Viral Video: ನಟ ದರ್ಶನ್ ಫೋಟೋಗೆ ಮುತ್ತಿಕ್ಕಿದ್ದ ದೇಗುಲದ ಬಸವ, ಮೂಕಪ್ರಾಣಿಗೂ ಗೊತ್ತು ಈ ಪುಣ್ಯಾತ್ಮನ ಬಗ್ಗೆ ಅಂದ್ರು ಫ್ಯಾನ್ಸ್
Aug 12, 2024 06:17 PM IST
Viral Video: ನಟ ದರ್ಶನ್ ಫೋಟೋಗೆ ಮುತ್ತಿಕ್ಕಿದ್ದ ಬಸವ, ಪುಣ್ಯಕೋಟಿಗೂ ಗೊತ್ತು ಈ ಪುಣ್ಯಾತ್ಮನ ಬಗ್ಗೆ ಅಂದ್ರು ಫ್ಯಾನ್ಸ್
- Kannada Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಜೈಲಿನಲ್ಲಿದ್ದಾರೆ. ತಮ್ಮ ನೆಚ್ಚಿನ ನಟ ಜೈಲಿನಲ್ಲಿರುವುದು ಡಿಬಾಸ್ ಅಭಿಮಾನಿಗಳಿಗೆ ಸಹಜವಾಗಿ ನೋವಿನ ವಿಚಾರ. ಇಂತಹ ಸಂದರ್ಭದಲ್ಲಿ ದೇವಾಲಯದ ಬಸವವೊಂದು ದರ್ಶನ್ ಫೋಟೋಗೆ ಮುತ್ತಿಕ್ಕಿದ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಒಂದೆಡೆ ಕನ್ನಡ ನಟ ದರ್ಶನ್ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೊಂದೆಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಬಸವವೊಂದು ದರ್ಶನ್ ಫೋಟೋಗೆ ಮುತ್ತಿಕ್ಕಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಆ ಬಸವನ ವಿಡಿಯೋವನ್ನೇ ಪುಣ್ಯಕೋಟಿ (ಗೋವು) ಆಶೀರ್ವಾದವೆಂದು ಹಂಚಿಕೊಳ್ಳುತ್ತಿದ್ದಾರೆ.
ದರ್ಶನ್ ಫೋಟೋಗೆ ಬಸವನ ಮುತ್ತು- ವೈರಲ್ ವಿಡಿಯೋ
ಎಕ್ಸ್‌ನಲ್ಲಿ ಹಲವು ಡಿಬಾಸ್ ಅಭಿಮಾನಿಗಳು ಈ ವೈರಲ್ ವಿಡಿಯೋ ಹಂಚಿಕೊಂಡಿದ್ದಾರೆ. ಹಲವು ಜನರು ಲೈಕ್‌ಗಳನ್ನೂ ಮಾಡಿದ್ದಾರೆ. ಪುಣ್ಯಕೋಟಿಗೂ ಗೊತ್ತು ಈ ಪುಣ್ಯಾತ್ಮನ ಬಗ್ಗೆ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ, ಮೂಕ ಪ್ರಾಣಿಯೊಂದರ ನಡೆಯೊಂದು ದರ್ಶನ್ ಅಭಿಮಾನಿಗಳ ಹೃದಯಲ್ಲಿ "ಎಲ್ಲವೂ ಒಳ್ಳೆಯದಾಗುತ್ತದೆ, ಡಿ ಬಾಸ್ ಹೊರಗೆ ಬಂದೇ ಬರುತ್ತಾರೆ" ಎಂಬ ನಿರೀಕ್ಷೆ ಮೂಡಿಸಿದೆ.
ದೇವಾಲಯವೊಂದರ ಮುಂಭಾಗದಲ್ಲಿ ಬಸವ ಓಡೋಡಿ ಬರುವ ದೃಶ್ಯವಿದೆ. ಅಲ್ಲಿ ಬದಿಯಲ್ಲಿ ಕುಳಿತ ಒಂದಿಷ್ಟು ಜನರಲ್ಲಿ ಒಬ್ಬರಲ್ಲಿ ದರ್ಶನ್ ಫೋಟೋವಿದೆ. ಆ ಬಸವ ಆ ಫೋಟೋವನ್ನು ನೋಡಿ ಮೂಸುತ್ತ ಇರುತ್ತದೆ. ಇದು ದರ್ಶನ್ ಫೋಟೋಗೆ ಮುತ್ತಿಕ್ಕುವಂತೆ ಕಾಣಿಸಿದೆ. ಈ ವಿಡಿಯೋ ವೈರಲ್ ಆಗಿದೆ. ಬಸವನ ಆಶೀರ್ವಾದ ನಮ್ಮ ಬಾಸ್‌ಗೆ ಖಂಡಿತಾ ದೊರಕಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ಜೈಲಿಗೆ ಭೇಟಿ ನೀಡಿದ ವಿಜಯಲಕ್ಷ್ಮಿ
ಇಂದು ಕೂಡ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ದರ್ಶನ್‌ರನ್ನು ಭೇಟಿಯಾಗಿದ್ದಾರೆ. ಇತ್ತೀಚೆಗೆ ಹಲವು ದೇವಾಲಯಗಳಿಗೆ ಭೇಟಿ ನೀಡಿ ದರ್ಶನ್ ಬಿಡುಗಡೆಗೆ ಪಾರ್ಥಿಸಿದ್ದರು. ವಿಜಯಲಕ್ಷ್ಮಿ ಒಟ್ಟು ಏಳು ಬಾರಿ ಜೈಲಿಗೆ ಭೇಟಿ ನೀಡಿದಂತಾಗಿದೆ. ದರ್ಶನ್ ಅಕ್ಕನ ಮಗ ಚಂದನ್ ಕೂಡ ಇವರ ಜತೆಗಿದ್ದರು. ನಟಿ ಶ್ರುತಿ ನಾಯ್ಡು ಕೂಡ ಜೈಲಿಗೆ ಇವರೊಂದಿಗೆ ಆಗಮಿಸಿ ದರ್ಶನ್‌ರನ್ನು ಭೇಟಿಯಾಗಿದ್ದಾರೆ. ಕಳೆದ ವಾರ ದರ್ಶನ್ ಅವರಿಗೆ ಬನಶಂಕರಿ ಪ್ರಸಾದವನ್ನು ವಿಜಯಲಕ್ಷ್ಮಿ ನೀಡಿದ್ದರು. ವಾರದಲ್ಲಿ ಎರಡು ಬಾರಿ ಮಾತ್ರ ಭೇಟಿಯಾಗಲು ಅವಕಾಶವಿದೆ.
ಇನ್ನೊಂದೆಡೆ ಕನ್ನಡ ಚಿತ್ರರಂಗವು ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ಪೂಜೆ ಹಮ್ಮಿಕೊಂಡಿದೆ ಎಂದು ಸುದ್ದಿಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ರಾಕ್‌ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಪ್ರತಿಕ್ರಿಯೆ ನೀಡಿದ್ದು "ಬೆಂಗಳೂರಿನ ಕಲಾವಿದರ ಸಂಘದಲ್ಲಿ ಹೋಮ ನಡೆಸುವುದು ದರ್ಶನ್ ಬಿಡುಗಡೆಗಾಗಿ ಅಲ್ಲ. ಇದು ಚಿತ್ರರಂಗದ ಒಳಿತಿಗಾಗಿ" ಎಂದಿದ್ದಾರೆ. "ದರ್ಶನ್ ಬಿಡುಗಡೆಗಾಗಿ ಇಲ್ಲಿ ಯಾಕೆ ಪೂಜೆ ಮಾಡಬೇಕು. ಮನೆಯಲ್ಲಿಯೇ ಮಾಡುತ್ತಿದ್ದೆ. ನೂರು ದೇವಾಲಯಗಳಲ್ಲಿ ಪೂಜೆ ಮಾಡಿಸುತ್ತಿದ್ದೆ" ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ. "ಕೊರೊನಾ ಬಳಿಕ ಬೆಂಗಳೂರಿನ ಕಲಾವಿದರ ಸಂಘದ ಕಟ್ಟಡದಲ್ಲಿ ಪೂಜೆ ಮಾಡಿಸಬೇಕೆಂದು ಅಂದುಕೊಂಡಿದ್ದೆವು. ಸಮಯ ಕೂಡಿ ಬರಲಿಲ್ಲ. ಈಗ ಪೂಜೆ ಮಾಡಿಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.