ಕೊನೆಗೂ ರಿವೀಲ್ ಆಯ್ತು ‘ಬಘೀರ’ ಸಿನಿಮಾದ ಈ ವರೆಗಿನ ಕಲೆಕ್ಷನ್ ರಿಪೋರ್ಟ್! ಸಕ್ಸಸ್ ಮೀಟ್‌ನಲ್ಲಿ ನಿರ್ದೇಶಕರಿಂದಲೇ ಬಹಿರಂಗ
Nov 07, 2024 02:14 PM IST
ಬಘೀರ ಸಿನಿಮಾ 6 ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು?
- Bagheera Success Meet: ಅಕ್ಟೋಬರ್ 31ರಂದು ಬಿಡುಗಡೆಯಾದ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಈಗ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಇತ್ತ ಚಿತ್ರಕ್ಕೆ ಸಿಕ್ಕ ಪಾಸಿಟಿವ್ ರೆಸ್ಪಾನ್ಸ್ ನೋಡಿ ಚಿತ್ರತಂಡವೂ ಖುಷಿಯಲ್ಲಿದೆ. ಆ ಖುಷಿಯಲ್ಲಿಯೇ ಸಕ್ಸಸ್ ಮೀಟ್ ಮಾಡಿ, ಕಲೆಕ್ಷನ್ ಎಷ್ಟು ಎಂಬ ವಿವರವನ್ನೂ ನೀಡಿದೆ.
Bagheera Movie box office collection day 7: ಕಳೆದ ವಾರ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದ್ದ ಬಘೀರ ಸಿನಿಮಾ ಸದ್ಯ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿಯೇ ಪ್ರದರ್ಶನ ಮುಂದುವರಿಸಿದೆ. ಸೂಪರ್ ಹೀರೋ ಪರಿಕಲ್ಪನೆಯಲ್ಲಿ ಮೂಡಿಬಂದಿದ್ದ ಈ ಸಿನಿಮಾವನ್ನು ಡಾ. ಸೂರಿ ನಿರ್ದೇಶನ ಮಾಡಿದ್ದರೆ, ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ಅಷ್ಟೇ ರಿಚ್ ಆಗಿಯೇ ತೆರೆಮೇಲೆ ತಂದಿತ್ತು. ರೋರಿಂಗ್ ಸ್ಟಾರ್ ಶ್ರೀಮುರಳಿ ಎರಡು ಶೇಡ್‌ಗಳಲ್ಲಿ ಅಬ್ಬರಿಸಿದ್ದರು. ಪ್ರಶಾಂತ್ ನೀಲ್ ಬರೆದ ಕಥೆ ಎಂಬ ಕಾರಣಕ್ಕೂ ತೆಲುಗು ಮಂದಿಯಿಂದಲೂ ಈ ಸಿನಿಮಾಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಿರುವ ಈ ಸಿನಿಮಾ ಈಗ ಒಂದು ವಾರದಲ್ಲಿ ಗಳಿಸಿದ್ದೆಷ್ಟು? ಈ ವಿಚಾರವನ್ನು ನಿರ್ದೇಶಕರೇ ಬಹಿರಂಗಪಡಿಸಿದ್ದಾರೆ.
ಕಳೆದ ವಾರ (ಅಕ್ಟೋಬರ್ 31) ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಬಘೀರ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರ ತೆರೆ ಕಂಡ ದಿನದಿಂದ ಈವರೆಗೂ ರಾಜ್ಯಾದ್ಯಂತ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಜೊತೆಗೆ ಪ್ರೇಕ್ಷಕರ ಮನಸ್ಸಿಗೆ ಚಿತ್ರ ಹತ್ತಿರವಾಗಿದೆ. ಕುಟುಂಬ ಸಮೇತ ಬಂದು ಜನರು ಚಿತ್ರವನ್ನು ನೋಡುತ್ತಿರುವುದು ಚಿತ್ರತಂಡದವರಲ್ಲಿ ಸಂತಸ ಮೂಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್‌ನಲ್ಲಿ ಚಿತ್ರತಂಡದ ಸದಸ್ಯರು ತಮ್ಮ ಸಂತಸ ಹಂಚಿಕೊಂಡರು.
ಮೂರು ವರ್ಷದ ಶ್ರಮಕ್ಕೆ ಫಲ ಸಿಕ್ಕಿದೆ..
"ನನ್ನ ಮೂರು ವರ್ಷಗಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಈ ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಅವರಿಂದಲೇ ಈ ಗೆಲುವು ಸಾಧ್ಯವಾಗಿರುವುದು. ಚಿತ್ರ ಬಿಡುಗಡೆಯಾದ ದಿನದಿಂದ ಅವರು ತೋರುತ್ತಿರುವ ಒಲವು. ಈ ಚಿತ್ರದ ಗೆಲುವು. ಇನ್ನೂ ಈ ಯಶಸ್ಸಿಗೆ ನಾನೊಬ್ಬ ಮಾತ್ರ ಕಾರಣನಲ್ಲ. ಇಡೀ ತಂಡದ ಶ್ರಮದಿಂದ ಈ ಯಶಸ್ಸು ದೊರಕಿದೆ. ಅದರಲ್ಲಿ ಮುಖ್ಯವಾದವರು, ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಪ್ರಶಾಂತ್ ನೀಲ್ ಅವರ ಕಥೆಯನ್ನು ಮನಮುಟ್ಟುವಂತೆ ನಿರ್ದೇಶಿಸಿರುವ ಡಾ. ಸೂರಿ" ಎಂದರು ನಟ ಶ್ರೀಮುರಳಿ.
"ಈ ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತದ ಬಗ್ಗೆ ಕೂಡ ಉತ್ತಮ ಮಾತುಗಳು ಕೇಳಿ ಬರುತ್ತಿದೆ. ಛಾಯಾಗ್ರಾಹಕ ಎ.ಜೆ.ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿದಂತೆ ಎಲ್ಲಾ ತಂತ್ರಜ್ಞರಿಗೆ ಹಾಗೂ ಸಹ ಕಲಾವಿದರಿಗೆ ಧನ್ಯವಾದ ಹೇಳುತ್ತೇನೆ. ಹತ್ತು ವರ್ಷಗಳ ಹಿಂದೆ ಡಾ.ಸೂರಿ ಅವರ ಜೊತೆಗೆ ಒಂದು ಚಿತ್ರದ ಕುರಿತು ಮಾತನಾಡಿದ್ದೆ. ಆ ಚಿತ್ರವನ್ನು ಸೂರಿ ಅವರು ಬೇಗ ಆರಂಭಿಸಲಿ" ಎಂದೂ ಹೇಳಿದರು ಶ್ರೀಮುರಳಿ.
ಸಂತಸದಲ್ಲಿ ನಿರ್ದೇಶಕರು
ಇದು ನಮ್ಮ ನಿರೀಕ್ಷೆಗೂ ಮೀರಿದ ಗೆಲುವು. ಹಬ್ಬದ ಸಮಯದಲ್ಲಿ ಇಷ್ಟು ಜನರು ಬಂದು ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿರುವುದು ನಿಜಕ್ಕೂ ಸಂತಸದ ಸಂಗತಿ. ಅವರೆಲ್ಲರಿಗೂ ನಾನು, ನನ್ನ ತಂಡ ಚಿರ ಋಣಿ. ನನ್ನ ಮೇಲೆ ನಂಬಿಕೆಯಿಟ್ಟು ಬಿಗ್ ಬಜೆಟ್‌ನ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ, ಒಳ್ಳೆಯ ಕಥೆ ಕೊಟ್ಟ ಪ್ರಶಾಂತ್ ನೀಲ್ ಅವರಿಗೆ, ಬಘೀರನ ಪಾತ್ರಕ್ಕೆ ಜೀವ ತುಂಬಿದ ಶ್ರೀಮುರಳಿ ಅವರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ದೇಶಕ ಡಾ. ಸೂರಿ.
ಬಘೀರ ಒಂದು ವಾರದಲ್ಲಿ ಗಳಿಸಿದ್ದೆಷ್ಟು?
ಬಘೀರ ಸಿನಿಮಾ ದಿನವೊಂದಕ್ಕೆ 3ರಿಂದ 3.5 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಒಂದು ವಾರದ ಅವಧಿಯಲ್ಲಿ 18ರಿಂದ 20 ಕೋಟಿ ಕಲೆಕ್ಷನ್ ಮಾಡಿದೆ ಎಂದೂ ಸಕ್ಸಸ್ ಮೀಟ್‌ನಲ್ಲಿ ನಿರ್ದೇಶಕ ಸೂರಿ ತಿಳಿಸಿದ್ದಾರೆ. ಈ ವಾರ ಕನ್ನಡದಲ್ಲಿ ಈ ವಾರ ಬೇರೆ ಯಾವ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಆ ಕಾರಣಕ್ಕೂ ಈ ವಾರ ಬಘೀರನ ಬೊಕ್ಕಸಕ್ಕೆ ಹೆಚ್ಚಿನ ಕಲೆಕ್ಷನ್ ಆಗುವ ಸಾಧ್ಯತೆ ಇದೆ. ಅಲ್ಲಿಗೆ 25 ಕೋಟಿಗೂ ಅಧಿಕ ಕಲೆಕ್ಷನ್ ಮಾಡಲಿದೆ ಎಂದೇ ಹೇಳಲಾಗುತ್ತಿದೆ.