ನಿಮ್ಮನ್ನ ನೋಡಿದ್ರೆ, ತೆಲುಗಿನವ್ರು ಅನ್ಸೋದೆ ಇಲ್ಲ, ಯಾಕಂದ್ರೆ ನೀವೂ ಕುಂದಾಪ್ರದವ್ರೇ; ಸೈಮಾ ವೇದಿಕೆಯಲ್ಲಿ ರಿಷಬ್, ಎನ್‌ಟಿಆರ್ ಮಾತು
Sep 16, 2023 01:59 PM IST
ನಿಮ್ಮನ್ನ ನೋಡಿದ್ರೆ, ತೆಲುಗಿನವ್ರು ಅನ್ಸೋದೆ ಇಲ್ಲ, ಯಾಕಂದ್ರೆ ನೀವೂ ಕುಂದಾಪ್ರದವ್ರೇ; ಸೈಮಾ ವೇದಿಕೆಯಲ್ಲಿ ರಿಷಬ್, ಎನ್‌ಟಿಆರ್ ಮಾತು
- ಸೈಮಾ ವೇದಿಕೆ ಮೇಲೆ ರಿಷಬ್ ಶೆಟ್ಟಿ ಮತ್ತು ಜೂನಿಯರ್ ಎನ್‌ಟಿಆರ್ ನಡುವಿನ ಮಾತುಕತೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
SIIMA Awards 2023: ಟಾಲಿವುಡ್ ನಟ ಜೂ. ಎನ್‌ಟಿಆರ್ ಕೇವಲ ತೆಲುಗು ರಾಜ್ಯಕ್ಕೆ ಸೀಮಿತವಾದ ನಟನಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡು, ಅದೇ ಹಾದಿಯಲ್ಲಿ ಹೊಸ ಹೊಸ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಮುನ್ನುಗ್ಗುತ್ತಿದ್ದಾರೆ. ಮೂಲ ತೆಲುಗು ಭಾಷಿಕ ಈ ನಟ, ಕರ್ನಾಟಕದ ಜತೆಗೂ ವಿಶೇಷ ನಂಟು ಹೊಂದಿದ್ದಾರೆ. ಒಂದರ್ಥದಲ್ಲಿ ಕರ್ನಾಟಕದ ಮಗನೂ ಹೌದು. ಏಕೆಂದರೆ, ಜೂ. ಎನ್‌ಟಿಆರ್ ಅವರ ತಾಯಿ ಕುಂದಾಪುರದವರು. ಆ ಕಾರಣಕ್ಕೂ ಅವರು ಆಗಾಗ ಕನ್ನಡಿಗರ ಬಾಯಲ್ಲಿ ನಲಿಯುತ್ತಿರುತ್ತಾರೆ.
ಸಿನಿಮಾ ವಿಚಾರದಲ್ಲೂ ಸ್ಯಾಂಡಲ್‌ವುಡ್ ಜತೆಗೆ ವಿಶೇಷ ನಂಟಿದೆ ತಾರಕ್‌ಗೆ. ದಿವಂಗತ ನಟ ಪುನೀತ್ ರಾಜ್‌ಕುಮಾರ್ ಮತ್ತು ರಾಜ್ ಕುಟುಂಬದ ಜತೆಗೂ ಅವಿನಾಭಾವ ನಂಟು ಹೊಂದಿದ್ದಾರೆ. ಪುನೀತ್ ನಟನೆಯ ಚಕ್ರವ್ಯೂಹ ಸಿನಿಮಾದ ಗೆಳೆಯ ಗೆಳೆಯ ಹಾಡನ್ನೂ ಹಾಡಿದ್ದಾರೆ ತಾರಕ್. ಅದಾದ ಬಳಿಕ ಪುನೀತ್ ಅವರಿಗೆ ಕರ್ನಾಟಕ ರತ್ನ ನೀಡುವ ಸಂದರ್ಭದಲ್ಲಿ ಸುರಿವ ಮಳೆಯ ನಡುವೆಯೂ ಆಗಮಿಸಿದ್ದ ಜೂ.ಎನ್‌ಟಿಆರ್, ಕನ್ನಡದಲ್ಲಿಯೇ ಮಾತನಾಡಿ ಕರುನಾಡ ಜನರ ಮನಸನ್ನು ಗೆದ್ದಿದ್ದರು.
ಇದೀಗ ಇದೇ ನಟ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಮಾತನಾಡಿ ಮಗದೊಮ್ಮೆ ಕನ್ನಡಿಗರ ಮೆಚ್ಚುಗೆ ಪಡೆದಿದ್ದಾರೆ. ದುಬೈನಲ್ಲಿ 2023ನೇ ಸೈಮಾ ಸಿನಿಮಾ ಹಬ್ಬ ಶುರುವಾಗಿದೆ. ಸೆ. 15 ಮತ್ತು 16ರಂದು ಎರಡು ದಿನ ನಡೆಯಲಿರುವ ಈ ಅವಾರ್ಡ್ ಕಾರ್ಯಕ್ರಮಕ್ಕೆ ಸೌತ್ ಸಿನಿಮಾರಂಗ ದಿಗ್ಗಜ ನಟ, ನಟಿಯರು, ತಂತ್ರಜ್ಞರು ಆಗಮಿಸಿದ್ದಾರೆ. ಅದೇ ರೀತಿ ಸೆ. 15ರಂದು ಕನ್ನಡ ಮತ್ತು ತೆಲುಗು ಸಿನಿಮಾಗಳ ಪ್ರಶಸ್ತಿ ಘೋಷಣೆ ಆಗಿದೆ. ಆ ವೇಳೆ ರಿಷಬ್ ಮತ್ತು ಎನ್‌ಟಿಆರ್ ಮಾತುಕತೆ ಎಲ್ಲರ ಗಮನ ಸೆಳೆದಿದೆ.
ಕಾಂತಾರ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು. ಆ ಪ್ರಶಸ್ತಿ ಪಡೆಯಲು ರಿಷಬ್ ವೇದಿಕೆ ಮೇಲೆ ಬಂದು ಅವಾರ್ಡ್ ಸ್ವೀಕರಿಸಿದ್ದಾರೆ. ಇತ್ತ ವೇದಿಕೆ ಮೇಲಿದ್ದ ನಿರೂಪಕ ಅಕುಲ್, ವೇದಿಕೆ ಮುಂಭಾಗದಲ್ಲಿದ್ದ ಜೂ. ಎನ್‌ಟಿಆರ್ ಅವರಿಗೆ ಮೈಕ್ ನೀಡಿದ್ದಾರೆ. ಈ ವೇಳೆ ರಿಷಬ್‌ಗೆ ಕನ್ನಡದಲ್ಲಿಯೇ ಶುಭ ಕೋರಿದ್ದಾರೆ ಎನ್‌ಟಿಆರ್. ಇಬ್ಬರ ನಡುವೆ ಒಂದಷ್ಟು ಮಾತುಕತೆ ನಡೆದಿದೆ. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ರಿಷಬ್ - ಎನ್‌ಟಿಆರ್ ಮಾತುಕತೆ
“ಹೇಗಿದ್ದೀರಾ ಸರ್.. ಎಂದು ಎನ್‌ಟಿಆರ್ ರಿಷಬ್‌ಗೆ ಕನ್ನಡದಲ್ಲಿಯೇ ಕೇಳಿದ್ದಾರೆ. ಅದಕ್ಕೆ ತುಂಬ ಚೆನ್ನಾಗಿದ್ದೀನಿ ಸರ್ ಎಂದಿದ್ದಾರೆ ರಿಷಬ್. ಬಳಿಕ ಕುಂದಾಪ್ರದಲ್ಲಿ ಹೀಗೆ ಮಾತನಾಡುತ್ತೀರಾ? ಎಂದು ಅಕುಲ್ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಎನ್‌ಟಿಆರ್, ”ನಮ್ಮ ಅಮ್ಮನ ಜತೆಗೆ ಹೀಗೆ ಮಾತನಾಡುತ್ತೇನೆ" ಎಂದಿದ್ದಾರೆ “ಮೊದಲನೇದಾಗಿ ನಿಮ್ಮನ್ನು ನೇರವಾಗಿ ಭೇಟಿ ಮಾಡಿ ಥ್ಯಾಂಕ್ಸ್ ಹೇಳಲು ಅವಕಾಶ ಸಿಗಲಿಲ್ಲ. ಕಿರಿಕ್ ಪಾರ್ಟಿ ಸಿನಿಮಾಕ್ಕೆ ಪ್ರಶಸ್ತಿ ಬಂದಾಗ, ನೀವೇ ಅವಾರ್ಡ್ ಕೊಟ್ಟಿದ್ರಿ. ಆಗಿನಿಂದ ಒಂದು ಎಮೋಷನ್ಸ್ ಏನೆಂದರೆ, ನಿಮ್ಮ ತಾಯಿ ಊರು ಮತ್ತು ನಮ್ಮ ಊರು ಕುಂದಾಪುರ ಆಗಿರೋದ್ರಿಂದ್ರ, ನೀವು ಹೊರಗಿನವರು ಅಂತ ಅನಿಸೋದೆ ಇಲ್ಲ. ನೀವು ನಮ್ಮವರೇ ಎಂದು ಭಾವಿಸಿದ್ದೇವೆ” ಎಂದಿದ್ದಾರೆ ರಿಷಬ್ ಶೆಟ್ಟಿ.