logo
ಕನ್ನಡ ಸುದ್ದಿ  /  ಮನರಂಜನೆ  /  Singer Lr Eshwari: ಅದೂ ಒಂದು ಹಾಡಾ.. 'ಪುಷ್ಪ' ಚಿತ್ರದ ಹಾಡಿನ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಗಾಯಕಿ ಎಲ್‌.ಆರ್‌. ಈಶ್ವರಿ.. ವಿಡಿಯೋ

Singer LR Eshwari: ಅದೂ ಒಂದು ಹಾಡಾ.. 'ಪುಷ್ಪ' ಚಿತ್ರದ ಹಾಡಿನ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಗಾಯಕಿ ಎಲ್‌.ಆರ್‌. ಈಶ್ವರಿ.. ವಿಡಿಯೋ

HT Kannada Desk HT Kannada

Mar 08, 2023 08:41 AM IST

google News

'ಪುಷ್ಪ' ಚಿತ್ರದ ಹಾಡಿನ ಬಗ್ಗೆ ಹಿರಿಯ ಗಾಯಕಿ ಎಲ್‌.ಆರ್.‌ ಈಶ್ವರಿ ಪ್ರತಿಕ್ರಿಯೆ

    • ಏನೇ ಆಗಲೀ, ಅವರು ನಮ್ಮ ದಾರಿಗೆ ಬರುವುದಿಲ್ಲ. ಎರಡು ಹಿಟ್‌ ಹಾಡುಗಳನ್ನು ಹಾಡುತ್ತಾರೆ, ನಂತರ ಮದುವೆ ಮಾಡಿಕೊಳ್ಳುತ್ತಾರೆ, ಮುಂದೆ ಚಿತ್ರರಂಗದಿಂದ ದೂರ ಹೋಗಿ ಬಿಡುತ್ತಾರೆ.
'ಪುಷ್ಪ' ಚಿತ್ರದ ಹಾಡಿನ ಬಗ್ಗೆ ಹಿರಿಯ ಗಾಯಕಿ ಎಲ್‌.ಆರ್.‌ ಈಶ್ವರಿ ಪ್ರತಿಕ್ರಿಯೆ
'ಪುಷ್ಪ' ಚಿತ್ರದ ಹಾಡಿನ ಬಗ್ಗೆ ಹಿರಿಯ ಗಾಯಕಿ ಎಲ್‌.ಆರ್.‌ ಈಶ್ವರಿ ಪ್ರತಿಕ್ರಿಯೆ (PC: Twitter)

ಜೋಕೆ ನಾನು ಬಳ್ಳಿಯ ಮಿಂಚು... 'ಪರೋಪಕಾರಿ' ಚಿತ್ರದ ಈ ಎವರ್‌ಗ್ರೀನ್‌ ಈ ಹಾಡನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಈ ಹಾಡನ್ನು 'ಕೆಜಿಎಫ್‌' ಚಿತ್ರದಲ್ಲಿ ಕೂಡಾ ಬಳಸಿಕೊಳ್ಳಲಾಗಿತ್ತು. ಅಂದಹಾಗೆ ಈ ಹಾಡನ್ನು ಹಾಡಿದ್ದು ಖ್ಯಾತ ಗಾಯಕಿ ಎಲ್‌.ಆರ್.‌ ಈಶ್ವರಿಯವರು. ಇದೊಂದು ಹಾಡು ಮಾತ್ರವಲ್ಲ, ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಅವರು ಹಾಡಿರುವ ಅನೇಕ ಹಾಡುಗಳು ಬಹಳ ಹಿಟ್‌ ಆಗಿವೆ.

ಇನ್ನು ಸಿನಿಮಾ ಕಥೆಗಳಾಗಲೀ, ಹಾಡಾಗಲೀ, ಮೇಕಿಂಗ್‌ ಆಗಲೀ, ಕಾಸ್ಟ್ಯೂಮ್‌ ಎಲ್ಲವೂ ಅಂದಿಗಿಂದ ಈಗ ಬಹಳ ಬದಲಾಗಿದೆ. ಅಂದಿನ ಕಲಾವಿದರನ್ನು ಮಾತನಾಡಿಸಿದರೆ, ನಮಗೆ ಆಗಿನ ಕಾಲವೇ ಸರಿ, ಆಗಿನ ಸಿನಿಮಾಗಳು, ಹಾಡುಗಳೇ ಸರಿ ಎಂದು ಹೇಳುವುದನ್ನು ಕೇಳಿದ್ದೇವೆ. ಇದೀಗ ಗಾಯಕಿ ಎಲ್‌. ಆರ್.‌ ಈಶ್ವರಿ ಕೂಡಾ ಈಗಿನ ಸಿನಿಮಾ ಹಾಡುಗಳ ಬಗ್ಗೆ ಮಾತನಾಡಿದ್ದಾರೆ. 'ಪುಷ್ಪ' ಚಿತ್ರದ ಊ ಅಂಟಾವ... ಮಾವ ಊ ಹೂ ಅಂಟಾವ...ಹಾಡಿನ ಬಗ್ಗೆ ಪ್ರತಿಕ್ರಿಯಿಸಿ, ಇದು ಒಂದು ಹಾಡಾ? ಎಂದು ಪ್ರಶ್ನಿಸಿದ್ದಾರೆ. ಸಂದರ್ಶನದ ತುಣುಕು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಐ ಡ್ರೀಮ್‌ ತೆಲುಗು ಮೂವೀಸ್‌ ಯೂಟ್ಯೂಬ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಎಲ್‌. ಆರ್.‌ ಈಶ್ವರಿ ಈಗಿನ ಸಿನಿಮಾಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಂದಿನ ಹಾಡುಗಳು, ವಿಶೇಷವಾಗಿ ಐಟಂ ಹಾಡುಗಳ ಬಗ್ಗೆ ನೀವು ಏನು ಹೇಳ್ತೀರ..? ಇತ್ತೀಚೆಗೆ ತೆರೆ ಕಂಡ 'ಪುಷ್ಪ' ಚಿತ್ರದ ಊ ಅಂಟಾವ.. ಹಾಡನ್ನು ನೀವು ಕೇಳಿದ್ದೀರ? ಎಂದು ನಿರೂಪಕಿ ಕೇಳಿದ ಪ್ರಶ್ನೆಗೆ ಎಲ್‌.ಆರ್‌. ಈಶ್ವರಿ ಉತ್ತರಿಸಿದ್ದಾರೆ. ''ಅದೆಲ್ಲಾ ಒಂದು ಹಾಡಾ ? ಆ ಹಾಡು ನನಗೆ ಹಾಡಲು ಸಿಕ್ಕಿದ್ದರೆ ಅದರ ಲೆವೆಲ್ಲೇ ಬೇರೆ ಆಗಿರುತ್ತಿತ್ತು. ಈ ಹಾಡು ಮೊದಲಿನಿಂದ ಕೊನೆವರೆಗೂ ಒಂದೇ ರೀತಿ ಇದೆ'' ಎಂದಿದ್ದಾರೆ. ಒಮ್ಮೆ ನೀವು ಹಾಡಿ ತೋರಿಸಿ, ಬಹುಶ: ಈಗಿನ ಗಾಯಕ/ಗಾಯಕಿಯರಿಗೆ ಅದು ಉಪಯೋಗವಾಗಬಹುದು ಎಂದು ನಿರೂಪಕಿ ಹೇಳಿದಾಗ, ''ಏನೇ ಆಗಲೀ, ಅವರು ನಮ್ಮ ದಾರಿಗೆ ಬರುವುದಿಲ್ಲ. ಎರಡು ಹಿಟ್‌ ಹಾಡುಗಳನ್ನು ಹಾಡುತ್ತಾರೆ, ನಂತರ ಮದುವೆ ಮಾಡಿಕೊಳ್ಳುತ್ತಾರೆ, ಮುಂದೆ ಚಿತ್ರರಂಗದಿಂದ ದೂರ ಹೋಗಿ ಬಿಡುತ್ತಾರೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಂತರ ತಮ್ಮದೇ ಶೈಲಿಯಲ್ಲಿ ಊ ಅಂಟಾವ... ಹಾಡನ್ನು ಹಾಡಿ ತೋರಿಸಿದ್ದಾರೆ.

''ಈಗಿನ ಹಾಡುಗಳನ್ನು ನಾನು ಕೇಳುವುದೇ ಇಲ್ಲ, ಆಗ ನಾವು ಹಾಡಿರುವ ಹಾಡುಗಳೇ ಚೆಂದ, ಅಂದಿನ ಹಾಡುಗಳು ಇಂದಿಗೂ ಫೇಮಸ್‌ ಆಗಿದೆ ಎಂದರೆ, ನಮ್ಮ ಶ್ರಮ ಎಷ್ಟಿರುತ್ತದೆ ಎಂದು ನೀವೇ ಊಹಿಸಿ. ಪಾಪ ಗಾಯಕ/ಗಾಯಕಿಯರದ್ದೇನು ತಪ್ಪಿಲ್ಲ, ಸಂಗೀತ ನಿರ್ದೇಶಕರು ಸರಿ ಇಲ್ಲ ಎಂದ ಮೇಲೆ ಅವರು ತಾನೇ ಏನು ಮಾಡ್ತಾರೆ, ಅವರು ಹೇಳಿದಂತೆ ಹಾಡಿ ಹೋಗುತ್ತಾರೆ. ಆಗಿನ ಸಿನಿಮಾಗಳು 100-150 ದಿನಗಳು ಓಡುತ್ತಿದ್ದವು. ಆದರೆ ಈಗಿನ ಸಿನಿಮಾಗಳು 10 ದಿನಗಳು ಪೂರೈಸಿದರೆ ಅದೇ ದೊಡ್ಡದು ಎನ್ನುತ್ತಾರೆ'' ಎಂದು ಎಲ್‌.ಆರ್‌. ಈಶ್ವರಿ ಹೇಳಿದ್ದಾರೆ.

ಈ ವಿಡಿಯೋ ನೋಡಿದವರು ನಿಜಕ್ಕೂ ನೀವು ಲೆಜೆಂಡ್‌, ನೀವು ಹೇಳುವುದು ಸರಿ, ಈಗಿನ ಹಾಡುಗಳಲ್ಲಿ ಸಾಹಿತ್ಯ, ಟ್ಯೂನ್‌ ಯಾವುದೂ ಸರಿ ಇಲ್ಲ. ಹಾಡುಗಳೂ ಚೆನ್ನಾಗಿಲ್ಲ ಎಂದಿದ್ದಾರೆ. ಆದರೆ ಕೆಲವರು ಮಾತ್ರ, 'ಪುಷ್ಪ' ಚಿತ್ರದ ಊ ಅಂಟಾವ ಹಾಡು ಎಷ್ಟು ಹಿಟ್‌ ಆಗಿದೆ. ಆದರೆ ನೀವು ಹೀಗೆ ಹೇಳುತ್ತಿದ್ದೀರಿ, ಒಬ್ಬೊಬ್ಬರಿಗೆ ಒಂದೊಂದು ರೀತಿ ಪ್ರತಿಭೆ ಇರುತ್ತದೆ. ಆದರೆ ಅದನ್ನು ಹೋಲಿಸಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ