‘ಮಹಿಳಾ ಸ್ಪರ್ಧಿಗಳ ಸೂಕ್ಷ್ಮತೆಯನ್ನು ಬಿಗ್‌ಬಾಸ್ ತಂಡ ಚೆನ್ನಾಗಿಯೇ ಅರಿತಿದೆ’; ಮಹಿಳಾ ಆಯೋಗದ ನೋಟೀಸ್‌ಗೆ ಬಿಗ್‌ಬಾಸ್ ಸ್ಪರ್ಧಿಗಳ ಉತ್ತರ
ಬಿಗ್‌ಬಾಸ್ ಕನ್ನಡ 11ರ ಆಯೋಜಕರಿಗೆ ಮಹಿಳಾ ಆಯೋಗದ ನೋಟೀಸ್ ರವಾನೆಯಾದ ಬೆನ್ನಲ್ಲೇ, ಭಾನುವಾರದ ಏಪಿಸೋಡ್‌ನಲ್ಲಿ ಮನೆಯ ಮಹಿಳಾ ಸ್ಪರ್ಧಿಗಳಿಂದಲೇ ನೋಟೀಸ್‌ಗೆ ಉತ್ತರ ಕೊಡಿಸಿದ್ದಾರೆ ನಿರೂಪಕ ಕಿಚ್ಚ ಸುದೀಪ್.
Bigg Boss Kannada 11: ಈ ಸಲದ ಬಿಗ್‌ಬಾಸ್ ಕನ್ನಡದ 11ನೇ ಸೀಸನ್‌ನ ಪರಿಕಲ್ಪನೆಯೇ ಸ್ವರ್ಗ ಮತ್ತು ನರಕ. ಸ್ವರ್ಗದಲ್ಲಿರುವ ಸ್ಪರ್ಧಿಗಳಿಗೆ ಎಲ್ಲ ಸೌಕರ್ಯ ಸೌಲಭ್ಯಗಳು ಸಿಕ್ಕರೆ, ನರಕದಲ್ಲಿರುವವರಿಗೆ ಆಯ್ದ ಕನಿಷ್ಠ ಸೌಕರ್ಯಗಳಷ್ಟೇ ಇರುತ್ತಿದ್ದವು. ಆದರೆ, ಇದೇ ವಿಚಾರ ಬಿಗ್‌ಬಾಸ್ ಮನೆಯಾಚೆಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಮಹಿಳಾ ಸ್ಪರ್ಧಿಗಳಿಗೆ ಬೇಕಾದ ಸೌಲಭ್ಯಗಳನ್ನು ಈ ಬಿಗ್ ಬಾಸ್ ಕಾರ್ಯಕ್ರಮ ಒದಗಿಸುತ್ತಿಲ್ಲ ಎಂದು ಮಹಿಳಾ ಆಯೋಗ ಬಿಗ್‌ಬಾಸ್ ಆಯೋಜಕರಿಗೆ ಮತ್ತುಬ ಕಲರ್ಸ್ ಕನ್ನಡಕ್ಕೆ ಪತ್ರ ಬರೆದಿತ್ತು. ಈಗ ಭಾನುವಾರದ ಸಂಚಿಕೆಯಲ್ಲಿ ಸ್ಪರ್ಧಿಗಳಿಂದಲೇ ಉತ್ತರ ಕೊಡಿಸಿದ್ದಾರೆ ಸುದೀಪ್.
ಭಾನುವಾರದ ಸೂಪರ್ ಸಂಡೇ ವಿಥ್ ಸುದೀಪ ಶುರುವಾಗ್ತಿದ್ದಂತೆ, ಎಲ್ಲ ನರಕವಾಸಿ ಹೆಣ್ಣುಮಕ್ಕಳಿಗೆ ಒಂದು ಪ್ರಶ್ನೆ ಕೇಳುವೆ, ಪ್ರಾಮಾಣಿಕವಾಗಿ ಉತ್ತರ ಕೊಡಿ ಎಂದಿದ್ದಾರೆ. ನರಕದಲ್ಲಿದ್ದವರು ಅಲ್ಲಿ ಹೇಗಿದ್ರಿ? ನಿಮಗೆ ಯಾವೆಲ್ಲ ಸೌಲಭ್ಯಗಳು ಸಿಕ್ಕವು? ಏನಾದರೂ ಸಮಸ್ಯೆ ಆಯಿತಾ? ಎಂದು ಪ್ರಶ್ನೆ ಮಾಡಿದ್ದಾರೆ. ಆ ಪ್ರಶ್ನೆಗೆ ಉತ್ತರಿಸಿದ ನರಕನಿವಾಸಿಗಳು, ಯಾವುದೇ ಸಮಸ್ಯೆ ಆಗಿಲ್ಲ ಎಂದಿದ್ದಾರೆ. ಮೋಕ್ಷಿತಾ ಪೈ ಅವರಿಂದ ಹಿಡಿದು, ಚೈತ್ರಾ ಕುಂದಾಪುರ, ಮಾನಸಾ ಸಹ ಏನಿದೆಯೋ ಅದನ್ನು ಹೇಳಿದ್ದಾರೆ.
ಬಿಗ್‌ಬಾಸ್‌ಗೆ ಬಂದಿತ್ತು ನೋಟೀಸ್
ಅಷ್ಟಕ್ಕೂ ಬಿಗ್‌ಬಾಸ್ ಮನೆಯಲ್ಲಿ ಕಳೆದ ಎರಡು ವಾರಗಳಿಂದ ನರಕದಲ್ಲಿ ಒಂದಷ್ಟು ಮಹಿಳಾ ಸ್ಪರ್ಧಿಗಳಿದ್ದರು. ಇದನ್ನು ಗಮನಿಸಿದ್ದ ಸಾಮಾಜಿಕ ಕಾರ್ಯಕರ್ತರು, ನೇರವಾಗಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಆ ದೂರನ್ನು ಆಧರಿಸಿ, ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರನ್ನು ಪರಿಗಣಿಸಿದ ಪೊಲೀಸ್ ಠಾಣೆ ಇನ್ಸ್‌ಪೆಕ್ಟೆರ್ ಮಂಜುನಾಥ್ ಹೂಗಾರ್, ಬಿಗ್‌ಬಾಸ್ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ನೋಟೀಸ್ ನೀಡಿ, ಬಿಗ್ ಮನೆಯಲ್ಲಿನ ಒಂದಷ್ಟು ರಾ ಫುಟೇಜ್‌ಗಳನ್ನು ಕೇಳಿದ್ದಾರೆ.
ಮಹಿಳಾ ಸ್ಪರ್ಧಿಗಳಿಗೆ ಕಿಚ್ಚನ ಪ್ರಶ್ನೆ
ಈ ನೋಟೀಸ್‌ನ ಬೆನ್ನಲ್ಲೇ ಭಾನುವಾರದ ವೀಕೆಂಡ್ ಶೋನಲ್ಲಿ ಕಿಚ್ಚ ಸುದೀಪ್, ನೇರವಾಗಿ ಮಹಿಳಾ ಸ್ಪರ್ಧಿಗಳ ಮುಂದೆ ಈ ಪ್ರಶ್ನೆ ಇಟ್ಟಿದ್ದಾರೆ. ನರಕದ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಗೆ ಎಲ್ಲ ಸೌಕರ್ಯ ಸಿಗುತ್ತಿದೆಯಲ್ಲ ಎಂದು ಕೇಳಿದ್ದಾರೆ. ನನಗೆ ನರಕದ ಮನೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಊಟದ ವಿಚಾರಕ್ಕೆ ಚೂರು ಕಷ್ಟವಾಯ್ತು, ಅದನ್ನು ಹೊರತುಪಡಿಸಿದರೆ ಎಲ್ಲವೂ ಚೆನ್ನಾಗಿಯೇ ಇತ್ತು ಎಂದು ಮಾನಸಾ ಹೇಳಿದ್ದಾರೆ. ನರಕದಲ್ಲಿ ನನಗೂ ಯಾವುದೇ ಸಮಸ್ಯೆ ಆಗಿಲ್ಲ ಎಂದು ಅನುಷಾ ರೈ ಹೇಳಿಕೊಂಡಿದ್ದಾರೆ.
ನಮಗೆ ಯಾವುದೇ ಸಮಸ್ಯೆ ಆಗಿಲ್ಲ..
ಚೈತ್ರಾ ಕುಂದಾಪುರ ಕೊಂಚ ವಿವರಿಸಿ ಹೇಳಿದ್ದಾರೆ. ನಮಗೆ ನರಕದಲ್ಲಿ ಅಂಥ ಸಮಸ್ಯೆಗಳೇನೂ ಕಾಣಿಸಿಲ್ಲ. ಯಾವತ್ತೂ ನೀರಿನ ಸಮಸ್ಯೆ ಎದುರಾಗಲಿಲ್ಲ. ವಾಷ್‌ರೂಮ್ ಬಳಕೆ ಮಾಡುವುದರಲ್ಲಿಯೂ ಸಮಸ್ಯೆ ಆಗಿಲ್ಲ. ಹೆಣ್ಣುಮಕ್ಕಳಿಗೆ ನೀರು ಮತ್ತು ಟಾಯ್ಲೆಟ್‌ನ ಅವಶ್ಯಕತೆ ಚೆನ್ನಾಗಿರಬೇಕು. ನಮಗಂತೂ ಆ ವಿಚಾರದಲ್ಲಿ ಯಾವುದೇ ತೊಂದರೆ ಆಗಿಲ್ಲ. ಇಡೀ ಬಿಗ್ ಬಾಸ್ ತಂಡ ತುಂಬ ಸೂಕ್ಷ್ಮವಾಗಿ ಈ ವಿಚಾರವನ್ನು ಗಮನಿಸಿ, ಮಹಿಳಾ ಸದಸ್ಯರೊಂದಿಗೆ ನಡೆದುಕೊಂಡು ಅನುಕೂಲ ಮಾಡಿಕೊಟ್ಟಿದೆ ಎಂದಿದ್ದಾರೆ.
ಎಲ್ಲ ಮಹಿಳಾ ಆಯೋಗದ ಸ್ಪರ್ಧಿಗಳ ಉತ್ತರರಿಂದ ಸುದೀಪ್ ಸಹ ಪ್ರತಿಕ್ರಿಯಿಸಿದರು. ನಮಗೂ ಸಹ ಮಹಿಳಾ ಆಯೋಗದಿಂದ ಪತ್ರ ಬಂದಾಗ ಖುಷಿಯಾಯ್ತು. ಎಲ್ಲೋ ಕುಳಿತು ಇಲ್ಲಿರುವ ಹೆಣ್ಣು ಮಕ್ಕಳ ಮೇಲೆ ಅವರಿಟ್ಟಿರುವ ಕಾಳಜಿ ಒಳ್ಳೆಯದೆನಿಸಿತು. ನಮ್ಮ ಕಡೆಯಿಂದ ಅವರಿಗೆ ಧನ್ಯವಾದಗಳು ಎಂದಿದ್ದಾರೆ ಸುದೀಪ್.
ವಿಭಾಗ