logo
ಕನ್ನಡ ಸುದ್ದಿ  /  ಮನರಂಜನೆ  /  Singer Mangli: ನೀವು ಅಂದುಕೊಂಡಂತೆ ಬಳ್ಳಾರಿಯಲ್ಲಿ ಯಾವುದೇ ಘಟನೆ ನಡೆದಿಲ್ಲ..ನನ್ನ ಇಮೇಜ್‌ ಹಾಳು ಮಾಡುವ ಪ್ರಯತ್ನ ಮಾಡಬೇಡಿ..ಮಂಗ್ಲಿ

Singer Mangli: ನೀವು ಅಂದುಕೊಂಡಂತೆ ಬಳ್ಳಾರಿಯಲ್ಲಿ ಯಾವುದೇ ಘಟನೆ ನಡೆದಿಲ್ಲ..ನನ್ನ ಇಮೇಜ್‌ ಹಾಳು ಮಾಡುವ ಪ್ರಯತ್ನ ಮಾಡಬೇಡಿ..ಮಂಗ್ಲಿ

Rakshitha Sowmya HT Kannada

Jan 23, 2023 11:35 AM IST

google News

ಗಾಯಕಿ ಮಂಗ್ಲಿ

    • ಬಳ್ಳಾರಿಯಲ್ಲಿ ಅಂತಹ ಯಾವುದೇ ಘಟನೆ ಜರುಗಿಲ್ಲ. ಅಲ್ಲಿನ ಜನರು ನನನ್ನು ಗೌರವಯುತವಾಗಿ ಬರಮಾಡಿಕೊಂಡು, ಗೌರವಾಗಿಯೇ ಬೀಳ್ಕೊಟ್ಟಿದ್ದಾರೆ. ಪೊಲೀಸರು ಕೂಡಾ ನನಗೆ ಏನೂ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ದಯವಿಟ್ಟು ಇಲ್ಲಸಲ್ಲದ ಸುದ್ದಿ ಹಬ್ಬಿಸಿ ನನ್ನ ಇಮೇಜ್‌ ಹಾಳು ಮಾಡುವ ಪ್ರಯತ್ನ ಮಾಡಬೇಡಿ ಎಂದು ಮಂಗ್ಲಿ ಮನವಿ ಮಾಡಿದ್ದಾರೆ.
ಗಾಯಕಿ ಮಂಗ್ಲಿ
ಗಾಯಕಿ ಮಂಗ್ಲಿ (PC: Singer Mangli Facebook)

ತೆಲುಗು ಜಾನಪದ, ಸಿನಿಮಾ ಹಿನ್ನೆಲೆ ಗಾಯಕಿ ಮಂಗ್ಲಿ ಈಗ ಕನ್ನಡಿಗರಿಗೂ ಚಿರಪರಿಚಿತ. ದರ್ಶನ್‌ ಅಭಿನಯದ 'ರಾಬರ್ಟ್‌' ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ ಮಂಗ್ಲಿ ಕನ್ನಡದಲ್ಲಿ ಕೂಡಾ 3-4 ಹಾಡುಗಳನ್ನು ಹಾಡಿದ್ದಾರೆ. ಇತ್ತೀಚೆಗೆ ಅವರು ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ 'ಬಿರ್ದ್‌ದ ಕಂಬುಲ' ತುಳು ಚಿತ್ರಕ್ಕೆ ಕೂಡಾ ಹಾಡಿದ್ದಾರೆ.

2 ದಿನಗಳ ಹಿಂದೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಂಗ್ಲಿ ಕಾರಿನ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರು. ವೇದಿಕೆ ಹಿಂಭಾಗದ ಮೇಕಪ್‌ ರೂಮ್‌ಗೆ ಕೂಡಾ ನುಗ್ಗಿ ಗಲಾಟೆ ಮಾಡಿದ್ದರು ಎಂಬ ಸುದ್ದಿ ವೈರಲ್‌ ಆಗಿತ್ತು. ಅದರೆ ಮಂಗ್ಲಿ ಮಾತ್ರ ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ''ಇಲ್ಲ ಸಲ್ಲದ ಸುದ್ದಿ ವೈರಲ್‌ ಮಾಡಿ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಬೇಡಿ. ನೀವು ಅಂದುಕೊಂಡಂತೆ ಬಳ್ಳಾರಿಯಲ್ಲಿ ಅಂತಹ ಯಾವುದೇ ಘಟನೆ ಜರುಗಿಲ್ಲ. ಅಲ್ಲಿನ ಜನರು ನನನ್ನು ಗೌರವಯುತವಾಗಿ ಬರಮಾಡಿಕೊಂಡು, ಗೌರವಾಗಿಯೇ ಬೀಳ್ಕೊಟ್ಟಿದ್ದಾರೆ. ಪೊಲೀಸರು ಕೂಡಾ ನನಗೆ ಏನೂ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ದಯವಿಟ್ಟು ಇಲ್ಲಸಲ್ಲದ ಸುದ್ದಿ ಹಬ್ಬಿಸಿ ನನ್ನ ಇಮೇಜ್‌ ಹಾಳು ಮಾಡುವ ಪ್ರಯತ್ನ ಮಾಡಬೇಡಿ'' ಎಂದು ಮಂಗ್ಲಿ ಮನವಿ ಮಾಡಿದ್ದಾರೆ.

ಜನವರಿ 21 ( ಶನಿವಾರ) ಬಳ್ಳಾರಿಯ ಮುನ್ಸಿಪಲ್‌ ಕಾಲೇಜು ಆವರಣದಲ್ಲಿ ಸಿನಿ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ವೇದಿಕೆಯಲ್ಲಿ ಹಾಡು ಹಾಡಿದ ನಂತರ ಮಂಗ್ಲಿ ಹೈದರಾಬಾದ್‌ಗೆ ವಾಪಸಾಗಲು ವೇದಿಕೆ ಹಿಂಭಾಗದಲ್ಲಿದ್ದ ತಮ್ಮ ಕಾರಿನ ಬಳಿ ತೆರಳುವ ವೇಳೆ ಕೆಲವು ಪುಂಡರು ವೇದಿಕೆ ಬಳಿಯಲ್ಲಿದ್ದ ಮೇಕಪ್‌ ಟೆಂಟ್‌ಗೆ ನುಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇದಕ್ಕೆ ಕೋಪಗೊಂಡ ಕೆಲವರು ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಪರಿಣಾಮ ಕಾರಿನ ಗಾಜು ಸಂಪೂರ್ಣ ಪುಡಿಯಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಮಂಗ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿಕೆ ಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ಉತ್ಸವದಲ್ಲಿ ಕನ್ನಡ ಮಾತನಾಡಲು ಹಿಂಜರಿದಿದ್ದ ಮಂಗ್ಲಿ

ಕೆಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ನಡೆದ ಉತ್ಸವದಲ್ಲಿ ಕೂಡಾ ಮಂಗ್ಲಿ ಭಾಗವಹಿಸಿದ್ದರು. ವೇದಿಕೆ ಮೇಲೆ ಬರುತ್ತಿದ್ದಂತೆ ಮಂಗ್ಲಿ, ಎಲ್ಲರಿಗೂ ತೆಲುಗಿನಲ್ಲೇ ನಮಸ್ಕಾರ ಹೇಳಿದ್ದಾರೆ. ಇಲ್ಲಿ ಕನ್ನಡದವರಿದ್ದಾರೆ ಕನ್ನಡಲ್ಲಿ ಮಾತನಾಡಿ ಎಂದು ನಿರೂಪಕಿ ಅನುಶ್ರೀ ಹೇಳಿದಾಗ, ಇಲ್ಲೇ ಪಕ್ಕದಲ್ಲಿ ತಾನೇ ಅನಂತಪುರಂ ಇರೋದು ಎಲ್ಲರಿಗೂ ತೆಲುಗು ಬರುತ್ತೆ ಎಂದು ಮಂಗ್ಲಿ ಉತ್ತರಿಸಿದ್ದರು. ನಂತರ ಬಲವಂತ ಮಾಡಿದ್ದಕ್ಕೆ ಕನ್ನಡದಲ್ಲಿ ಒಂದರೆಡು ಮಾತು ಆಡಿದ್ದರು. ಅನುಶ್ರೀ ಕನ್ನಡದಲ್ಲಿ ಪ್ರಶ್ನೆ ಕೇಳುವಾಗ ನನಗೆ ಅರ್ಥ ಆಗುತ್ತಿಲ್ಲ ಎಂಬಂತೆ ಗೊಂದಲ ವ್ಯಕ್ತಪಡಿಸಿದ್ದರು.

ಈ ವಿಡಿಯೋ ತುಣುಕು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ನೆಟಿಜನ್ಸ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಂಗ್ಲಿ ಕನ್ನಡಕ್ಕೆ ಬಂದು 2 ವರ್ಷಗಳ ಮೇಲಾಯಿತು. ಆದರೂ ಆಕೆಗೆ ಕನ್ನಡ ಅರ್ಥವಾಗುವುದಿಲ್ಲವೇ..? ಇಲ್ಲಿಗೆ ಬಂದು ಒಂದೆರಡು ಪದ ಕನ್ನಡದಲ್ಲಿ ಮಾತನಾಡಲು ಹಿಂಜರಿಯುವ ಈಕೆಗೆ ಕನ್ನಡದಲ್ಲಿ ಏಕೆ ಅವಕಾಶ ನೀಡುತ್ತೀರಿ..? ಎಂದು ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಬಳ್ಳಾರಿ ಉತ್ಸವಕ್ಕೆ ಬಂದಾಗ ಕೆಲವರು ಆಕೆ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಮಂಗ್ಲಿ ಮಾತ್ರ ಆ ರೀತಿ ಏನೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ