Varaha Chakram: ವರಾಹ ಚಕ್ರಂ ಮೂಲಕ ಡಿಜಿಟಲ್ ಜಗತ್ತಿನ ಮಾಫಿಯಾಕ್ಕೆ ಮುಕ್ತಿ ಹಾಡಲಿದ್ದಾರೆ ಈ ಆಧುನಿಕ ಪಂಚ ಪಾಂಡವರು
Oct 31, 2023 08:26 PM IST
Varaha Chakram: ವರಾಹ ಚಕ್ರಂ ಮೂಲಕ ಡಿಜಿಟಲ್ ಜಗತ್ತಿನ ಮಾಫಿಯಾಕ್ಕೆ ಮುಕ್ತಿ ಹಾಡಲಿದ್ದಾರೆ ಈ ಆಧುನಿಕ ಪಂಚ ಪಾಂಡವರು
- Varaha Chakram Launched: ಮಂಜು ಮಸ್ಕಲ್ ಮಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ವರಾಹ ಚಕ್ರಂ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿದೆ. ಡಿಜಿಟಲ್ ಸ್ಕ್ಯಾಮ್ ಕುರಿತ ಈ ಚಿತ್ರದಲ್ಲಿ ಐವರು ನವ ನಾಯಕರ ಜತೆಗೆ ನಟಿ ಪ್ರೇಮಾ ಸಹ ನಟಿಸುತ್ತಿದ್ದಾರೆ.
Varaha Chakram: ಡಿಜಿಟಲ್ ಜಗತ್ತಿನಲ್ಲಿ ಏನೇನೆಲ್ಲ ಅನ್ಯಾಯ, ಮೋಸ, ಅಕ್ರಮಗಳು ನಡೆಯುತ್ತಿವೆ ಎಂಬುದನ್ನು ವರಾಹ ಚಕ್ರಂ ಸಿನಿಮಾ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ. ಇತ್ತೀಚೆಗಷ್ಟೇ ಈ ಸಿನಿಮಾದ ಮುಹೂರ್ತ ನೆರವೇರಿದೆ. ಮಾಜಿ ಸಚಿವ ಆರ್. ಅಶೋಕ್ ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ. ಚಿತ್ರದ ನಿರ್ದೇಶಕರು ಆಧುನಿಕ ಪಂಚ ಪಾಂಡವರಂತೆ ಐವರು ನಾಯಕರನ್ನಿಟ್ಟುಕೊಂಡು ಈ ಅನ್ಯಾಯಕ್ಕೆ ಹೇಗೆ ಅಂತ್ಯ ಹಾಡಬಹುದೆಂಬುದನ್ನು ಸಿನಿಮಾ ಮೂಲಕ ತೋರಿಸಲಿದ್ದಾರೆ.
ಲಾವಣ್ಯ ಗ್ರೂಪ್ ಸಹಯೋಗದೊಂದಿಗೆ ಮನ್ವಂತರಿ ಮೂವಿಮೇಕರ್ಸ್ ಬ್ಯಾನರ್‌ಅಡಿಯಲ್ಲಿ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಅವರು, ಈ ಚಿತ್ರದಲ್ಲಿ ಕಥೆಯೇ ನಾಯಕ, ವರಾಹ ವಿಷ್ಣುವಿನ ಒಂದು ಅವತಾರ, ಬೆಂಗಳೂರಿನಲ್ಲಿ ಡಿಜಿಟಲೈಜೇಶನ್‌ನಿಂದ ಕೆಲವು ದುರುಪಯೋಗಗಳಾಗುತ್ತಿವೆ. ಅವ್ಯವಸ್ಥಿತ ನಿಯಮಗಳು, ದೌರ್ಜನ್ಯಗಳಿಗೆ ಅಂತ್ಯ ಹಾಡುವ ಕಾನ್ಸೆಪ್ಟ್ ವರಾಹಚಕ್ರಂ ಚಿತ್ರದಲ್ಲಿದೆ ಎಂದರು.
ಮುಂದುವರಿದು ಮಾತನಾಡಿ, ಕಣ್ಣು, ಗನ್ನು, ಪೆನ್ನು ಈ ಮೂರನ್ನೂ ಇಟ್ಟುಕೊಂಡು ಏನೋ ಮಾಡಲು ಹೊರಟಿದ್ದೇನೆ. ಬಳ್ಳಾರಿ, ಹಿರಿಯೂರು, ಬೆಂಗಳೂರು, ಚಿತ್ರದುರ್ಗ, ತಮಿಳುನಾಡಿನ ಪೊಲ್ಲಾಚ್ಚಿ ಅಲ್ಲದೆ ಉತ್ತರ ಪ್ರದೇಶದ ವಾರಣಾಸಿ, ಕಾಶಿಯಲ್ಲೇ 20 ದಿನ ಶೂಟಿಂಗ್ ನಡೆಸುವ ಪ್ಲಾನಿದೆ. ಪ್ರೇಮಾ ಅವರದು ಗಟ್ಟಿ ಪಾತ್ರ, ಸಾಯಿಕುಮಾರ್ ಪಾತ್ರ ಕೂಡ ಅದ್ಭುತವಾಗಿದೆ ಎಂದರು.
"ಈ ಹಿಂದೆ ಮಾಡಿದ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾದ, ಸ್ವಲ್ಪ ನೆಗೆಟಿವ್, ಪಾಸಿಟಿವ್ ಎರಡೂ ಶೇಡ್ ಇರೋ ಪಾತ್ರ. ಭಾನುಚಂದರ್ ಜೊತೆ ಹಿಂದೆ ದೇವಿ ಚಿತ್ರದಲ್ಲಿ ಅಭಿನಯಿಸಿದ್ದೆ. ಇದೀಗ ಅವರ ಜತೆ ಇನ್ನೊಂದು ಸಿನಿಮಾ ಮಾಡುತ್ತಿದ್ದೇನೆ ಎಂದರು ನಟಿ ಪ್ರೇಮಾ. ತೆಲುಗು ನಟ ಭಾನುಚಂದರ್, ಪ್ರೇಮಾ, ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಅರ್ಜುನ್ ದೇವ್, ರಾಣಾ, ಇಮ್ರಾನ್ ಷರೀಫ್, ಆರ್ಯನ್ ಹಾಗೂ ಪ್ರತೀಕ್ ಗೌಡ ಪಂಚಪಾಂಡವರಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಐವರು ನಾಯಕರಿಗೆ ನಾಯಕಿಯರಾಗಿ ಶೋಭಾರಾಣಿ, ಪ್ರಿಯಾ ತರುಣ್, ಅನನ್ಯ, ಜಾಹ್ನವಿ, ದೀಕ್ಷಾ, ಚೈತ್ರಾ ನಟಿಸುತ್ತಿದ್ದಾರೆ. ಚಿ.ಗುರುದತ್, ಶೋಭರಾಜ್ ಅಲ್ಲದೆ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದು, ಅವರಿಗೆ ಜೋಡಿಯಾಗಿ ಮುಂಬೈನ ನೇಹಾ ಅನ್ಸಾರಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಪ್ರಮುಖ ಪಾತ್ರವೊಂದಕ್ಕೆ ಸೋನು ಸೂದ್‌ರನ್ನು ಕರೆತರುವ ಪ್ರಯತ್ನವೂ ಚಿತ್ರತಂಡದಿಂದ ನಡೆದಿದೆ. ಚಿತ್ರಕ್ಕೆ ಶರತ್‌ಕುಮಾರ್ ಜಿ. ಅವರ ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದೆ.
5 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುವ ಜೊತೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿರುವ ಡಾ.ವಿ. ನಾಗೇಂದ್ರಪ್ರಸಾದ್, ಇದೊಂದು ಆಕ್ಷನ್, ಫ್ಯಾಮಿಲಿ ಜೊತೆಗೆ ಅಪ್ಪಟ ಕಮರ್ಷಿಯಲ್ ಚಿತ್ರ. ಈಗಿನ ಯುಗದಲ್ಲಿ ಡಿಜಿಟಲ್ ಮಾಲಿನ್ಯ ಹೇಗೆ ನಡೆಯುತ್ತಿದೆ? ಅಲ್ಲಿ ನಡೆಯುತ್ತಿರುವ ಅನೇಕ ದುಷ್ಕೃತ್ಯಗಳನ್ನು ಹೇಳುವ ಚಿತ್ರವಿದು. ನನ್ನ ಕೆಲಸ ಆಫ್ ಸ್ಕ್ರೀನ್ ನಲ್ಲೇ ಜಾಸ್ತಿಯಿದ್ದು, ಚಿತ್ರದ ಡೈಲಾಗ್ ಕೂಡ ಬರೆಯುತ್ತಿದ್ದೇನೆ. ಪ್ರೀತಿಯಿಂದ ತೂಕವಿರುವ ಒಂದು ಪಾತ್ರವನ್ನೂ ಸಹ ಮಾಡುತ್ತಿದ್ದೇನೆ ಎಂದರು.