ಎಲಿಮಿನೇಷನ್‌ನಿಂದ ನಿಟ್ಟುಸಿರು ಬಿಟ್ಟವರಿಗೆ ‘ಅನಿರೀಕ್ಷಿತಗಳಿಗೆ ರೆಡಿಯಾಗಿ’ ಎಂದು ದೊಡ್ಡ ಮುನ್ಸೂಚನೆ ಕೊಟ್ಟ ಕಿಚ್ಚ ಸುದೀಪ್
Oct 14, 2024 08:13 AM IST
‘ಅನಿರೀಕ್ಷಿತಗಳಿಗೆ ರೆಡಿಯಾಗಿ’ ಎಂದು ದೊಡ್ಡ ಮುನ್ಸೂಚನೆ ಕೊಟ್ಟ ಕಿಚ್ಚ ಸುದೀಪ್
- ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯ ಎಲ್ಲರೂ ಈ ವಾರ ನಾಮಿನೇಟ್ ಆಗಿದ್ದರು. ಆದರೆ ಎರಡನೇ ವಾರದ ನಾಮಿನೇಷನ್‌ನಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಇನ್ಮುಂದೆ ಅನಿರೀಕ್ಷಿತಗಳು ನಡೆಯಲಿವೆ ಎಂಬ ಸುಳಿವು ನೀಡಿದ್ದಾರೆ ಸುದೀಪ್.
Bigg Boss Kannada 11: ಬಿಗ್ ಬಾಸ್ ಆಟ ನಿಂತಿರುವುದೇ ನಿಯಮಗಳ ಮೇಲೆ. ಆದರೆ, ಬಿಗ್ ಬಾಸ್ ಕನ್ನಡ 11ರಲ್ಲಿ ಆ ನಿಯಮಗಳಿಗೆ ಕಿಮ್ಮತ್ತೇ ಇಲ್ಲ. ಬಿಗ್ ಬಾಸ್ ವಿಧಿಸಿದ ನಿಯಮ ಮುರಿಯದವರೇ ಹೆಚ್ಚು. ಲಾಯರ್ ಜಗದೀಶ್ ಸಾಲು ಸಾಲು ನಿಯಮಗಳನ್ನು ಮುರಿದ ಆರೋಪ ಹೊತ್ತಿದ್ದಾರೆ. ಅವರೊಬ್ಬರಿಂದಲೇ ಇಡೀ ಮನೆ ಸಾಕಷ್ಟು ನಷ್ಟ ಅನುಭವಿಸಿದೆ. ಲಕ್ಷುರಿಗಳನ್ನೂ ಕಳೆದುಕೊಂಡಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ, ಎರಡನೇ ವಾರ ಎಲ್ಲ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿತ್ತು ಬಿಗ್‌ಬಾಸ್. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಈ ವಾರ ಯಾರೂ ಮನೆಯಿಂದ ಆಚೆ ಹೋಗಿಲ್ಲ!
ಯಾರಿಗೆ ಯಾವ ಬ್ಯಾಡ್ಜ್‌ಗಳು ಸಿಕ್ಕವು..
ಭಾನುವಾರದ ವಾರದ ಕಥೆ ಕಿಚ್ಚನ ಜೊತೆ ಏಪಿಸೋಡ್‌ನಲ್ಲಿ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಈ ವಾರ ಮನೆಯಲ್ಲಿನ 16 ಮಂದಿಯೂ ನಾಮಿನೇಟ್ ಆಗಿದ್ದರು. ಅದಾದ ಬಳಿಕ ಈ ಸಲ ಮನೆಯಿಂದ ಯಾರು ಹೊರಹೋಗಬೇಕು ಎಂದು ಮನೆಯಲ್ಲಿನ ಸ್ಪರ್ಧಿಗಳಿಂದಲೇ ಅಭಿಪ್ರಾಯ ಹೊರತೆಗೆಸಿದ್ದರು ಕಿಚ್ಚ ಸುದೀಪ್. ಆ ಪೈಕಿ ಧರ್ಮ ಕೀರ್ತಿರಾಜ್‌ಗೆ ಯಾವುದೇ ಬ್ಯಾಡ್ಜ್ ಬಂದಿಲ್ಲ. ಭವ್ಯಾಗೆ ಟಾಪ್ 2 ಎಂಬ ಒಂದು ಬ್ಯಾಡ್ಜ್, ಚೈತ್ರಾಗೆ ಎರಡು ಗೆಸ್ಟ್, ಒಂದು ಫೈನಲಿಸ್ಟ್ ಬ್ಯಾಡ್ಜ್, ಮಾನಸಾಗೆ 11 ಔಟ್ ಬ್ಯಾಡ್ಜ್, ತಲಾ ಒಂದೊಂದು ಗೆಸ್ಟ್ ಮತ್ತು ಫೈನಲಿಸ್ಟ್ ಬ್ಯಾಡ್ಜ್ ಸಿಕ್ಕಿದೆ.
ತ್ರಿವಿಕ್ರಮ್‌ಗೆ ಒಂದು ಔಟ್, 3 ಫೈನಲಿಸ್ಟ್, ಏಳು ಟಾಪ್ 2 ಬ್ಯಾಡ್ಜ್ ಸಿಕ್ಕಿದೆ. ಟಾಪ್ 2 ಎರಡು, ಒಂದು ಗೆಸ್ಟ್ ರಂಜಿತ್‌ಗೆ ಸಿಕ್ಕಿದೆ. ಧನರಾಜ್‌ಗೆ 5 ಗೆಸ್ಟ್ ಬ್ಯಾಡ್ಜ್‌ಗಳು ಬಂದಿವೆ. ಉಗ್ರಂ ಮಂಜು ಅವರಿಗೆ ಎರಡು ಟಾಪ್ 2, ನಾಲ್ಕು ಫೈನಲಿಸ್ಟ್ ಪಟ್ಟ ಸಿಕ್ಕಿದೆ. 3 ಟಾಪ್ 2, ಐದು ಫೈನಲಿಸ್ಟ್ ಬ್ಯಾಡ್ಜ್‌ಗಳು ಶಿಶಿರ್‌ಗೆ ಸಿಕ್ಕಿದೆ. ಕೊನೆಗೆ ಯಾರ್ಯಾರಿಗೆ ಏನೆಲ್ಲ ಸಿಕ್ಕಿದೆ, ಆ ಮೂಲಕ ನಿಮಗೆ ನೀವೇ ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಿ ಎಂದು ಸುದೀಪ್ ಹೇಳಿದ್ದಾರೆ.
ಕೊನೆಗೆ ಉಳಿದ ರಂಜಿತ್, ತ್ರಿವಿಕ್ರಮ್
ಈ ವಾರ ನಾಮಿನೇಷನ್ ತೂಗುಗತ್ತಿಯಿಂದ ಒಬ್ಬೊಬ್ಬರನ್ನೇ ಸೇವ್ ಮಾಡುತ್ತ ಬಂದ ಸುದೀಪ್, ಕೊನೆಗೆ ಉಳಿದಿದ್ದು ರಂಜಿತ್ ಮತ್ತು ತ್ರಿವಿಕ್ರಮ್. ಇವರಿಬ್ಬರ ಪೈಕಿ ಒಬ್ಬರು ಮನೆಯಿಂದ ಹೊರ ನಡೆಯಲಿದ್ದಾರೆ ಎಂದಾಗ ಇಡೀ ಮನೆ ಒಂದು ಕ್ಷಣ ಸೈಲೆಂಟ್ ಆಗಿತ್ತು. ತ್ರಿವಿಕ್ರಮ್ ಬ್ಯಾಡ್‌ಲಕ್ ಎಂದಾಗ ಎಲ್ಲರೂ ಶಾಕ್ ಆಗಿದ್ದರು. ಕೊನೆಗೆ ಅಚ್ಚರಿಯ ಬೆಳವಣಿಗೆಯಲ್ಲಿ ಈ ವಾರ ಯಾರೂ ಎಲಿಮಿನೇಟ್ ಆಗುತ್ತಿಲ್ಲ ಎಂದು ಸುದೀಪ್ ಹೇಳುತ್ತಿದ್ದಂತೆ, ಇಬ್ಬರೂ ನಿಟ್ಟುಸಿರು ಬಿಟ್ಟರು.
ಅನಿರೀಕ್ಷಿತಗಳ ಬಗ್ಗೆ ಸುದೀಪ್ ಸುಳಿವು
"ತಪ್ಪು ಒಂದಲ್ಲ ಎರಡಲ್ಲ ಈ ಮನೆಯಲ್ಲಿ ನಡೆದಿದ್ದು. ನಿಯಮಗಳನ್ನು ಬ್ರೇಕ್ ಮಾಡಿದ್ದು ಒಂದಲ್ಲ ಎರಡಲ್ಲ. ಹೇಗೆ ಬೇಕೋ ಹಾಗೆ ಆಟ ಆಡಿದ್ದೀರಾ, ಆ ಕೋಪಕ್ಕೆ ಬಂದಿದ್ದೇ ಇಡೀ ಮನೆಯ ಸ್ಪರ್ಧಿಗಳಿಗೆ ನಾಮಿನೇಷನ್ ಶಿಕ್ಷೆ. ಹೀಗೆ ಇಡೀ ಮನೆ ನಾಮಿನೇಷನ್ ಆದಾಗ, ಕೆಲವು ಅರ್ಹರಲ್ಲದ ಸ್ಪರ್ಧಿಗಳು ಎಲಿಮಿನೇಟ್ ಆಗಿ ಬಿಡುತ್ತಾರೆ. ಹಾಗಾಗಿ ಈ ವಾರ ವೋಟಿಂಗ್ ಲೈನ್ ಓಪನ್ ಆಗಿಲ್ಲ. ಇದು ನಿಮಗೆಲ್ಲ ಅರ್ಥ ಆಗಬೇಕೆಂದು ನಡೆದ ಪರೀಕ್ಷೆ. ಇದು ಮತ್ತೆ ನಡೆಯಲ್ಲ. ರೂಲ್ಸ್‌ಗಳು ತುಂಬ ಮುಖ್ಯ. ತುಂಬ ಅಂದ್ರೆ ತುಂಬ ಮುಖ್ಯ. ಅನಿರೀಕ್ಷಿತಗಳಿಗೆ ರೆಡಿಯಾಗಿ" ಎಂದು ಹೇಳಿ ಭಾನುವಾರದ ವಾರದ ಕಥೆ ಕಿಚ್ಚನ ಜೊತೆ ಮುಗಿಸಿದ್ದಾರೆ ಸುದೀಪ್.