ಮಗಧೀರ ನಟನ ಜತೆಗೆ ನಟಿಸಲು ಶಿವರಾಜ್ ಕುಮಾರ್‌ಗೆ ಆಫರ್; ರಾಮ ಚರಣ್ ಜತೆ ನಟಿಸ್ತಾರ ಶಿವಣ್ಣ
Dec 07, 2023 06:09 PM IST
ಮಗಧೀರ ನಟನ ಜತೆಗೆ ನಟಿಸಲು ಶಿವರಾಜ್ ಕುಮಾರ್‌ಗೆ ಆಫರ್
- Shiva Rajkumar: ಕನ್ನಡ ನಟ ಶಿವರಾಜ್ ಕುಮಾರ್ ಅವರಿಗೆ ಜೈಲರ್ ಸಿನಿಮಾದ ಬಳಿಕ ಪರಭಾಷಾ ಸಿನಿಮಾಗಳಿಂದ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಧನುಷ್ ಜತೆ ತಮಿಳು ಚಿತ್ರದಲ್ಲಿ ನಟಿಸಲು ಸಹಿ ಹಾಕಿರುವ ಶಿವಣ್ಣನಿಗೆ ರಾಮ ಚರಣ್ ಸಿನಿಮಾದಲ್ಲೂ ನಟಿಸಲು ಆಫರ್ ಬಂದಿದೆ ಎನ್ನಲಾಗಿದೆ.
ಬೆಂಗಳೂರು: ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಶಿವಣ್ಣನ ನಟನೆಗೆ ತೆಲುಗು, ತಮಿಳು, ಹಿಂದಿ ಸಿನಿಮಾ ಪ್ರಿಯರು ಮಾರು ಹೋಗಿದ್ದಾರೆ. ಜೈಲರ್ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್ ಅವರ ಕೆಲವೇ ನಿಮಿಷಗಳ ನಟನೆಯೂ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಕನ್ನಡದಲ್ಲಿ ಈಗಾಗಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಶಿವಣ್ಣನಿಗೆ ತಮಿಳು, ತೆಲುಗು ಚಿತ್ರರಂಗದಿಂದಲೂ ಬೇಡಿಕೆ ಹೆಚ್ಚಾಗುತ್ತಿದೆ. ತೆಲುಗು ನಟ ರಾಮ್ ಚರಣ್ ಜತೆ ಸಿನಿಮಾದಲ್ಲಿ ನಟಿಸುವ ಆಫರ್ ಬಂದಿರುವುದು ನಿಜ ಎಂದು ವರದಿಗಳು ತಿಳಿಸಿವೆ.
ರಾಮ್ ಚರಣ್ ಸಿನಿಮಾದಲ್ಲಿ ನಟಿಸುವ ಆಫರ್
ಈಗಾಗಲೇ ಶಿವರಾಜ್ ಕುಮಾರ್ ಅವರು ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರೆ. ರಾಮಚರಣ್ ಸಿನಿಮಾದಲ್ಲೂ ನಟಿಸಲು ಶಿವರಾಜ್‌ಕುಮಾರ್‌ಗೆ ಆಫರ್ ಬಂದಿರುವುದು ನಿಜ ಎಂದು ಹೇಳಲಾಗಿದೆ. ಆದರೆ, ಈ ಚಿತ್ರದಲ್ಲಿ ನಟಿಸಲು ಶಿವಣ್ಣ ಸಮ್ಮತಿ ಸೂಚಿಸಿದ್ದಾರೆಯೇ, ಇಲ್ಲವೇ ಎನ್ನುವುದು ಇನ್ನೂ ಬಹಿರಂಗಗೊಂಡಿಲ್ಲ.
ರಾಮ್ ಚರಣ್ ಮುಂಬರುವ ಸಿನಿಮಾಗಳಲ್ಲಿ ಗೇಮ್ ಚೇಂಜರ್ ಪ್ರಮುಖವಾದದ್ದು. ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ, ಕಿಯಾರ ಅಡಾನಿ, ಜಯರಾಮ್, ಅಂಜಲಿ, ಸುನಿಲ್, ನವೀನ್ ಚಂದ್ರ, ಶ್ರೀಕಾಂತ್ ಮುಂತಾದವರು ನಟಿಸಿದ್ದಾರೆ. ಇದು ಸದ್ಯದಲ್ಲಿಯೇ ಬಿಡುಗಡೆಯಾಗುವ ಸಿನಿಮಾವಾಗಿರುವುದರಿಂದ ಈ ಸಿನಿಮಾಕ್ಕೂ ಶಿವರಾಜ್‌ಕುಮಾರ್‌ಗೂ ಸಂಬಂಧವಿಲ್ಲ. ಇದಾದ ಬಳಿಕ ರಾಮ್ ಚರಣ್ ಹಲವು ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ.
ಗೇಮ್ ಚೇಂಜರ್ ಬಳಿಕ ದಿ ಇಂಡಿಯಾ ಹೌಸ್ ಸಟೋರಿ ಎಂಬ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ. ನಿಖಿಲ್ ಸಿದ್ಧಾರ್ಥ, ಅನುಪಮ್ ಖೇರ್ ಮುಂತಾದವರು ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಶಿವಣ್ಣನಿಗೆ ಆಫರ್ ಬಂದಿದೆಯೇ ಎನ್ನುವ ಕುರಿತು ಸದ್ಯ ಯಾವುದೇ ಮಾಹಿತಿ ಇಲ್ಲ. ಇದಾದ ಬಳಿಕ ಆರ್‌ಸಿ 16 (ರಾಮ್ ಚರಣ್ 16ನೇ ಸಿನಿಮಾ) ಬರಲಿದೆ. ಬಹುಶಃ ಈ ಸಿನಿಮಾದಲ್ಲಿ ನಟಿಸುವ ಆಫರ್ ಶಿವರಾಜ್ ಕುಮಾರ್‌ಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಶಿವರಾಜ್ ಕುಮಾರ್ ಈಗಾಗಲೇ ಕಣ್ಣಪ್ಪ ಎಂಬ ತೆಲುಗು ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಲು ಒಪ್ಪಿದ್ದಾರೆ. ಟಾಲಿವುಡ್‌ನಲ್ಲಿ ನಟ ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ; ದಿ ಗ್ರೇಟ್ ಎಪಿಕ್ ಇಂಡಿಯನ್ ಟೇಲ್’ ಕುರಿತು ಈಗಾಗಲೇ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ. ಅದಕ್ಕೆ ಒಂದು ಪ್ರಮುಖ ಕಾರಣ ಚಿತ್ರದ ತಾರಾಗಣ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮೋಹನ್ ಲಾಲ್ ಮತ್ತು ಸ್ಯಾಂಡಲ್‌ವುಡ್‌ನ ಶಿವರಾಜಕುಮಾರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಶಿವರಾಜ್‍ಕುಮಾರ್ ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ಮೊದಲು ದಿನ್ನನಾಗಿ, ಆ ನಂತರ ಶಿವನ ಅನುಗ್ರಹಕ್ಕೆ ಪಾತ್ರವಾಗುವ ಕಣ್ಣಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಚಿತ್ರವು ಇದೀಗ ದೊಡ್ಡ ಮಟ್ಟದಲ್ಲಿ ಕಣ್ಣಪ್ಪ ಹೆಸರಲ್ಲಿ ಸಿದ್ಧವಾಗುತ್ತಿದೆ.
ಮಗಧೀರ ಇಷ್ಟ ಎಂದಿದ್ದ ಶಿವರಾಜ್‌ಕುಮಾರ್
ಜೈಲರ್ ಸಿನಿಮಾ ಪ್ರಮೋಷನ್ ಸಂದರ್ಭದಲ್ಲಿ ವೈಯಕ್ತಿಕವಾಗಿ ನನಗೆ ಆರ್‌ಆರ್‌ಆರ್‌ಗಿಂತಲೂ ಮಗಧೀರ ಸಿನಿಮಾ ಇಷ್ಟ. ರಾಮ್ ಚರಣ್ ನಟನೆ ಇಷ್ಟ ಎಂದು ಶಿವರಾಜ್ ಕುಮಾರ್ ಹೇಳಿದ್ದರು. ಇತ್ತೀಚೆಗೆ ಬಿಡುಗಡೆಯಾದ ಘೋಸ್ಟ್ ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಪ್ರೇಕ್ಷಕರೂ ಇಷ್ಟಪಟ್ಟಿದ್ದರು.