logo
ಕನ್ನಡ ಸುದ್ದಿ  /  ಮನರಂಜನೆ  /  ರಾಜಕುಮಾರ, ಮಿಲನ ಸೇರಿ ಒಟಿಟಿಯಲ್ಲಿ ನೋಡಬಹುದಾದ ಪುನೀತ್‌ ರಾಜ್‌ಕುಮಾರ್‌ ಅಭಿನಯದ 10 ಸಿನಿಮಾಗಳು

ರಾಜಕುಮಾರ, ಮಿಲನ ಸೇರಿ ಒಟಿಟಿಯಲ್ಲಿ ನೋಡಬಹುದಾದ ಪುನೀತ್‌ ರಾಜ್‌ಕುಮಾರ್‌ ಅಭಿನಯದ 10 ಸಿನಿಮಾಗಳು

Rakshitha Sowmya HT Kannada

Oct 29, 2024 07:23 AM IST

google News

ಗಂಧದ ಗುಡಿ, ರಾಜಕುಮಾರ, ದೊಡ್ಮನೆ ಹುಡುಗ ಸೇರಿದಂತೆ ಒಟಿಯಲ್ಲಿ ಲಭ್ಯವಿರುವ ಪುನೀತ್‌ ರಾಜ್‌ಕುಮಾರ್‌ ಸಿನಿಮಾಗಳು

  • ಅಕ್ಟೋಬರ್‌ 29, ಪುನೀತ್‌ ರಾಜ್‌ಕುಮಾರ್‌ ನಮ್ಮನ್ನೆಲ್ಲಾ ಅಗಲಿದೆ ದಿನ. ಅಪ್ಪು ಕಣ್ಮರೆಯಾಗಿ 3 ವರ್ಷಗಳೇ ಕಳೆದಿವೆ. ನೀವು ಅಪ್ಪು ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಬೇಕು ಎಂದಿದ್ದರೆ ಯಾವ ಒಟಿಟಿಯಲ್ಲಿ ಯಾವ ಚಿತ್ರಗಳು ಲಭ್ಯವಿದೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ. ಮಿಲನ, ದೊಡ್ಮನೆ ಹುಡುಗ, ಅಪ್ಪು ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಪುನೀತ್‌ ಅಭಿನಯದ ಸಿನಿಮಾಗಳಿವೆ. 

ಗಂಧದ ಗುಡಿ, ರಾಜಕುಮಾರ, ದೊಡ್ಮನೆ ಹುಡುಗ ಸೇರಿದಂತೆ ಒಟಿಯಲ್ಲಿ ಲಭ್ಯವಿರುವ ಪುನೀತ್‌ ರಾಜ್‌ಕುಮಾರ್‌ ಸಿನಿಮಾಗಳು
ಗಂಧದ ಗುಡಿ, ರಾಜಕುಮಾರ, ದೊಡ್ಮನೆ ಹುಡುಗ ಸೇರಿದಂತೆ ಒಟಿಯಲ್ಲಿ ಲಭ್ಯವಿರುವ ಪುನೀತ್‌ ರಾಜ್‌ಕುಮಾರ್‌ ಸಿನಿಮಾಗಳು

ಕನ್ನಡ ಚಿತ್ರರಂಗದ ನಗುವಿನ ಒಡೆಯ, ಪವರ್‌ ಸ್ಟಾರ್‌ ಅಪ್ಪು ನಮ್ಮಿಂದ ದೂರವಾಗಿ ಇಂದಿಗೆ 3 ವರ್ಷಗಳು ತುಂಬಿವೆ. ಅಪ್ಪು ಇಲ್ಲ ಎಂಬ ಸುದ್ದಿಯನ್ನು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಮರೆಯಾದರೂ ಅವರನ್ನು ಪ್ರತಿದಿನ ನೆನೆಯದ ದಿನಗಳೇ ಇಲ್ಲ. ಅದರಲ್ಲೂ ಟಿವಿಯಲ್ಲಿ ಅವರ ಸಿನಿಮಾಗಳನ್ನೋ, ಸಿನಿಮಾ ಹಾಡುಗಳನ್ನು ನೋಡುತ್ತಿದ್ದರೆ ಕಣ್ಣಂಚು ಒದ್ದೆ ಆಗದೆ ಇರುವುದಿಲ್ಲ.

ಅಮ್ಮ ಅಜರಾಮರ, ಬಾಲನಟನಾಗಿರುವಾಗಲೇ ಚಿತ್ರರಂಗಕ್ಕೆ ಬಂದ ಪುನೀತ್‌ ರಾಜ್‌ಕುಮಾರ್‌ ನಾಯಕನಾಗಿಯೂ ಸಕ್ಸಸ್‌ ಆದರು. ಪುನೀತ್‌ ರಾಜ್‌ಕುಮಾರ್‌ ನಟಿಸಿರುವ ಸಿನಿಮಾಗಳು ಒಟಿಟಿಯಲ್ಲಿ ಕೂಡಾ ಲಭ್ಯವಿದೆ.

ಯಾವ ಒಟಿಟಿಯಲ್ಲಿ ಯಾವ ಸಿನಿಮಾಗಳು ಸ್ಟ್ರೀಮ್‌ ಆಗುತ್ತಿವೆ?

 

ಅಮೆಜಾನ್‌ ಪ್ರೈಂ

ಗಂಧದ ಗುಡಿ

ಇದು ಪುನೀತ್‌ ರಾಜ್‌ಕುಮಾರ್‌ ಅವರ ಕನಸಿನ ಕೂಸು. ಗಂಧದ ಗುಡಿ ಪುನೀತ್‌ ರಾಜ್‌ಕುಮಾರ್‌ ನಿಧನದ ನಂತರ ಬಿಡುಗಡೆ ಮಾಡಲಾಯ್ತು. ಅಶ್ವಿನಿ ರಾಜ್‌ಕುಮಾರ್‌ ಮುಂದೆ ನಿಂತು ಈ ಪ್ರಾಜೆಕ್ಟ್‌ ಕೆಲಸಗಳನ್ನು ಪೂರ್ಣಗೊಳಿಸಿ ರಿಲೀಸ್‌ ಮಾಡಿದ್ದರು. ಕರ್ನಾಟಕದ ಅದ್ಭುತ ಪರಂಪರೆ ಹಾಗೂ ವನ್ಯ ಜೀವಿ ಸಂಪತನ್ನು ಇದರಲ್ಲಿ ತೋರಿಸಲಾಗಿದೆ. ಪುನೀತ್‌ ರಾಜ್‌ಕುಮಾರ್‌ ಹಸಿರು ಪ್ರಕೃತಿಯನ್ನು ಮಗುವಿನಂತೆ ಎಂಜಾಯ್‌ ಮಾಡಿದ್ದಾರೆ. ನಾಗರಹೊಳೆ, ಮಲೆನಾಡು, ವಿಜಯನಗರ, ದಾಂಡೇಲಿ, ಬಿಆರ್‌ಟಿ ಟೈಗರ್ ರಿಸರ್ವ್, ಜೋಗ ಎಲ್ಲಾ ಕಡೆ ಚಿತ್ರೀಕರಿಸಲಾಗಿದೆ. ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ.

ಜೀ 5 ಒಟಿಟಿ

ನಟಸಾರ್ವಭೌಮ

2019ರಲ್ಲಿ ತೆರೆ ಕಂಡ ನಟಸಾರ್ವಭೌಮ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿ ಪವನ್‌ ಒಡೆಯರ್‌ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ಪುನೀತ್‌ ಜೊತೆ ಅನುಪಮಾ ಪರಮೇಶ್ವರನ್‌, ರಚಿತಾ ರಾಮ್‌ ನಾಯಕಿಯರಾಗಿ ನಟಿಸಿದ್ದರು. ಜೊತೆಗೆ ಚಿಕ್ಕಣ್ಣ, ರವಿಕುಮಾರ್‌, ಸಾಧುಕೋಕಿಲ , ಅಚ್ಯುತ್‌ ರಾವ್‌, ಅವಿನಾಶ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಪ್ರೀತಿಸಿದ ಹುಡುಗಿ ಕೊಲೆ ಮಾಡಿದವರ ವಿರುದ್ಧ ನಾಯಕ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಅನ್ನೋದು ಸಿನಿಮಾ ಕಥೆ. ಈ ಸಿನಿಮಾ ಜಿ 5 ಜೊತೆಗೆ ಒಟಿಟಿ ಪ್ಲೇನಲ್ಲಿ ಕೂಡಾ ಲಭ್ಯವಿದೆ.

ಮಿಲನ

ಈ ಸಿನಿಮಾ ಹಾಡುಗಳಂತೂ ಇಂದಿಗೂ ಎಲ್ಲರ ಮೋಸ್ಟ್‌ ಫೇವರೆಟ್.‌ ಸಿನಿಮಾ 2007ರಲ್ಲಿ ತೆರೆ ಕಂಡಿದ್ದು. ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ಗೆ ಪೂಜಾ ಗಾಂಧಿ, ಪಾರ್ವತಿ ಮೆನನ್‌ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಕೆಎಸ್‌ ದುಷ್ಯಂತ್‌ ಕಥೆ ಬರೆದು ನಿರ್ಮಾಣ ಮಾಡಿರುವ ಚಿತ್ರವನ್ನು ಪ್ರಕಾಶ್‌ ನಿರ್ದೇಶನ ಮಾಡಿದ್ದಾರೆ.

ದೊಡ್ಮನೆ ಹುಡುಗ

ಎಂ ಗೋವಿಂದ ನಿರ್ಮಾಣದಲ್ಲಿ ದುನಿಯಾ ಸೂರಿ ನಿರ್ದೇಶನ ಮಾಡಿರುವ ದೊಡ್ಮನೆ ಹುಡುಗ ಸಿನಿಮಾ ಜೀ 5ನಲ್ಲಿ ಲಭ್ಯವಿದೆ. ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ರಾಧಿಕಾ ಪಂಡಿತ್‌ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಅಂಬರೀಶ್‌, ಸುಮಲತಾ, ಭಾರತಿ ವಿಷ್ಣುವರ್ಧನ್‌, ಕೃಷ್ಣ, ಶ್ರೀನಿವಾಸ್‌ ಮೂರ್ತಿ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.

ಡಿಸ್ನಿ +ಹಾಟ್‌ಸ್ಟಾರ್‌

ರಾಜಕುಮಾರ

ಗೊಂಬೆ ಹೇಳುತೈತೆ ಹಾಡನ್ನು ಯಾರಿಂದ ಮರೆಯಲು ಸಾಧ್ಯ. ಈ ಹಾಡು ಕೇಳುತ್ತಿದ್ದರೆ ಅಪ್ಪು ಹಾಗೂ ಕಸ್ತೂರಿ ನಿವಾಸದ ಅಣ್ಣಾವ್ರು ಇಬ್ಬರೂ ಒಟ್ಟಿಗೆ ನೆನಪಿಗೆ ಬರುತ್ತಾರೆ. ರಾಜಕುಮಾರ ಸಿನಿಮಾ 2017ರಲ್ಲಿ ರಿಲೀಸ್‌ ಆಗಿತ್ತು. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ನಿರ್ಮಾಣದ ಚಿತ್ರವನ್ನು ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಡಿಸ್ನಿ +ಹಾಟ್‌ಸ್ಟಾರ್‌ ಜೊತೆಗೆ ಒಟಿಟಿ ಪ್ಲೇಯಲ್ಲೂ ಲಭ್ಯವಿದೆ.

ಜಿಯೋ ಸಿನಿಮಾ

ಪೃಥ್ವಿ

ಪುನೀತ್‌ ರಾಜ್‌ಕುಮಾರ್‌ ಐಎಎಸ್‌ ಅಧಿಕಾರಿಯಾಗಿ ನಟಿಸಿರುವ ಪೃಥ್ವಿ ಸಿನಿಮಾ 2010ರಲ್ಲಿ ತೆರೆ ಕಂಡಿತ್ತು. ಚಿತ್ರವನ್ನು

ಎನ್‌ಎಸ್ ರಾಜಕುಮಾರ್ ಹಾಗೂ ಸೂರಪ್ಪ ಬಾಬು ನಿರ್ಮಿಸಿದ್ದು ಜೇಕಬ್ ವರ್ಗೀಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಕಾಂತ್‌ ಕದ್ರಿ ಸಂಗೀತ ನೀಡಿದ್ದಾರೆ. ಪುನೀತ್‌ ಜೊತೆಗೆ ಪಾರ್ವತಿ ತಿರುವೊತ್ತು, ಶ್ರೀನಿವಾಸ್‌ ಮೂರ್ತಿ, ರಮೇಶ್‌ ಭಟ್‌, ಪದ್ಮಜಾ ರಾವ್‌ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಪೃಥ್ವಿ ಸಿನಿಮಾ ಜಿಯೋ ಸಿನಿಮಾ ಜೊತೆಗೆ ಯೂಟ್ಯೂಬ್‌ನಲ್ಲಿ ಕೂಡಾ ಲಭ್ಯವಿದೆ.

ವೂಟ್‌

ಅಪ್ಪು

ಅಪ್ಪು, ಪುನೀತ್‌ ರಾಜ್‌ಕುಮಾರ್‌ ನಾಯಕನಾಗಿ ನಟಿಸಿದ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಅಪ್ಪು ಜೊತೆಗೆ ರಕ್ಷಿತಾ ನಾಯಕಿಯಾಗಿ ನಟಿಸಿದ್ದಾರೆ. ಇದು ರಕ್ಷಿತಾ ಅವರಿಗೂ ಮೊದಲ ಸಿನಿಮಾ. 2002ರಲ್ಲಿ ರಿಲೀಸ್‌ ಆದ ಸಿನಿಮಾವನ್ನು ‌ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದರು. ಪುರಿ ಜಗನ್ನಾಥ್‌, ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಗುರುಕಿರಣ್‌, ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಶ್ರೀನಿವಾಸ ಮೂರ್ತಿ, ಸುಮಿತ್ರಾ, ಅಶೋಕ್‌, ಸತ್ಯಜಿತ್‌, ಅವಿನಾಶ್‌ ಹಾಗೂ ಇನ್ನಿತರರು ಸಿನಿಮಾದಲ್ಲಿದ್ದಾರೆ. ಈ ಸಿನಿಮಾ ವೂಟ್‌ ಜೊತೆಗೆ ಯೂಟ್ಯೂಬ್‌ನಲ್ಲಿ ಕೂಡಾ ನೋಡಬಹುದು.

ಅಭಿ

2003ರಲ್ಲಿ ಅಭಿ ಸಿನಿಮಾ ರಿಲೀಸ್‌ ಆಗಿತ್ತು. ಚಿತ್ರವನ್ನು ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ ಅಡಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದರು. ದಿನೇಶ್‌ ಬಾಬು, ನಿರ್ದೇಶನ ಮಾಡಿದ್ದರು. ಚಿತ್ರದ ಹಾಡುಗಳಿಗೆ ಗುರುಕಿರಣ್ ಸಂಗೀತ ನೀಡಿದ್ದರು. ಪುನೀತ್‌ಗೆ ನಾಯಕಿಯಾಗಿದ್ದ ರಮ್ಯಾಗೆ ಕೂಡಾ ಇದು ಮೊದಲ ಸಿನಿಮಾ. ಸೌಕಾರ್‌ ಜಾನಕಿ , ಸುಮಿತ್ರಾ, ಸತ್ಯಜಿತ್‌, ಏಣಗಿ ನಟರಾಜ್‌, ಬಿ ಜಯಾ, ಸುನಿಲ್‌ ಪುರಾಣಿಕ್‌, ರಾಜು ಅನಂತ್‌ಸ್ವಾಮಿ, ಹೊನ್ನವಳ್ಳಿ ಕೃಷ್ಣ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

ಈ ವೀಕೆಂಡ್‌ಗೆ ನಿಮ್ಮ ಮೆಚ್ಚಿನ ಅಪ್ಪು ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಿ ಎಂಜಾಯ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ