Laughing Buddha Review: ಇದು ಡೊಳ್ಳು ಹೊಟ್ಟೆ ಡುಮ್ಮಣ್ಣನ ಅತೀ ತೂಕದ ಕಥೆ; ನವಿರು ಹಾಸ್ಯದ ಜತೆಗೆ ಥ್ರಿಲ್ ನೀಡ್ತಾನೆ ಈ ‘ಲಾಫಿಂಗ್ ಬುದ್ಧ’
Laughing Buddha Movie Review: ನಿರ್ದೇಶಕ ಭರತ್ ರಾಜ್ ಈ ಹಿಂದೆ ರಿಷಬ್ ಶೆಟ್ಟಿ ಜತೆಗೆ ಹೀರೋ ಸಿನಿಮಾ ಮಾಡಿದ್ದರು. ಇದೀಗ ಲಾಫಿಂಗ್ ಬುದ್ಧ ಮೂಲಕ ಅವರ ಆಗಮನವಾಗಿದೆ. ಲಾಫಿಂಗ್ ಬುದ್ಧದಲ್ಲಿ ಕೊಂಚ ಗಹನವಾದ ವಿಚಾರವನ್ನೇ ಆಯ್ಕೆ ಮಾಡಿಕೊಂಡಿದ್ದಾರವರು. ತೂಕದ ವಿಚಾರದಲ್ಲಿ ಮೂರಂಕಿ ದಾಟಿದ, ದೈಹಿಕವಾಗಿ ಫಿಟ್ ಇರದ ಪೊಲೀಸ್ ಪೇದೆಯ ವ್ಯಥೆಯೇ ಇಲ್ಲಿ ಹೈಲೈಟ್.
Laughing Buddha Movie Review: ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಶೂಟಿಂಗ್ ಜತೆಗೆ ಚಿತ್ರ ನಿರ್ಮಾಣದ ಕೆಲಸಗಳಲ್ಲಿಯೂ ಬಿಜಿಯಾಗಿದ್ದಾರೆ. ಆ ಪೈಕಿ ಪ್ರಮೋದ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಲಾಫಿಂಗ್ ಬುದ್ಧ ಸಿನಿಮಾ ಸಹ ಒಂದು. ಡೊಳ್ಳು ಹೊಟ್ಟೆಯ ಪೊಲೀಸ್ ಪೇದೆಯ ಪರಿತಾಪದ ಜತೆಗೆ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಕಥೆಯಿಂದಲೂ ಬುದ್ಧ ಹಿಡಿದು ಕೂರಿಸುತ್ತಾನೆ. ಈ ಸಿನಿಮಾ ಇಂದು (ಆಗಸ್ಟ್ 30) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೀಗೆ ಬಿಡುಗಡೆಯಾದ ಸಿನಿಮಾ ಹೇಗಿದೆ? ಇಲ್ಲಿದೆ ಓದಿ ಲಾಫಿಂಗ್ ಬುದ್ಧ ಚಿತ್ರ ವಿಮರ್ಶೆ.
ನೀರೂರಿನಲ್ಲಿ ನಡೆಯುವ ಕಥೆ
ಗೋವರ್ಧನ್ ಕೆ (ಪ್ರಮೋದ್ ಶೆಟ್ಟಿ), ಶಿವಮೊಗ್ಗದ ನೀರೂರು ಪೊಲೀಸ್ ಠಾಣೆಯಲ್ಲಿ ಓರ್ವ ಕಾನ್‌ಸ್ಟೆಬಲ್. ಬಾಯಿ ಚಪಲದ ದಡೂತಿ ದೇಹದ ಗೋವರ್ಧನ್, ಬರೀ ತಿಂಡಿ ತಿನಿಸು ತಿನ್ನುವುದಷ್ಟೇ ಅಲ್ಲ, ಕೈಗೆ ಬಂದ ಕೇಸ್‌ಅನ್ನು ಭೇದಿಸುವಲ್ಲಿಯೂ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಹೊಂದಿರ್ತಾನೆ. ಇಂತಿಪ್ಪ ಗೋವರ್ಧನ್‌ಗೆ ಆಗಾಗ ಆಪ್ತರಿಂದಲೇ ಬಾಡಿ ಶೇಮಿಂಗ್ ಟೀಕೆಗಳೂ ಕೇಳಿಬರುತ್ತಿರುತ್ತವೆ. ಅನ್ನುವವರು ಏನಾದರೂ ಅನ್ನಲಿ ಎಂದು ತಾನಾಯ್ತು ತನ್ನ ಕೆಲಸವಾಯ್ತು ಎಂದಷ್ಟೇ ಇರುತ್ತಾನೆ. ಹೀಗಿರುವಾಗಲೇ ಒಮ್ಮೆ ಅದೇ ಫಿಟ್‌ನೆಸ್ ಇಲ್ಲದ ಶರೀರದಿಂದಲೇ ಆತನ ಕೆಲಸಕ್ಕೆ ಕುತ್ತು ಬಂದೊದಗುತ್ತದೆ. ಅಸಲಿಗೆ ಇಲ್ಲಿಂದ ಕಥೆ ಶುರು. ಹಾಗಾದ್ರೆ ಮುಂದೇನಾಗುತ್ತೆ?
ಈ ಹಿಂದೆ ನಿರ್ದೇಶಕ ಭರತ್ ರಾಜ್ ರಿಷಬ್ ಶೆಟ್ಟಿ ಜತೆಗೆ ಹೀರೋ ಸಿನಿಮಾ ಮಾಡಿದ್ದರು. ಇದೀಗ ಲಾಫಿಂಗ್ ಬುದ್ಧ ಮೂಲಕ ಅವರ ಆಗಮನವಾಗಿದೆ. ಲಾಫಿಂಗ್ ಬುದ್ಧ ಸಿನಿಮಾದಲ್ಲಿ ಕೊಂಚ ಗಹನವಾದ ವಿಚಾರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ತೂಕದ ವಿಚಾರದಲ್ಲಿ ಮೂರಂಕಿ ದಾಟಿದ, ದೈಹಿಕವಾಗಿ ಫಿಟ್ ಇರದ ಪೊಲೀಸ್ ಪೇದೆಯ ವ್ಯಥೆ ಒಂದೆಡೆಯಾದರೆ, ಶಾಸಕರೊಬ್ಬರ 50 ಲಕ್ಷ ಲೂಟಿಯ ಕಥೆಯೂ ಈ ಸಿನಿಮಾದ ತುಂಬ ಹರಡಿದೆ. ಮೊದಲಾರ್ಧ ಕೊಂಚ ಲೈವ್ಲಿಯಾಗಿಯೇ ನೋಡಿಸಿಕೊಂಡು ಹೋಗುವ ಈ ಬುದ್ಧ, ಎರಡನೇ ಭಾಗಕ್ಕೆ ಹೊರಳುತ್ತಿದ್ದಂತೆ, ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ.
ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ಲಾಫಿಂಗ್ ಬುದ್ಧ ಸಿನಿಮಾ ಪಟ್ಟಿ ಮಾಡಿದಂತಿದೆ. ಪೊಲೀಸರು ಎದುರಿಸುತ್ತಿರುವ ಸಮಸ್ಯೆಗಳ ಜತೆಗೆ ಅವರ ಬದುಕು, ಬವಣೆ ಕಡೆಗೂ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ ನಿರ್ದೇಶಕರು. ಡೊಳ್ಳು ಹೊಟ್ಟೆ ಡುಮ್ಮಣ್ಣನಾಗಿ ಗೋವರ್ದನ್ ಈ ಸಿನಿಮಾಕ್ಕಾಗಿ ಒಂದಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಮಾಡಬೇಕಿದ್ದ ಪಾತ್ರದಲ್ಲಿ ದಿಗಂತ್ ಮಂಚಾಲೆ ಕಾಣಿಸಿಕೊಂಡರೂ, ಇಡೀ ಚಿತ್ರಕ್ಕೆ ಅವರ ಝಲಕ್ ತಿರುವು ನೀಡುತ್ತದೆ. ತಿಳಿ ಹಾಸ್ಯದ ಮೂಲಕ ಈ ಲಾಫಿಂಗ್ ಬುದ್ಧ, ನೋಡುಗರ ಮೊಗದಲ್ಲಿ ನಗು ಮೂಡಿಸುವುದರ ಜತೆಗೆ ಥ್ರಿಲ್ಲಿಂಗ್ ಕಥೆಯೂ ಇಲ್ಲಿ ಹೈಲೈಟ್.
ನಿರ್ದೇಶಕರ ದೂರದೃಷ್ಟಿ ಮತ್ತವರ ಸೂಕ್ಷ್ಮತೆ ಇಡೀ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಆಯ್ಕೆ ಮಾಡಿಕೊಂಡ ಕಥೆಯನ್ನು, ಅಷ್ಟೇ ನೈಜವಾಗಿಯೇ ತೆರೆಮೇಲೆ ನಿರೂಪಣೆ ಮಾಡಿದ್ದಾರೆ ಭರತ್ ರಾಜ್. ಪೊಲೀಸ್ ಇಲಾಖೆಯಲ್ಲಿನ ಫಿಟ್ನೆಸ್ ಕೊರತೆಯ ಬಗ್ಗೆ ಈ ಲಾಫಿಂಗ್ ಬುದ್ದ ಬೆಳಕು ಚೆಲ್ಲುತ್ತಾನೆ. ಸಿನಿಮಾ ಅಲ್ಲಲ್ಲಿ ಚೂರು ಎಳೆದಂತೆ ಭಾಸವಾದರೂ, ಅದು ಪ್ರೇಕ್ಷಕನಿಗೆ ಕಿರಿಕಿರಿ ಅನಿಸುವುದಿಲ್ಲ. ನೋಡುಗನಿಗೆ ನೈಜ ಘಮವನ್ನೇ ಉಣಬಡಿಸುತ್ತದೆ.
ಪಾತ್ರಧಾರಿಗಳ ಪೈಕಿ ಪ್ರಮೋದ್ ಶೆಟ್ಟಿ ಚಿತ್ರದ ಕಥೆಗೆ ಹೇಳಿ ಮಾಡಿಸಿದಂತೆ ಹೊಂದಾಣಿಕೆ ಆಗಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂನಿಂದಲೇ ನೋಡುಗರ ಮನಸ್ಸಿನಲ್ಲಿ ಉಳಿಯುತ್ತಾರೆ. ಅವರ ಎದುರು ದಿಗಂತ್ ತಮ್ಮ ಖದರ್ ತೋರಿಸಿದ್ದಾರೆ. ಗೋವರ್ಧನ್ ಪತ್ನಿ ಸತ್ಯವತಿಯಾಗಿ ತೇಜು ಬೆಳವಾಡಿ, ಸುಂದರ್ ರಾಜ್ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾದರೆ, ಛಾಯಾಗ್ರಹಣದಲ್ಲಿಯೂ ಚಿತ್ರ ಪೂರ್ಣಾಂಕ ಗಿಟ್ಟಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ನಗು ನಗು ನಗು ಜತೆಗೊಂದಿಷ್ಟು ಥ್ರಿಲ್ಲಿಂಗ್ ಅಂಶ ಇರಬೇಕು ಅನ್ನುವವರು ಲಾಫಿಂಗ್ ಬುದ್ಧನನ್ನು ಈ ವಾರಂತ್ಯಕ್ಕೆ ಸವಿಯಬಹುದು.
ಚಿತ್ರ: ಲಾಫಿಂಗ್ ಬುದ್ಧ
ನಿರ್ದೇಶನ: ಭರತ್ ರಾಜ್
ನಿರ್ಮಾಣ: ರಿಷಬ್ ಶೆಟ್ಟಿ ಫಿಲಂಸ್
ತಾರಾಗಣ: ಪ್ರಮೋದ್ ಶೆಟ್ಟಿ, ತೇಜು ಬೆಳವಾಡಿ, ಸುಂದರ್ ರಾಜ್, ದಿಗಂತ್
ರೇಟಿಂಗ್: ಐದಕ್ಕೆ ಮೂರೂವರೆ
ವಿಮರ್ಶೆ: ಮಂಜು ಕೊಟಗುಣಸಿ