logo
ಕನ್ನಡ ಸುದ್ದಿ  /  ಮನರಂಜನೆ  /  Bhairathi Ranagal Review: ಯಾಕ್‌ ಶಿವಣ್ಣ ಹಿಂಗ್‌ ಮಾಡಿದ್ರಿ? ‘ಭೈರತಿ ರಣಗಲ್’ ಅಬ್ಬರದ ನಡುವೆ ಮಂಕಾಯ್ತು ಚಿತ್ರಕಥೆ!

Bhairathi Ranagal Review: ಯಾಕ್‌ ಶಿವಣ್ಣ ಹಿಂಗ್‌ ಮಾಡಿದ್ರಿ? ‘ಭೈರತಿ ರಣಗಲ್’ ಅಬ್ಬರದ ನಡುವೆ ಮಂಕಾಯ್ತು ಚಿತ್ರಕಥೆ!

Nov 15, 2024 03:59 PM IST

google News

ಭೈರತಿ ರಣಗಲ್‌ ಸಿನಿಮಾ ವಿಮರ್ಶೆ

    • Bhairathi Ranagal Movie Review:‌ ಸಲೀಸಾಗಿ ಊಹಿಸಿಬಿಡಬಲ್ಲ ಗುಣ ಭೈರತಿ ರಣಗಲ್ ಚಿತ್ರಕ್ಕಿದೆ. ಒಂದು ಚಿತ್ರದ ನಾಯಕನ ಇಂಟ್ರೋ ಹೇಗಿರಬೇಕೋ, ಅಷ್ಟನ್ನೇ 2 ಗಂಟೆ 14 ನಿಮಿಷದ ಅವಧಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂಬಂತೆ ಕಾಣಿಸುತ್ತದೆ ಈ ಸಿನಿಮಾ. ಇಲ್ಲಿ ಯಾವುದೂ ಹೊಸದು ಎನಿಸುವುದಿಲ್ಲ. ನೋಡುಗನನ್ನು ಕೆಣಕುವುದಿಲ್ಲ. 
ಭೈರತಿ ರಣಗಲ್‌ ಸಿನಿಮಾ ವಿಮರ್ಶೆ
ಭೈರತಿ ರಣಗಲ್‌ ಸಿನಿಮಾ ವಿಮರ್ಶೆ

Bhairathi Ranagal Review: ಭೈರತಿ ರಣಗಲ್‌ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಒಂದೆನಿಸಿಕೊಂಡಿತ್ತು. ಕನ್ನಡ ಮಾತ್ರವಲ್ಲದೆ, ಪರಭಾಷೆಗಳಿಗೂ ಈ ಸಿನಿಮಾ ಡಬ್‌ ಆಗಿ ತೆರೆಕಂಡಿದೆ. ಇದೆಲ್ಲದರ ನಡುವೆ ಈ ಚಿತ್ರವನ್ನು ಸ್ವತಃ ಶಿವಣ್ಣ ದಂಪತಿ ನಿರ್ಮಾಣ ಮಾಡಿದ್ದು, ಆ ಕೌತುಕಕ್ಕೆ ಒಗ್ಗರಣೆ ಹಾಕಿತ್ತು. ಅದರಂತೆ ಇಂದು (ನ. 15) ಈ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ. ಅಭಿಮಾನಿ ವಲಯದಲ್ಲಿಯೂ ಸಂಭ್ರಮ ಮನೆ ಮಾಡಿದೆ. ಹಾಗಾದರೆ, ಏನಿದೆ ಭೈರತಿ ರಣಗಲ್ ಸಿನಿಮಾದಲ್ಲಿ? ಇಲ್ಲಿದೆ ವಿಮರ್ಶೆ.

2017ರಲ್ಲಿ ನರ್ತನ್‌ ನಿರ್ದೇಶನದಲ್ಲಿ ಮೂಡಿಬಂದಿತ್ತು ಮಫ್ತಿ ಸಿನಿಮಾ. ಶಿವರಾಜ್‌ಕುಮಾರ್‌ ಮತ್ತು ಶ್ರೀಮುರಳಿ ಕಾಂಬಿನೇಷನ್‌ನಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತ್ತು. ಆ ಗೆಲುವಿನ ಪ್ರಭಾವಳಿಯಲ್ಲಿಯೇ ಅತಿ ಹೆಚ್ಚು ಮಿನುಗಿದ್ದು ಭೈರತಿ ರಣಗಲ್‌ ಎಂಬ ಗತ್ತಿನ ಹೆಸರು ಮತ್ತು ಆ ಪಾತ್ರ. ಈಗ ಅದೇ ಪಾತ್ರದ ಹಿನ್ನೆಲೆ ಏನು? ಮಫ್ತಿಯಲ್ಲಿ ಗ್ಯಾಂಗ್‌ಸ್ಟರ್‌ ಆಗಿದ್ದ ಭೈರತಿ ರಣಗಲ್‌ ಮೊದಲು ಏನಾಗಿದ್ದರು? ಅವರ ವೃತ್ತಿ ಏನಾಗಿತ್ತು? ಹೀಗೆ ಒಂದಷ್ಟು ಪ್ರಶ್ನೆಗಳನ್ನಿಟ್ಟುಕೊಂಡು ನರ್ತನ್‌ ಪ್ರೀಕ್ವೆಲ್‌ ಕಥೆಯನ್ನು ಹೆಣೆದಿದ್ದಾರೆ.

ಚಿತ್ರದ ಕಥೆ ಏನು?

1985ರಲ್ಲಿನ ಕಥೆಯದು. ರೋಣಾಪುರ ಎಂಬ ಊರು. ಸರ್ಕಾರಿ ಸೇವೆಗಳನ್ನೇ ಕಾಣದ ಒಂದು ತಾಲೂಕು. ಹನಿ ನೀರಿಗೂ ಅಲ್ಲಿ ತತ್ವಾರ. ಅಂಥ ಊರಿನ ಹುಡುಗ ಈ ಭೈರತಿ ರಣಗಲ್ (ಶಿವರಾಜ್‌ಕುಮಾರ್). ಆ ಊರಿನ ಸಮಸ್ಯೆ ಆಲಿ‌ಸುವ ಅಧಿಕಾರಿಗಳಿಗೂ ಎಲ್ಲಿಲ್ಲದ ದಾರಿದ್ರ್ಯ ಮತ್ತು ಲಂಚಬಾಕತನ. ಒಂದು ದಿನ ಅದೇ ಕಚೇರಿಗೆ ಬಾಂಬ್‌ ಇಟ್ಟು, 21 ವರ್ಷ ಶಿಕ್ಷೆಗೂ ಗುರಿಯಾಗುತ್ತಾನೆ ರಣಗಲ್. ಜೈಲಿನಲ್ಲಿದ್ದುಕೊಂಡೇ ವಿದ್ಯಾಭ್ಯಾಸ ಮುಗಿಸಿ, ಕಾನೂನು ಪದವಿ ಪಡೆದು ವಕೀಲನಾಗಿ, ಜೈಲಿಂದ ಆಚೆ ಬರುತ್ತಾನೆ. ನೊಂದವರಿಗೆ ನೆರಳಾಗಿ, ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣದವನು ಈ ರಣಗಲ್.

ಅದಾಗಲೇ ರೋಣಾಪುರದ ಮೇಲೆ ರಾಜಕೀಯ ಪ್ರಭಾವಿಗಳು, ಉದ್ಯಮಿಗಳು ತಮ್ಮ ಹಿಡಿತ ಸಾಧಿಸಿರುತ್ತಾರೆ. ಅದಕ್ಕೆ ಕಾರಣ; ಆ ಊರಿನಲ್ಲಿ ಸಿಕ್ಕ ಕಬ್ಬಿಣದ ನಿಕ್ಷೇಪ. ಮೈನಿಂಗ್‌ ಮಾಫಿಯಾ ದೊಡ್ಡ ಮಟ್ಟದಲ್ಲಿ ತಲೆಎತ್ತಿರುತ್ತದೆ. ಈ ಅಖಾಡಕ್ಕೆ ಕಪ್ಪು ಕೋಟ್‌ ಧರಿಸಿ ಬಂದ ಭೈರತಿ, ಬಳಿಕ ಅದನ್ನು ಕಳಚಿ, ಪಂಚೆ ಧರಿಸಿ ಕೈಯಲ್ಲಿ ಲಾಂಗ್‌ ಹಿಡಿದು ಎಂಟ್ರಿ ಕೊಡುತ್ತಾನೆ. ರಕ್ತದ ಕೋಡಿಯೂ ಹರಿಯುತ್ತದೆ. ಬಡವರ ಪಾಲಿಗೂ ನೆರಳಾಗಿ, ವೈರಿಗಳಿಗೆ ಸಿಂಹಸ್ವಪ್ನವಾಗುತ್ತಾನೆ.‌ ಈ ಮೂಲಕ ಇದು ಉಳ್ಳವರು ಮತ್ತು ಇಲ್ಲದವರ ನಡುವಿನ ಕಾಳಗದಂತೆ ಕಾಣಿಸುತ್ತದೆ. ಅಲ್ಲಿಂದ ಆತನ ಹೋರಾಟ ಹೇಗೆ ಎಂಬುದೇ ಈ ಸಿನಿಮಾದ ಕಥೆ.

ಹೇಗಿದೆ ಭೈರತಿ ರಣಗಲ್‌ ಸಿನಿಮಾ?

ಭೈರತಿ ರಣಗಲ್‌ ಸ್ಟ್ರೇಟ್‌ ಸಿನಿಮಾ. ಇಲ್ಲಿ ಯಾವುದೇ ಫ್ಲಾಷ್‌ಬ್ಯಾಕ್‌ಗಳಿಲ್ಲ. ಏನಾಗುತ್ತದೆ ಎಂಬುದನ್ನು ಅಷ್ಟೇ ಸಲೀಸಾಗಿ ಊಹಿಸಿಬಿಡಬಲ್ಲ ಗುಣ ಈ ಚಿತ್ರಕ್ಕಿದೆ. ಒಂದು ಚಿತ್ರದ ನಾಯಕನ ಇಂಟ್ರೋ ಹೇಗಿರಬೇಕೋ, ಅಷ್ಟನ್ನೇ 2 ಗಂಟೆ 14 ನಿಮಿಷದ ಅವಧಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂಬಂತೆ ಕಾಣಿಸುತ್ತದೆ ಈ ಸಿನಿಮಾ. ಇಲ್ಲಿ ಯಾವುದೂ ಹೊಸದು ಎನಿಸುವುದಿಲ್ಲ. ನೋಡುಗನನ್ನು ಕೆಣಕುವುದಿಲ್ಲ. ಒಂದು ಸಣ್ಣ ಎಳೆಯನ್ನು ಈ ಮಟ್ಟದಲ್ಲಿ ಉತ್ಪ್ರೇಕ್ಷೆ ರೀತಿಯಲ್ಲಿ ತೋರಿಸುವ ಅವಶ್ಯಕತೆಯೂ ಇರಲಿಲ್ಲ ಎಂದೂ ಅನಿಸುವುದುಂಟು.

ಸಿನಿಮಾಗಳಲ್ಲಿ ಕಥಾನಾಯಕನ ವೈಭವೀಕರಣ ತಪ್ಪಲ್ಲ. ಆದರೆ, ಗಟ್ಟಿ ಕಥೆಯ ಜತೆ ಜತೆಗೆ ಆ ನಾಯಕನ ಪಯಣ ಸಾಗಿದ್ದರೆ, ಅದು ಪ್ರೇಕ್ಷಕನನ್ನು ಹಿಡಿದು ಕೂರಿಸುತ್ತದೆ. ಆದರೆ, ಭೈರತಿ ರಣಗಲ್‌ನಲ್ಲಿ ಆ ವಿಭಾಗ ಅದ್ಯಾಕೋ ಮಂಕಾದಂತಿದೆ. ಇತ್ತ ಅದನ್ನು ಬದಿಗಿರಿಸಿದರೆ, ಸಂಭಾಷಣೆಯಲ್ಲಿ ಪೂರ್ಣಾಂಕ ಸಲ್ಲಲೇಬೇಕು. ಒಂದೊಂದು ಸಂಭಾಷಣೆಯೂ ತೂಕಕ್ಕೆ ಹಾಕಿ ತೂಗಬೇಕು ಹಾಗಿವೆ. ಆದರೆ, ಅಲ್ಟಿಮೇಟ್‌ ಆಗಿ, ಕಥೆಯೇ ಜೀವಾಳ! ಆ ಕೊರತೆ ಭೈರತಿ ರಣಗಲ್‌ ಚಿತ್ರದಲ್ಲಿ ಎದ್ದು ಕಾಣುತ್ತಿದೆ. ಮೊದಲ ಭಾಗ ಮುಗಿದ ಬಳಿಕ, ಕುತೂಹಲ ಮೂಡಿದರೂ, ಅದು ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಏಕೆಂದರೆ, ಅಷ್ಟರಲ್ಲಿ ಚಿತ್ರವೇ ಮುಗಿದಿರುತ್ತದೆ.

ಪ್ರಮುಖ ಪಾತ್ರಗಳಿಗೆ ದಕ್ಕದ ಸ್ಕ್ರೀನ್‌ ಸ್ಪೇಸ್‌

ಭೈರತಿ ರಣಗಲ್‌ ಅನ್ನೋ ಪಾತ್ರವನ್ನಷ್ಟೇ ವಿಜೃಂಭಿಸಬೇಕು ಅನ್ನುವ ನಿಟ್ಟಿನಲ್ಲಿ ಇಡೀ ಸಿನಿಮಾ ಕೆತ್ತಿದಂತಿದೆ ನಿರ್ದೇಶಕ ನರ್ತನ್‌. ಏಕೆಂದರೆ, ಈ ಚಿತ್ರದಲ್ಲಿ ಕಾಣಸಿಗುವ ಯಾವ ಪಾತ್ರಗಳಿಗೂ ಹೇಳಿಕೊಳ್ಳುವ ಸ್ಕ್ರೀನ್‌ ಸ್ಪೇಸ್‌ ಸಿಕ್ಕಿಲ್ಲ. ಇದ್ದಿದ್ದರಲ್ಲಿಯೇ ಗೋಪಾಲಕೃಷ್ಣ ದೇಶಪಾಂಡೆ, ಮೈನಿಂಗ್‌ ಕಂಪನಿಯ ವರ್ಕರ್ಸ್‌ ಯೂನಿಯನ್‌ ಲೀಡರ್‌ ಆಗಿ ಗಮನ ಸೆಳೆಯುತ್ತಾರೆ. ಇನ್ನುಳಿದಂತೆ, ಮಧು ಗುರುಸ್ವಾಮಿ ಕೈಕಟ್ಟಿ ನಿಲ್ಲುವುದಕ್ಕಷ್ಟೇ ಸೀಮಿತರಾಗಿದ್ದಾರೆ. ಬೇಕು ಅಂತಲೇ ನಾಯಕಿ ರುಕ್ಮಿಣಿ ವಸಂತ್‌ ಅವರ ಪಾತ್ರವನ್ನು ತಂದು ಕೂರಿಸಿದಂತಿದೆ. ತಂಗಿಯಾಗಿ ಕಂಡ ಛಾಯಾಸಿಂಗ್‌ ಕೇವಲ ಎರಡೇ ಸೀನ್‌ಗಷ್ಟೇ ಸೀಮಿತ. ಖಳನಾಯಕ ರಾಹುಲ್‌ ಬೋಸ್‌ ಗತ್ತು ಇಲ್ಲಿ ವರ್ಕೌಟ್‌ ಆಗಿಲ್ಲ. ಶಬ್ಬೀರ್‌ ಕಲ್ಲಾರಕ್ಕಳ್‌ ಹೆದರಿಸುತ್ತಾರೆ.

ಮೌನದಲ್ಲಿಯೇ ಹೆಚ್ಚು ಇಷ್ಟವಾಗುವ ಶಿವಣ್ಣ

ರಕ್ತ ಮತ್ತು ಲಾಂಗ್‌ನಿಂದಲೇ ಎಲ್ಲವನ್ನೂ ಹೇಳುವ ಪ್ರಯತ್ನ ಈ ಸಿನಿಮಾದಲ್ಲಾಗಿದೆ. ಹಾಗಾಗಿ ಆಯುಧಗಳು ಸಿನಿಮಾದುದ್ದಕ್ಕೂ ಝಳಪಿಸಿವೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಚಿತ್ರದ ಹೈಲೈಟ್.‌ ಕೈ ಬಿಚ್ಚಿ ಖರ್ಚು ಮಾಡಿ ಸಿನಿಮಾ ನಿರ್ಮಿಸಿದ್ದಾರೆ ಗೀತಾ ಶಿವರಾಜ್‌ಕುಮಾರ್‌. ಪಾತ್ರಕ್ಕೆ ತಕ್ಕಂತೆ ಸಿನಿಮಾದಲ್ಲಿ ಶಿವಣ್ಣ ಮೌನಿಯಾಗಿಯೇ ಕಂಡಿದ್ದೇ ಹೆಚ್ಚು. ರಣಗಲ್‌ ಗತ್ತು ಹೇಗೆ ಎಂಬುದನ್ನು ಹೇಳುವುದಕ್ಕೆ, ನಿರ್ದೇಶಕರು ಅವರ ಬಾಯಿಂದ ಉದ್ದುದ್ದ ಡೈಲಾಗ್‌ ಹೇಳಿಸಿಲ್ಲ. ಮೌನದಲ್ಲಿಯೇ ಮಾತನಾಡಿಸಿದ್ದಾರೆ. ಗ್ಯಾಂಗ್‌ಸ್ಟರ್‌ಗಿರಬೇಕಾದ ಗಾಂಭೀರ್ಯ ಅವರಲ್ಲಿ ಕಾಣಬಹುದು. ಹಿನ್ನೆಲೆ ಧ್ವನಿಯ ಮೂಲಕ ಕಥಾನಾಯಕನನ್ನು ವರ್ಣಿಸುವ ಕೆಲಸ ಮಾಡಿದ್ದಾರೆ ರಮೇಶ್‌ ಅರವಿಂದ್‌.

ಚಿತ್ರ: ಭೈರತಿ ರಣಗಲ್‌

ನಿರ್ದೇಶನ: ನರ್ತನ್‌

ನಿರ್ಮಾಣ: ಗೀತಾ ಪಿಕ್ಚರ್ಸ್‌

ತಾರಾಗಣ: ಶಿವರಾಜ್‌ಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸ್, ಶಬೀರ್ ಕಲ್ಲರಕಲ್, ದೇವರಾಜ್‌, ಗೋಪಾಲಕೃಷ್ಣ ದೇಶಪಾಂಡೆ, ಛಾಯಾ ಸಿಂಗ್ ಮುಂತಾದವರು.

ಸ್ಟಾರ್‌: 2.5/5

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ