ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಹಲಗಲಿ ಜನರ ಮಾರಣ ಹೋಮ; ಐತಿಹಾಸಿಕ ಸಿನಿಮಾಗೆ ಮತ್ತೆ ಜೋಡಿಯಾದ ಧನಂಜಯ್ ಸಪ್ತಮಿ ಗೌಡ
Oct 25, 2024 08:33 AM IST
ಐತಿಹಾಸಿಕ ಹಲಗಲಿ ಸಿನಿಮಾದಲ್ಲಿ ನಟಿಸುತ್ತಿರುವ ಧನಂಜಯ್ ಸಪ್ತಮಿ ಗೌಡ. ಸಿನಿಮಾವನ್ನು ಕಲ್ಯಾಣ್ ಚಕ್ರವರ್ತಿ ಧೂಳಿಪಾಲ ನಿರ್ಮಿಸುತ್ತಿದ್ದು ಸುಕೇಶ್ ಡಿ ನಿರ್ದೇಶಿಸುತ್ತಿದ್ದಾರೆ.
ಕಲ್ಯಾಣ್ ಚಕ್ರವರ್ತಿ ಧೂಳಿಪಾಲ ನಿರ್ಮಿಸಿ ಸುಕೇಶ್ ಡಿ ನಿರ್ದೇಶಿಸುತ್ತಿರುವ ಐತಿಹಾಸಿಕ ಹಲಗಲಿ ಸಿನಿಮಾಗೆ ಡಾರ್ಲಿಂಗ್ ಕೃಷ್ಣ ಬದಲಿಗೆ ಧನಂಜಯ್ ನಾಯಕನಾಗಿ ನಟಿಸುತ್ತಿದ್ದಾರೆ. ಡಾಲಿಗೆ ಜೋಡಿಯಾಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ. ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ.
ನಟರಾಕ್ಷಸ ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದೀಗ ಅವರು ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ಐತಿಹಾಸಿಕ ಸಿನಿಮಾದಲ್ಲಿ ಡಾಲಿ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಹಲಗಲಿ ಎಂದು ಹೆಸರಿಡಲಾಗಿದೆ. ಇದಕ್ಕೂ ಮುನ್ನ ಡಾರ್ಲಿಂಗ್ ಕೃಷ್ಣ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಆಗಿದ್ದರು. ಕಾರಣಾಂತರಗಳಿಂದ ಕೃಷ್ಣ ಸಿನಿಮಾದಿಂದ ಹೊರ ನಡೆದಿದ್ದರು. ಈಗ ಧನಂಜಯ್ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.
80 ಕೋಟಿ ರೂ. ವೆಚ್ಚದಲ್ಲಿ ಸೆಟ್ ನಿರ್ಮಾಣ
ಸಿನಿಮಾ ಪ್ರೀ ಪ್ರೊಡಕ್ಷನ್ ಸಿನಿಮಾಗಳು ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಒಂದೊಳ್ಳೆ ದಿನ ನೋಡಿ ಮುಹೂರ್ತ ಆಚರಿಸಿ ಚಿತ್ರತಂಡ ಶೂಟಿಂಗ್ ಆರಂಭಿಸಲಿದೆ. ಇದು ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಐತಿಹಾಸಿಕ ಚಿತ್ರವಾದ್ದರಿಂದ ಕಥೆಗೆ ತಕ್ಕಂತೆ ಸೆಟ್, ಸ್ಥಳದ ಅವಶ್ಯಕತೆ ಇದೆ. ಆದ್ದರಿಂದ ಸುಮಾರು 80-100 ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ಈ ಸಿನಿಮಾ 2 ಭಾಗಗಳಲ್ಲಿ ತಯಾರಾಗಲಿದೆ. ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಲ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಸುಕೇಶ್ ಡಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಕನ್ನಡ ಭಾಷೆ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ತಯಾರಾಗಲಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ.
ಡಾಲಿಗೆ ಮತ್ತೆ ಜೋಡಿಯಾದ ಸಪ್ತಮಿ ಗೌಡ
ಡಾಲಿ ಧನಂಜಯ್‌ಗೆ ನಾಯಕಿ ಯಾರಾಗಬಹುದು ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಕಾಂತಾರ ಚೆಲುವೆ ಸಪ್ತಮಿ ಗೌಡ, ಹಲಗಲಿ ಚಿತ್ರದಲ್ಲಿ ಡಾಲಿಗೆ ಜೋಡಿಯಾಗಲಿದ್ದಾರೆ. ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಸಪ್ತಮಿ ಗೌಡ, ಧನಂಜಯ್ ಜೊತೆ ಗಿರಿಜಾ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೆ ಎರಡನೇ ಬಾರಿಗೆ ಇವರಿಬ್ಬರೂ ತೆರೆ ಮೇಲೆ ಜೋಡಿಯಾಗಲಿದ್ದಾರೆ. ಹಲಗಲಿ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಇರಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಆಕ್ಷನ್ ಕೊರಿಯೋಗ್ರಾಫರ್ ವಿಕ್ರಮ್ ಮೋರ್, ಈ ಚಿತ್ರದಲ್ಲಿ ಫೈಟ್ ಕೊರಿಯೋಗ್ರಫಿ ಮಾಡಲಿದ್ದಾರೆ.
ಹಲಗಲಿ ಜನರ ಮಾರಣ ಹೋಮ ಕುರಿತಾದ ಸಿನಿಮಾ
ಇದು ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ಮಾಡಿದ ಬಾಗಲಕೋಟೆ ಜಿಲ್ಲೆಯ ಹಲಗಲಿ ಗ್ರಾಮದ ಜನರ ಕುರಿತಾದ ಸಿನಿಮಾ. 1857 ಸ್ವಾತಂತ್ಯ್ರ ಸಂಗ್ರಾಮದ ನಂತರ ಬ್ರಿಟಿಷ್ ಸರ್ಕಾರವು ಸಾರ್ವಜನಿಕರು ಶಸ್ತ್ರಗಳನ್ನು ಬಳಸದಂತೆ ನಿಯಮ ಜಾರಿಗೊಳಿಸಿ, ಎಲ್ಲರ ಬಳೀ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮುಂದಾಗಿತ್ತು. ಆದರೆ ಹಲಗಲಿ ಗ್ರಾಮದ ಜನರು ಬ್ರಿಟಿಷರ ಈ ನೀತಿಯನ್ನು ವಿರೋಧಿಸಿದರು. ಆಗ ಹಲಗಲಿ ಗ್ರಾಮದ ಜನತೆ ಹಾಗೂ ಬ್ರಿಟಿಷರ ನಡುವೆ ಯುದ್ಧ ನಡೆಯಿತು. ಇದರಲ್ಲಿ ಸಹಾಯಕ ಮ್ಯಾಜಿಸ್ಟ್ರೇಟ್ ವಿಲಿಯಮ್ ಹೆನ್ರಿ ಸಾವನ್ನಪ್ಪುತ್ತಾನೆ. ಇದರಿಂದ ಕೋಪಗೊಂಡ ಬ್ರಿಟಿಷ್ ಸರ್ಕಾರ ರಾತ್ರೋರಾತ್ರಿ ಗುಂಡಿನ ದಾಳಿ ನಡೆಸಿ , ಮನೆಗಳಿಗೆ ಬೆಂಕಿ ಹಚ್ಚಿದರು. ಇದರಿಂದ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡರು. ಇದೇ ಕಥೆ ಈಗ ತೆರೆ ಮೇಲೆ ಸಿನಿಮಾವಾಗಿ ಬರಲು ಸಜ್ಜಾಗುತ್ತಿದೆ. ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ತಿಳಿಯಲು ಸಿನಿಪ್ರಿಯರು ಕಾಯುತ್ತಿದ್ದಾರೆ.