logo
ಕನ್ನಡ ಸುದ್ದಿ  /  ಮನರಂಜನೆ  /  Yash: ಸುದೀರ್ಘ ಕಾಯುವಿಕೆಗೆ ಬಿತ್ತು ಬ್ರೇಕ್;‌ ಯಶ್‌ ಹೊಸ ಸಿನಿಮಾ ಹೆಸರು ‘Toxic’

Yash: ಸುದೀರ್ಘ ಕಾಯುವಿಕೆಗೆ ಬಿತ್ತು ಬ್ರೇಕ್;‌ ಯಶ್‌ ಹೊಸ ಸಿನಿಮಾ ಹೆಸರು ‘TOXIC’

Dec 08, 2023 10:38 AM IST

google News

Yash: ಸುದೀರ್ಘ ಕಾಯುವಿಕೆಗೆ ಬಿತ್ತು ಬ್ರೇಕ್;‌ ಯಶ್‌ ಹೊಸ ಸಿನಿಮಾ ಹೆಸರು ‘TOXIC’

    • ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹೊಸ ಸಿನಿಮಾಕ್ಕೆ ಟಾಕ್ಸಿಕ್‌ ಎಂಬ ಶೀರ್ಷಿಕೆ ಇಡಲಾಗಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಈ ಚಿತ್ರ ನಿರ್ದೇಶಿಸಿದರೆ, ಕೆವಿಎನ್‌ ಪ್ರೊಡಕ್ಷನ್ಸ್‌ ಈ ಚಿತ್ರ ನಿರ್ಮಾಣ ಮಾಡುತ್ತಿದೆ. 
Yash: ಸುದೀರ್ಘ ಕಾಯುವಿಕೆಗೆ ಬಿತ್ತು ಬ್ರೇಕ್;‌ ಯಶ್‌ ಹೊಸ ಸಿನಿಮಾ ಹೆಸರು ‘TOXIC’
Yash: ಸುದೀರ್ಘ ಕಾಯುವಿಕೆಗೆ ಬಿತ್ತು ಬ್ರೇಕ್;‌ ಯಶ್‌ ಹೊಸ ಸಿನಿಮಾ ಹೆಸರು ‘TOXIC’

Yash 19: ರಾಕಿಂಗ್‌ ಸ್ಟಾರ್‌ ಯಶ್‌ ಕಡೆಯ ಸಿನಿಮಾ ಕೆಜಿಎಫ್‌ ಚಾಪ್ಟರ್‌ 2 ತೆರೆಕಂಡಿದ್ದು 2022ರ ಏಪ್ರಿಲ್‌ 14ರಂದು. ಅದಾದ ಬಳಿಕ ಯಶ್‌ ಮುಂದಿನ ಸಿನಿಮಾ ಯಾವುದಿರಬಹುದು? ಈ ಗೊಂದಲದಲ್ಲಿಯೇ ಸುದೀರ್ಘ ಒಂದೂ ವರೆ ವರ್ಷವೇ ಕಳೆದು ಹೋಯಿತು. ಆ ಸಿನಿಮಾ, ಈ ಸಿನಿಮಾ, ಅವರ ಜತೆ, ಇವರ ಜತೆ ಎಂಬಿತ್ಯಾದಿ ವದಂತಿಗಳು ಹರಿದಾಡಿದವೇ ಹೊರತು, ಅಧಿಕೃತ ಘೋಷಣೆ ಮಾತ್ರ ಆಗಿರಲಿಲ್ಲ. ಇದೀಗ ಕೊನೆಗೂ ಆ ಕಾಯುವಿಕೆಗೆ ಉತ್ತರ ಸಿಕ್ಕಿದೆ. ಯಶ್‌ 19ನೇ ಚಿತ್ರಕ್ಕೆ ಟಾಕ್ಸಿಕ್‌ ಎಂದು ಹೆಸರಿಡಲಾಗಿದೆ.

ಕೆಜಿಎಫ್‌ ಸಿನಿಮಾ ಮೂಲಕ ಕರ್ನಾಟಕ ಮಾತ್ರವಲ್ಲದೆ, ಇಡೀ ಭಾರತವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದರು ಯಶ್.‌ ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಮೂಡಿಬಂದ ಕೆಜಿಎಫ್‌ನ ಎರಡೂ ಭಾಗಗಳು ಬಾಕ್ಸ್‌ ಆಫೀಸ್‌ ಚಿಂದಿ ಮಾಡಿದ್ದವು. ಮೊದಲ ಭಾಗ 450 ಕೋಟಿ ಕಲೆಕ್ಷನ್‌ ಮಾಡಿದ್ದರೆ, ಎರಡನೇ ಭಾಗ 1250 ಕೋಟಿ ರೂ. ಬಾಚಿಕೊಂಡಿತ್ತು. ಈ ಸಿನಿಮಾಗಳಿಂದ ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಪಟ್ಟ ಅಲಂಕರಿಸಿದ್ದರು. ಆದರೆ, ಕೆಜಿಎಫ್‌ ಚಾಪ್ಟರ್‌ 2 ಬಳಿಕ ಯಶ್‌ ಅವರ ಮುಂದಿನ ಚಿತ್ರದ ಸುದ್ದಿ ಇರಲಿಲ್ಲ. ಈಗ ಕೊನೆಗೂ 19ನೇ ಸಿನಿಮಾ ಶೀರ್ಷಿಕೆ ರಿವೀಲ್‌ ಆಗಿದೆ.

ಈ ಹಿಂದೆ ಸುದ್ದಿಯಾದಂತೆ, ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಯಶ್‌ ಅವರ 19ನೇ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂಬ ಮಾತಂತೆ, ಈ ವಿಚಾರ ಬಹುತೇಕ ಖಾತ್ರಿ ಆಗಿತ್ತು. ಆದರೆ, ಅಧಿಕೃತವಾಗಿ ಯಾರೂ ಬಾಯಿ ಬಿಟ್ಟಿರಲಿಲ್ಲ. ಅದಕ್ಕೆ ಯಶ್‌ ಲಕ್ಕಿ ತಿಂಗಳೆಂದೇ ಕರೆಯಲ್ಪಡುವ ಡಿಸೆಂಬರ್‌ ತಿಂಗಳೇ ಬರಬೇಕಾಯಿತು! ಅದರಂತೆ ಚಿತ್ರಕ್ಕೆ ಟಾಕ್ಸಿಕ್‌ ಹೆಸರು ಅಂತಿಮವಾಗಿದೆ. ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ಪ್ಯಾನ್‌ ವರ್ಲ್ಡ್‌ ಸಿನಿಮಾ

ಟಾಕ್ಸಿಕ್‌ ಸಿನಿಮಾದ ಶೀರ್ಷಿಕೆ ಝಲಕ್‌ ಬಿಡುಗಡೆ ಆಗಿದೆ. ಭೂಗತ ಜಗತ್ತಿನ ಜತೆಗೆ ಮಾಫಿಯಾವೊಂದರ ಸುತ್ತ ಇಡೀ ಸಿನಿಮಾ ಸುತ್ತಲಿದೆ. ಅಂತಾರಾಷ್ಟ್ರೀಯ ಕನೆಕ್ಷನ್‌ ಸಹ ಈ ಸಿನಿಮಾಕ್ಕಿರಲಿದೆ. ಚಿತ್ರದ ಬಹುತೇಕ ಶೂಟಿಂಗ್‌ ಗೋವಾದಲ್ಲಿ ನಡೆಯಲಿದೆ ಎಂಬ ಮಾಹಿತಿಯೂ ಸಿಕ್ಕಿದ್ದು, ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ಸಿನಿಮಾ ರಿಲೀಸ್‌ ಆಗಲಿದೆ. ವಿಶೇಷವಾಗಿ ಇಂಗ್ಲಿಷ್‌ನಲ್ಲಿಯೂ ಈ ಸಿನಿಮಾ ತೆರೆ ಕಾಣಲಿದೆ ಎಂದೇ ಹೇಳಲಾಗುತ್ತಿದೆ.

2025ರ ಏಪ್ರಿಲ್‌ನಲ್ಲಿ ತೆರೆಗೆ

ಮುಂದಿನ ಸಿನಿಮಾ ಯಾವುದು ಎಂಬ ಮಾಹಿತಿ ಹೊರಬೀಳುವುದಕ್ಕೇ ಒಂದೂವರೆ ವರ್ಷ ಆಯ್ತು. ಇನ್ನು ಸಿನಿಮಾ ರಿಲೀಸ್‌ ಯಾವಾಗ ಇರಬಹುದು? ಈ ಪ್ರಶ್ನೆಗೂ ಶೀರ್ಷಿಕೆ ಟೀಸರ್‌ನಲ್ಲಿ ಉತ್ತರ ನೀಡಿದೆ ತಂಡ. ಅಂದಹಾಗೆ, ಕೆಜಿಎಫ್‌ ರಿಲೀಸ್‌ ಆಗಿದ್ದ ಏಪ್ರಿಲ್‌ ತಿಂಗಳಲ್ಲೇ ಟಾಕ್ಸಿಕ್‌ ಸಹ ಬಿಡುಗಡೆ ಆಗಲಿದೆ. ಹಾಗಂತ ಮುಂದಿನ ಏಪ್ರಿಲ್‌ ಎಂದುಕೊಂಡರೆ ನಿಮ್ಮ ಊಹೆ ತಪ್ಪು. 2025ರ ಏಪ್ರಿಲ್‌ 10ರಂದು ಟಾಕ್ಸಿಕ್‌ ಸಿನಿಮಾ ರಿಲೀಸ್‌ ಆಗಲಿದೆ. ಸದ್ಯಕ್ಕೆ ಶೀರ್ಷಿಕೆ ಟೀಸರ್‌ನಲ್ಲಿ ನಿರ್ಮಾಪಕರು, ನಿರ್ದೇಶಕರ ಹೆಸರನ್ನಷ್ಟೇ ರಿವೀಲ್‌ ಮಾಡಲಾಗಿದೆ. ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ, ತಾಂತ್ರಿಕ ಬಳಗದ ಮಾಹಿತಿಯೂ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ