777 charlie: ಜಪಾನ್ ಭಾಷೆಗೆ ರಕ್ಷಿತ್ ಶೆಟ್ಟಿಯ 777 ಚಾರ್ಲಿ ಡಬ್ಬಿಂಗ್; ಜಗತ್ತಿನಾದ್ಯಂತ ಬಿಡುಗಡೆಗೆ ಸಿದ್ಧತೆ
Apr 29, 2024 01:03 PM IST
777 charlie
- Rakshit Shetty 777 Charlie: ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾವು ಜಪಾನ್ ಭಾಷೆಗೆ ಡಬ್ ಆಗಲಿದೆ. ಜೂನ್ ತಿಂಗಳಲ್ಲಿ ಜಪಾನಿಯರು ಈ ಸಿನಿಮಾ ನೋಡಬಹುದಾಗಿದೆ. ಈ ಸಿನಿಮಾ ಥಾಯ್ಲೆಂಡ್‌ನಲ್ಲೂ ಬಿಡುಗಡೆಯಾಗಿತ್ತು.
ಬೆಂಗಳೂರು: ಪರಂವಃ ಸ್ಟುಡಿಯೋಸ್ ನಿರ್ಮಾಣದ, ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರವು ಇದೀಗ ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಜೂನ್ 28ಕ್ಕೆ ಜಪಾನ್ ದೇಶದ ಪ್ರಮುಖ ನಗರಗಳಲ್ಲಿ ಚಿತ್ರ ತೆರೆಕಾಣಲಿದೆ. ಜಪಾನಿನ ಅತೀ ದೊಡ್ಡ ಹಾಗೂ ಜಪಾನ್ ಚಿತ್ರರಂಗದಲ್ಲಿ 100 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ “ಶೋಚಿಕೋ ಮೂವೀ” ಎಂಬ ಸಂಸ್ಥೆ ಈ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಲಿದೆ. ವಿಶೇಷವೆಂದರೆ, ಇದೇ ಸಂಸ್ಥೆಯು ಈ ಹಿಂದೆ “Hachi: A Dog’s Tale” ಎಂಬ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಿತ್ತು.
ಕಳೆದ ವರ್ಷ ಥೈಲ್ಯಾಂಡ್ ನಲ್ಲಿ ಡಬ್ ಆಗಿ ಬಿಡುಗಡೆಗೊಂಡ ಈ ಚಿತ್ರ, ಮುಂದಿನ ದಿನಗಳಲ್ಲಿ ಜಪಾನ್ ಸೇರಿದಂತೆ ರಷ್ಯಾ, ಲ್ಯಾಟಿನ್ ಅಮೆರಿಕ, ತೈವಾನ್, ಜರ್ಮನಿ ಹಾಗೂ ಇನ್ನಿತರ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಕಿರಣ್ ರಾಜ್ ನಿರ್ದೇಶನದ ಈ ಚಿತ್ರವು ಜೂನ್ 10, 2022ಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆದಿತ್ತು. ಹಲವಾರು ಪ್ರಶಸ್ತಿಗಳನ್ನ ಬಾಚಿಕೊಂಡ ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯೂ ದೊರಕಿದೆ.
ಥಾಯ್ಲೆಂಡ್‌ನಲ್ಲೂ ಬಿಡುಗಡೆಯಾಗಿತ್ತು ಚಾರ್ಲಿ
ಭಾರತವಷ್ಟೇ ಅಲ್ಲದೇ, ವಿದೇಶಗಳಲ್ಲೂ "777 ಚಾರ್ಲಿ" ಚಿತ್ರವನ್ನು ಹೆಚ್ಚಿನ ಜನರು ಮೆಚ್ಚಿಕೊಂಡಿದ್ದಾರೆ. ಈ ಸಂತೋಷವನ್ನು ಸಂಭ್ರಮಿಸಲು ನಮ್ಮ ನಲವತ್ತು ಜನರ ತಂಡ ಥಾಯ್ಲೆಂಡ್ ಹೋಗುತ್ತಿರುವುದಾಗಿ" ರಕ್ಷಿತ್ ಶೆಟ್ಟಿ ಈ ಹಿಂದೆ ಹೇಳಿದ್ದರು. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗೆ ಚಾರ್ಲಿ ಸಿನಿಮಾ ಡಬ್ ಆಗಿ ತೆರೆಕಂಡಿತ್ತು. ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದ್ದ ಈ ಸಿನಿಮಾ, ಗಳಿಕೆ ವಿಚಾರದಲ್ಲಿಯೂ ಮೋಡಿ ಮಾಡಿತ್ತು.
ಚಾರ್ಲಿ ಸಿನಿಮಾದ ಕುರಿತು
777 ಚಾರ್ಲಿ ಸಿನಿಮಾವು 2022ರಲ್ಲಿ ಬಿಡುಗಡೆಗೊಂಡಿತ್ತು. ಕಿರಣ್ ರಾಜ್ ಕೆ ನಿರ್ದೇಶನದ ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ತನ್ನ ಪರವಃ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಲ್ಯಾಬ್ರೇಡರ್ ಡಾಗ್ ಮತ್ತು ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಡ್ಯಾನೇಶ್ ಶೇಟ್ ,ಬಾಬಿ ಸಿಂಹ, ಅನಿರುದ್ಧ ರಾಯ್ ಮುಂತಾದವರು ನಟಿಸಿದ್ದರು. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಧರ್ಮರಾಜ್ ಆಗಿ, ಸಂಗೀತಾ ಶೃಂಗೇರಿ ಅವರು ದೇವಿಕಾ ಆರಾಧ್ಯ ಆಗಿ ನಟಿಸಿದ್ದರು. ರಾಜ್ ಬಿ ಶೆಟ್ಟಿ ಡಾ. ಅಶ್ವಿನ್ ಕುಮಾರ್ ಆಗಿ ನಟಿಸಿದ್ದರು.
ಕಿರಣ್ ರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ. ನೋಬಿನ್ ಪೌಲ್ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ, ಪ್ರಗತಿ ರಿಷಬ್ ಶೆಟ್ಟಿ ಅವರ ವಸ್ತ್ರ ವಿನ್ಯಾಸ, ವಿಕ್ರಮ್ ಮೋರ್ ಅವರ ಸಾಹಸದಲ್ಲಿ ಈ ಸಿನಿಮಾ ಮೂಡಿಬಂದಿತ್ತು.