ಹೈದರಾಬಾದ್ ನನಗೆ ಲಕ್ಕಿ ಸಿಟಿ, ಉಪೇಂದ್ರ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದು ಇಲ್ಲೇ; ಉಗ್ರಾವತಾರಂ ಇವೆಂಟ್‌ನಲ್ಲಿ ಪ್ರಿಯಾಂಕಾ ಉಪೇಂದ್ರ
Oct 17, 2024 01:28 PM IST
ಹೈದರಾಬಾದ್‌ನಲ್ಲಿ ನಡೆದ ಉಗ್ರಾವತಾರಂ ತೆಲುಗು ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ
ಪ್ರಿಯಾಂಕಾ ಉಪೇಂದ್ರ ಅಭಿನಯದ ಉಗ್ರಾವತಾರಂ ತೆಲುಗು ಸಿನಿಮಾ ಟ್ರೈಲರ್ ಇತ್ತೀಚೆಗೆ ಹೈದಾರಾಬಾದ್‌ನಲ್ಲಿ ರಿಲೀಸ್ ಆಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ, ನನಗೆ ಹೈದರಾಬಾದ್ ಲಕ್ಕಿ ಸಿಟಿ, ಉಪೇಂದ್ರ ಅವರನ್ನು ಮೊದಲ ಬಾರಿ ಭೇಟಿ ಆಗಿದ್ದು ಇಲ್ಲೇ ಎಂದು ಮುತ್ತಿನ ನಗರಿ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಗುರುಮೂರ್ತಿ ನಿರ್ದೇಶನದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ಉಗ್ರಾವತಾರ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಕನ್ನಡದಲ್ಲಿ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿದ ನಂತರ ಹೈದರಾಬಾದ್‌ನಲ್ಲಿ ಚಿತ್ರತಂಡ ತೆಲುಗು ಟ್ರೈಲರ್ ರಿಲೀಸ್ ಮಾಡಿದೆ. ತೆಲುಗಿನಲ್ಲಿ ಈ ಸಿನಿಮಾ ಉಗ್ರಾವತಾರಂ ಹೆಸರಿನಲ್ಲಿ ರಿಲೀಸ್ ಆಗುತ್ತಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ, ನಿರ್ದೇಶಕ ಗುರುಮೂರ್ತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ನನಗೆ ಹೈದರಾಬಾದ್‌ನಲ್ಲಿ ಸಾಕಷ್ಟು ನೆನಪುಗಳಿವೆ
ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ಹೈದರಾಬಾದ್ ನನಗೆ ಲಕ್ಕಿ ಸಿಟಿ, ನನ್ನ ಮೊದಲ ದಕ್ಷಿಣ ಭಾರತದ ಸಿನಿಮಾ ಸೂರಿ ಚಿತ್ರೀಕರಣವಾಗಿದ್ದು ಇಲ್ಲೇ, ಉಪೇಂದ್ರ ಅವರನ್ನು ನಾನು ಮೊದಲ ಬಾರಿಗೆ ಭೇಟಿ ಮಾಡಿದ್ದು ಇಲ್ಲೇ. ಮದುವೆ ನಂತರ ನಾನು ಸಹಿ ಮಾಡಿದ ಸಿನಿಮಾದ ಮೊದಲ ದೃಶ್ಯ ಕೂಡಾ ಚಿತ್ರೀಕರಣವಾಗಿದ್ದು ಇಲ್ಲೇ. ಹೈದರಾಬಾದ್‌ನಲ್ಲಿ ನನಗೆ ಮರೆಯಲಾಗದಂಥ ಬಹಳಷ್ಟು ನೆನಪುಗಳಿವೆ. ಆದ್ದರಿಂದ ಇಲ್ಲಿಗೆ ಬಂದರೆ ನನಗೆ ಬಹಳ ಖುಷಿ ಆಗುತ್ತದೆ. ಬಹಳ ದಿನಗಳ ನಂತರ ಇಲ್ಲಿಗೆ ಬಂದಿದ್ದು ಸಂತೋಷವಾಗುತ್ತಿದೆ. ನನ್ನ ಮಮ್ಮಿ , ತೆಲುಗು ಸಿನಿಮಾ ಚಿನ್ನಾರಿ ಚಿತ್ರಕ್ಕೆ ಇಲ್ಲಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದು ಡಬ್ ಆಗಿ ಇಲ್ಲಿ ಬಿಡುಗಡೆ ಆಗುತ್ತಿರುವ ಎರಡನೇ ಸಿನಿಮಾ.
ಮೊದಲ ಬಾರಿಗೆ ಆಕ್ಷನ್ ದೃಶ್ಯಗಳಲ್ಲಿ ಭಾಗಿಯಾಗಿರುವ ಪ್ರಿಯಾಂಕಾ
ಉಗ್ರಾವತಾರಂ, ಆಕ್ಷನ್ ಸಿನಿಮಾ. ನನ್ನ 20 ವರ್ಷಗಳ ವೃತ್ತಿ ಜೀವನದಲ್ಲಿ 50 ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಯಾವ ಸಿನಿಮಾದಲ್ಲೂ ನಾನು ಆಕ್ಷನ್ ಒಪ್ಪಿಕೊಂಡಿಲ್ಲ. ನನಗೆ ಆಕ್ಷನ್ ಹೊಂದುವುದಿಲ್ಲ ಎಂದುಕೊಂಡಿದ್ದೆ. ಆದರೆ ನನ್ನ ಅಭಿಪ್ರಾಯವನ್ನು ನಿರ್ದೇಶಕ ಗುರುಮೂರ್ತಿ ಬದಲಿಸಿದರು. ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪ್ರಿಯಾಂಕಾ ಉಪೇಂದ್ರ ಚಿತ್ರದ ಬಗ್ಗೆ ಹೇಳಿಕೊಂಡರು. ಉಗ್ರಾವತಾರಂ ಚಿತ್ರದಲ್ಲಿ ಸುಮನ್, ನಟರಾಜ್ ಪೇರಿ, ಅಜಯ್, ಪವಿತ್ರ ಲೋಕೇಶ್, ಸಾಯಿ ಧಿನಾ, ಕಾಕ್ರೋಚ್ ಸುಧಿ , ಲಕ್ಷ್ಮಿ ಶೆಟ್ಟಿ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಉಗ್ರಾವತಾರ ಚಿತ್ರವನ್ನು ಎಸ್‌ಜಿಎಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್‌ಜಿ ಸತೀಶ್ ನಿರ್ಮಿಸಿದ್ದು ಗುರುಮೂರ್ತಿ ನಿರ್ದೇಶಿಸಿದ್ದಾರೆ. ಸಿನಿಮಾ ನವೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಹಾಡುಗಳಿಗೆ ಕೃಷ್ಣ ಬಸ್ರೂರು ಸಂಗೀತ ನೀಡಿದ್ದಾರೆ.
ಬೆಂಗಾಳಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಪ್ರಿಯಾಂಕಾ ಉಪೇಂದ್ರ
ಪ್ರಿಯಾಂಕಾ ಮೂಲತ: ಪಶ್ಚಿಮ ಬಂಗಾಳಕ್ಕೆ ಸೇರಿದವರು. ಬೆಂಗಾಳಿ ಸಿನಿಮಾ ಮೂಲಕ ಮೊದಲ ಬಾರಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಚೆಲುವೆ, 2001ರಲ್ಲಿ ತೆರೆ ಕಂಡ ಸೂರಿ ಸಿನಿಮಾ ಮೂಲಕ ಟಾಲಿವುಡ್‌ಗೆ ಬಂದರು. ಈ ಸಿನಿಮಾ ನಂತರ ರಾ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಮೊದಲ ಬಾರಿ ನಟಿಸಿದರು. ಈ ಸಿನಿಮಾ ಮೂಲಕ ಪರಿಚಯವಾದ ಉಪೇಂದ್ರ ಹಾಗೂ ಪ್ರಿಯಾಂಕ ನಂತರ ಪ್ರೀತಿ ಮಾಡಿ ಮದುವೆ ಆದರು.