ಶಂಕರ್ ನಾಗ್ ಸ್ಮರಣೆ: ನಿರ್ದೇಶಕರಾಗಿ ಕನ್ನಡ ಸಿನಿಮಾಗೆ ಹೊಸತನ ತುಂಬಿದ, ವೈವಿಧ್ಯ ಪರಿಚಯಿಸಿದ ಅಪರೂಪದ ಪ್ರತಿಭೆ -ಸಿನಿಸ್ಮೃತಿ ಅಂಕಣ
Nov 10, 2024 11:00 AM IST
ನಿರ್ದೇಶಕರಾಗಿಯೂ ಶಂಕರ್ ನಾಗ್ ಕನ್ನಡ ಸಿನಿಮಾ ರಂಗಕ್ಕೆ ಮಹತ್ವದ ಕೊಡುಗೆ ಕೊಟ್ಟವರು. ಅವರ ಹುಟ್ಟುಹಬ್ಬದ ನೆಪದಲ್ಲಿ ಅವರು ನಿರ್ದೇಶಿಸಿದ ಚಿತ್ರಗಳ ಮೆಲುಕು ಇಲ್ಲಿದೆ.
- ಚೇತನ್ ನಾಡಿಗೇರ್ ಬರಹ: ಯಾವುದೇ ಇಮೇಜ್‌ಗೆ ಜೋತುಬೀಳದವರು ಶಂಕರ್ ನಾಗ್. ಇತರರ ಚಿತ್ರಗಳಲ್ಲಿ ಸಾಧ್ಯವಿಲ್ಲದ ಎಲ್ಲವನ್ನೂ ತಮ್ಮ ನಿರ್ಮಾಣ, ನಿರ್ದೇಶನದಲ್ಲಿ ಪ್ರಯೋಗ ಮಾಡಿದರು. ಒಂದು ಚಿತ್ರದಲ್ಲಿ ಕಳ್ಳ, ಇನ್ನೊಂದರಲ್ಲಿ ಲವ್ವರ್ ಬಾಯ್, ಒಂದರಲ್ಲಿ ಬ್ಯಾಂಕ್ ಉದ್ಯೋಗಿ, ಇನ್ನೊಂದರಲ್ಲಿ ಪರ್ತಕರ್ತ… ಹೀಗೆ ಪಾತ್ರ ಏನೆಲ್ಲಾ ಬೇಡುತ್ತದೋ ಅವೆಲ್ಲವನ್ನೂ ಮಾಡಿದರು.
ಶಂಕರ್ ನಾಗ್ ಹುಟ್ಟುಹಬ್ಬ ವಿಶೇಷ: ಶಂಕರ್ ನಾಗ್ ಅವರ ಪ್ರತಿಭೆಯ ವಿವಿಧ ಆಯಾಮಗಳ ಕುರಿತು ಈಗಾಗಲೇ ಸಾಕಷ್ಟು ಚರ್ಚಿಸಲಾಗಿದೆ. ಒಬ್ಬ ನಿರ್ದೇಶಕರಾಗಿ ಮತ್ತು ಚಿತ್ರಕಥೆಗಾರರಾಗಿ ಶಂಕರ್ ನಾಗ್ ಅವರ ಕೊಡುಗೆಯನ್ನು ಈ ಬರಹದಲ್ಲಿ ಸ್ಮರಿಸಲಾಗಿದೆ. ಶಂಕರ್ ನಾಗ್ ಅವರು ನಿರ್ದೇಶಿಸಿದ್ದು ಕೆಲವೇ ಚಿತ್ರಗಳಾದರೂ, ಅವರ ಚಿತ್ರಗಳಲ್ಲಿದ್ದ ವೈವಿಧ್ಯವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅವರು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಕಥೆ, ಪರಿಸರ, ಪಾತ್ರಗಳ ಕುರಿತು ಚರ್ಚೆಯಾಗಬೇಕು.
ಶಂಕರ್ ನಾಗ್ ಅವರ ಹುಟ್ಟುಹಬ್ಬ ನಿನ್ನೆಯಷ್ಟೇ ಮುಗಿದಿದೆ (ನ 9). ಅವರು ನಮ್ಮೊಡನೆ ಇದ್ದಿದ್ದರೆ 70 ವರ್ಷ ಪೂರೈಸಿ, 71ಕ್ಕೆ ಕಾಲಿಡುತ್ತಿದ್ದರು. ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಕಮಲ್ ಹಾಸನ್ ಅವರಿಗಿಂತ ಕೇವಲ ಎರಡು ದಿನಗಳಷ್ಟೇ ಚಿಕ್ಕವರಾಗಿದ್ದವರು ಶಂಕರ್ ನಾಗ್. ಇಬ್ಬರಲ್ಲೂ ಹಲವು ಸ್ವಾಮ್ಯಗಳಿವೆ. ಇಬ್ಬರೂ ಅಪ್ಪಟ ಪ್ರತಿಭಾವಂತರು. ಇಬ್ಬರೂ ಸಾಹಸಿಗರು. ಹೊಸಹೊಸ ಪ್ರಯೋಗಗಳನ್ನು ಮಾಡಿದವರು. ತಮಿಳು ಚಿತ್ರರಂಗಕ್ಕೆ ತಮ್ಮದೇ ರೀತಿಯಲ್ಲಿ ಒಂದು ಕಡೆ ಕಮಲ್ ಹಾಸನ್ ಕೊಡುಗೆ ನೀಡಿದರೆ, ಈ ಕಡೆ ಶಂಕರ್ ನಾಗ್ ಸಹ ತಮ್ಮದೇ ಕೊಡುಗೆಯನ್ನು ಕೊಟ್ಟರು. ಶಂಕರ್ ನಾಗ್ ಬಹುಮುಖ ವ್ಯಕ್ತಿತ್ವದವರಾಗಿದ್ದರು. ಅವರೊಬ್ಬ ನಟರಷ್ಟೇ ಅಲ್ಲ, ಒಳ್ಳೆಯ ನಿರ್ದೇಶಕರಾಗಿದ್ದರು, ಬರಹಗಾರರಾಗಿದ್ದರು. ಕನ್ನಡಕ್ಕೆ ವಿಭಿನ್ನ ಚಿತ್ರಗಳನ್ನು ಕೊಟ್ಟರು.
1990 ರಲ್ಲಿ ನಿಧನರಾಗುವ ಮುನ್ನ ಶಂಕರ್ ನಾಗ್ ಚಿತ್ರರಂಗದಲ್ಲಿ ಸಕ್ರಿಯಗಾಗಿದ್ದು ಕೇವಲ 13 ವರ್ಷಗಳ ಕಾಲ ಮಾತ್ರ. ಅಷ್ಟರಲ್ಲಿ ಅವರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಎಂಟು ಚಿತ್ರಗಳಲ್ಲಿ ಎಂಟು ಚಿತ್ರಗಳನ್ನು ನಿರ್ದೇಶಿಸಿದರು. 10 ಚಿತ್ರಗಳಿಗೆ ಕಥೆ-ಚಿತ್ರಕಥೆ ಬರೆದರು. ದೂರದರ್ಶನಕ್ಕಾಗಿ ‘ಮಾಲ್ಗುಡಿ ಡೇಸ್’ ಎಂಬ ಮಹತ್ವದ ಧಾರಾವಾಹಿಯನ್ನು ನಿರ್ದೇಶಿಸಿದರು. ಶಂಕರ್ ನಾಗ್ ಅವರ ನಟನೆಯ ಬಗ್ಗೆ, ಅವರು ಮಾಡುತ್ತಿದ್ದ ಚಿತ್ರಗಳ ಬಗ್ಗೆ, ಅವರ ಸೃಜನಶೀಲತೆಯ ಕುರಿತು ಸಾಕಷ್ಟು ಚರ್ಚೆಯಾಗಿದೆ. ಆದರೆ, ಅವರ ನಿರ್ದೇಶನ ಮತ್ತು ಚಿತ್ರಕಥೆಗಳ ಕುರಿತು ಹೆಚ್ಚು ಚರ್ಚೆಯಾಗಿತ್ತು. ಕನ್ನಡದ ಅತ್ಯುತ್ತಮ ಚಿತ್ರಕಥೆಗಾರರಲ್ಲಿ ಶಂಕರ್ ನಾಗ್ ಸಹ ಒಬ್ಬರು. ಅವರಿಗೆ ಒಂದು ಚಿತ್ರದಲ್ಲಿ ಏನು ಹೇಳಬೇಕು, ಎಷ್ಟು ಹೇಳಬೇಕು ಎಂದು ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಪೂರಕವಾಗಿ ಅವರು ಚಿತ್ರಕಥೆ ಬರೆದರು. ಅವರ ಚಿತ್ರಗಳನ್ನು ನೋಡಿದರೆ, ಅದು ಸ್ಪಷ್ಟವಾಗುತ್ತದೆ.
ನಿರ್ದೇಶಕರಾಗಲೆಂದೇ ಚಿತ್ರರಂಗಕ್ಕೆ ಬಂದವರು ಶಂಕರ್ ನಾಗ್
ಶಂಕರ್ ನಾಗ್ ನಟರಾಗಿ ಚಿತ್ರರಂಗಕ್ಕೆ ಬಂದರಾದರೂ, ಅವರು ಚಿತ್ರರಂಗಕ್ಕೆ ಬಂದಿದ್ದೇ ನಿರ್ದೇಶಕರಾಗುವುದಕ್ಕೆ ಎಂದು ಹೇಳಲಾಗುತ್ತದೆ. ಅವರ ಮೊದಲ ಚಿತ್ರ ‘ಒಂದಾನೊಂದು ಕಾಲದಲ್ಲಿ’ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಆ ನಂತರ ಬಂದ ‘ಸೀತಾರಾಮು’ ಮತ್ತು ‘ಆಟೋ ರಾಜ’ ಚಿತ್ರಗಳು ದೊಡ್ಡ ಯಶಸ್ಸು ಕಾಣುವ ಮೂಲಕ ಅವರು ನಟನೆಗೆ ಅಂಟಿಕೊಂಡರು. ಆದರೆ, ಶಂಕರ್ ನಾಗ್ ಅವರಿಗೆ ನಿರ್ದೇಶನ ಮಾಡಬೇಕು, ನಿರ್ದೇಶಕರಾಗಿ ಗುರುತಿಸಿಕೊಳ್ಳಬೇಕು ಎಂಬ ಮಹತ್ತರ ಬಯಕೆ ಇತ್ತಂತೆ. ಜನಪ್ರಿಯತೆ ಮತ್ತು ಯಶಸ್ಸು ಸಿಕ್ಕಿತು ಎಂಬ ಕಾರಣಕ್ಕೆ ಅವರು ಬರೀ ನಟನೆಗೆ ಅಂಟಿಕೊಂಡು ಕೂರಲಿಲ್ಲ. ಹಾಗಾಗಿ, ಚಿತ್ರರಂಗಕ್ಕೆ ಬಂದ ಎರಡೇ ವರ್ಷಗಳಲ್ಲಿ ನಿರ್ದೇಶನಕ್ಕಿಳಿದರು. ನಟನೆ ಮಧ್ಯೆ ಬಿಡುವು ಮಾಡಿಕೊಂಡು ಚಿತ್ರ ನಿರ್ಮಾಣ, ನಿರ್ದೇಶನಕ್ಕಿಳಿದರು. ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಕನ್ನಡದ ಜನಪ್ರಿಯ ನಟರಾದ ಡಾ. ರಾಜಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಶ್ ಅವರನ್ನು ಬೇರೆಬೇರೆ ಚಿತ್ರಗಳಲ್ಲಿ ನಿರ್ದೇಶನ ಮಾಡಿದರು. ಶಂಕರ್ ನಾಗ್ ಅವರಲ್ಲಿದ್ದ ಅದ್ಭುತ ನಿರ್ದೇಶಕ ಮತ್ತು ಬರಹಗಾರನಿಗೆ ಸಾಕ್ಷಿ ಅವರ ಚಿತ್ರಗಳು.
ಶಂಕರ್ ನಿರ್ದೇಶನದ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಬ್ರಾಂಡಿಂಗ್ ಕಾಣುವುದಿಲ್ಲ. ವೈವಿಧ್ಯ ಕಾಣುತ್ತದೆ. ನಟರಷ್ಟೇ ಅಲ್ಲ, ನಿರ್ದೇಶಕರು ಒಂದು ಚಿತ್ರ ಜನಪ್ರಿಯವಾದರೆ ಅಥವಾ ಯಶಸ್ವಿಯಾದರೆ, ಅದಕ್ಕೆ ಬ್ರಾಂಡ್ ಆಗುವ ಅಪಾಯವಿರುತ್ತದೆ. ಆದರೆ, ಶಂಕರ್ ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ಮಾಡಿದರು. ಅವರ ಎಂಟು ಚಿತ್ರಗಳಲ್ಲಿ ಯಾವುದಕ್ಕೆ ಯಾವುದನ್ನೂ ಹೋಲಿಸುವಂತಿಲ್ಲ. ಅವರು ಕಾಲ್ಪನಿಕ ಕಥೆಗಳನ್ನು ಬರೆದರು. ಕಾದಂಬರಿ ಆಧರಿಸಿದ ಚಿತ್ರವೊಂದನ್ನು ನಿರ್ದೇಶಿಸಿದರು. ನೈಜ ಘಟನೆಗಳನ್ನಾಧರಿಸಿ ಚಿತ್ರಕಥೆ ರಚಿಸಿದರು. ತಮ್ಮ ಚಿತ್ರವನ್ನು ತಾವೇ ಬೇರೆ ಭಾಷೆಗೆ ರೀಮೇಕ್ ಮಾಡುತ್ತಿದ್ದರು. ಯಾರೋ, ಯಾವಾಗಲೋ ಮಾಡಿದ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಿದರು. ಕಮರ್ಷಿಯಲ್, ಕಲಾತ್ಮಕ ಹೀಗೆ ಎರಡೂ ತರಹದ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಚಿತ್ರಗಳನ್ನು ಮಾಡಿದರು. ಒಟ್ಟಿನಲ್ಲಿ ಎಂಟು ವರ್ಷಗಳಲ್ಲಿ ನೋಡನೋಡುತ್ತಿದ್ದಂತೆಯೇ ನಟರಾಗಿಯಷ್ಟೇ ಅಲ್ಲದೆ, ನಿರ್ದೇಶಕ ಮತ್ತು ಬರಹಗಾರರಾಗಿಯೂ ಶಂಕರ್, ‘ಮಿಂಚಿನ ಓಟ’ ಓಡಿದರು.
ಹಾಗೆ ನೋಡಿದರೆ, ಕನ್ನಡದಲ್ಲಿ ಮೊದಲ ಚಿತ್ರದಲ್ಲಿ ನಟಿಸಿದ ನಂತರ ಅವರು ಮರಾಠಿ ಚಿತ್ರವೊಂದಕ್ಕೆ ಚಿತ್ರಕಥೆ ಬರೆದಿದ್ದರು. 1979ರಲ್ಲಿ ಬಿಡುಗಡೆಯಾದ ಆ ಚಿತ್ರದ ಹೆಸರು '22 ಜೂನ್ 1897’. ಸ್ವತಂತ್ರ ಪೂರ್ವ ಭಾರತದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಒಂದಿಷ್ಟು ಘಟನೆಗಳನ್ನಿಟ್ಟುಕೊಂಡು ಈ ಚಿತ್ರ ಮಾಡಲಾಗಿತ್ತು. ಈ ಚಿತ್ರಕ್ಕೆ ನಚಿಕೇತ್ ಪಟವರ್ಧನ್ ಅವರ ಜೊತೆಗೆ ಸೇರಿ ಶಂಕರ್ ನಾಗ್ ಚಿತ್ರಕಥೆ ರಚಿಸಿದ್ದರು.
ನಿರ್ದೇಶಕರಾಗಿ ಶಂಕರ್ ನಾಗ್ ಮಿಂಚಿನ ಓಟ
1980ರಲ್ಲಿ ಬಿಡುಗಡೆಯಾದ ‘ಮಿಂಚಿನ ಓಟ’ ಚಿತ್ರದ ಮೂಲಕ ಶಂಕರ್ ನಾಗ್ ನಿರ್ದೇಶನ ಮಾಡಿದ್ದು ಗೊತ್ತೇ ಇದೆ. ನೈಜ ಘಟನೆಯನ್ನಾಧರಿಸಿದ ಈ ಚಿತ್ರಕ್ಕೆ ಅವರು ನಿರ್ದೇಶಕರಷ್ಟೇ ಅಲ್ಲ, ಅನಂತ್ ನಾಗ್ ಅವರ ಜೊತೆಗೆ ಸೇರಿ ನಿರ್ಮಾಣವನ್ನೂ ಮಾಡಿದ್ದರು. ಮರಿಯಮ್ ಜೇಟ್‍ಪುರ್‍ವಾಲ ಜೊತೆಗೆ ಸೇರಿ ಚಿತ್ರಕಥೆಯನ್ನೂ ರಚಿಸಿದ್ದರು. ಈ ಚಿತ್ರಕ್ಕಾಗಿ ಅವರಿಗೆ ರಾಜ್ಯ ಸರ್ಕಾದಿಂದ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯೂ ಸಿಕ್ಕಿತ್ತು. ಈ ಚಿತ್ರವನ್ನು ‘ಲಾಲಚ್’ ಎಂಬ ಹೆಸರಿನಲ್ಲಿ ಹಿಂದಿಗೆ 1983ರಲ್ಲಿ ರೀಮೇಕ್ ಮಾಡಿದ್ದರು ಶಂಕರ್ ನಾಗ್.
ಅದೇ ವರ್ಷ ಬಿಡುಗಡೆಯಾದ ಅವರ ಇನ್ನೊಂದು ಚಿತ್ರವೆಂದರೆು ‘ಜನ್ಮ ಜನ್ಮದ ಅನುಬಬಂಧ’. ಮೊದಲ ಚಿತ್ರ ಕ್ರೈಮ್ ಥ್ರಿಲ್ಲರ್ ಆಗಿದ್ದರೆ, ಎರಡನೆಯದು ಪುನರ್ಜನ್ಮದ ಕಥೆಯಾಗಿತ್ತು. ಈ ಚಿತ್ರ ಬಿಡುಗಡೆಯಾಗುವ ಕೆಲವೇ ದಿನಗಳ ಹಿಂದೆ ಡಾ ವಿಷ್ಣುವರ್ಧನ್ ಅಭಿನಯದ ‘ಬಂಗಾರದ ಜಿಂಕೆ’ ಚಿತ್ರ ಬಿಡುಗಡೆಯಾಗಿತ್ತು. ಅದೂ ಸಹ ಒಂದು ಪುನರ್ಜನ್ಮ ಮತ್ತು ನಿಧಿಯ ಸುತ್ತ ಸುತ್ತುವ ಚಿತ್ರವಾಗಿತ್ತು. ಎರಡೂ ಚಿತ್ರಗಳು ಪುನರ್ಜನ್ಮದ ಕುರಿತಾದ ಚಿತ್ರಗಳಾಗಿದ್ದವು ಎಂಬುದು ವಿಶೇಷ.
1981ರಲ್ಲಿ ಬಿಡುಗಡೆಯಾದ ‘ಗೀತಾ’, ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಚಿತ್ರ ಎಂದರೆ ತಪ್ಪಿಲ್ಲ. ಅದಕ್ಕೆ ಒಂದು ಕಾರಣ ಹಾಡುಗಳು. ಇಳಯರಾಜ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ಹಾಡುಗಳು ಈಗಲೂ ಜನಪ್ರಿಯಯವಾಗಿವೆ. ಇನ್ನೊಂದು ಕಾರಣವೆಂದರೆ, ಇದೊಂದು ದುರಂತ ಪ್ರೇಮಕಥೆ. ಕನ್ನಡದ ದುರಂತ ಪ್ರೇಮಕಥೆಗಳಿಗೆಲ್ಲಾ ಈ ಕಥೆ ಮತ್ತು ಸಂಜು ಹಾಗೂ ಗೀತಾ ಪಾತ್ರಗಳು ಸ್ಫೂರ್ತಿಯಾಗಿವೆ. ಈ ಚಿತ್ರಕ್ಕೆ ಶಂಕರ್ ನಾಗ್ ಮತ್ತು ಅರುಂಧತಿ ನಾಗ್ ಜಂಟಿಯಾಗಿ ಕಥೆ ಬರೆದಿದ್ದರು.
‘ಲಾಲಚ್’ ಚಿತ್ರವನ್ನು ಹಿಂದಿಯಲ್ಲಿ ನಿರ್ದೇಶಿಸಿ ಬಂದ ನಂತರ ‘ಹೊಸ ತೀರ್ಪು’ ಎಂಬ ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡಿದರು ಶಂಕರ್ ನಾಗ್. 1972ರಲ್ಲಿ ಬಿಡುಗಡೆಯಾದ ರಾಜೇಶ್ ಖನ್ನಾ ಅಭಿನಯದ ‘ದುಷ್ಮನ್’ ಚಿತ್ರವನ್ನು ಅಂಬರೀಶ್ ಅಭಿನಯದಲ್ಲಿ ಕನ್ನಡಕ್ಕೆ ತಂದಿದ್ದರು. ಅದೇ ವರ್ಷ ‘ನೋಡಿ ಸ್ವಾಮಿ ನಾವಿರೋದು ಹೀಗೆ’ ಎಂಬ ಅತ್ಯಂತ ಸರಳ ಮತ್ತು ಮಧ್ಯಮ ವರ್ಗದವರಿಗೆ ಇಷ್ಟವಾಗುವಂತಹ ಒಂದು ಚಿತ್ರದೊಂದಿಗೆ ಬಂದರು. ಈ ಚಿತ್ರಕ್ಕೆ ಮನೋಹರ್ ಕಟಧರೆ ಕಥೆ ಬರೆದರೆ, ಶಂಕರ್ ನಾಗ್ ಚಿತ್ರಕಥೆ ಬರೆಯುವುದರ ಜೊತಗೆ ನಿರ್ದೇಶನ ಮಾಡಿದ್ದರು.
ಇದಾದ ಮರುವರ್ಷವೇ ‘ಆ್ಯಕ್ಸಿಡೆಂಟ್’ ಬಿಡುಗಡೆಯಾಯಿತು. ಕನ್ನಡ ಚಿತ್ರರಂಗದಲ್ಲೇ ಒಂದು ಮಹತ್ವದ ಮತ್ತು ವಿಭಿನ್ನ ಚಿತ್ರವಿದು. ಆಗಿನ ಕಾಲಕ್ಕೆ ಯಾವ ಚಿತ್ರದಲ್ಲೂ ತೋರಿಸದ ಕಥೆ, ಬೆಂಗಳೂರು ಮತ್ತು ರಾಜಕೀಯವನ್ನು ಈ ಚಿತ್ರದ ಮೂಲಕ ತೆರೆದಿಡಲಾಯಿತು. ಮುಂಬೈನಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ವಸಂತ್ ಮೊಕಾಶಿ ಬರೆದ ಕಥೆ-ಚಿತ್ರಕಥೆಯನ್ನು ತೆರೆಯ ಮೇಲೆ ತಂದವರು ಶಂಕರ್. ರಾಷ್ಟ್ರಮಟ್ಟದಲ್ಲಿ ಚಿತ್ರಕ್ಕೆ ಒಂದು ಪ್ರಶಸ್ತಿ ಬಂದರೆ, ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಚಿತ್ರ ಸೇರಿದಂತೆ ಐದು ಪ್ರಶಸ್ತಿಗಳು ಸಿಕ್ಕವು.
ಒಂದು ಮುತ್ತಿನ ಕಥೆಯೇ ಕೊನೆಯದು
ಇದಾಗಿ ಎರಡು ವರ್ಷಗಳ ಕಾಲ ಶಂಕರ್ ನಾಗ್ ಯಾವುದೇ ಚಿತ್ರವನ್ನು ನಿರ್ದೇಶಿಸಲಿಲ್ಲ. ದೂರದರ್ಶನಕ್ಕಾಗಿ ‘ಮಾಲ್ಗುಡಿ ಡೇಸ್’ ನಿರ್ದೇಶಿಸುವುದರ ಜೊತೆಗೆ ‘ಮಕ್ಕಳಿರಲವ್ವ ಮನೆ ತುಂಬಾ’ ಮತ್ತು ‘ಪರಮೇಶಿ ಪ್ರೇಮ ಪ್ರಸಂಗ’ ಚಿತ್ರಗಳಿಗೆ ಚಿತ್ರಕಥೆ ಬರೆದರು. 1987ರಲ್ಲಿ ಶಂಕರ್ ನಾಗ್ ನಿರ್ದೇಶಿಸಿದ ‘ಒಂದು ಮುತ್ತಿನ ಕಥೆ’ ಅವರ ಕೊನೆಯ ಚಿತ್ರವಾಯಿತು. ಜಾನ್ ಸ್ಟೇನ್‍ಬೆಕ್ ಅವರ ‘ದಿ ಪರ್ಲ್’ ಕಾದಂಬರಿಯನ್ನಾಧರಿಸಿ ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದರು. ನೀರಿನೊಳಗೆ ಸಾಹಸ ದೃಶ್ಯಗಳನ್ನು ಸಂಯೋಜಿಸಿದರು. ಡಾ. ರಾಜಕುಮಾರ್ ಅವರನ್ನು ನಿರ್ದೇಶಿಸಿದ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ‘ಒಂದು ಮುತ್ತಿನ ಕಥೆ’ಯ ನಂತರ ಶಂಕರ್ ನಾಗ್, ‘ಜೋಕುಮಾರಸ್ವಾಮಿ’ ನಿರ್ದೇಶಿಸುವುದಕ್ಕೆ ಮುಂದಾದರೂ, ಮುಹೂರ್ತವಾದ ಮರುದಿನವೇ ಆ್ಯಕ್ಸಿಡೆಂಟ್‍ನಿಂದ ಇನ್ನಿಲ್ಲವಾದರು.
ನಟರಾಗಿ ಶಂಕರ್ ನಾಗ್ ಒಬ್ಬ ‘ಆ್ಯಕ್ಷನ್ ಹೀರೋ’ ಆಗಿ ಬ್ರಾಂಡ್ ಆಗಿದ್ದರು. ಮಾರುಕಟ್ಟೆಯ ಕಾರಣಕ್ಕೆ ಅವರು ಬೇರೆಯವರ ಚಿತ್ರಗಳಲ್ಲಿ ಹೆಚ್ಚು ಪ್ರಯೋಗ ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಬೇರೆಯವರ ಚಿತ್ರಗಳಲ್ಲಿ ಏನೇನು ಸಾಧ್ಯವಿರಲಿಲ್ಲವೋ, ಅವೆಲ್ಲವೂ ತಮ್ಮದೇ ನಿರ್ಮಾಣ, ನಿರ್ದೇಶನದ ಚಿತ್ರಗಳಲ್ಲಿ ಪ್ರಯೋಗ ಮಾಡಿದರು. ಒಂದು ಚಿತ್ರದಲ್ಲಿ ಕಳ್ಳನಾದರು. ಇನ್ನೊಂದರಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡರು. ಒಂದರಲ್ಲಿ ಬ್ಯಾಂಕ್ ಉದ್ಯೋಗಿ, ಇನ್ನೊಂದರಲ್ಲಿ ಪರ್ತಕರ್ತ … ಹೀಗೆ ಪಾತ್ರ ಏನೆಲ್ಲಾ ಬೇಡುತ್ತದೋ ಅವೆಲ್ಲವನ್ನೂ ಮಾಡಿದರು. ತಮ್ಮ ಚಿತ್ರಗಳಲ್ಲಿ ಅವರಿಗೆ ಯಾವುದೇ ಬ್ರಾಂಡ್ ಇರಲಿಲ್ಲ. ತಮ್ಮ ಚಿತ್ರಗಳಲ್ಲಿ ಅವರ ಶಂಕರ್ ನಾಗ್ ಆಗಿ ಕಾಣಿಸಿಕೊಂಡರೇ ಹೊರತು, ‘ಕರಾಟೆ ಕಿಂಗ್’ ಶಂಕರ್ ನಾಗ್ ಆಗಿ ಕಾಣಿಸಿಕೊಳ್ಳಲಿಲ್ಲ ಅಥವಾ ತಮಗಿದ್ದ ಇಮೇಜ್ ಬಳಸಿಕೊಂಡು ಇನ್ನಷ್ಟು ಜನಪ್ರಿಯತೆ ಅಥವಾ ಯಶಸ್ಸು ಪಡೆಯುವ ಪ್ರಯತ್ನ ಮಾಡಲಿಲ್ಲ. ಕಥೆಗೆ ಸೂಕ್ತವಾದ ಪಾತ್ರಗಳನ್ನು ಬರೆದರು ಮತ್ತು ಅದಕ್ಕೆ ಪೂರಕವಾಗಿ ತೆರೆಯ ಮೇಲೆ ಕಾಣಿಸಿಕೊಂಡರು.
ಬಹುಶಃ ಇನ್ನಷ್ಟು ಸಮಯ ಸಿಕ್ಕಿದ್ದರೆ ಶಂಕರ್ ನಾಗ್ ಇನ್ನಷ್ಟು ಚಿತ್ರಗಳನ್ನು ನಿರ್ದೇಶಿಸುತ್ತಿದ್ದರೇನೋ? ಇನ್ನಷ್ಟು ಕಥೆಗಳಿಗೆ ಚಿತ್ರಕಥೆಯ ಸ್ಪರ್ಶ ಕೊಡುತ್ತಿದ್ದರೇನೋ? ಆದರೆ, ಸಮಯ ಸಿಗಲಿಲ್ಲ. ಆದರೂ ಸೀಮಿತ ಸಮಯದಲ್ಲಿ ನಿರ್ದೇಶಕರಾಗಿ ಮತ್ತು ಚಿತ್ರಕಥೆಗಾರರಾಗಿ ಕನ್ನಡ ಚಿತ್ರರಂಗದಲ್ಲಿ ಅವರ ‘ಮಿಂಚಿನ ಓಟ’ ಗಮನಾರ್ಹ.
ಚೇತನ್ ನಾಡಿಗೇರ್ ಪರಿಚಯ
ಕಳೆದ ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಚೇತನ್ ನಾಡಿಗೇರ್, ‘ಉದಯವಾಣಿ’, ‘ರೂಪತಾರಾ’, ‘ಕನ್ನಡ ಪ್ರಭ’, ‘ವಿಜಯವಾಣಿ’ ಮತ್ತು ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಸಿನಿಮಾ ವರದಿಗಾರರಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಮೇಶ್ ಅರವಿಂದ್ ಅವರ ‘ಖುಷಿಯಿಂದ ರಮೇಶ್’ ಪುಸ್ತಕದ ನಿರೂಪಣೆ ಮಾಡುವುದರ ಜೊತೆಗೆ, ಭಾರತೀಯ ಚಿತ್ರರಂಗದ ಹಲವು ಹೆಗ್ಗಳಿಕೆ ಮತ್ತು ದಾಖಲೆಗಳನ್ನು ಸಾರುವ ‘ಸ್ಕ್ರೀನ್ ಶಾಟ್ - ದಾಖಲಾಗದ ದಾಖಲೆಗಳು’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸದ್ಯ ಸ್ವತಂತ್ರ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅವರು 'ಹಿಂದೂಸ್ಥಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ‘ಸಿನಿಸ್ಮೃತಿ’ ಅಂಕಣದ ಮೂಲಕ ಮನರಂಜನಾ ಕ್ಷೇತ್ರದ ಹಲವು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.