jaggesh: ನಟ ಜಗ್ಗೇಶ್ ಜೊತೆ ಮೊಮ್ಮಗ ಪೂಜೆ, ಓಂ ನಮಃ ಶಿವಾಯ ಪಠಿಸಿದ ಅರ್ಜುನ; ನೀವು ರಾಯರ ಭಕ್ತರು, ಮೊಮ್ಮಗ ಶಿವಭಕ್ತ ಎಂದ ಫ್ಯಾನ್ಸ್
Jul 31, 2023 06:42 AM IST
ತಾ ಜಗ್ಗೇಶ್ ಜೊತೆಗೆ ಪೂಜೆಯಲ್ಲಿ ನಿರತನಾಗಿರುವ ಅರ್ಜುನ್
ಕೇಟ್ ಹಾಗೂ ಗುರು ದಂಪತಿ ಮಗ ಅರ್ಜುನ್ ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಾನೆ. ಅರ್ಜುನ್, ತಾತ ಜಗ್ಗೇಶ್ ಪೂಜೆ ಮಾಡುವಾಗ ತಾವೂ ಕೂಡಾ ರುದ್ರಾಕ್ಷಿ ಧರಿಸಿ ಓಂ ನಮ: ಶಿವಾಯ ಪಠಣೆ ಮಾಡುತ್ತಿದ್ದಾನೆ.
ಸ್ಯಾಂಡಲ್‌ವುಡ್ ನಟ, ರಾಜ್ಯಸಭೆ ಸದಸ್ಯ ಜಗ್ಗೇಶ್ ಸದ್ಯಕ್ಕೆ ಕಾಶಿಯಾತ್ರೆಯಲ್ಲಿದ್ದಾರೆ. ಬೆಳ್ಳಿಮೋಡಗಳ ನಡುವೆ ವಿಮಾನದಲ್ಲಿ ಪ್ರಯಾಣ ಮಾಡುವ ವಿಡಿಯೋವನ್ನು ಜಗ್ಗೇಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಗಂಗಾ ಸ್ನಾನ ಮಾಡಿ ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡುವ ಸೌಭಾಗ್ಯ ಪ್ರಾಪ್ತವಾಯಿತು ಎಂದು ಭಾನುವಾರ ಜಗ್ಗೇಶ್ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಯರ ಭಕ್ತ ಜಗ್ಗೇಶ್
ಅಭಿಮಾನಿಗಳಾಗಲೀ, ಹೆಸರಾಗಲೀ, ಕುಟುಂಬವಾಗಲೀ ಇಂದು ನಾನು ಇಂದು ಏನೇ ಗಳಿಸಿದ್ದರೂ, ಅದೆಲ್ಲವೂ ದೇವರು ನೀಡಿದ್ದು ಎಂದು ಜಗ್ಗೇಶ್ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಜಗ್ಗೇಶ್ ದೈವಭಕ್ತ, ಅದರಲ್ಲೂ ಗುರುರಾಘವೇಂದ್ರರ ಪರಮ ಭಕ್ತರು. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅವರು ರಾಘವೇಂದ್ರ ಸ್ವಾಮಿಗಳು ಹಾಗೂ ಅವರ ಮಹಿಮೆ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದಾರೆ. ತಮಗೆ ದೇವರ ದರ್ಶನ ಮಾಡಬೇಕು ಎನಿಸಿದಾಗಲೆಲ್ಲಾ ಮಂತ್ರಾಲಯಕ್ಕೆ ಹೋಗಿ ಬರುತ್ತಾರೆ. ಏನೇ ಕೆಲಸ ಆರಂಭಿಸುವಾಗಲೂ ತಮ್ಮ ಇಷ್ಟ ದೇವರ ಸನ್ನಿಧಿಗೆ ತೆರಳಿ ಆಶೀರ್ವಾದ ಪಡೆದು ಬರುತ್ತಾರೆ. ಇದೀಗ ಮೊಮ್ಮಗ ಅರ್ಜುನ್, ಓಂ ನಮಃ ಶಿವಾಯ ಮಂತ್ರ ಪಠಣೆ ಮಾಡುತ್ತಿರುವ ವಿಡಿಯೋವೊಂದನ್ನು ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಓಂ ನಮ: ಶಿವಾಯ ಪಠಿಸಿದ ಅರ್ಜುನ್
ಕೇಟ್ ಹಾಗೂ ಗುರು ದಂಪತಿ ಮಗ ಅರ್ಜುನ್ ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಾನೆ. ಅರ್ಜುನ್, ತಾತ ಜಗ್ಗೇಶ್ ಪೂಜೆ ಮಾಡುವಾಗ ತಾವೂ ಕೂಡಾ ರುದ್ರಾಕ್ಷಿ ಧರಿಸಿ ಓಂ ನಮ: ಶಿವಾಯ ಪಠಣೆ ಮಾಡುತ್ತಿದ್ದಾನೆ. ಈ ವಿಡಿಯೊವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ನವರಸ ನಾಯಕ ''ಮನುಕುಲಕ್ಕೆ ದೇವರನಾಮ ಸ್ಮರಣೆ ಜನ್ಮಾಂತರ ಪುಣ್ಯಸಂಬಂಧ ಇದ್ದಾಗ ಈ ಜನ್ಮದಲ್ಲಿ ನೆನಪಿನ ಮುಖಾಂತರ ಪ್ರಕಟವಾಗುತ್ತದೆ, ನನ್ನ ಪೂಜಾ ಸಮಯದಲ್ಲಿ ಅರ್ಜುನ ಸಹಪಾಠಿಯಾಗಿ ಜಪಿಸಿದ ಕ್ಷಣ, ಗುರುಭ್ಯೋನಮಃ'' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ''ಹಿರಿಯರು ಕಲಿತು ಕಿರಿಯರಿಗೆ ಕಲಿಸಬೇಕು'' ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಮೆಚ್ಚುಗೆ
ಜಗ್ಗೇಶ್ ಹಂಚಿಕೊಂಡಿರುವ ವಿಡಿಯೋಗೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೀವು ರಾಯರ ಭಕ್ತರಾದರೆ ಮೊಮ್ಮಗ ಅರ್ಜುನ ಶಿವಭಕ್ತ. ತಾತ ಮೊಮ್ಮಗನಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತಿದ್ದಾರೆ. ನಿಮ್ಮ ಸೊಸೆ ಕೇಟಿ ವಿದೇಶದವರಾದರೂ ಅವರಿಗೆ ಹಾಗೂ ಮಗುವಿಗೆ ಇಲ್ಲಿನ ಸಂಸ್ಕೃತಿ ಕಲಿಸುತ್ತಿದ್ದೀರಿ, ನಿಜಕ್ಕೂ ಗ್ರೇಟ್, ಚಿಕ್ಕ ವಯಸ್ಸಿಗೆ ಅತ್ಯುತ್ತಮ ಸಂಸ್ಕಾರದ ಜ್ಞಾನಧಾರಣೆ. ಮನೆಯೇ ಮೊದಲ ಪಾಠಶಾಲೆ ಎಂದು ನೆಟಿಜನ್ಸ್ ಜಗ್ಗೇಶ್ ಟ್ವೀಟ್‌ಗೆ ಕಾಮೆಂಟ್ಸ್ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಜಗ್ಗೇಶ್ ಮೊಮ್ಮಗನೊಂದಿಗೆ ಇರುವ ಅನೇಕ ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
'ರಂಗನಾಯಕ' ಚಿತ್ರದಲ್ಲಿ ಜಗ್ಗೇಶ್ ಬ್ಯುಸಿ
ಸಿನಿಮಾಗಳ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ರಿಲೀಸ್ ಆಗಿತ್ತು. ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ್ದರು. 40 ಆದರೂ ಮದುವೆ ಆಗದ ವ್ಯಕ್ತಿಯೊಬ್ಬ, ಮದುವೆ ನಂತರವೂ ಏನೆಲ್ಲಾ ಸಮಸ್ಯೆ ಅನುಭವಿಸುತ್ತಾನೆ, ನಂತರ ಆ ಸಮಸ್ಯೆ ಹೇಗೆ ಕೊನೆಯಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿತ್ತು. ಸದ್ಯಕ್ಕೆ ಜಗ್ಗೇಶ್, 'ರಂಗನಾಯಕ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ಮಠ ಖ್ಯಾತಿಯ ಗುರುಪ್ರಸಾದ್ ನಿರ್ದೇಶಿಸುತ್ತಿದ್ದಾರೆ.