logo
ಕನ್ನಡ ಸುದ್ದಿ  /  ಮನರಂಜನೆ  /  Rishab Shetty: ನನಗೆ ದ್ರೋಣಾಚಾರ್ಯ ಗುರು ಉಪ್ಪಿ ಸಾರ್‌, ಓಹೋ ಓಹೋ ಹಾಗೇನೋ... ರಾಜಕುಮಾರ್‌ ಡೈಲಾಗ್‌ ನೆನಪಿಸಿದ ಕಾಂತಾರ ನಟ ರಿಷಬ್‌ ಶೆಟ್ಟಿ

Rishab Shetty: ನನಗೆ ದ್ರೋಣಾಚಾರ್ಯ ಗುರು ಉಪ್ಪಿ ಸಾರ್‌, ಓಹೋ ಓಹೋ ಹಾಗೇನೋ... ರಾಜಕುಮಾರ್‌ ಡೈಲಾಗ್‌ ನೆನಪಿಸಿದ ಕಾಂತಾರ ನಟ ರಿಷಬ್‌ ಶೆಟ್ಟಿ

Praveen Chandra B HT Kannada

Jul 24, 2023 09:00 AM IST

google News

ಕಾಂತಾರ ನಟ ರಿಷಬ್‌ ಶೆಟ್ಟಿ (ANI Photo/ Jitender Gupta)

    • Rishab Shetty: ಉಪೇಂದ್ರ ಅವರು ಈಗಷ್ಟೇ ನನಗೆ ಗುರು ಕಾಶಿನಾಥ್‌ ಎಂದಿದ್ದರು. ನಮಗೆ ಉಪೇಂದ್ರ (Upendra) ಅವರೇ ದ್ರೋಣಾಚಾರ್ಯ ಗುರುಗಳು ಎಂದು ಕಾಂತಾರ ನಟ (Kantara Film) ರಿಷಬ್‌ ಶೆಟ್ಟಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯಲ್ಲಿ ಅವರು ಈ ಮಾತು ಹೇಳಿದರು.
ಕಾಂತಾರ ನಟ ರಿಷಬ್‌ ಶೆಟ್ಟಿ  (ANI Photo/ Jitender Gupta)
ಕಾಂತಾರ ನಟ ರಿಷಬ್‌ ಶೆಟ್ಟಿ (ANI Photo/ Jitender Gupta) (Jitender Gupta)

ಬೆಂಗಳೂರು: ನಮಗೆಲ್ಲ ನಟ ಉಪೇಂದ್ರ ಅವರು ಗುರುಗಳು ಎಂದು ಕಾಂತಾರ ನಟ ರಿಷಬ್‌ ಶೆಟ್ಟಿ ಹೇಳಿದ್ದಾರೆ. "ಕನ್ನಡ ಚಿತ್ರರಂಗಕ್ಕೆ ಕುಂದಾಪುರದ ಕೊಡುಗೆ ದೊಡ್ಡದು. ಆಗಷ್ಟೇ ಮಾತನಾಡಿದ ಉಪೇಂದ್ರ ಅವರು ನನ್ನ ಗುರು ಕಾಶಿನಾಥ್ ಎಂದರು. ಅವರಿಬ್ಬರೂ ಕುಂದಾಪುರದವರು. ಉಪೇಂದ್ರ ಅವರಿಗೆ ಕಾಶೀನಾಥ್ ಗುರುವಾದರೆ ನಮಗೆ ಉಪೇಂದ್ರ ಅವರು ಗುರುಗಳು‌. ಅವರಿಂದ ಸ್ಫೂರ್ತಿಗೊಂಡೇ ಚಿತ್ರರಂಗಕ್ಕೆ ಬಂದೆ, ನಮ್ಮೂರಿನಿಂದ ಇನ್ನಷ್ಟು ಮಂದಿ ಚಿತ್ರರಂಗಕ್ಕೆ ಬರುವಂತಾಗಲಿ, ನಿಮ್ಮ ಈ ಬೆಂಬಲ ಇದೇ ರೀತಿ ಇರಲಿ, ಇನ್ನಷ್ಟು ಸಿನಿಮಾ ಮಾಡುವ ಶಕ್ತಿ ಬರುತ್ತದೆ" ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಕುಂದಾಪ್ರ ಕನ್ನಡ ಪ್ರತಿಷ್ಠಾನ'ವು 'ವಿಶ್ವ ಕುಂದಾಪುರ ಕನ್ನಡ ದಿನಾಚರಣೆ' (kundapura kannada dina 2023) ಪ್ರಯುಕ್ತ ಭಾನುವಾರ ಅತ್ತಿಗುಪ್ಪೆಯ ಬಂಟರ ಸಂಘದಲ್ಲಿ ಹಮ್ಮಿಕೊಂಡಿದ್ದ 'ಕುಂದಾಪ್ರ ಕನ್ನಡ ಹಬ್ಬ'ದಲ್ಲಿ ರಿಷಬ್‌ ಶೆಟ್ಟಿ ಈ ಅಭಿಪ್ರಾಯಪಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಉಪೇಂದ್ರ, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಸೇರಿದಂತೆ ಕುಂದಾಪುರದ ಹಲವು ನಟನಟಿಯರು, ಸಿನಿಮಾ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದಾರೆ.

ಓಹೋ, ಓಹೋ ಹಾಗೇನೋ, ರಾಜಕುಮಾರ್‌ ಡೈಲಾಗ್‌

"ನಮಗೆ ದ್ರೋಣಾಚಾರ್ಯ ಉಪ್ಪಿ ಸಾರ್‌, ಅಮ್ಮ ಸರಿ ಬೈದ್ರೆ ಓಹೋ ಓಹೋ ಹಾಗೆನೋ ಎಂದು ರಾಜಕುಮಾರ್‌ ಡೈಲಾಗ್‌ ಮಿಮಿಕ್ರಿ ಮಾಡುತ್ತಿದ್ದೇವು. ಉಪೇಂದ್ರ ಸಾರ್‌ ಅವರನ್ನು ಆಗ ನೋಡಿ ಇವರೇನೂ ಇಷ್ಟು ಚೆನ್ನಾಗಿ ನಟಿಸ್ತಾ ಇದ್ದಾರೆ, ನಮಗೂ ಇವರ ಹಾಗೆ ಆಗಬೇಕು ಎಂದು ಬಾಲ್ಯದಲ್ಲಿಯೇ ಅನಿಸ್ತಾ ಇತ್ತು" ಎಂದು ರಿಷಬ್‌ ಶೆಟ್ಟಿ ಅವರು ಉಪೇಂದ್ರ ಅವರ ಸ್ಫೂರ್ತಿಯನ್ನು ನೆನಪಿಸಿಕೊಂಡಿದ್ದಾರೆ.

"ನಮ್ಮೂರು ಕುಂದಾಪುರದ ಕೆರಾಡಿ ಸರ್ಕಾರಿ ಶಾಲೆಯಲ್ಲೇ ಶಿಕ್ಷಕರಿಲ್ಲ. ಮುಖ್ಯಮಂತ್ರಿಯವರು ಬಂದಿದ್ದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದಿರುವ ಕುರಿತು ಗಮನ ತರಬೇಕಂತಿದ್ದೆ. ಅವರು ಬರಲಿಲ್ಲ, ಈ ವಿಷಯ ಅವರಿಗೆ ಮಾಧ್ಯಮದ ಮೂಲಕ ತಲುಪಿ ಪರಿಹಾರ ಒದಗುತ್ತದೆ ಅಂತ ಆಶಿಸುತ್ತೇನೆ" ಎಂದು ರಿಷಬ್ ಶೆಟ್ಟಿ ಹೇಳಿದರು.

ನನಗೆ ಜೀವ ಕೊಟ್ಟಿದ್ದು ಕುಂದಾಪುರ, ಜೀವನ‌ ಕೊಟ್ಟಿದ್ದು ಬೆಂಗಳೂರು. ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡರೂ‌ ನಾವು ಕುಂದಾಪುರ ಭಾಷೆಯನ್ನು ಬಿಡಲಿಲ್ಲ ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ

ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಏನಂದ್ರು?

"ಆರು ತಿಂಗಳು ಕುಂದಾಪುರ ಪ್ರದೇಶದಲ್ಲಿ ಕೆಲಸ ಮಾಡಿದ್ದೆ, ಅಲ್ಲಿನ ಭಾಷೆ ಸ್ವಲ್ಪ ಕಲಿತಿದ್ದೆ ಎಂದರು. ಒಂದು ಭಾಷೆಯ ಹಬ್ಬ ಮುಖ್ಯ. ಕುಂದಾಪುರದ ಭಾಷೆಯಲ್ಲಿ ಒಂದು ವೇಗ, ಒಂದು ಜೋರು ಇದೆ ಎನ್ನುತ್ತ ಅದಕ್ಕೆ ಕಾರಣವನ್ನು ವಿಶ್ಲೇಷಿದರು. ಕುಂದಾಪುರದವರ ಯಶಸ್ಸಿಗೆ ಅವರ ಭಾಷೆ ಕಾರಣ ಎಂದ ರಾಜ್ ಬಿ. ಶೆಟ್ಟಿ, ಅದು ಅಲ್ಲಿನ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಹೇಗೆ ಪಾತ್ರ ವಹಿಸುತ್ತದೆ ಎಂಬುದನ್ನೂ ಹೇಳಿದರು. ಅಲ್ಲದೆ ಕುಂದಾಪುರದ ಜನರು ತಮ್ಮ ಮಕ್ಕಳಿಗೆ ಕುಂದಾಪುರ ಭಾಷೆ ಕಲಿಸಿ ಮಾತನಾಡುವಂತೆ ಮಾಡುವ ಮೂಲಕ ಅವರ ಯಶಸ್ಸಿಗೆ ಕಾರಣರಾಗಬಹುದು" ಎಂದು ನಟ ನಿರ್ದೇಶಕ ರಾಜ್‌ ಬಿ. ಶೆಟ್ಟಿ ಹೇಳಿದರು.

ನಟ ಪ್ರಮೋದ್ ಶೆಟ್ಟಿ ಮಾತು

"ನಾನು ಬೆಂಗಳೂರಲ್ಲೇ ಹುಟ್ಟಿ ಇಲ್ಲೇ ಬೆಳೆದರೂ ಕುಂದಾಪುರ ಕನ್ನಡ ಮಾತಾಡುತ್ತಿರುವುದಕ್ಕೆ ನನ್ನ ತಂದೆ-ತಾಯಿಯೇ ಕಾರಣ.ಇಲ್ಲಿರುವ ತಾಯಂದಿರು ತಮ್ಮ ಮಕ್ಕಳಿಗೆ ಕುಂದಾಪುರ ಕನ್ನಡ ಭಾಷೆ ಕಲಿಸಿ ಅಂತ ಕೇಳುತ್ತೇನೆ ಎಂದರು. ಅರೆಹೊಟ್ಟೆ, ಅರೆಭಾಷೆ, ಅರೆಬಟ್ಟೆ ಎಂದು ಕುಂದಾಪುರವನ್ನು ಉಪೇಂದ್ರರವರು ಉತ್ತಮವಾಗಿ ವ್ಯಾಖ್ಯಾನಿಸಿದ್ದಾರೆ" ಎಂದು ನಟ ಪ್ರಮೋದ್‌ ಶೆಟ್ಟಿ ಹೇಳಿದರು.

ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು

"ಮೊದಲು ನಾವೆಲ್ಲ ಬೆಂಗಳೂರಿಗೆ ಬಂದಾಗ ಯಾವ ಊರು ಕೇಳಿದರೆ ಮೊದಲು ಮಂಗಳೂರು ಎನ್ನುತ್ತಿದ್ದೆವು. ಮಂಗಳೂರಲ್ಲಿ ಎಲ್ಲಿ ಕೇಳಿದರೆ ಉಡುಪಿ ಎನ್ನುತ್ತಿದ್ದೆವು, ಉಡುಪಿಯಲ್ಲಿ ಎಲ್ಲಿ ಕೇಳಿದರೆ ಆಗ ಕುಂದಾಪುರ ಅಂತ ಹೇಳುತ್ತಿದ್ದೆವು. ಆಮೇಲೆ ನಾನು ಊರು ಯಾವುದು ಕೇಳಿದರೆ ಮೊದಲು ಬಸ್ರೂರು ಅಂತ ಹೇಳುತ್ತಿದ್ದೆ, ಬಸ್ರೂರು ಎಲ್ಲಿ ಕೇಳಿದರೆ ಕುಂದಾಪುರ, ಕುಂದಾಪುರ ಎಲ್ಲಿ ಕೇಳಿದರೆ ಉಡುಪಿ, ಉಡುಪಿ ಎಲ್ಲಿ ಕೇಳಿದರೆ ಮಂಗಳೂರು ಎನ್ನಲಾರಂಭಿಸಿದೆ. ಹೀಗೆ ಬದಲಾವಣೆ ತಂದುಕೊಂಡೆ ಎಂದರು. ನೀವೆಲ್ಲ ಕುಂದಾಪುರ ಕನ್ನಡ ಮಾತನಾಡಲು ಹಿಂಜರಿಯಬೇಡಿ, ಮುಜುಗರವಿಲ್ಲದೆ ಮಾತನಾಡಿ" ಎಂದು ರವಿ ಬಸ್ರೂರು ಹೇಳಿದರು.

ಕುಂದಾಪ್ರ ಕನ್ನಡ ಹಬ್ಬ

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪನೆ ಆಗಿರುವ ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕಾಗಿ ಅನುದಾನ ನೀಡುವಂತೆ ಒತ್ತಾಯ ಕುಂದಾಪ್ರ ಕನ್ನಡ ಹಬ್ಬದಲ್ಲಿ ವ್ಯಕ್ತವಾಯಿತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರಿಗೆ ಕುಂದಾಪ್ರ ಕನ್ನಡ ಪ್ರತಿಷ್ಠಾನದವರು ಈ ಮನವಿ ಸಲ್ಲಿಸಿ ಸರ್ಕಾರದಿಂದ ಅನುದಾನ ಕೊಡಿಸುವಂತೆ ಮನವಿ ಮಾಡಿಕೊಂಡರು.

ಮನವಿ ಸ್ವೀಕರಿಸಿದ ಜಯಪ್ರಕಾಶ್ ಹೆಗ್ಡೆಯವರು ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಅನುದಾನ ಒದಗಿಸುವ ಕುರಿತ ಈ ಮನವಿ ಮುಖ್ಯಮಂತ್ರಿಯವರಿಗೆ ಒಪ್ಪಿಸಿ, ನಾನು ಕೂಡ ಕೋರಿಕೊಳ್ಳುವುದಾಗಿ ಹೇಳಿದರು. ಕುಂದಾಪುರ ಕನ್ನಡ ಕುರಿತು ಎಲ್ಲರ ಜೊತೆ ಚರ್ಚೆ ಮಾಡಿ ಪರಿಣತರು ತಜ್ಞರನ್ನು ಅಧ್ಯಯನ ಸಮಿತಿಯಲ್ಲಿ ಹಾಕಿಕೊಳ್ಳಲಾಗುವುದು ಎಂದರು. ಊರ ಸನ್ಮಾನಕ್ಕೆ ಪಾತ್ರರಾದ ಪ್ರೊ.ಎ.ವಿ.ನಾವಡ ಅವರು ಕೂಡ ಅನುದಾನ ಒದಗಿಸುವಲ್ಲಿ ವಿಳಂಬ ಆಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿ, ಸರ್ಕಾರ ಬೇಗ ಅನುದಾನ ನೀಡುವಂತಾಗಬೇಕು ಎಂದು ಆಗ್ರಹಿಸಿದರು.

ರವಿ ಬಸ್ರೂರು ಅವರು ಊರಿನ ಅಭಿಮಾನದಿಂದ ಅಲ್ಲೇ ಸ್ಟುಡಿಯೋ ಮಾಡಿದ್ದಾರೆ. ಇದರಿಂದ ಊರಿನ ಹುಡುಗರಿಗೆ ಕೆಲಸ ಸಿಗುತ್ತಿರುವುದಲ್ಲದೆ, ಬೇರೆ ಊರಿನವರೂ ನಮ್ಮೂರಿಗೆ ಬರುವಂತಾಗಿರುವುದು ಉತ್ತಮ ಬೆಳವಣಿಗೆ ಎಂದು ಜಯಪ್ರಕಾಶ್ ಹೆಗ್ಡೆ ಮೆಚ್ಚುಗೆ ಸೂಚಿಸಿದರು‌. ಕಾಶೀನಾಥ್, ಉಪೇಂದ್ರ, ರಿಷಬ್, ಪ್ರಮೋದ್ ಶೆಟ್ಟಿ ಎಲ್ಲರೂ ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ನೀವೆಲ್ಲ ಮಕ್ಕಳಿಗೆ ಬರೀ ವಿದ್ಯಾಭ್ಯಾಸದ ಬಗ್ಗೆ ಮಾತ್ರ ಒತ್ತಾಯ ಮಾಡದೆ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಮುಂದುವರಿಯಲು ಅನುಕೂಲ ಮಾಡಿಕೊಡಿ. ಈ ಸಾಧಕರೆಲ್ಲರೂ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಮುಂದೆ ಬಂದರು ಎಂದ ಜಯಪ್ರಕಾಶ್ ಹೆಗ್ಡೆ ಕಿವಿಮಾತು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ