Roopanthara Review: ರೂಪಾಂತರ ವಿಮರ್ಶೆ ಮಾಡಿದ ಹೇಮಂತ್ ರಾವ್, ಕಾರ್ತಿಕ್ ಸುಬ್ಬರಾಜ್; ಹೇಗಿದೆಯಂತೆ ರಾಜ್ ಬಿ ಶೆಟ್ಟಿ ಸಿನಿಮಾ?
Jul 25, 2024 05:49 PM IST
Roopanthara Review: ರೂಪಾಂತರ ವಿಮರ್ಶೆ ಮಾಡಿದ ಹೇಮಂತ್ ರಾವ್, ಕಾರ್ತಿಕ್ ಸುಬ್ಬರಾಜ್
- Roopanthara Movie Review: ಮಿಥಿಲೇಶ್ ಎವಲತ್ ನಿರ್ದೇಶನದ ರಾಜ್ ಬಿ ಶೆಟ್ಟಿ ಸೇರಿದಂತೆ ಅನೇಕ ಪ್ರತಿಭಾನ್ವಿತ ಕಲಾವಿದರು ನಟಿಸಿರುವ ಸಿನಿಮಾ ಜುಲೈ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರವನ್ನು ಚಿತ್ರತಂಡ ಕೆಲವರಿಗೆ ತೋರಿಸಿದೆ. ಈ ಸಿನಿಮಾ ನೋಡಿರುವ ಕಾರ್ತಿಕ್ ಸುಬ್ಬರಾಜು ಮತ್ತು ಹೇಮಂತ್ ಎಂ ರಾವ್ ಅಭಿಪ್ರಾಯ ಇಲ್ಲಿದೆ.
ಬೆಂಗಳೂರು: ಮಿಥಿಲೇಶ್ ಎವಲತ್ ಅವರ ಚೊಚ್ಚಲ ನಿರ್ದೇಶನದ ರೂಪಾಂತರ ಕನ್ನಡ ಸಿನಿಮಾ ನಾಳೆ (ಜುಲೈ 26) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಈಗಾಗಲೇ ಕೆಲವು ತಮ್ಮ ಆಪ್ತರಿಗೆ ಚಿತ್ರತಂಡ ತೋರಿಸಿದ್ದಾರೆ. ಇವರಲ್ಲಿ ಕೆಲವರು ಈ ಚಿತ್ರ ನೋಡಿರುವ ಎಕೈಟ್‌ಮೆಂಟ್ ತಡೆಯಲಾಗದೆ ವಿಮರ್ಶೆಯನ್ನೂ (Roopanthara Movie Review) ನೀಡಿದ್ದಾರೆ. ಈ ಚಿತ್ರದ ಕುರಿತು ಸಪ್ತ ಸಾಗರದಾಚೆ ಎಲ್ಲೋ ನಿರ್ದೇಶಕ ಹೇಮಂತ್ ರಾವ್ ಮತ್ತು ಜಿಗರ್‌ತಂಡ ತಯಾರಕ ಕಾರ್ತಿಕ್ ಸುಬ್ಬರಾಜ್ ನೀಡಿರುವ ಸಿನಿಮಾ ವಿಮರ್ಶೆ ಇಲ್ಲಿದೆ.
ರೂಪಾಂತರ ವಿಮರ್ಶೆ: ಕಾರ್ತಿಕ್ ಸುಬ್ಬರಾಜ್
ಕಾರ್ತಿಕ್ ಸುಬ್ಬರಾಜ್ ಅವರು ರೆಕಾರ್ಡ್ ಮಾಡಿರುವ ವಿಡಿಯೋ ಮೂಲಕ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಇದು ನಾಲ್ಕು ಕಥೆಗಳನ್ನು ಒಂದಕ್ಕೊಂದು ಸೇರಿಸಿ ಮಾಡಿರುವ ನಿರೂಪಣೆಯಾಗಿದೆ. ಚಲನಚಿತ್ರ ಬರೆದ ರೀತಿ, ನಟರ ನಟನೆ ನನಗೆ ತೀವ್ರ ವೀಕ್ಷಣೆ ಅನುಭವ ನೀಡಿತ್ತು. ಆರಂಭದಿಂದಲೇ ತುದಿಗಾಲಲ್ಲಿ ನೋಡುವಂತೆ ಮಾಡಿತ್ತು. ಈ ಚಿತ್ರದಲ್ಲಿ ಎಲ್ಲಾ ನಟರ ಅಭಿನಯ ಸೂಪರ್. ರಾಜ್ ಬಿ ಶೆಟ್ಟಿ ಮಾತ್ರವಲ್ಲ, ಸೋಮಶೇಕರ್ ಬೋಳೆಗಾಂವ್, ಹನುಮಕ್ಕ, ಲೇಖಾ ನಾಯ್ಡು ಹೀಗೆ ಎಲ್ಲರ ಅಭಿನಯ ಮನೋಜ್ಞವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಸಿನಿಮಾದ ಕಥೆಯನ್ನು ಬರೆದ ರೀತಿ ನನಗೆ ಇಷ್ಟವಾಯ್ತು" ಎಂದು ಅವರು ಹೇಳಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಪ್ರಕಾರ ಇದರಲ್ಲಿ ನಾಲ್ಕು ಕಥೆಗಳ ಹೈಪರ್‌ಲಿಂಕ್ ಕಥೆಗಳಿವೆ. ಆದರೆ, ಈ ಸಿನಿಮಾದಲ್ಲಿ ಐದು ಕಥೆಗಳು ಇವೆ ಎಂದು ಚಿತ್ರತಂಡ ತಿಳಿಸಿದೆ.
ರೂಪಾಂತರ ರಿವ್ಯೂ: ಹೇಮಂತ್ ಎಂ ರಾವ್
ರೂಪಾಂತರ ಸಿನಿಮಾವನ್ನು ಈಗಾಗಲೇ ಹೇಮಂತ್ ಎಂ ರಾವ್ ನೋಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾದ ಗಮನ ಸೆಳೆದಿರುವ ಈ ಪ್ರತಿಭಾನ್ವಿತ ನಿರ್ದೇಶಕರು ಒಂದು ವಾರದ ಹಿಂದೆಯೇ ಈ ಸಿನಿಮಾ ನೋಡಿ ತಡೆಯಲಾಗದೆ ತನ್ನ ವಿಮರ್ಶೆ ತಿಳಿಸಿದ್ದರು.
ಇಷ್ಟು ಸುಂದರವಾದ ಚಿತ್ರವನ್ನು ನಿರ್ಮಿಸಿದ್ದಕ್ಕೆ ಫ್ಯಾಬ್ ಬರಹಗಾರ ಮತ್ತು ನಿರ್ದೇಶಕ ಮಿಥಿಲೇಶ್ ಅವರನ್ನು ಹೇಮಂತ್ ಹೊಗಳಿದ್ದಾರೆ. ಇದು ಚಿತ್ರಮಂದಿರಗಳಲ್ಲಿ ಮಿಸ್ ಮಾಡದೆ ನೋಡಬೇಕಾದ ಚಿತ್ರ ಎಂದು ಅವರು ಹೇಳಿದ್ದಾರೆ. ಈ ಚಿತ್ರದಲ್ಲಿ ಜಿಬಿ ಭರತ್ ಎಂಬ ನಟನಿದ್ದಾನೆ, ತಪ್ಪದೇ ನೋಡಿ ಎಂದು ಅವರು ಹೇಳಿದ್ದಾರೆ.
ಮಿಥಿಲೇಶ್ ಪ್ರಕಾರ ಇದರಲ್ಲಿ 5 ಕಥೆಗಳಿದ್ದು, ರೂಪಾಂತರದ ಪ್ರಯಾಣ ಇದಾಗಿದೆ. ಬೆಂಗಳೂರಿನ ನಗರಗಳಲ್ಲಿ ತಮ್ಮ ಅನುಭವವನ್ನು ಆಧರಿಸಿ ಈ ಸಿನಿಮಾಗಳಿಗೆ ಕಥೆ ಬರೆದಿರುವುದಾಗಿ ಅವರು ಹೇಳಿದ್ದಾರೆ. ಇದು ಕಥಾ ಸಂಕಲನ ಅಥವಾ ಸಣ್ಣಕಥೆಗಳ ಗುಚ್ಚವಲ್ಲ. ಐದು ಕಥೆಗಳಿವೆ, ಸಿನಿಮಾದಲ್ಲಿ ಒಂದನ್ನೊಂದು ಸಂಧಿಸುತ್ತವೆ ಎಂದು ಹೇಳಿದ್ದರು. ಈ ಚಿತ್ರಕ್ಕೆ ಸಂಗೀತ ನಿರ್ದೇಶಣ ನೀಡಿರುವ ಮಿಧುನ್ ಮುಕುಂದನ್ ಪ್ರಕಾರ "ರೂಪಾಂತರ ಸಿನಿಮಾವು ಮಾನವನ ಅನುಭವಗಳ ಅಧ್ಯಯನ. ಇದರಲ್ಲಿ ಮಿಥಿಲೇಶ್ ಮನುಷ್ಯನಾಗಿ ಬೆಳೆಯುವುದರ ಅರ್ಥವನ್ನು ಅನ್ವೇಷಿಸಿದ್ದಾರೆ. ಈ ಸಿನಿಮಾ ಅದ್ಭುತ ಅನುಭವ ನೀಡುತ್ತದೆ" ಎಂದು ಅವರು ಹೇಳಿದ್ದಾರೆ.
ಮಿಥಿಲೇಶ್ ಬೆಂಗಳೂರಿನಲ್ಲಿ ಹಲವು ವರ್ಷಗಳನ್ನು ಕಳೆದಿದ್ದಾರೆ. ಈ ನಗರದಲ್ಲಿ ತಾನು ಭೇಟಿಯಾಗಿರುವ ಜನರ ಜೀವನವನ್ನು ಗಮನಿಸಿಕೊಂಡು ಕಥೆ ಬರೆದಿದ್ದಾರೆ. ಈ ಎಲ್ಲಾ ಪಾತ್ರಗಳೇ ರೂಪಾಂತರವಾಗಿದೆ. ಆದರೆ, ಒಂದು ಪಾತ್ರ ಮಾತ್ರ ಉತ್ತರ ಕರ್ನಾಟಕದ್ದು. ಉಳಿದ ಪಾತ್ರಗಳು ಬೆಂಗಳೂರಿನವು ಎಂದು ಚಿತ್ರತಂಡ ಈಗಾಗಲೇ ಮಾಹಿತಿ ನೀಡಿದೆ. ಇಂದು ಹಲವು ಥಿಯೇಟರ್‌ಗಳಲ್ಲಿ ರೂಪಾಂತರ ಚಿತ್ರದ ಪ್ರೀಮಿಯರ್ ಶೋ ನಡೆಯುತ್ತಿದೆ. ನಾಳೆ ಕರ್ನಾಟಕದ ಚಿತ್ರಮಂದಿರಗಳಲ್ಲಿ ರೂಪಾಂತರ ಬಿಡುಗಡೆಯಾಗಲಿದೆ.