logo
ಕನ್ನಡ ಸುದ್ದಿ  /  ಮನರಂಜನೆ  /  Pepe Movie Review: ನೀರಿಗಾಗಿ ರಕ್ತ ತರ್ಪಣ, ವೈಲೆನ್ಸ್‌ಗೆ ಒಗ್ಗರಣೆ, ಜಾತಿ ಸಂಘರ್ಷದ ಕಿಡಿ! ವರ್ಕೌಟ್‌ ಆಯ್ತಾ ‘ಪೆಪೆ’ ಪ್ರಯೋಗ?

Pepe Movie Review: ನೀರಿಗಾಗಿ ರಕ್ತ ತರ್ಪಣ, ವೈಲೆನ್ಸ್‌ಗೆ ಒಗ್ಗರಣೆ, ಜಾತಿ ಸಂಘರ್ಷದ ಕಿಡಿ! ವರ್ಕೌಟ್‌ ಆಯ್ತಾ ‘ಪೆಪೆ’ ಪ್ರಯೋಗ?

Aug 31, 2024 09:43 AM IST

google News

ವಿನಯ್‌ ರಾಜ್‌ಕುಮಾರ್‌ ಪೆಪೆ ಸಿನಿಮಾ ಆಗಸ್ಟ್‌ 30ರಂದು ಬಿಡುಗಡೆ ಆಗಿದೆ. ಸಿನಿಮಾ ಹೇಗಿದೆ? ವಿಮರ್ಶೆ ಹೇಗಿದೆ?

    • Pepe Review and Ratings: ಗುಲಾಬಿ ಹಿಡಿಯೋ ಕೈಯಲ್ಲಿ ಮಚ್ಚು ಬಂದಿದೆ. ಆ ಮಚ್ಚಿಗೆ ರಕ್ತ ತರ್ಪಣವೂ ಆಗಿದೆ. ಟ್ರೇಲರ್‌ ನೋಡಿಯೇ ಬೆಚ್ಚಿದ್ದ ಪ್ರೇಕ್ಷಕನಿಗೆ, ಪೆಪೆ ಸಿನಿಮಾ ನೋಡಿದ ಬಳಿಕ ವಿನಯ್‌ ರಾಜ್‌ಕುಮಾರ್‌ ಅವರ ಈ ಹೊಸ ಅವತಾರ ಹಿಡಿಸಿತೇ? ಕನ್ನಡಕ್ಕೊಬ್ಬ ಮಾಸ್‌ ಹೀರೋ ಸಿಕ್ಕನೇ? ಇಲ್ಲಿದೆ ವಿಮರ್ಶೆ.
ವಿನಯ್‌ ರಾಜ್‌ಕುಮಾರ್‌ ಪೆಪೆ ಸಿನಿಮಾ ಆಗಸ್ಟ್‌ 30ರಂದು ಬಿಡುಗಡೆ ಆಗಿದೆ. ಸಿನಿಮಾ ಹೇಗಿದೆ? ವಿಮರ್ಶೆ ಹೇಗಿದೆ?
ವಿನಯ್‌ ರಾಜ್‌ಕುಮಾರ್‌ ಪೆಪೆ ಸಿನಿಮಾ ಆಗಸ್ಟ್‌ 30ರಂದು ಬಿಡುಗಡೆ ಆಗಿದೆ. ಸಿನಿಮಾ ಹೇಗಿದೆ? ವಿಮರ್ಶೆ ಹೇಗಿದೆ? (twitter)

Pepe Movie Review: ದೊಡ್ಮನೆ ಕುಡಿ, ರಾಘವೇಂದ್ರ ರಾಜ್‌ಕುಮಾರ್‌ ಹಿರಿ ಮಗ ವಿನಯ್‌ ರಾಜ್‌ಕುಮಾರ್‌ ಪೆಪೆ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಇಲ್ಲಿಯವರೆಗೂ ಲವರ್‌ ಬಾಯ್‌, ಪಕ್ಕದ್ಮನೆ ಹುಡುಗನಂತಿದ್ದ ವಿನಯ್‌, ಇದೀಗ ಪೆಪೆ ಸಿನಿಮಾ ಮೂಲಕ ಮಾಸ್‌ ಅವತಾರ ಎತ್ತಿದ್ದಾರೆ. ಗುಲಾಬಿ ಹಿಡಿಯೋ ಕೈಯಲ್ಲಿ ಮಚ್ಚು ಬಂದಿದೆ. ಆ ಮಚ್ಚಿಗೆ ರಕ್ತ ತರ್ಪಣವೂ ಆಗಿದೆ. ಟ್ರೇಲರ್‌ ನೋಡಿಯೇ ಬೆಚ್ಚಿದ್ದ ಪ್ರೇಕ್ಷಕನಿಗೆ, ಪೆಪೆ ಸಿನಿಮಾ ನೋಡಿದ ಬಳಿಕ ವಿನಯ್‌ ಅವರ ಈ ಹೊಸ ಅವತಾರ ಹಿಡಿಸಿತೇ? ಕನ್ನಡಕ್ಕೊಬ್ಬ ಮಾಸ್‌ ಹೀರೋ ಸಿಕ್ಕನೇ? ಇಲ್ಲಿದೆ ವಿಮರ್ಶೆ.

ವಿನಯ್‌ ರಾಜ್‌ಕುಮಾರ್‌ ಅವರಿಗೆ ಒಂದು ಬದಲಾವಣೆಯ ಅವಶ್ಯಕತೆ ತುಂಬ ಇತ್ತು. ನಾಯಕನಾಗಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟು 2025ಕ್ಕೆ ಒಂದು ದಶಕ ಕಳೆಯುವ ವಿನಯ್‌ ರಾಜ್‌ಕುಮಾರ್‌, ಇಲ್ಲಿಯವರೆಗೂ ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡ ಉದಾಹರಣೆಗಳಿಲ್ಲ. ಇದೀಗ ಅದೆಲ್ಲದಕ್ಕೂ ವೇದಿಕೆ ಕಲ್ಪಿಸಿದ್ದು ಪೆಪೆ ಸಿನಿಮಾ. ಕಲ್ಟ್‌ ಲುಕ್‌, ಗಂಭೀರ ಕಥಾವಸ್ತುವಿನ ಜತೆಗೆ ಅವರ ಆಗಮನವಾಗಿದೆ. ಜಾತಿ ಸಂಘರ್ಷ, ಮಹಿಳಾ ದೌರ್ಜನ್ಯದ ಜತೆಗೆ ನೀರಿಗಾಗಿ ಹರಿಯುವ ರಕ್ತದ ಓಕುಳಿಯೂ ಪೆಪೆಯ ಹೈಲೈಟ್‌.

ಏನಿದು ಪೆಪೆ ಕಥೆ?

ಕೊಡಗಿನ ಬದವಾಳು ಗ್ರಾಮದ ಮಲಬಾರಿ ಮತ್ತು ರಾಯಪ್ಪ ಕುಟುಂಬಗಳ ನಡುವಿನ ವೈರತ್ವದ ಕಥೆ ಈ ಪೆಪೆ. ಸೇಡಿಗೆ ಸೇಡು ರಕ್ತಕ್ಕೆ ರಕ್ತ ಎಂಬಂತೆ ಇಲ್ಲಿ ದ್ವೇಷದ ದಳ್ಳುರಿಯೇ ಕಾಣಿಸುವುದು ಹೆಚ್ಚು. ರಾಯಪ್ಪನ ಮೊಮ್ಮಗ ಪ್ರದೀಪ್‌ ಅಲಿಯಾಸ್‌ ಪೆಪೆ (ವಿನಯ್‌ ರಾಜ್‌ಕುಮಾರ್‌) ಕೈಗೆ ರಕ್ತ ಅಂಟುವುದು ತಾಯಿಗೆ ಇಷ್ಟವಿಲ್ಲ. ಆದರೆ, ವಿಧಿಯಾಟ ಮಾತ್ರ ಬೇರೆ. ಅಲ್ಲಿ ನಡೆಯಬಾರದೆಲ್ಲವೂ ಘಟಿಸುತ್ತದೆ. ನೀರಿಗಾಗಿ ದೊಡ್ಡ ಸಮರವೇ ನಡೆಯುತ್ತದೆ. ಮೇಲ್ಜಾತಿ, ಕೆಳಜಾತಿಗಳ ನಡುವಿನ ಸಂಘರ್ಷದ ಜತೆಗೆ ಮಹಿಳಾ ದೌರ್ಜನ್ಯದ ಎಳೆಯೂ ಈ ಪೆಪೆಯಲ್ಲಿದೆ.

ನಿರ್ದೇಶಕ ಶ್ರೀಲೇಶ್‌ ನಾಯರ್‌ ಆಯ್ದುಕೊಂಡ ಎಳೆ ಗಟ್ಟಿಯಾಗಿದೆ. ಮೇಕಿಂಗ್‌ ವಿಚಾರದಲ್ಲಿ, ರಕ್ತಪಾತದ ವೈಭವೀಕರಣವನ್ನು ಹೇಗೆಲ್ಲ ಮಾಡಬಹುದು ಎಂಬುದನ್ನು ಅರಿತು ನೋಡುಗನ ಪಲ್ಸ್‌ ಹೆಚ್ಚಿಸಿದ್ದಾರೆ. ಕಥೆ ಹೇಳುವ ಶೈಲಿಯಲ್ಲಿಯೂ ಹೊಸತನ ಇಣುಕುತ್ತದೆ. ರಕ್ತವೇ ನಮ್ಮನೇ ದೇವ್ರು ಅನ್ನೋ ರೀತಿ, ಕ್ರೌರ್ಯವೇ ಪೆಪೆಯಲ್ಲಿ ಹೆಚ್ಚು ಕಾಣಿಸುತ್ತದೆ. ಗಂಭೀರ ಕಥೆಯಲ್ಲಿ ಮಾಸ್‌ ಅವತಾರದಲ್ಲಿ ವಿನಯ್‌ ರಾಜ್‌ಕುಮಾರ್‌ ಕಾಣಿಸಿಕೊಂಡಿದ್ದಾರೆ ನಿಜ. ಆದರೆ, ರಕ್ತಾಭಿಷೇಕವೊಂದೇ ಇಲ್ಲಿ ಮೇಳೈಸಿದೆ. ಇದೆಲ್ಲದರ ಆಚೆಗೆ ನಿರ್ದೇಶಕ ಶ್ರೀಲೇಶ್‌ ಪ್ರಯತ್ನ ಮೆಚ್ಚುವಂಥದ್ದು.

ಪೆಪೆ ಒಂದು ಸೇಡಿನ ಕಥೆ. ಈ ಸೇಡಿನ ಕಥೆಯಲ್ಲಿ ಸಾಮಾಜಿಕ ಪಿಡುಗುಗಳ ಬಗ್ಗೆಯೂ ನಿರ್ದೇಶಕರು ಹೇಳಿದ್ದಾರೆ. ಕತೆ ಕಟ್ಟುವಿಕೆಯಲ್ಲಿ ಹೆಚ್ಚು ನೈಜತೆಗೆ ಪ್ರಾಧ್ಯಾನ್ಯತೆ ನೀಡಿ, ಇಡೀ ಸಿನಿಮಾದುದ್ದಕ್ಕೂ ಅದನ್ನು ಕಾಪಾಡಿಕೊಂಡು ಬಂದಿದ್ದಾರೆ. ಮಲಯಾಳಿ ಸಿನಿಮಾಗಳ ಪ್ಲೇವರ್‌ ಸಹ ಪೆಪೆಯಲ್ಲಿ ಕಾಣಿಸುತ್ತದೆ. ಇದರ ಜತೆಗೆ ಮೈನಸ್‌ ವಿಚಾರಗಳೂ ಈ ಸಿನಿಮಾದಲ್ಲಿ ನೋಡುಗನ ತಾಳ್ಮೆ ಪರೀಕ್ಷಿಸುತ್ತವೆ. ಚಿತ್ರ ಸಾಗಿದಂತೆ ಮುಂದೇನಾಗುತ್ತದೆ ಎಂಬುದನ್ನು ಪ್ರೇಕ್ಷಕ ಸಲೀಸಾಗಿ ಊಹಿಸಿಬಿಡಬಲ್ಲ. ಕಥೆಗೆ ಪೂರಕ ಎನಿಸದ ವಿಚಾರಗಳೂ ಇಲ್ಲಿ ಕಾಣಿಸುತ್ತವೆ.

ಮಾಸ್‌ ಸಿನಿಮಾಕ್ಕೆ ತಕ್ಕಂತೆ, ಹಿನ್ನೆಲೆ ಸಂಗೀತ ಪೂರಕವಾಗಿದೆ. ಚಿತ್ರದಲ್ಲಿರುವ ಒಂದೇ ಒಂದು ಹಳ್ಳಿ ಸೊಗಡಿನ ಹಾಡು ಗಮನ ಸೆಳೆಯುತ್ತದೆ. ಚಿತ್ರಕ್ಕೆ ಛಾಯಾಗ್ರಹಣ ವಿಶೇಷ ಮೆರುಗು ನೀಡಿದೆ. ಒಟ್ಟಾರೆ ತಾಂತ್ರಿಕವಾಗಿ ಸಿನಿಮಾ ಬಲಿಷ್ಠವಾಗಿದೆ. ಪಾತ್ರಧಾರಿಗಳನ್ನು ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ. ಪೆಪೆಯಾಗಿ ಹೆಚ್ಚು ಮಾತನಾಡದೇ, ಮೌನದಲ್ಲಿಯೇ ಎಲ್ಲರನ್ನು ಬರಸೆಳೆದಿದ್ದಾರೆ ವಿನಯ್‌ ರಾಜ್‌ಕುಮಾರ್‌. ಅರುಣಾ ಬಾಲರಾಜ್‌, ಮಯೂರ್ ಪಟೇಲ್, ಮೇದಿನಿ ಕೆಳಮನೆ, ನವೀನ್ ಪಡೀಲ್, ಯಶ್ ಶೆಟ್ಟಿ, ರವಿ ಪ್ರಸಾದ್ ಮಂಡ್ಯ ಸಿಕ್ಕ ಪಾತ್ರದಲ್ಲಿ ಇಷ್ಟದ ನಟನೆ ಒಪ್ಪಿಸಿದ್ದಾರೆ.

ಚಿತ್ರ: ಪೆಪೆ

ನಿರ್ಮಾಪಕರು: ಉದಯ್​ ಶಂಕರ್​ ಎಸ್​., ಬಿ.ಎಂ. ಶ್ರೀರಾಮ್​ ಕೋಲಾರ

ನಿರ್ದೇಶನ: ಶ್ರೀಲೇಶ್​ ಎಸ್​. ನಾಯರ್​

ತಾರಾಗಣ: ವಿನಯ್​ ರಾಜ್​ಕುಮಾರ್​, ಮಯೂರ್ ಪಟೇಲ್​, ಯಶ್​ ಶೆಟ್ಟಿ, ನವೀನ್​ ಡಿ. ಪಡೀಲ್​, ಕಾಜಲ್​ ಕುಂದರ್​, ಮೇದಿನಿ ಕೆಳಮನಿ, ಬಾಲರಾಜ್​ ವಾಡಿ, ಅರುಣಾ ಬಾಲ್​ರಾಜ್​, ಸಂಧ್ಯಾ ಅರೆಕೆರೆ ಮುಂತಾದವರು.

ರೇಟಿಂಗ್‌​: 3/5

ವಿಮರ್ಶೆ: ಮಂಜು ಕೊಟಗುಣಸಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ