ಕರಾಟೆ ಕಿಂಗ್‌ ಶಂಕರ್‌ನಾಗ್‌ ಹುಟ್ಟುಹಬ್ಬ ಆಚರಿಸಿದ ಮರ್ಯಾದೆ ಪ್ರಶ್ನೆ ಚಿತ್ರತಂಡ; ನವೆಂಬರ್‌ 22ಕ್ಕೆ ಸಿನಿಮಾ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  ಕರಾಟೆ ಕಿಂಗ್‌ ಶಂಕರ್‌ನಾಗ್‌ ಹುಟ್ಟುಹಬ್ಬ ಆಚರಿಸಿದ ಮರ್ಯಾದೆ ಪ್ರಶ್ನೆ ಚಿತ್ರತಂಡ; ನವೆಂಬರ್‌ 22ಕ್ಕೆ ಸಿನಿಮಾ ರಿಲೀಸ್‌

ಕರಾಟೆ ಕಿಂಗ್‌ ಶಂಕರ್‌ನಾಗ್‌ ಹುಟ್ಟುಹಬ್ಬ ಆಚರಿಸಿದ ಮರ್ಯಾದೆ ಪ್ರಶ್ನೆ ಚಿತ್ರತಂಡ; ನವೆಂಬರ್‌ 22ಕ್ಕೆ ಸಿನಿಮಾ ರಿಲೀಸ್‌

ನವೆಂಬರ್ 22 ರಂದು ರಿಲೀಸ್‌ ಆಗುತ್ತಿರುವ ಮರ್ಯಾದೆ ಪ್ರಶ್ನೆ ಚಿತ್ರತಂಡ ಶನಿವಾರ ಶಂಕರ್‌ನಾಗ್‌ ಹುಟ್ಟುಹಬ್ಬ ಆಚರಿಸಿದೆ. ರಾಜ್ಯದಲ್ಲಿ ಕರಾಟೆ ಕಿಂಗ್‌ ಹುಟ್ಟುಹಬ್ಬ, ಚಾಲಕರ ದಿನಾಚರಣೆ ಆಗಿ ಫೇಮಸ್‌ ಆಗಿದೆ. ನಾಗರಾಜ ಸೋಮಯಾಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಕರಾಟೆ ಕಿಂಗ್‌ ಶಂಕರ್‌ನಾಗ್‌ ಹುಟ್ಟುಹಬ್ಬ ಆಚರಿಸಿದ ಮರ್ಯಾದೆ ಪ್ರಶ್ನೆ ಚಿತ್ರತಂಡ
ಕರಾಟೆ ಕಿಂಗ್‌ ಶಂಕರ್‌ನಾಗ್‌ ಹುಟ್ಟುಹಬ್ಬ ಆಚರಿಸಿದ ಮರ್ಯಾದೆ ಪ್ರಶ್ನೆ ಚಿತ್ರತಂಡ

ನವೆಂಬರ್‌ 9, ಕರಾಟೆ ಕಿಂಗ್‌ ಶಂಕರ್‌ನಾಗ್‌ ಅವರ ಹುಟ್ಟುಹಬ್ಬ. ಕರ್ನಾಟಕದಲ್ಲಿ ಶಂಕರ್‌ನಾಗ್ ಜನ್ಮದಿನವನ್ನು 'ಚಾಲಕರ ದಿನಾಚರಣೆ'ಯನ್ನಾಗಿ ಆಚರಿಸುತ್ತಾ ಬರಲಾಗಿದೆ. ಶನಿವಾರ, ಬಸವೇಶ್ವರ ನಗರದ ಸುಮಾರು 200ಕ್ಕೂ ಹೆಚ್ಚು ಆಟೋ ಚಾಲಕರು 'ಮರ್ಯಾದೆ ಪ್ರಶ್ನೆ' ಚಿತ್ರತಂಡದೊಂದಿಗೆ ಚಾಲಕರ ದಿನಾಚರಣೆ ಆಚರಿಸಿದರು. ಮರ್ಯಾದೆ ಪ್ರಶ್ನೆ ಚಿತ್ರತಂಡದ ಜೊತೆಗೆ ನಮ್ಮ ಯಾತ್ರಿ ಆ್ಯಪ್‌ನ ರಾಜೀವ್ ಕೂಡಾ ಭಾಗವಹಿಸಿದ್ದರು.

ಶಂಕರ್‌ನಾಗ್‌ ಜನ್ಮದಿನದಂದು ಆರಂಭವಾದ ಸಖತ್‌ ಸ್ಟುಡಿಯೋ

"ನಮ್ಮ ಯಾತ್ರಿ, ಕನ್ನಡದ ಚಾಲಕರಿಗೆ ಸಹಾಯ ಮಾಡಲು ಶುರುವಾದ ಆ್ಯಪ್. ಕನ್ನಡಿಗರ ಜತೆ ನಿಲ್ಲುವುದು ನಮ್ಮ ನಂಬರ್ ಒನ್ ಉದ್ದೇಶ.‌ ಅದೇ ಉದ್ದೇಶದಿಂದ ಚಾಲಕರ ಪಾತ್ರವಿರುವ 'ಮರ್ಯಾದೆ ಪ್ರಶ್ನೆ' ಸಿನಿಮಾ ತಂಡದ ಜತೆ ನಿಂತಿದ್ದೇವೆ" ಎಂದರು. ಆರ್‌ಜೆ ಪ್ರದೀಪ್‌ ಅವರು 'ಸಕ್ಕತ್ ಸ್ಟುಡಿಯೋ'ವನ್ನು ಶಂಕರ್ ನಾಗ್ ಅವರ ಜನ್ಮದಿನದಂದು 2017ರಲ್ಲಿ ಆರಂಭಿಸಿದರು. ಎಂಟು ವರ್ಷಗಳ ಹಿಂದೆ ಶಂಕರ್ ನಾಗ್ ಹಾಡುಗಳ ಅಕಾಪೆಲ್ಲದೊಂದಿಗೆ ಶುರುವಾದ ಸಂಸ್ಥೆ ಇಂದು ತಮ್ಮದೇ ಒಂದು ಸಿನಿಮಾ ನಿರ್ಮಿಸುವ ಮಟ್ಟಕ್ಕೆ ಬೆಳೆದಿದೆ. ರಿಯಾಲಿಸ್ಟಿಕ್ ರಿವೇಂಜ್ ಡ್ರಾಮಾ 'ಮರ್ಯಾದೆ ಪ್ರಶ್ನೆ' ಸಕ್ಕತ್ ಸ್ಟುಡಿಯೋದ ಮೊದಲ ಚಿತ್ರವಾಗಿದೆ.

ಚಿತ್ರದಲ್ಲಿ 'ಡ್ರೈವರ್' ಪಾತ್ರ ಮಾಡಿರುವ ಪೂರ್ಣಚಂದ್ರ ಮೈಸೂರು ಅವರಿಗೆ ಖಾಕಿ ಕೋಟ್ ಹಾಕುವ ಮೂಲಕ ಆಟೋ ಚಾಲಕರು ಸಾಂಕೇತಿಕವಾಗಿ ಪೂರ್ಣ ಅವರನ್ನು ಚಾಲಕರ ಬಳಗಕ್ಕೆ ಬರಮಾಡಿಕೊಂಡರು‌‌. ಈ ಸಂದರ್ಭದಲ್ಲಿ ಮಾತನಾಡಿದ ಪೂರ್ಣಚಂದ್ರ ಮೈಸೂರು"ಈ ಸಿನಿಮಾದಲ್ಲಿ ನಾನು ಚಾಲಕನ ಪಾತ್ರ ಮಾಡಿದ್ದೇನೆ.‌ ಚಾಲಕರ ಕಷ್ಟಸುಖಗಳನ್ನು ತೋರಿಸುವ ಚಂದದ ಪಾತ್ರ. 'ಮರ್ಯಾದೆ ಪ್ರಶ್ನೆ' ಮಿಡಲ್ ಕ್ಲಾಸ್ ಜೀವನ ತೋರಿಸುವ ಸಿನಿಮಾ. ಚಾಲಕರು ಸೇರಿದಂತೆ ಎಲ್ಲ ದುಡಿಯುವ ವರ್ಗಕ್ಕೂ ಈ ಸಿನಿಮಾ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ" ಎಂದರು. 'ಮರ್ಯಾದೆ ಪ್ರಶ್ನೆ' ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕೂರ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಬಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡಲಿಗಿ, ಶ್ರವಣ್, ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ.

ನಾಗರಾಜ್‌ ಸೋಮಯಾಜಿ ನಿರ್ದೇಶನದ ಮರ್ಯಾದೆ ಪ್ರಶ್ನೆ

ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿವೆ. ಎಲ್ಲ ಹಾಡುಗಳಿಗೆ ಅರ್ಜುನ್ ರಾಮು ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ಸಕುಟುಂಬ ಸಮೇತ, ಗೌಳಿ ಮತ್ತು ಚಾರ್ಲಿ ಸಿನಿಮಾಗಳಿಗೆ ಕೆಲಸ ಮಾಡಿರುವ ಸಂದೀಪ್ ವೆಲ್ಲುರಿ ಈ ಸಿನಿಮಾದ ಛಾಯಾಗ್ರಾಹಕರು. ಇದೇ ತಿಂಗಳ 12ಕ್ಕೆ ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಲೂಸ್ ಕನೆಕ್ಷನ್, ಹನಿಮೂನ್ ವೆಬ್ ಸೀರೀಸ್‌ಳನ್ನು ನಿರ್ಮಿಸಿರುವ ಆರ್‌ಜೆ ಪ್ರದೀಪ್‌ ಅವರ 'ಸಕ್ಕತ್ ಸ್ಟುಡಿಯೋ' ಈ ಚಿತ್ರವನ್ನು ನಿರ್ಮಿಸಿದೆ. ಪ್ರದೀಪ್‌ ಅವರೇ ಬರೆದ ಕಥೆಗೆ ನಾಗರಾಜ ಸೋಮಯಾಜಿ ಅವರ ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನವಿದೆ. ಮರ್ಯಾದೆ ಪ್ರಶ್ನೆ ಸಿನಿಮಾ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Whats_app_banner