ಸಣ್ಣಕಥೆ ಚಿತ್ರಕಥೆ ಆಗಿದ್ದು ಹೇಗೆ? ಪುಸ್ತಕ ರೂಪದಲ್ಲಿ ಬಿಡುಗಡೆಯಾದ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ
ಶಶಾಂಕ್ ಸೊಗಾಲ್ ನಿರ್ದೇಶನದಲ್ಲಿ ಕಳೆದ ವರ್ಷ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದ್ದ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ, ಈಗ ಪುಸ್ತಕ ರೂಪದಲ್ಲಿ ಬಿಡುಗಡೆ ಆಗಿದೆ.
Daredevil Musthafa: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧಾರಿತ ಸಿನಿಮಾ ಡೇರ್ ಡೆವಿಲ್ ಮುಸ್ತಾಫಾ. ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಚಿತ್ರ ಪ್ರೇಕ್ಷಕರ ಪ್ರೀತಿ ಪಡೆದಿತ್ತು. ಶಶಾಂಕ್ ಸೋಗಾಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಡೇರ್ ಡೆವಿಲ್ ಮುಸ್ತಾಫಾ ಚಿತ್ರವೀಗ ಪುಸ್ತಕ ರೂಪ ಪಡೆದಿದೆ.
ಡೇರ್ ಡೆವಿಲ್ ಮುಸ್ತಾಫಾ ಸಿನಿಮಾಗೆ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆ ನಿರ್ದೇಶಕ ಶಶಾಂಕ್ ಸೋಗಾಲ್ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆಗಳನ್ನು ಪುಸ್ತಕ ರೂಪಕ್ಕೆ ಇಳಿಸಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಸುಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಶಕಿ ಕಂ ನಟಿ ಸಿಂಧು ಎಸ್ ಮೂರ್ತಿ, ನಿರ್ದೇಶಕರಾದ ಅನೂಪ್ ಭಂಡಾರಿ, ನಿತಿನ್ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಪುಸ್ತಕದ ವಿಶೇಷತೆಗಳೇನು?
ಕನ್ನಡದಲ್ಲಿ ಸಿನಿಮಾ ಕುರಿತ ಕೃತಿಗಳು ಕಡಿಮೆ. ಅದರಲ್ಲಿಯೂ ಕೆಲವೇ ಕೆಲವು ಚಿತ್ರಕಥೆಯ ಪುಸ್ತಕಗಳಿವೆ. ಆ ಸಾಲಿಗೀಗ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಈ ಪುಸ್ತಕದಲ್ಲಿ ಕಾಲೇಜು ದಿನಗಳನ್ನು ಮೆಲುಕು ಹಾಕುವಂತಹ ಸನ್ನಿವೇಶ. ಸಹಪಾಠಿಗಳ ನಡುವೆ ನಡೆಯುವ ಸಣ್ಣ ಪುಟ್ಟ ಜಗಳ ಹಾಗೂ ಧರ್ಮಕ್ಕೂ ಮಿಗಿಲಾದದ್ದು ಫ್ರೆಂಡ್ ಶಿಪ್ ಎಂಬ ಸಾರಾಂಶವನ್ನು ಸಮಾಜಕ್ಕೆ ಸಾರುವಂತಹ ವಿಷಯದ ಜೊತೆಗೆ ಸಿನಿಮಾ ಆಸಕ್ತರಿಗೆ ಪಠ್ಯವಾಗಬಲ್ಲ ಪುಸ್ತಕ ಅಂದರು ತಪ್ಪಿಲ್ಲ. ಒಂದು ಸಣ್ಣ ಕಥೆ ಎತ್ತಿಕೊಂಡು ಸ್ಕ್ರೀನ್ ಪ್ಲೇ, ಕಥೆ ಡೈಲಾಗ್ ಬರೆದು ದೃಶ್ಯ ರೂಪಕ್ಕೆ ಹೇಗೆ ಇಳಿಸಲಾಯಿತು? ಸಣ್ಣ ಕಥೆ ಚಿತ್ರ ಕಥೆ ಆಗಿದ್ದೇಗೆ? ಕಥೆ ಸಿನಿಮಾವಾಗಿದ್ದೇಗೆ ಎಂಬ ವಿಷಯಗಳು ಈ ಪುಸ್ತಕ ಓದಿದರೆ ತಿಳಿಯುತ್ತದೆ.
ಸಿನಿಮಾ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಪುಸ್ತಕಗಳ ಕೊರತೆ ಇದೆ. ಅದರಲ್ಲಿಯೂ ಇಂಗ್ಲೀಷ್ ಭಾಷೆಯಲ್ಲಿ ಕಥೆ ಬರೆದು ಸಿನಿಮಾ ಮಾಡುವವರು ಹೆಚ್ಚಿರುವಾಗ ಕನ್ನಡದಲ್ಲಿ ಸ್ಕ್ರೀಪ್ಟ್ ಬರೆದು ಸಿನಿಮಾ ಮಾಡಿದ್ದೇವೆ ಅನ್ನೋದನ್ನು ಡೇರ್ ಡೆವಿಲ್ ಮುಸ್ತಾಫಾ ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ. ಕನ್ನಡದ ಸದ್ಯದ ಸಿನಿಮಾರಂಗ ಇರುವ ಪರಿಸ್ಥಿತಿಯಲ್ಲಿ ಸಿನಿಮಾ ಸೂಕ್ಷ್ಮಗಳ ಬಗ್ಗೆ ಅರಿವು ಹುಟ್ಟಿಸಬಲ್ಲ ಇಂಥ ಕೃತಿಗಳ ಅಗತ್ಯ ಖಂಡಿತ ಇದೆ ಎಂಬುದು ನಿರ್ದೇಶಕರ ಮಾತು.
ಅಮೆಜಾನ್ ಪ್ರೈಂನಲ್ಲಿ ಡೇರ್ ಡೆವಿಲ್
ಕಳೆದ ವರ್ಷದ ಮೇ 19ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ. ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ಹೊಸತನದ ಕಥೆಯ ಮೂಲಕವೇ ಎಲ್ಲರಿಗೂ ಆಪ್ತವೆನಿಸಿತ್ತು. ನೋಡುಗರಿಂದಲೂ ಬಹುಪರಾಕ್ ಪಡೆದಿತ್ತು. ಸಿನಿಮಾ ನೋಡಿ ಖುದ್ದು ಡಾಲಿ ಧನಂಜಯ್ ಈ ಸಿನಿಮಾತಂಡದ ಬೆನ್ನಿಗೆ ನಿಂತಿದ್ದರು. ಹೀಗಿರುವಾಗಲೇ ಚಿತ್ರಮಂದಿರದಲ್ಲಿ 25 ದಿನ ಪೂರೈಸಿದ್ದ ಈ ಚಿತ್ರ ಜೂನ್ 16ರಂದು ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)